ADVERTISEMENT

ಸಂಗತ: ಜೀವದಾಯಿನಿಯರು ಜೀವ ಕಳೆದುಕೊಂಡಾರು!

ನೀರಿಗೆ ಹಾಹಾಕಾರ ತಪ್ಪಿಸಲು ಪಾರಂಪರಿಕ ಜಲಮೂಲಗಳನ್ನು ಕಾಪಿಟ್ಟುಕೊಳ್ಳಬೇಕಾದ ತುರ್ತು ಹೊಣೆಗಾರಿಕೆ ಎಲ್ಲರ ಮೇಲಿದೆ

ರೂಪ ಹಾಸನ
Published 10 ಮೇ 2022, 23:15 IST
Last Updated 10 ಮೇ 2022, 23:15 IST
   

ಹಿಂದೆ ಮಳೆಯ ಪ್ರಮಾಣ ಕಡಿಮೆ ಇದ್ದ ಬಯಲುಸೀಮೆಯ ಪ್ರದೇಶಗಳಲ್ಲಿ ಕೂಡ ಈ ಕೆಲ ವರ್ಷಗಳಲ್ಲಿ ಅಕಾಲಿಕವಾಗಿ ವಿಪರೀತ ಮಳೆ! ಆದರೆ ಇದಾದ ಕೆಲವೇ ತಿಂಗಳಲ್ಲಿ ಮತ್ತೆ ಜಲಮೂಲಗಳಲ್ಲಿ ನೀರು ಒಣಗಿ ಹಾಹಾಕಾರ. ಹಾಗಿದ್ದರೆ ಆ ಪ್ರಮಾಣದಲ್ಲಿ ಬಿದ್ದ ಮಳೆನೀರು ಏನಾಯಿತು? ನಾವು ಅದನ್ನು ಪರಿಣಾಮಕಾರಿಯಾಗಿ ಹಿಡಿದಿಡುವ ತಯಾರಿಯನ್ನೇ ತಕ್ಕಮಟ್ಟಿಗೆ ಮಾಡಿಕೊಂಡಿಲ್ಲ!

ಕೆಲ ಪ್ರಮಾಣದಲ್ಲಿ ಅಣೆಕಟ್ಟೆಗಳಲ್ಲಿ ನೀರನ್ನು ಹಿಡಿದಿಡುತ್ತಿರಬಹುದು. ಆದರೆ ಹಾಗೆ ಬೃಹತ್ ಅಣೆಕಟ್ಟೆಯಲ್ಲಿ ನೀರು ಕೂಡಿಡುವುದೇ ಅನೇಕ ಬಗೆಯಲ್ಲಿ ಗಂಡಾಂತರಕಾರಿಯಾಗಿ ಪರಿಣಮಿಸುತ್ತಿರುವುದನ್ನು ಜಗತ್ತಿನಾದ್ಯಂತ ಕಾಣುತ್ತಿದ್ದೇವೆ. ಕಾಲಾಂತರದಲ್ಲಿ ಅಲ್ಲಿ ಶೇಖರ
ವಾಗುವ ಅಗಾಧ ಹೂಳೂ ಸಮಸ್ಯೆಯೇ. ಹೀಗಾಗೇ ಬಿದ್ದ ಮಳೆ ನೀರನ್ನು ಸ್ಥಳೀಯ ಮಟ್ಟದಲ್ಲಿ ಹಿಡಿದಿಡುವ ನಮ್ಮ ಪಾರಂಪರಿಕ ಜಲಮೂಲಗಳು ಜೀವದಾಯಿನಿಯರಾಗಿ ಗೋಚರಿಸುತ್ತಿವೆ!

ಕರ್ನಾಟಕದಲ್ಲಿ ಮಳೆ ನೀರು ಸಂಗ್ರಹಕ್ಕೆಂದೇ ಪಾರಂಪರಿಕ ಜಲಮೂಲಗಳಾದ 39,179 ಕೆರೆಗಳು, ಲೆಕ್ಕವಿಲ್ಲದಷ್ಟು ತಲಪರಿಕೆ, ಬಾವಲಿ, ಬಾವಿ, ಜೋಹಡ್, ಕಟ್ಟೆ, ಕೊಳ, ಕಲ್ಯಾಣಿ, ಮದಗ, ಕಟ್ಟಗಳಿವೆ. ದುರಂತವೆಂದರೆ, ಈ ಪಾರಂಪರಿಕ ಜಲ
ಮೂಲಗಳಲ್ಲಿ ಕೆಲವಷ್ಟನ್ನು ಅಭಿವೃದ್ಧಿ ಹೆಸರಿನಲ್ಲಿ ಒತ್ತುವರಿ ಮಾಡಲಾಗಿದೆ, ಮತ್ತೆ ಕೆಲವು ಪಾಳು ಬಿದ್ದಿವೆ.

ADVERTISEMENT

ಹೀಗಾಗಿ ನೀರಿನ ತೀವ್ರ ಸಂಕಷ್ಟಕ್ಕೆ ಪರಿಹಾರವಾಗಿ ಸರ್ಕಾರಕ್ಕೆ ಬೃಹತ್ ಯೋಜನೆಗಳ ಬಗ್ಗೆಯೇ ಹೆಚ್ಚಿನ ಆಸ್ಥೆ. ಯಾವುದೇ ನದಿಗೆ ಅಣೆಕಟ್ಟೆ ನಿರ್ಮಾಣ, ನದಿಗಳನ್ನು ತಿರುಗಿಸಿ ನೀರೆತ್ತುವುದು, ನದಿಗಳಿಂದ ದೂರದ ಪ್ರದೇಶಕ್ಕೆ ನೀರು ಕೊಂಡೊಯ್ಯುವುದು ಅಥವಾ ನದಿ
ಜೋಡಣೆ... ಇಂತಹವೇ! ಆದರೆ ಇವೆಲ್ಲ ಪ್ರಾಕೃತಿಕವಾಗಿ ಶಾಶ್ವತ ಹಾನಿಯುಂಟು ಮಾಡುವಂತಹವು. ಮತ್ತಿವುಗಳ ಅನುಷ್ಠಾನಕ್ಕೆ ದಶಕಗಳೇ ಬೇಕು. ಆರ್ಥಿಕವಾಗಿಯಂತೂ ಬಲು ದುಬಾರಿ. ಜೊತೆಗೆ ಬೃಹತ್ಭ್ರಷ್ಟಾಚಾರಕ್ಕೂ ದಾರಿ. ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಹಲವು ಗ್ರಾಮಗಳ ಮುಳುಗಡೆ, ಜನಜೀವನಕ್ಕೆ ಅಪಾರ ಸಂಕಷ್ಟ. ಜನರ, ಗ್ರಾಮಗಳ ಸ್ಥಳಾಂತರ ಮತ್ತು ಸ್ಥಿತ್ಯಂತರದಿಂದ ಸಂತ್ರಸ್ತ ಕುಟಂಬಗಳಿಗೆ ಶಾಶ್ವತ ಯಾತನೆ.

ಅರಣ್ಯವನ್ನು ಒಳಗೊಂಡು ಯೋಜನೆ ಅನುಷ್ಠಾನ ಆಗುವಂತೆ ಇದ್ದರೆ ದಟ್ಟಕಾಡು ನಾಶವಾಗುತ್ತದೆ. ಯೋಜನೆ ಅನುಷ್ಠಾನದಿಂದ ಕಾಡಿನಲ್ಲಿ ಅಲ್ಲೋಲ ಕಲ್ಲೋಲವಾಗಿ ಜೀವವ್ಯವಸ್ಥೆಯೇ ದಿಕ್ಕಾಪಾಲಾಗುತ್ತದೆ. ಅರಣ್ಯವಾಸಿಗಳು ಅನಾಥರಾಗುತ್ತಾರೆ. ಅರಣ್ಯದ ಪ್ರಮಾಣ ಕಡಿಮೆಯಾದಂತೆ, ವನ್ಯಜೀವಿ– ಮನುಷ್ಯ ಸಂಘರ್ಷಕ್ಕೆ ಕಾರಣವಾಗುತ್ತದೆ. ತೀವ್ರವಾದ ಹವಾಮಾನ ವೈಪರೀತ್ಯ, ತಾಪಮಾನ ಏರಿಕೆಯಿಂದ ಭೂಮಿ ಮತ್ತು ಸಕಲ ಚರಾಚರಗಳು ಜರ್ಜರಿತವಾಗುತ್ತಿರುವ ಈ ಕಠೋರ ಸಂದರ್ಭದಲ್ಲಂತೂ ಪ್ರಕೃತಿ ನಾಶದ ಇಂತಹ ಎಲ್ಲ ಯೋಜನೆಗಳನ್ನೂ ಸರ್ಕಾರಗಳು ಶತಾಯಗತಾಯ ಕೈಗೆತ್ತಿಕೊಳ್ಳುವುದಿಲ್ಲವೆಂದು ಶಪಥ ಮಾಡಬೇಕಿದೆ. ‘ಪ್ರಕೃತಿಯ ಸಕಲ ಸಂರಚನೆಗೂ ಜೀವವಿದೆ’ ಎನ್ನುವ ಉದಾತ್ತ ಮನೋಭಾವ ನಮ್ಮ ಕಾನೂನಿಗೆ ಹಾಗೂ ಜನಪ್ರತಿನಿಧಿಗಳಿಗೆ ತುರ್ತಾಗಿ ಬರಬೇಕಿದೆ.

ದಶಕಗಳಿಂದ ಕೊಳವೆಬಾವಿಗಳನ್ನು ಸಾವಿರಗಟ್ಟಲೆ ಅಡಿ ಆಳದವರೆಗೆ ಕೊರೆಯುತ್ತಿರುವುದರಿಂದ ಅಂತರ್ಜಲದ ಪ್ರಮಾಣ ಕ್ಷೀಣಿಸಿದೆ. ಜೊತೆಗೆ ಇದರಲ್ಲಿ ರಾಸಾಯನಿಕ ವಿಷಯುಕ್ತ ನೀರು ಉತ್ಪತ್ತಿಯಾಗುತ್ತಿದೆ. ಅದನ್ನೇ ಕುಡಿದು, ಅನೇಕ ಭಾಗಗಳಲ್ಲಿ ಜನ- ಜಾನುವಾರುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಹೀಗಾಗಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದನ್ನೂ ಶಾಶ್ವತವಾಗಿ ನಿರ್ಬಂಧಿಸಬೇಕೆಂದು ತಜ್ಞರು ಆಗ್ರಹಿಸುತ್ತಿದ್ದಾರೆ. ನದಿ ಜೋಡಣೆಯಂತಹ ಅನೈಸರ್ಗಿಕ ವಿಧಾನದ ಕುರಿತು ಸರ್ಕಾರ
ಗಳು ಚರ್ಚೆ ನಡೆಸುತ್ತಿರುವುದೂ ಆತಂಕಕಾರಿ. ಏಕೆಂದರೆ ಇದು ಪ್ರಕೃತಿಯ ಚಲನೆಗೆವಿರುದ್ಧವಾದುದು ಮಾತ್ರವಲ್ಲ, ಈಗಾಗಲೇ ಅನೇಕ ದೇಶಗಳಲ್ಲಿ ಅನುಷ್ಠಾನಗೊಂಡ ಇಂತಹ ಯೋಜನೆಗಳು ಕಾಲಾಂತರದಲ್ಲಿ ಗಂಡಾಂತರಕಾರಿಯಾಗಿಯೂ ಪರಿಣಮಿಸಿವೆ.

ಇವೆಲ್ಲವುಗಳ ಬದಲಿಗೆ ನೈಸರ್ಗಿಕವಾದ, ಕಡಿಮೆ ಖರ್ಚಿನ ಹಾಗೂ ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತಹ, ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸುವ ಪರಿಹಾರಗಳನ್ನು ಮಾತ್ರ ನಾವಿಂದು ಅಳವಡಿಸಿಕೊಳ್ಳಬೇಕಿದೆ. ಅದಕ್ಕಾಗಿ ಸಾಧ್ಯವಾದಷ್ಟೂ ಮಳೆ
ನೀರನ್ನು ಅದು ಬಿದ್ದಲ್ಲೇ ಪಾರಂಪರಿಕ ಜಲಮೂಲಗಳಲ್ಲಿ ಸಂಗ್ರಹ ಮಾಡಿ ಅಂತರ್ಜಲ ಹೆಚ್ಚಿಸುವುದು ನೀರಿನ ಸಂಕಷ್ಟಕ್ಕೆ ದೊಡ್ಡ ಪರಿಹಾರ. ಇದು ಭೂ ತಾಪಮಾನ, ಬರ ಮತ್ತು ನೆರೆಯನ್ನು ಏಕಕಾಲಕ್ಕೆ ಸಮರ್ಪಕವಾಗಿ, ವೈಜ್ಞಾನಿಕವಾಗಿ ನಿರ್ವಹಿಸುವ ವಿಧಾನ
ಎಂಬುದೂ ಜಲತಜ್ಞರು, ಪ್ರಾಜ್ಞರ ನಿಲುವು.

ಈ ವಿವೇಕ ಕಾರ್ಯಗತಗೊಳ್ಳಲು, ನಮ್ಮ ಪ್ರತಿಯೊಂದು ಗ್ರಾಮದ ಜಲಮೂಲಗಳ ಒತ್ತುವರಿಯನ್ನು ಕಾಲಕಾಲಕ್ಕೆ ತೆರವುಗೊಳಿಸಿ, ಹೂಳೆತ್ತಬೇಕಿದೆ. ಬಿದ್ದ ಮಳೆ ನೀರನ್ನು ಮುಂದಕ್ಕೆ ಹರಿಯಲು ಬಿಡದೆ ಸಾಧ್ಯವಾದಷ್ಟೂ ಬಿದ್ದಲ್ಲೇ ಸಂಗ್ರಹಿಸಿ, ಅಂತರ್ಜಲ ಮರುಪೂರಣ ಮಾಡಬೇಕಿದೆ. ಹವಾಮಾನ ವೈಪರೀತ್ಯದಿಂದಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅಕಾಲಿಕ ಮಳೆಯನ್ನು ಎದುರಿಸಬೇಕಾದುದಂತೂ ಶತಃಸಿದ್ಧ. ಹೀಗಾಗಿ, ಯಾವುದೇ ಕಾಲದಲ್ಲಿ ಎಲ್ಲಿಯೇ ಮಳೆ ಬೀಳಲಿ, ಅದನ್ನು ವ್ಯರ್ಥಗೊಳಿಸದೆ ಕಡ್ಡಾಯವಾಗಿ ಹಿಡಿದಿಡುವುದಕ್ಕೆ ಎಲ್ಲೆಡೆ ದೊಡ್ಡಮಟ್ಟದ ವ್ಯಾಪಕ ಸಿದ್ಧತೆ ಆಗಬೇಕಿದೆ. ಅದಕ್ಕಿದು ಸಕಾಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.