ADVERTISEMENT

ಸಂಗತ | ಯುವ ಮನಸ್ಸಿಗೆ ಜೊತೆಯಾಗೋಣ

ಯುವಜನ ಸೂಕ್ತ ಜೀವನಶೈಲಿ ರೂಢಿಸಿಕೊಂಡು, ಆರೋಗ್ಯ ಕಾಪಾಡಿಕೊಂಡು ಮುನ್ನಡೆಯಲು ಸಮಾಜದ ಬೆಂಬಲ ಅವಶ್ಯ

ಡಾ.ಕೆ.ಆರ್.ಶ್ರೀಧರ್
Published 11 ಆಗಸ್ಟ್ 2022, 22:30 IST
Last Updated 11 ಆಗಸ್ಟ್ 2022, 22:30 IST
   

ಆರ್ಥಿಕವಾಗಿ ಮತ್ತು ಮನೋಸಾಮಾಜಿಕವಾಗಿ ಅಭಿವೃದ್ಧಿಯಾಗುತ್ತಿರುವ ನಮ್ಮ ದೇಶದಲ್ಲಿ ಯುವಜನರ ಪಾತ್ರ ಬಹು ದೊಡ್ಡದು. ಯುವಜನಾಂಗ ಎಂದರೆ 15ರಿಂದ 24 ವರ್ಷದವರೆಗಿನವರು. ಇವರಲ್ಲಿ ಆರೋಗ್ಯ, ಮನೋಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ಕಂಡುಬರುತ್ತವೆ.

ಕೆಲವು ಯುವಕರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಾರೆ. ಒತ್ತಡ, ಮಾನಸಿಕ ಕಾಯಿಲೆಗಳು, ಮದ್ಯ, ಮಾದಕ ವಸ್ತುಗಳ ಸೇವನೆ, ಧೂಮಪಾನ, ಅಸಹಜ ಲೈಂಗಿಕ ವರ್ತನೆ, ಅಪಘಾತ, ಆತ್ಮಹತ್ಯೆ ಹೀಗೆ ಹಲವು ಅಂಶಗಳು ಯುವಕರನ್ನು ಕಾಡುತ್ತವೆ. ಇಂತಹ ಸಮಸ್ಯೆಗಳಿಂದ ಯುವಕರಲ್ಲಿ ಅಂಗವೈಕಲ್ಯ ಉಂಟಾಗಬಹುದು ಅಥವಾ ಜೀವಹಾನಿಯೂ ಆಗಬಹುದು. ಇದು ಪರೋಕ್ಷವಾಗಿ ಸಮಾಜದ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಸಮಾಜದ ಆರ್ಥಿಕತೆಗೆ ಹಿನ್ನಡೆ ಆಗಬಹುದು.

ಯುವಜನ ಸರಿಯಾದ ಜೀವನಶೈಲಿಯನ್ನು ರೂಢಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಯಶಸ್ವಿಯಾಗಿ ಮುನ್ನಡೆಯಲು ಸಮಾಜದ ಬೆಂಬಲ ಅವಶ್ಯ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಯುವ ದಿನಾಚರಣೆಯ (ಆ. 12) ಮುಖ್ಯ ಉದ್ದೇಶ.ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ‘ಅಂತರ್‌ಜನಾಂಗೀಯ ಒಗ್ಗಟ್ಟನ್ನು ಕಾಪಾಡೋಣ, ಎಲ್ಲ ವಯಸ್ಸಿನವರನ್ನೂ ಒಳಗೊಂಡ ವಿಶ್ವವನ್ನು ನಿರ್ಮಿಸೋಣ’ ಎಂಬ ಘೋಷಣೆಯನ್ನು ಹೊರಡಿಸಿದೆ.

ADVERTISEMENT

ಯುವಕರಿಗೆ ಈ ಅವಧಿಯು ಸಂಕ್ರಮಣದ ಕಾಲ ಎನ್ನಬಹುದು. ಈ ಅವಧಿಯಲ್ಲಿ ದೈಹಿಕ, ಮಾನಸಿಕ, ಲೈಂಗಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬದಲಾವಣೆಗಳಾಗುತ್ತವೆ. ಇತರರೊಂದಿಗಿನ ಒಡನಾಟ ಮತ್ತು ಸಂಬಂಧಗಳಲ್ಲಿ ಸಹ ಬದಲಾವಣೆಗಳನ್ನು ಕಾಣಬಹುದು. ಇಂತಹ ಬೆಳವಣಿಗೆಗಳು ಯುವಕರು ಅಥವಾ ಹರೆಯದವರ ಮನಸ್ಸನ್ನು ಇನ್ನಿಲ್ಲದಂತೆ ಒತ್ತಡಕ್ಕೀಡು ಮಾಡುತ್ತವೆ. ಅದರಿಂದ ಹರೆಯದವರು- ಯುವಕರ ಮನಸ್ಸು ಅಲ್ಲೋಲಕಲ್ಲೋಲಗೊಂಡು ಅವರ ಮುನ್ನಡೆಗೆ ತಡೆಯಾಗಬಹುದು.

ಮಾನಸಿಕವಾಗಿ ವಿಕಾಸಗೊಳ್ಳುವ ಯುವ ಮನಸ್ಸಿನಲ್ಲಿ, ತಾನು ಯಾರಂತಾಗಬೇಕು, ಹೇಗೆ ತನ್ನ ಜೀವನವನ್ನು ರೂಪಿಸಿಕೊಳ್ಳಬೇಕು, ತನ್ನ ಭವಿಷ್ಯವೇನು, ತನ್ನನ್ನು ಗುರುತಿಸುತ್ತಾರೋ ಇಲ್ಲವೋ ಎಂಬಂಥ ಹಲವಾರು ಪ್ರಶ್ನೆಗಳು ಪುಟಿದೇಳುತ್ತವೆ. ಪೋಷಕರ ಸಂಬಂಧದ ಜೊತೆಗೆ ಸಾಮಾಜಿಕವಾಗಿಯೂ ಹೊರಗಿನವರ ಜೊತೆ ಬೆರೆತು ಅವರ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಕಷ್ಟದ ಕೆಲಸ. ಗೆಳೆಯರು ಮತ್ತು ಉಪಾಧ್ಯಾಯರ ಜೊತೆಗಿನ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕು. ಇವೆಲ್ಲದರ ನಡುವೆ ‘ತನ್ನತನ’ವನ್ನು ಕಂಡುಕೊಳ್ಳಬೇಕು. ಭಾವನಾತ್ಮಕ ಸಂಬಂಧದಲ್ಲಿ ಇತರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯಬೇಕು. ಅನ್ಯರ ನಿರೀಕ್ಷೆ, ಗೆಳೆಯರ ಟೀಕೆ ಟಿಪ್ಪಣಿಗಳು ಮತ್ತು ಶಿಕ್ಷಣದಲ್ಲಿ ಸ್ಪರ್ಧೆ ಎದುರಿಸಬೇಕು. ಇವೆಲ್ಲವೂ ಯುವಜನರ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸುವುದು ಸಹಜ. ಇದರೊಂದಿಗೆ ಮಾಧ್ಯಮದಲ್ಲಿ ಬಿಂಬಿತವಾಗುವ ವೈಭವೀಕೃತ ದೃಶ್ಯಗಳು, ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಆಕರ್ಷಕ ಮತ್ತು ಅವಾಸ್ತವಿಕ ಸಂದೇಶಗಳು ಹಾಗೂ ದೃಶ್ಯಗಳು ಹರೆಯದ ಮನಸ್ಸಿನಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಘರ್ಷಣೆಗೆ ಕಾರಣವಾಗುತ್ತವೆ.

ಯುವಕರ ಮನಸ್ಸನ್ನು ಒತ್ತಡಕ್ಕೆ ಈಡುಮಾಡುವ ಮತ್ತೊಂದು ಅಂಶ ‘ತಲೆಮಾರಿನ ಅಂತರ’. ಹಿರಿಯರು ತಾವು ಹೇಳಿದ್ದನ್ನು ಮಾಡಲೇಬೇಕು ಎಂದು ಕಿರಿಯರನ್ನು ಒತ್ತಾಯಿಸಬಹುದು, ಯುವಜನರ ಮೇಲೆ ತಮ್ಮ ಅನಿಸಿಕೆಗಳನ್ನು ಹೇರಬಹುದು. ಅದರಿಂದ ಯುವಜನರ ಮನಸ್ಸು ಗಾಸಿಗೊಂಡು ಹತಾಶೆಗೊಳ್ಳಬಹುದು. ಇದಕ್ಕೆ ‘ತಲೆಮಾರಿನ ಅಂತರ’ (ಜನರೇಷನ್‌ ಗ್ಯಾಪ್‌) ಎಂದು ಕರೆಯುತ್ತಾರೆ.

ಇಂತಹ ಅಂಶಗಳಿಂದ, ಇನ್ನೂ ಪ್ರಬುದ್ಧತೆ ಸಾಧಿಸದ ಯುವ ಮನಸ್ಸು ನಿರಾಶೆ, ಹತಾಶೆಗಳಿಂದ ಬಳಲಿ ಭಯ, ಆತಂಕ ಮತ್ತು ಖಿನ್ನತೆಗೆ ಒಳಗಾಗಬಹುದು. ಅಂತಹ ಸಂದರ್ಭದಲ್ಲಿ ಅವರಲ್ಲಿ ಮಾನಸಿಕ ಕಾಯಿಲೆಗಳು ಪ್ರಾರಂಭವಾಗುತ್ತವೆ. ಅವುಗಳಲ್ಲಿ ಮುಖ್ಯವಾದದ್ದು ಖಿನ್ನತೆ, ಉಳಿದಂತೆ ಒತ್ತಡದಿಂದ ಬಳಲಿ ಶಿಕ್ಷಣದಲ್ಲಿ ಹಿನ್ನಡೆಯಾಗಬಹುದು.

ಇತ್ತೀಚಿನ ವರ್ಷಗಳಲ್ಲಿ ಯುವಕರಲ್ಲಿ ಆತ್ಮಹತ್ಯಾ ಪ್ರವೃತ್ತಿ ಹೆಚ್ಚಿ, ಆತ್ಮಹತ್ಯೆ ಎಂಬುದು ‘ಸಾಮಾಜಿಕ ಪಿಡುಗಾಗಿ’ ಪರಿಣಮಿಸಿದೆ. ಪ್ರಬುದ್ಧತೆ ಇಲ್ಲದ ಯುವ ಮನಸ್ಸಿನಲ್ಲಿ ಆತಂಕ ಹೆಚ್ಚಾಗಿ, ಏನು ಮಾಡಬೇಕೆಂದು ದಾರಿ ಕಾಣದೆ, ಕ್ಷಣಿಕ ಮುದ ನೀಡುವ ವಸ್ತುಗಳಿಗೆ, ಅಂದರೆ ಮದ್ಯ-ಮಾದಕ ವಸ್ತುಗಳಿಗೆ ಮೊರೆ ಹೋಗಬಹುದು.

ಯುವಕರು ಔದ್ಯೋಗಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು, ಸಮಸ್ಯೆಗಳಿಂದ ಯಶಸ್ವಿಯಾಗಿ ಹೊರಬಂದು ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಸಮಾಜದ ಸಕಾರಾತ್ಮಕ ಮಾರ್ಗದರ್ಶನ ಅನಿವಾರ್ಯ. ಅದೇ ರೀತಿ ‘ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎನ್ನುವ ಕವಿವಾಣಿಯಂತೆ ಹಿರಿಯರು ಕಿರಿಯರನ್ನು ಅರ್ಥ ಮಾಡಿಕೊಂಡು ಅವರ ಅನಿಸಿಕೆಗಳಿಗೆ ಸಹನೆಯಿಂದ ಸ್ಪಂದಿಸಬೇಕು. ಕಿರಿಯರು ಹಿರಿಯರ ಸಲಹೆಯನ್ನು ಅವರ ಅನುಭವದ ಹಿನ್ನೆಲೆಯಲ್ಲಿ ತುಲನೆ ಮಾಡಿ ಸ್ವೀಕರಿಸಬೇಕು. ಆಗಮಾತ್ರ ಯುವಜನರ ಜೀವನ ಒಂದೇ ಅಲ್ಲ ಸರ್ವರ ಜೀವನವೂ ಹಸನಾಗುತ್ತದೆ ಎಂಬುದು ಈ ವರ್ಷದ ವಿಶ್ವ ಯುವ ದಿನಾಚರಣೆಯ ಸಂದೇಶ. ಇದರಲ್ಲಿ ಎಲ್ಲರೂ ಭಾಗಿಯಾಗೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.