ಬಹಳಷ್ಟು ಪೋಷಕರು ತಮ್ಮ ಮಕ್ಕಳು ಶಾಲೆಗೆ ಹೋಗಿ ತರಗತಿಗಳಲ್ಲಿ ಕುಳಿತರಾಯಿತು, ಅವರು ಕಲಿತಂತೆಯೆ ಎಂದು ಭಾವಿಸುವುದಿದೆ. ಆದರೆ, ವಾಸ್ತವ ಬೇರೆಯೇ ಇದೆ. ಹಲವು ಮಕ್ಕಳಿಗೆ ಏಕಾಗ್ರತೆಯ ಅಭಾವ, ಪಾಠದತ್ತ ಗಮನ ಕಡಿಮೆ. ಸಹಜವಾಗಿಯೇ ಅಂಥ ಮಕ್ಕಳು ಬೋಧನೆಯತ್ತ ನಿರಾಸಕ್ತಿ ತಳೆಯುತ್ತಾರೆ. ಹಾಗಾಗಿ ಮಾಹಿತಿಯನ್ನು ಸಮರ್ಥವಾಗಿ ಮನನ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ.
‘ಆಲಿಸಿ, ಅರ್ಥೈಸಿಕೊಳ್ಳಿ ಮತ್ತು ಆಡಿ’- ಈ ಮೂರು ಸೂತ್ರಗಳನ್ನು ಮಕ್ಕಳು ಪಾಲಿಸಬೇಕಿದೆ. ಪಾಠವನ್ನು ಶ್ರದ್ಧಾಸಕ್ತಿಯಿಂದ ಆಲಿಸುವ ಮಕ್ಕಳು ಸಹಜವಾಗಿಯೇ ಚೆನ್ನಾಗಿ ಕಲಿಯುತ್ತಾರೆ. ಇಲ್ಲವಾದರೆ ಬಾಯಿಪಾಠಕ್ಕೆ ಅವರು ಮಾರುಹೋಗುವುದೊಂದೇ ದಾರಿ. ಉಭಯಕುಶಲೋಪರಿಯಲ್ಲಿ ‘ನಿಮ್ಮ ಮಕ್ಕಳು ಏನು ಓದುತ್ತಿದ್ದಾರೆ?’ ಎನ್ನುವುದಕ್ಕಿಂತ ‘ಏನು ಅರ್ಥೈಸಿಕೊಳ್ಳುತ್ತಿದ್ದಾರೆ?’ ಎನ್ನುವುದೇ ಸರಿ.
ಇಂಗ್ಲಿಷ್‌ನ ‘ಫನಲ್’ ಪದಕ್ಕೆ ಕನ್ನಡದಲ್ಲಿ ಸಂವಾದಿಯಾಗಿ ‘ಆಲಿಕೆ’ ಎಂಬ ಪದವಿದೆ. ಆಲಿಸುವಿಕೆ ಎಂದರೆ ಶ್ರದ್ಧಾಸಕ್ತಿ ವಹಿಸಿ ಕೇಳುವುದು. ವಾಸ್ತವವಾಗಿ ‘ಬುದ್ಧಿವಂತ’ ಎಂದೂ ಕರೆಯಲಾಗುವ ‘ಫನಲ್’ನ ಕಾರ್ಯವೂ ಅದೇ ತಾನೆ. ದ್ರವವಸ್ತುವನ್ನು ಆಸ್ಥೆಯಿಂದ ಒಂದು ಪಾತ್ರೆಯಿಂದ ಕಿರಿಯ ಬಾಯುಳ್ಳ ಇನ್ನೊಂದಕ್ಕೆ ಅಚ್ಚುಕಟ್ಟಾಗಿ ಅದು ವರ್ಗಾಯಿಸುವುದು. ಈ ಸಲಕರಣೆಯು ಕಿವಿಯನ್ನೇ ಹೋಲುವುದು. ಕನ್ನಡ ಪದಗಳ ಅರ್ಥಗೌರವಕ್ಕೆ ಇದೊಂದು ಅತ್ಯುತ್ತಮ ನಿದರ್ಶನ. ಆಡುವುದಕ್ಕಿಂತಲೂ ಆಲಿಸುವುದರಿಂದಲೇ ಅಧಿಕ ಲಾಭ. ಕಿವಿಗೊಡದ ವಿನಾ ನಮ್ಮ ಸುತ್ತಮುತ್ತಲ ವಿದ್ಯಮಾನಗಳ ಪರಿಚಯವಾಗದು.
ಸಮಾಜದಲ್ಲಿ ವ್ಯಕ್ತಿಯ ಏಳಿಗೆ ಮತ್ತು ಸುಸ್ಥಿರತೆ ಗಾಗಿ ತನ್ಮಯ ಆಲಿಸುವಿಕೆ, ತನ್ಮೂಲಕ ವಿಶ್ಲೇಷಣೆ. ಸಹಿಷ್ಣುತೆಯು ನುಡಿಗೂ ಮೀರಿ ಕೇಳುವ ಕೌಶಲ ವನ್ನು ಆಧರಿಸಿದೆ. ಶಿಸ್ತಾಗಿ ಕಿವಿಗೊಟ್ಟರೆ ವೇದಿಕೆಗೆ ಅದಕ್ಕೂ ಹಿರಿದಾದ ಉಡುಗೊರೆ ಏನಿದೆ? ಸಭೆಯ ತಲ್ಲೀನತೆಯ ಕೊರತೆಯು ಧ್ವನಿವರ್ಧಕ ಹಿಡಿದವ ರನ್ನು ನಿಸ್ತೇಜಗೊಳಿಸುವುದು ಖಂಡಿತ. ಪ್ರಕೃತಿ ಸದಾ ನಮ್ಮೊಂದಿಗಿರುತ್ತದೆ. ಆಲಿಸುವುದರಿಂದ ಆಜೂಬಾಜಿನ ಪರಿವೆ ಮೊನಚಾಗುತ್ತದೆ. ಆದರೆ ಹೆಡ್‍ಫೋನ್ ಬದಿಗಿಟ್ಟು ಹಕ್ಕಿಗಳ ಚಿಲಿಪಿಲಿ, ಹೊಳೆಯ ಜುಳುಜುಳು, ಮರದ ಎಲೆ, ಮೇಘ ಗರ್ಜನೆ, ಗರಿಗಳ ಸೊಂಯ್... ಎಲ್ಲವನ್ನೂ ಕಿವಿ ತುಂಬಿಕೊಳ್ಳಬೇಕಷ್ಟೆ.
ಮನುಷ್ಯನನ್ನೂ ಒಳಗೊಂಡಂತೆ ಪ್ರಾಣಿಗಳಿಗೆ ಎರಡು ಕಿವಿಗಳು, ಒಂದೇ ಬಾಯಿ. ಅಂದರೆ ನಾವು ಮಾತನಾಡುವುದರ ಎರಡು ಪಟ್ಟು ಕೇಳುವ ಅಗತ್ಯವನ್ನು ನಿಸರ್ಗವೇ ನಿರ್ದೇಶಿಸಿದೆ! ಮಾತನಾಡುವುದಕ್ಕಿಂತ ಆಲಿಸುವುದಕ್ಕೇ ಹೆಚ್ಚಿನ ಪ್ರಾಮುಖ್ಯ ಫಲಕಾರಿ. ಆಲಿಸುವ ಕಲೆ ಪರರ ಹೃದಯಕ್ಕೆ ರಾಜಮಾರ್ಗ. ಕುತೂಹಲದ ಆಲಿಸುವಿಕೆ, ಪ್ರಾಮಾಣಿಕತೆಯ ನುಡಿ ಒಂದು ಮಾದರಿ. ಮಂದಿ ಕೇಳಲ್ಪಡಲು ಹಾತೊರೆಯುತ್ತಾರೆ. ಅವರ ಬಳಿ ನಿವೇದಿಸಿಕೊಳ್ಳಲು ಅಪಾರ ಸರಕು. ಸುಮ್ಮನೆ ಕೂತು ತದೇಕಚಿತ್ತದಿಂದ ಆಲಿಸುವ ಪ್ರತಿಯೊಬ್ಬರೂ ಅವರ ಪಾಲಿಗೆ ಪರಮಾಪ್ತರು.
ಮನಸ್ಸಿಟ್ಟು ಕೇಳುವುದರಿಂದ ಎದುರಾಳಿ ಗಳಿಗಿಂತಲೂ ಹೆಚ್ಚಾಗಿ ಸ್ವತಃ ನಮ್ಮನ್ನು ನಾವೇ ವ್ಯಾಖ್ಯಾನಿಸಿಕೊಂಡಿರುತ್ತೇವೆ. ಹಾಗಾಗಿ ಕಿವಿಗೊಟ್ಟು ಕೇಳುವುದರಿಂದ ಮನುಷ್ಯ ಸಂಬಂಧಗಳು ಶಕ್ತಿ ಯುತಗೊಳ್ಳುತ್ತವೆ. ಗಮನವಿರಿಸಿ ಆಲಿಸಿದರೆ ಮಾತ ನಾಡುವುದು ಮಾತ್ರವಲ್ಲ, ಮಾತನಾಡದ್ದೂ ಕೇಳುತ್ತದೆ.
ಮೊಬೈಲ್, ವಿಡಿಯೊ, ಜಿಪಿಎಸ್ ವಗೈರೆ ಸಂಪರ್ಕ ಸೇತುಗಳನ್ನು ನಾವು ಆಳುತ್ತಿಲ್ಲ, ಅವೇ ನಮ್ಮನ್ನಾಳುತ್ತಿವೆ. ಸಂವಹನದ ಅತಿವೃಷ್ಟಿಯು ಆಲಿಸುವಿಕೆಯನ್ನು ಬಲಹೀನಗೊಳಿಸಿದೆ. ಎಲ್ಲರೂ ಮಾತಾಡುವ, ಯಾರೂ ಆಲಿಸದ ಅಯೋಮಯ! ಇದರಿಂದ ಸಭೆ, ಸಂವಾದ, ಚರ್ಚೆಗಳು ಬಹುತೇಕ ನಿರರ್ಥಕ. ಅರ್ಥೈಸಿಕೊಳ್ಳಲು ಅಲ್ಲದೆ ಪ್ರತಿಕ್ರಿಯಿಸಲಷ್ಟೇ ಆಲಿಸುವುದು ಸಂಧಾನದ ವೈಫಲ್ಯಕ್ಕೆ ಮೂಲ. ಆದಕಾರಣ ಸಾವಧಾನದ ಆಲಿಕೆಯೇ ವಾಗ್ವಾದ ನ್ಯೂನತೆಗೆ ಲಸಿಕೆ.
ಕಣ್ಣಲ್ಲಿ ಕಣ್ಣಿಟ್ಟು ಪರರ ಗ್ರಹಿಕೆಗಳಿಗೆ ಕಿವಿಗೊಟ್ಟರೆ ಅವರಿಗೆ ಅದಕ್ಕಿಂತ ಸಲ್ಲಿಸುವ ಗೌರವ ಇನ್ನೊಂದಿಲ್ಲ. ಆಲಿಸುವಿಕೆ ಸೊಗಸಾಗಿದ್ದವರ ಪಾಲಿಗೆ ಅವರಾಡುವ ನುಡಿಯೂ ಸೊಗಸಾಗಿರುತ್ತದೆ. ‘ಆಲಿಸದವರನ್ನು ಕಾಡುವ ಕಿವುಡು ಬೇರೆ ಯಾರಿಗೂ ಇರಲಾರದು’ ಎಂಬ ಮಾತುಂಟು.
ಆಲಿಸುವಿಕೆಯು ಕಲಿಕೆಯ ಅವಿನಾಭಾವ ಅಂಗ. ಶಿಕ್ಷಣ ತಜ್ಞರು, ಪೋಷಕರು, ಶಿಕ್ಷಕರು, ವಿದ್ಯಾಸಂಸ್ಥೆಯ ಮುಖ್ಯಸ್ಥರು ಮಕ್ಕಳ ಆಲಿಸುವ ಸಾಮರ್ಥ್ಯ ಕುರಿತು ಆಗಿಂದಾಗ್ಗೆ ಚರ್ಚಿಸಬೇಕಿದೆ. ಕೆಲವು ಅಧ್ಯಾಪಕರು ಮಕ್ಕಳ ನಿಗಾ ಪರೀಕ್ಷಿಸಲು ‘ಹೇಳಿ, ಪಾಠದಲ್ಲಿ ನಾನೆಲ್ಲಿ ಇದ್ದೆ ಅಂತ?’ ಎನ್ನುವುದುಂಟು. ಅಂದಹಾಗೆ ತತ್ಪರ ಆಲಿಸುವಿಕೆ ಸಾಧ್ಯವಾದರೆ ಟ್ಯೂಷನ್ ಎಂಬ ಹೆಚ್ಚುವರಿ ತರಗತಿ ಏಕೆ? ಅದಕ್ಕೆ ಖರ್ಚು ಹಾಗಿರಲಿ, ತಗಲುವ ಅಮೂಲ್ಯ ಸಮಯವೇನು ಕಿಂಚಿತ್ತೇ? ಅಲ್ಲೂ ಪಾಠ ಆಲಿಸದೆ ಮನನವಾಗದಿದ್ದರೆ ಎಂಬ ಪ್ರಶ್ನೆ ಇದ್ದಿದ್ದೆ! ಎಂದಮೇಲೆ ವಿದ್ಯಾಲಯಗಳಲ್ಲಂತೂ ಮಕ್ಕಳಿಗೆ ಆಲಿಸುವಿಕೆಯ ಮಹತ್ವ ಮನದಟ್ಟಾಗಿಸಲು ‘ಆಲಿಸುವಿಕೆಯ ದಿನ’ ಅವಶ್ಯವಾಗಿ ಕಳೆಗಟ್ಟಲೇಬೇಕಿದೆ.
ಜಗತ್ತಿನ ಎಲ್ಲ ಭಾಷೆಗಳಲ್ಲೂ ಮೌಖಿಕ ಪರಂಪರೆ ಯಲ್ಲೇ ಅದೆಷ್ಟು ಕಾವ್ಯ, ಕಥನಗಳು, ನುಡಿಗಟ್ಟುಗಳು, ಪ್ರಮೇಯಗಳು ದೇಶ, ಕಾಲ ದಾಟಿ ಪಯಣಿಸಿ ಬಂದವು, ನಮಗೆ ದಕ್ಕಿದವು. ಶ್ರವಣೇಂದ್ರಿಯಗಳು ತೆರೆದುಕೊಂಡ ತೀಕ್ಷ್ಣತೆಯೇ ಒಂದು ಅದ್ಭುತ. ಆ ಅತಿಶಯದ ರವಷ್ಟಾದರೂ ಅಂಶ ಮನುಷ್ಯನಲ್ಲಿ ಮತ್ತೆ ವಿಜೃಂಭಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.