ADVERTISEMENT

ಸಂಗತ| ವೇಗದ ಜಗತ್ತಿಗೂ ತಾಳ್ಮೆಯೇ ಮಂತ್ರ

ಸಮಾಧಾನವಾಗಿ ಯೋಚಿಸಿ ತೆಗೆದುಕೊಳ್ಳುವ ನಿರ್ಧಾರ ಮಹತ್ವದ್ದು

ಡಾ.ಜ್ಯೋತಿ
Published 30 ಮಾರ್ಚ್ 2022, 19:31 IST
Last Updated 30 ಮಾರ್ಚ್ 2022, 19:31 IST
.
.   

ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ವಿಲ್ ಸ್ಮಿತ್‌ ತಮ್ಮ ಪತ್ನಿಯ ಬೋಳು ತಲೆಯ ಕುರಿತು ವೇದಿಕೆಯಲ್ಲಿ ತಮಾಷೆ ಮಾಡಿದ್ದಕ್ಕಾಗಿ ನಿರೂಪಕ ಕ್ರಿಸ್ ರಾಕ್ ಕೆನ್ನೆಗೆ ಬಾರಿಸಿದ್ದು ದೊಡ್ಡ ಸುದ್ದಿಯಾಗಿದೆ. ಆನಂತರ ಶ್ರೇಷ್ಠ ನಟ ಪ್ರಶಸ್ತಿ ಸ್ವೀಕರಿಸಲು ಪುನಃ ವೇದಿಕೆಯೇರಿದ ಸ್ಮಿತ್‌ ಕ್ಷಮೆ ಯಾಚಿಸಿದ್ದರು. ಅವರ ಮುಖಭಾವದಲ್ಲಿ, ಜನರಿಗೆ ಮಾದರಿಯಾಗಬೇಕಿದ್ದ ತಾನು ಈ ರೀತಿ ಸಂಯಮ ಕಳೆದುಕೊಳ್ಳಬಾರದಿತ್ತು ಎನ್ನುವ ಪಶ್ಚಾತ್ತಾಪ ಎದ್ದು ಕಾಣುತ್ತಿತ್ತು.

ನಮ್ಮ ಸುತ್ತಲಿನ ಜಗತ್ತಿನ ಮನುಷ್ಯರ ವರ್ತನೆಯನ್ನು ಗಮನಿಸಿದರೆ, ವರ್ತಮಾನ ಕಾಲದ ಮೂಲಮಂತ್ರ ‘ಆತುರ’ ಎನ್ನುವುದು ಸ್ಪಷ್ಟವಾಗುತ್ತದೆ. ನಮಗೆ ಎಲ್ಲವೂ ತಕ್ಷಣದಲ್ಲಿ ಆಗಬೇಕು ಮತ್ತು ಸಿಗಬೇಕು. ಒಂದು ವೇಳೆ ಪ್ರಾಪ್ತಿಯಾಗದಿದ್ದಲ್ಲಿ, ವ್ಯಾವಹಾರಿಕ ಮಾರುಕಟ್ಟೆ
ಯಲ್ಲಿ ಬಹಳಷ್ಟು ಆಯ್ಕೆಗಳಿವೆ. ಇದು ವಸ್ತುಗಳಿಗೆ ಮಾತ್ರವಲ್ಲ, ಸಂಬಂಧಗಳಿಗೂ ಅನ್ವಯಿಸುತ್ತದೆ. ಆದರೂ ತಾಳ್ಮೆಯಿಂದ ಯೋಚಿಸಿ ನಿರ್ಧರಿಸುವ ತಾಕತ್ತು ಮನುಷ್ಯನ ಅತ್ಯುನ್ನತ ಗುಣವೆನ್ನಬಹುದು. ನಮ್ಮ ಸುತ್ತಮುತ್ತ ನಡೆಯುತ್ತಿರುವ ಹೆಚ್ಚಿನ ಆತ್ಮಹತ್ಯೆ, ಅಪರಾಧ ಕೃತ್ಯಗಳು ಅಥವಾ ಅಪಘಾತಗಳಿಗೆ ಆ ಕ್ಷಣದ ಚಂಚಲತೆ, ಆತುರ, ಕ್ರೋಧ, ದ್ವೇಷ, ಭಾವೋದ್ವೇಗ ಕಾರಣವಾಗಿರುತ್ತವೆ.

ಸಮಾಧಾನವಾಗಿ ಯೋಚಿಸಿ ತೆಗೆದುಕೊಳ್ಳುವ ನಿರ್ಧಾರದ ಮಹತ್ವವನ್ನು ಆಧುನಿಕ ಸಣ್ಣಕಥೆಗಳ ಜನಕನೆಂದೇ ಖ್ಯಾತನಾಗಿರುವ ರಷ್ಯಾದ ಕಥೆಗಾರ ಆ್ಯಂಟನ್ ಚೆಕೊವ್ ತನ್ನ ಸಣ್ಣಕಥೆ ‘ಆ್ಯನ್ ಅವೆಂಜರ್’ ನಲ್ಲಿ (ಸೇಡು ತೀರಿಸಿಕೊಳ್ಳುವವನು) ಬಹಳ ಅದ್ಭುತವಾಗಿ ಚಿತ್ರಿಸಿದ್ದಾರೆ. ಹಾಗಿದ್ದಲ್ಲಿ, ಈ ಕಥೆಯಲ್ಲಿ ನಡೆಯುವುದೇನು?

ADVERTISEMENT

ಕಥಾನಾಯಕ ಫ್ಯೋಡರ್ ಸಿಗೇವ್‌ನಿಗೆ ತನ್ನ ಪತ್ನಿ ಇನ್ನೊಬ್ಬನೊಂದಿಗೆ ಪ್ರೇಮ ವ್ಯವಹಾರ
ದಲ್ಲಿ ತೊಡಗಿರುವುದು ಗೊತ್ತಾಗುತ್ತದೆ. ತಕ್ಷಣ ಅವನಿಗೆ ಅವರಿಬ್ಬರನ್ನೂಸಾಯಿಸಿಬಿಡಬೇಕೆನಿಸುತ್ತದೆ. ಅದಕ್ಕಾಗಿ ರಿವಾಲ್ವರ್ ಖರೀದಿಸಲೆಂದು ಅಂಗಡಿಗೆ ಓಡುತ್ತಾನೆ. ಆಕ್ರೋಶಗೊಂಡಿದ್ದ ಅವನು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾನೆ- ‘ನನ್ನ ಮನೆತನದ ಗೌರವ ಮಣ್ಣುಪಾಲಾಗಿದೆ. ವಿವಾಹದ ಪಾವಿತ್ರ್ಯ ನಾಶವಾಗಿದೆ. ನಾನೀಗ ಸೇಡು ತೀರಿಸಿಕೊಳ್ಳಲೇಬೇಕು. ಮೊದಲು ಅವರಿಬ್ಬರನ್ನೂ ಸಾಯಿಸಿ, ಆನಂತರ ಗುಂಡಿಕ್ಕಿಕೊಂಡು ಸಾಯುತ್ತೇನೆ’.

ಅಂಗಡಿಯವನು ಸಿಗೇವ್‌ನ ಮುಂದೆ ಒಂದು ರಾಶಿ ರಿವಾಲ್ವರ್‌ಗಳನ್ನಿಟ್ಟು ಅವುಗಳ ವೈಶಿಷ್ಟ್ಯವನ್ನು ವಿವರಿಸ ಲಾರಂಭಿಸಿದ. ಒಂದನ್ನು ತೋರಿಸಿ- ‘ಇದು ಮೋಸ ಮಾಡಿದ ಹೆಂಡತಿ ಮತ್ತು ಅವಳ ಪ್ರೇಮಿಯನ್ನು ಸಾಯಿಸಲು ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ಸೂಕ್ತವಾದುದಲ್ಲ’ ಎನ್ನುತ್ತಾನೆ. ಆಘಾತಗೊಂಡ ಸಿಗೇವ್, ‘ನಾನೇನು ಯಾರನ್ನೂ ಸಾಯಿಸಲು ಖರೀದಿಸುತ್ತಿಲ್ಲ. ಕಳ್ಳರನ್ನು ಹೆದರಿಸಲು ಅಷ್ಟೇ’ ಎಂದು ಸುಳ್ಳು ಹೇಳುತ್ತಾನೆ.

ಆನಂತರ, ಸಿಗೇವ್‌ನ ಯೋಚನಾಲಹರಿ, ಅವರಿಬ್ಬರನ್ನೂ ಸಾಯಿಸುವ ವಿಧಿವಿಧಾನದ ಕಡೆಗೆ ಹರಿಯುತ್ತದೆ- ‘ಅವನನ್ನು ಮನೆಯ ಹೊರಗೆ ಕಾದಾಡಲು ಕರೆದು ಸಾಯಿಸಲೇ? ಛೆ, ಅದರಿಂದ ಅವನಿಗೆ ಗೌರವ ಕೊಟ್ಟಂತಾಗುತ್ತದೆ. ಅವನನ್ನು ಬೀದಿ ನಾಯಿಯಂತೆ ಸಾಯಿಸುತ್ತೇನೆ. ಅವರಿಬ್ಬರನ್ನೂ ಸಾಯಿಸಲೇ? ಇಲ್ಲ, ಅವಳು ಮಾಡಿದ ದ್ರೋಹಕ್ಕೆ ತಕ್ಷಣದ ಸಾವು ಬರಬಾರದು. ಅವಳು ಸಮಾಜದಲ್ಲಿ ಅವಮಾನವನ್ನು ದಿನವೂ ಎದುರಿಸುತ್ತಾ ನಿಧಾನವಾಗಿ ಸಾಯಬೇಕು. ಹಾಗಾಗಿ ಸಾಯುವುದು ನಾನು ಮತ್ತು ಅವಳ ಪ್ರೇಮಿ ಮಾತ್ರ’.

‘ಅರೇ, ನಾನು ಸತ್ತರೆ, ಅವಳು ಅನುಭವಿಸುವ ನೋವನ್ನು ನೋಡುವುದು ಹೇಗೆ? ಅಲ್ಲದೆ, ಅವಳು ಸುಳ್ಳು ಕಥೆಗಳನ್ನು ಸೃಷ್ಟಿಸಿ ಕಣ್ಣೀರಿನಿಂದ ಜನರನ್ನು ನಂಬಿಸಬಹುದು. ಆಗ, ನಾನು ಜೋಕರ್ ಆಗುತ್ತೇನೆ. ಹಾಗಾಗಿ, ನಾನು ಸಾಯಬಾರದು’.

ಒಂದು ಕ್ಷಣದ ನಂತರ ಸಿಗೇವ್‌ಗೆ ಮತ್ತಷ್ಟು ಸ್ಪಷ್ಟತೆ ಸಿಗಲಾರಂಭಿಸಿತು- ‘ಅಲ್ಲ, ನಾನೇಕೆ ಸಾಯಬೇಕು? ತಪ್ಪು ಮಾಡಿರುವುದು ಅವರಿಬ್ಬರು. ನಾನು ಅವನನ್ನು ಸಾಯಿಸಿ, ಅವಳನ್ನು ಕೋರ್ಟಿಗೆ ಎಳೆಯುತ್ತೇನೆ’.

ಹೀಗೆ, ಸಿಗೇವ್‌ನ ಮನಸ್ಸಿನಲ್ಲಿ ನಿರ್ಧಾರಗಳು ಬದಲಾಗುತ್ತಿರುವಾಗ, ಅಂಗಡಿಯವನು ಇಂತಹದ್ದೇ ಒಂದು ಘಟನೆಯನ್ನು ವಿವರಿಸಿದ- ‘ಕೆಲವು ದಿನಗಳ ಹಿಂದೆ ಅಧಿಕಾರಿಯೊಬ್ಬ ತನಗೆ ಮೋಸ ಮಾಡಿದ ಹೆಂಡತಿ ಮತ್ತು ಅವಳ ಪ್ರೇಮಿಯನ್ನು ಕೊಂದ. ಆನಂತರ ಅಧಿಕಾರಿಯನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲಾಯಿತು. ಇಂತಹ ಪ್ರಕರಣಗಳಲ್ಲಿ ವ್ಯವಸ್ಥೆಯು ಸತ್ತವರಿಗೆ ಸಹಾನುಭೂತಿ ತೋರಿಸುತ್ತದೆ. ಹಾಗಾಗಿ, ಇತ್ತೀಚೆಗಿನ ದಿನಗಳಲ್ಲಿ ಮೋಸ ಮಾಡಿದ ಹೆಂಡತಿಯ ವಿರುದ್ಧ ಸೇಡು ತೀರಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬದಲಾಗಿ, ವಿಚ್ಛೇದನ ನೀಡಿ ಜೀವನ ಮುಂದುವರಿಸುತ್ತಾರೆ’. ಆಗ ಸಿಗೇವ್‌ಗೆ ಜ್ಞಾನೋದಯ
ವಾಯಿತು- ‘ಅಯ್ಯೋ ನಾನೇಕೆ ಜೈಲು ಪಾಲಾಗಲಿ? ವಿಚ್ಛೇದನಕ್ಕೆ ಅರ್ಜಿ ಹಾಕಿ, ಅವಳ ಮೋಸವನ್ನು ಬಯಲಿಗೆಳೆಯುತ್ತೇನೆ’.

ಇನ್ನು ಸಿಗೇವ್‌ಗೆ ರಿವಾಲ್ವರ್‌ನ ಅಗತ್ಯ ಕಾಣಲಿಲ್ಲ. ಆದರೆ, ಅಷ್ಟು ಹೊತ್ತು ಸಾವಕಾಶವಾಗಿ ರಿವಾಲ್ವರ್‌ ಗಳನ್ನು ತೋರಿಸುತ್ತಾ, ಸರಿಯಾದ ನಿರ್ಧಾರ ತೆಗೆದುಕೊಳ್ಳಲು ತನಗೆ ಪರೋಕ್ಷವಾಗಿ ಸಹಾಯ ಮಾಡಿದ ಅಂಗಡಿಯವನಿಂದ ಏನನ್ನಾದರೂ ಖರೀದಿಸಬೇಕೆಂದು ಅನ್ನಿಸಿತು. ಹಕ್ಕಿ ಹಿಡಿಯುವ ಬಲೆಯನ್ನು ಖರೀದಿಸಿ ಹೊರನಡೆದ. ಹೀಗೆ, ನಿರ್ಧಾರ ತೆಗೆದುಕೊಳ್ಳಲು ಸಮಯ ತೆಗೆದುಕೊಂಡಿದ್ದರಿಂದ ತಕ್ಷಣದ ಆಕ್ರೋಶ ಕಳೆದು, ಒಂದು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು.

ಷೇಕ್ಸ್‌ಪಿಯರ್ ಹೇಳಿದಂತೆ, ‘ಬುದ್ಧಿವಂತಿಕೆಯಿಂದ ನಿಧಾನವಾಗಿ ನಡೆ. ವೇಗವಾಗಿ ಓಡುವವರು
ಮುಗ್ಗರಿಸುತ್ತಾರೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.