ಆಧುನಿಕ ಜಗತ್ತಿನ ಸ್ಪರ್ಶವೇ ಇಲ್ಲದೆ, ವಿಜ್ಞಾನ– ತಂತ್ರಜ್ಞಾನದ ಅರಿವೇ ಇಲ್ಲದೆ, ನೆಲೆ ನಿಲ್ಲಲೊಂದು ಸೂರು ಇಲ್ಲದೆ, ಹಾದಿ- ಬೀದಿ, ಕಾಡು- ಮೇಡು ಅಲೆಯುವ ಅಲೆಮಾರಿ ಸಮುದಾಯಗಳ ಜನರ ಬದುಕು ಇಂದಿಗೂ ಬಟಾಬಯಲಿನಲ್ಲಿ ಮೂರಾಬಟ್ಟೆಯಾಗಿ ನಿಂತಿದೆ. ಜಗತ್ತು ಇಷ್ಟೆಲ್ಲಾ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದರೂ ಈ ಸಮುದಾಯಗಳಿಗೆ ಅದರ ಕಿಂಚಿತ್ತು ಫಲವೂ ದೊರಕದೆ ತಮ್ಮ ಅಸ್ಮಿತೆಯನ್ನೇ ಕಳಚಿಕೊಳ್ಳುವ ಹಂತಕ್ಕೆ ಬಂದು ನಿಂತಿವೆ.
ಪರಿಶಿಷ್ಟ ಜಾತಿಯಲ್ಲಿ ಸುಡುಗಾಡುಸಿದ್ಧ, ಸಿಳ್ಳೇಕ್ಯಾತಾಸ್, ದೊಂಬರು, ಹಂದಿಜೋಗಿ, ಚನ್ನದಾಸರ್, ಕೊರಮ, ಕೊರಚ ಇತರೆ 51 ಮತ್ತು ಪರಿಶಿಷ್ಟ ಪಂಗಡದಲ್ಲಿ ಮೇದ, ಇರುಳಿಗ, ಹಕ್ಕಿಪಿಕ್ಕಿ, ಕಮ್ಮಾರ ಇತರೆ 23 ಬುಡಕಟ್ಟುಗಳನ್ನು ಅಲೆಮಾರಿ ಸಮುದಾಯಗಳು ಎಂದು ಸರ್ಕಾರ ಗುರುತಿಸಿದೆ. ಈ 74 ಸಮುದಾಯಗಳು ಒಟ್ಟು 9.63 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ನಾಗರಿಕತೆಯ ಪೂರ್ವದಲ್ಲಿ ಎಲ್ಲರೂ ಅಲೆಮಾರಿಗಳೇ ಆಗಿದ್ದರು ಎಂದು ಇತಿಹಾಸ ಹೇಳುತ್ತದೆ. ನಾವು ನಾಗರಿಕ ಸಮಾಜದಲ್ಲಿ ಇದ್ದೇವೆ ಎಂದುಕೊಳ್ಳುವ ಈ ಸಂದರ್ಭದಲ್ಲೇ ನಿರ್ದಿಷ್ಟ ವಿಳಾಸವಿಲ್ಲದೇ ನೆಲೆಯ ಹುಡುಕಾಟದಲ್ಲಿ ಇಷ್ಟು ಸಮುದಾಯಗಳಿರುವುದು ಇಡೀ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಅಭಿವೃದ್ಧಿಯ ಸ್ಪರ್ಶವೇ ಸೋಕದ ಅಲೆಮಾರಿ ಸಮುದಾಯಗಳು ತಮ್ಮದೇ ಆದ ಸಾಂಸ್ಕೃತಿಕ ಅಸ್ಮಿತೆ ಉಳಿಸಿಕೊಳ್ಳಲು ತಡಕಾಡುತ್ತಿವೆ. ಪರಿಶಿಷ್ಟರ ಮುಖ್ಯವಾಹಿನಿಯ ಸಮುದಾಯಗಳಿಗಿಂತಲೂ ವಿಭಿನ್ನ ಮತ್ತು ವಿಶಿಷ್ಟವಾದ ಜೀವನಶೈಲಿ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯಿಂದಾಗಿ ಔದ್ಯೋಗಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪಾಲ್ಗೊಳ್ಳಲು ಇವರು ಶಕ್ತರಲ್ಲ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನೇಕ ಅಧ್ಯಯನ ವರದಿಗಳೇ ಹೇಳಿವೆ. ಗುರುತಿಸಲ್ಪಟ್ಟ ಅಲೆಮಾರಿಗಳ ಸಾಕ್ಷರತೆಯ ಪ್ರಮಾಣ ಒಟ್ಟಾರೆಯಾಗಿ ಶೇ 41.92ರಷ್ಟಿದೆ. ಸಾಕ್ಷರತೆ ಎಂದರೆ ಅಕ್ಷರ ಜ್ಞಾನವೇ ವಿನಾ ಅದು ಪೂರ್ಣ ಪ್ರಮಾಣದ ಶಿಕ್ಷಣವಲ್ಲ. ಇನ್ನು ಶೇ 96.56ರಷ್ಟು ಜನರಿಗೆ ಭೂಮಿಯ ಹಕ್ಕಿಲ್ಲ.
ಇವೆಲ್ಲವನ್ನೂ ಗಮನಿಸಿದರೆ, ಪರಿಶಿಷ್ಟ ಜಾತಿ, ಪಂಗಡದ ಮುಖ್ಯವಾಹಿನಿಯ ಸಮದಾಯಗಳು ಮತ್ತು ಅಲೆಮಾರಿ ಸಮುದಾಯಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿವೆ ಎಂದೇ ಹೇಳಬೇಕು. ಈ ಏರುಪೇರು ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೇ ವಿನಾ ಕಡಿಮೆಯಾಗಿಸುವ ಯಾವ ಹರಿಗೋಲೂ ಕಾಣಿಸದಿರುವುದು ಅತ್ಯಂತ ಆತಂಕದ ವಿಷಯ.
ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 2016ರಲ್ಲಿ ಸರ್ಕಾರವು ಅಭಿವೃದ್ಧಿ ಕೋಶವೊಂದನ್ನು ಸ್ಥಾಪಿಸಿತು. ಅದು ಅಲೆಮಾರಿಗಳನ್ನು ದಡ ಸೇರಿಸುವ ದೋಣಿಯಾಗಲಿದೆ ಎಂಬ ಕನಸು ನನಸಾಗಲೇ ಇಲ್ಲ. ಅನುದಾನದ ಅಲಭ್ಯತೆ, ಜನಪ್ರತಿನಿಧಿಗಳ ನಿರ್ಲಕ್ಷ್ಯ, ಸಿಬ್ಬಂದಿ ಕೊರತೆಯಿಂದ ಅಭಿವೃದ್ಧಿ ಕೋಶವೇ ಮುಳುಗುವ ದೋಣಿಯಂತೆ ಕಾಣಿಸುತ್ತಿದೆ.
ಆರು ವರ್ಷಗಳ ಅವಧಿಯಲ್ಲಿ, ಅಲೆಮಾರಿಗಳಿಗೆ ನೆಲೆ ಕಲ್ಪಿಸುವ ಯೋಜನೆ ರೂಪಿಸುವ ಮಾತು ಹಾಗಿರಲಿ, ಕೋಶಕ್ಕೊಂದು ಪ್ರತ್ಯೇಕ ಕಚೇರಿಯನ್ನೇ ತೆರೆದುಕೊಳ್ಳಲು ಸಾಧ್ಯವಾಗಿಲ್ಲ. ಅಲೆಮಾರಿ ಸಮುದಾಯಗಳ ಬದುಕಿನಂತೆ ಅಲೆಮಾರಿ ಅಭಿವೃದ್ಧಿ ಕೋಶವೂ ಕಚೇರಿಯ ವಿಳಾಸವಿಲ್ಲದೇ ಅಲೆಮಾರಿಯಾಗಿದೆ. ಜಾತಿಗೊಂದೊಂದು ನಿಗಮ ಮಾಡಿ ಜಾತಿಗಳ ಮಠಾಧೀಶರನ್ನು ಓಲೈಸುತ್ತಿರುವ ಸರ್ಕಾರ, ಅಲೆಮಾರಿ ಅಭಿವೃದ್ಧಿ ಕೋಶಕ್ಕೆ ಹೆಚ್ಚಿನ ಆರ್ಥಿಕ, ಆಡಳಿತಾತ್ಮಕ ಚೈತನ್ಯ ತುಂಬಿ, ನಿಗಮದ ಸ್ವರೂಪದ ಮಾದರಿಯಲ್ಲಿ ಮೇಲ್ದರ್ಜೇಗೇರಿಸಿ ಸದರಿ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಈ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಇತರ ರಾಜ್ಯಗಳಲ್ಲಿ ಅಲೆಮಾರಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಗಳ ಸಮಗ್ರ ಸಮೀಕ್ಷೆ ನಡೆಸಿ, ಸಮಸ್ಯೆಗಳನ್ನು ಗುರುತಿಸಿ ಯೋಜನೆಗಳನ್ನು ರೂಪಿಸಲಾಗಿದೆ. ಕರ್ನಾಟಕ ಸರ್ಕಾರ ಇವುಗಳನ್ನು ಮಾದರಿಯಾಗಿ ಪರಿಗಣಿಸಬೇಕಿದೆ.
ನೆಲೆಯನ್ನೇ ನಿಲ್ಲದವರಿಗೆ ಶಾಶ್ವತ ವಸತಿ ಮತ್ತು ಮೂಲಸೌಕರ್ಯ ಒದಗಿಸಲು ವಿಶೇಷ ಆರ್ಥಿಕ ಪ್ಯಾಕೇಜ್‌ಗಳನ್ನು ಒದಗಿಸಿ ಮುಖ್ಯವಾಹಿನಿಗೆ ಇನ್ನಾದರೂ ಕರೆತರಬೇಕಾದ ಜವಾಬ್ದಾರಿ ಎಲ್ಲ ನಾಗರಿಕ ಸರ್ಕಾರಗಳ ಮೇಲಿದೆ. ಇನ್ನು ಅಲೆಮಾರಿ ಸಮುದಾಯಗಳನ್ನು ಬಹುವಾಗಿ ಕಾಡುತ್ತಿರುವುದು ಜಾತಿ, ಉಪಜಾತಿ ಹಾಗೂ ಪರ್ಯಾಯ ಪದಗಳ ಗೊಂದಲಗಳು. ಈ ಗೊಂದಲಗಳ ನಿವಾರಣೆಗೆ ಪ್ರತ್ಯೇಕ ಅಲೆಮಾರಿ ಆಯೋಗ ನೇಮಿಸುವ ಅನಿವಾರ್ಯವೂ ಇದೆ. ಜೊತೆಗೆ ಅಲೆಮಾರಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ವೈಜ್ಞಾನಿಕ ಕಾರ್ಯಕ್ರಮಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರಷ್ಟೇ ಇವರ ಸಮಗ್ರ ಅಭಿವೃದ್ಧಿ ಸಾಧ್ಯ.
ಆದರೆ, ಅಲೆಮಾರಿಗಳ ಪರ ಹೋರಾಟಗಾರರ ಬೇಡಿಕೆ ಹಲವು ವರ್ಷಗಳಿಂದ ಅರಣ್ಯರೋದನವಾಗಿಯೇ ಉಳಿದುಕೊಂಡಿದೆ. ಮತ ರಾಜಕೀಯದ ದೃಷ್ಟಿಯಲ್ಲಿ ಬಲಿಷ್ಠವಲ್ಲದ ಅಲೆಮಾರಿ ಸಮುದಾಯಗಳು ಸರ್ಕಾರದ ಗಮನ ಸೆಳೆಯಲು ತಿಣುಕಾಡುತ್ತಿವೆ. ಚುನಾವಣೆ ಮತ್ತು ಮತಬ್ಯಾಂಕಿನ ದೃಷ್ಟಿಯಿಂದಷ್ಟೇ ಈ ಸೂಕ್ಷ್ಮ ಸಮುದಾಯಗಳನ್ನು ನೋಡದೆ, ಸಂವೇದನಾಶೀಲ ದೃಷ್ಟಿಕೋನದಿಂದ ನೋಡಬೇಕಾದುದು ಸರ್ಕಾರದ ಕರ್ತವ್ಯ.
ಆಡಳಿತ ಪಕ್ಷದ ಶಾಸಕರಿರಲಿ ಅಥವಾ ವಿರೋಧ ಪಕ್ಷದ ಜನಪ್ರತಿನಿಧಿಗಳೇ ಇರಲಿ ಧ್ವನಿಯೇ ಇಲ್ಲದ ಈ ಸಮುದಾಯಗಳ ಪರವಾಗಿ ಅಂತಃಕರಣದ ದನಿಯನ್ನು ಸದನದಲ್ಲಿ ಎತ್ತುವ ಮನಸ್ಸು ಮಾಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.