ADVERTISEMENT

ಸಂಗತ | ಸ್ವಾತಂತ್ರ್ಯ: ಬೇಕು ಮರುವ್ಯಾಖ್ಯಾನ

ಸ್ವಾತಂತ್ರ್ಯ ಎಂದರೆ ಪರಕೀಯರ ಆಡಳಿತದಿಂದ ಬಿಡುಗಡೆ ಹೊಂದುವುದು ಮಾತ್ರವಲ್ಲ, ನಮ್ಮವರ ದುರಾಡಳಿತವನ್ನು ಪ್ರಶ್ನೆ ಮಾಡುವುದನ್ನೂ ಒಳಗೊಂಡಿದೆ

ಡಾ.ಜ್ಯೋತಿ
Published 10 ಆಗಸ್ಟ್ 2022, 22:45 IST
Last Updated 10 ಆಗಸ್ಟ್ 2022, 22:45 IST
ಸಂಗತ
ಸಂಗತ   

‘ಆಜಾದಿ ಕಾ ಅಮೃತ ಮಹೋತ್ಸವ್’ ಭಾಗವಾಗಿ ದೇಶವಾಸಿಗಳು ತಮ್ಮ ಮನೆ ಮತ್ತು ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಕರೆ ನೀಡಲಾಗಿದೆ. ದೇಶವು ತನ್ನ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ನಿಸ್ವಾರ್ಥ ಹೋರಾಟ ಮತ್ತು ಬಲಿದಾನದ ಮೂಲಕ ಪಡೆದ ಮಹೋನ್ನತ ಸ್ವಾತಂತ್ರ್ಯದ ಸಾಂದರ್ಭಿಕ ಮರುವ್ಯಾಖ್ಯಾನವನ್ನು ಇಂದಿನ ಪೀಳಿಗೆಗೆ ನೀಡಬೇಕಾದ ಅಗತ್ಯವಿದೆ.

ಮೊದಲನೆಯದಾಗಿ, ಸ್ವಾತಂತ್ರ್ಯವೆಂದರೆ ಪರಕೀಯರ ಆಡಳಿತದಿಂದ ಬಿಡುಗಡೆ ಹೊಂದುವುದು ಮಾತ್ರವಲ್ಲ, ನಮ್ಮವರ ದುರಾಡಳಿತವನ್ನು ಪ್ರಶ್ನೆ ಮಾಡುವುದೂ ಅದರಲ್ಲಿ ಸೇರುತ್ತದೆ. ಇಂತಹ ಪ್ರಶ್ನೆಗಳು ರಾಜಕೀಯ ಸ್ವಾತಂತ್ರ್ಯಕ್ಕೆ ಮಾತ್ರ ಸಂಬಂಧಿಸಿರದೆ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಬೌದ್ಧಿಕ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳನ್ನೂ ಒಳಗೊಂಡಿರು
ತ್ತವೆ. ಹಾಗಾಗಿ, ಯಾವುದೇ ದೇಶದ ಸ್ವಾತಂತ್ರ್ಯದ ಆಚರಣೆಯು ಸಾಂಕೇತಿಕವಾಗಿರದೆ, ಸ್ವಾತಂತ್ರ್ಯವು ಪ್ರತೀ ನಾಗರಿಕನ ಅನುಭವಕ್ಕೆ ಸಿಗುವಂತೆ ಮಾಡುವ ಬದ್ಧತೆ ಅಲ್ಲಿನ ವ್ಯವಸ್ಥೆಗೆ ಇರಬೇಕಾದುದು
ಮುಖ್ಯವೆನಿಸುತ್ತದೆ.

ದೇಶದ ರಾಜಕೀಯ ಸ್ವಾತಂತ್ರ್ಯದ ವಿಚಾರಕ್ಕೆ ಬಂದರೆ, ಪ್ರಸಕ್ತ ರಾಜಕಾರಣದಲ್ಲಿ ಜಾತಿ, ಧರ್ಮ ಮತ್ತು ಹಣದ ಪ್ರಾಬಲ್ಯ ಹಿಂದೆಂದಿಗಿಂತ ಹೆಚ್ಚಾಗಿರುವುದನ್ನು ನಾವು ಕಾಣಬಹುದು. ಇವುಗಳ ಪ್ರಭಾವವಿಲ್ಲದೆ ತನ್ನ ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲಷ್ಟೆ ಚುನಾವಣೆ ಗೆದ್ದು ಗದ್ದುಗೆಯೇರುವ ಜನನಾಯಕರು ನಮ್ಮ ನಡುವೆ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಇದನ್ನು ಸರಿಪಡಿಸಬೇಕಾದ ಸಂದರ್ಭವಿದು.

ADVERTISEMENT

ಇನ್ನು ಆರ್ಥಿಕ ಸ್ವಾತಂತ್ರ್ಯದ ಕುರಿತು ಹೇಳುವುದಾದರೆ, ದೇಶದ ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿರುವ ರೈತನಿಂದು, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ನರಳುವುದು ಹೆಚ್ಚಾಗಿದೆ. ಹಾಗೆಯೇ, ಬೃಹತ್‌ ಕಂಪನಿಗಳ ಅಬ್ಬರದ ಎದುರು ನಿಲ್ಲಲಾರದೆ, ನಮ್ಮ ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ಕೊರೊನಾ ಕಾರಣದಿಂದ ಆಗಿರುವ ಆರ್ಥಿಕ ಹೊಡೆತದಿಂದ ಉದ್ಯೋಗ ನಷ್ಟವಾಗಿದೆ. ಹೊಸ ಉದ್ಯೋಗಗಳೂ ಸೃಷ್ಟಿಯಾಗುತ್ತಿಲ್ಲ. ಇವುಗಳೊಂದಿಗೆ, ನಿರುದ್ಯೋಗ ಸಮಸ್ಯೆಯು ಯುವಜನರನ್ನು ಕಂಗಾಲಾಗಿಸಿದೆ. ಇವುಗಳ ಬಗ್ಗೆಯೂ ನಾವು ಗಮನಹರಿಸಬೇಕಿದೆ.

ಸಾಮಾಜಿಕ ಸ್ವಾತಂತ್ರ್ಯವೆಂದರೆ, ನಮ್ಮ ಸುತ್ತಮುತ್ತಲ ಜಗತ್ತಿನಲ್ಲಿರುವ ಸಾಮಾಜಿಕ ಕಟ್ಟುಪಾಡುಗಳನ್ನು ಒರೆಗೆ ಹಚ್ಚುವ ಮತ್ತು ಆಗಬೇಕಾದ ಬದಲಾವಣೆಗಳಿಗೆ ಒತ್ತಾಸೆಯಾಗಿ ನಿಲ್ಲುವ ಸ್ವಾತಂತ್ರ್ಯ. ಸಾಮಾಜಿಕ ವ್ಯವಸ್ಥೆಗಳು, ಸಾಮುದಾಯಿಕ ಸಂಪ್ರದಾಯಗಳು, ಆಚರಣೆಗಳು ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಳಗಾಗದಿದ್ದಲ್ಲಿ ಹೊಸ ಪೀಳಿಗೆಗೆ ಅವು ಅಪ್ರಸ್ತುತ ಎನಿಸುತ್ತವೆ. ಇವುಗಳ ಕುರಿತು ಅರಿವು ಮೂಡಿಸಿ, ಸಾಮಾಜಿಕ ಬಂಧನಗಳಿಂದ ಬಿಡುಗಡೆ ಹೊಂದುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ.

ಹಾಗೆಯೇ, ವೈಜ್ಞಾನಿಕ ಆವಿಷ್ಕಾರಗಳು ಮನುಷ್ಯನನ್ನು ಕುರುಡು ನಂಬಿಕೆಗಳಿಂದ ಬಿಡುಗಡೆಗೊಳಿಸಬಹುದು ಎನ್ನುವ ನಿರೀಕ್ಷೆ ಇನ್ನೂ ನೆರವೇರಿಲ್ಲ. ಬದಲಾಗಿ, ಜಾತಿ–ಮತಗಳೇ ಜನರ ಅಸ್ಮಿತೆ ಯಾಗುತ್ತಿರುವುದು ಮತ್ತು ಅದು ಆಗಲೇಬೇಕೆಂಬ ಒತ್ತಾಯದ ಆಶಯದಿಂದ ವಿವಿಧ ಚಟುವಟಿಕೆಗಳಿಗೆ ಸಾರ್ವಜನಿಕ ವೇದಿಕೆಗಳು ಹೇರಳವಾಗಿ ಸಿಗುತ್ತಿರುವುದು ಕಳವಳಕಾರಿ ಅಂಶ. ಈ ಬಗೆಯ ರಾಜಕಾರಣವು ಜನಸಾಮಾನ್ಯರಿಗೆ ಅರ್ಥವಾದಲ್ಲಿ, ಜಾತಿ, ಮತ, ಧರ್ಮಗಳ ನಡುವಿನ ಗೋಡೆಗಳು ಕಣ್ಮರೆಯಾಗಿ, ನಿಜವಾದ ಸ್ವಾತಂತ್ರ್ಯವನ್ನು ನಾವು ಅನುಭವಿಸಬಹುದು.

ಅದರಂತೆಯೇ, ಬೌದ್ಧಿಕ ಸ್ವಾತಂತ್ರ್ಯವೂ ಅಷ್ಟೇ ಮುಖ್ಯ. ವಿಜ್ಞಾನಿ ಐನ್‌ಸ್ಟೀನ್‌ ಹೇಳಿದಂತೆ, ಹೊಸ ವಿಚಾರ ಮಂಡನೆಗೆ ಮತ್ತು ನೂತನ ಆವಿಷ್ಕಾರಗಳಿಗೆ ವಿಭಿನ್ನ ಚಿಂತನೆಗಳನ್ನು ಸಹನೆಯಿಂದ ಕೇಳಿಸಿಕೊಂಡು ಅವುಗಳಿಗೆ ಸೂಕ್ತ ಸ್ಥಾನ ಕಲ್ಪಿಸುವುದು ಬಹಳ ಮುಖ್ಯವಾಗುತ್ತದೆ. ಜಗತ್ತು ತನ್ನ ನಿರಂತರತೆಯನ್ನು ಕಾಯ್ದುಕೊಳ್ಳುವುದೇ ಬದಲಾವಣೆಯಿಂದ. ಈ ಬದಲಾವಣೆ ಸಾಧ್ಯವಾಗುವುದು ಹೊಸ ಪ್ರಶ್ನೆಗಳಿಂದ. ಹಾಗಾಗಿ, ವ್ಯವಸ್ಥೆಯನ್ನು ತಮ್ಮ ಅಧೀನದಲ್ಲಿ ಹಿಡಿದಿಟ್ಟುಕೊಳ್ಳಲು ಬಯಸಿದವರು, ಪ್ರಶ್ನಿಸುವ ಮಂದಿಯನ್ನು ಶಿಕ್ಷೆಗೆ ಒಳಪಡಿಸುತ್ತಾ ಬಂದಿರುವುದನ್ನು ನಾವು ಮನುಷ್ಯನ ಇತಿಹಾಸದುದ್ದಕ್ಕೂ ಕಾಣುತ್ತೇವೆ. ಆದರೆ, ನಾವೀಗ ‘ಪ್ರಜಾ’ಪ್ರಭುತ್ವದಲ್ಲಿದ್ದೇವೆ ಮತ್ತು ವರ್ತ ಮಾನ ಜಗತ್ತಿನ ಅತ್ಯಂತ ಜರೂರಿನ ತುರ್ತು, ಪ್ರಜೆಗಳ ಬೌದ್ಧಿಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು.

ಇನ್ನು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬಂದಲ್ಲಿ, ಮೂಲತಃ ನಾವು ಒಂದು ಪೂರ್ವನಿರ್ಧರಿತ ಕಟ್ಟುಪಾಡುಗಳ ವ್ಯವಸ್ಥೆಯೊಳಗೆ ಜನ್ಮ ಪಡೆಯುತ್ತೇವೆ. ಅದ್ಯಾವುದೂ ನಮ್ಮ ಆಯ್ಕೆಯದ್ದಲ್ಲ. ಆದರೆ, ಬೆಳೆಯುತ್ತಾ ಪ್ರಾಪಂಚಿಕ ಅರಿವು ಪಡೆದಂತೆ, ಈ ಸಂಕೋಲೆಗಳಿಂದ ಬಿಡುಗಡೆ ಪಡೆದು ತನ್ನಿಷ್ಟದ ಸ್ವಾತಂತ್ರ್ಯ ಅನುಭವಿಸಬೇಕೆಂದುಕೊಳ್ಳುವುದು ಸಹಜ. ಆದರೆ, ವ್ಯವಸ್ಥೆಗಳು ಅಷ್ಟು ಸುಲಭವಾಗಿ ನಮ್ಮನ್ನು ಬಿಟ್ಟುಕೊಡುವುದಿಲ್ಲ. ಇಲ್ಲಿ ದೈಹಿಕ ಬಂಧನಕ್ಕಿಂತ, ಭಾವನಾತ್ಮಕ ಮತ್ತು ಮಾನಸಿಕ ಬಂಧನಗಳೇ ಪ್ರಾಧಾನ್ಯ ಪಡೆಯುತ್ತವೆ. ಈ ದಿಸೆಯಲ್ಲಿ, ಮನುಷ್ಯ ತನ್ನ ಆಯ್ಕೆಯ ಬದುಕನ್ನು ನಿರ್ಭೀತಿಯಿಂದ ನಡೆಸುವಂತಾಗುವುದೇ ನಿಜವಾದ ಸ್ವಾತಂತ್ರ್ಯ.

ಕೊನೆಯದಾಗಿ, ಬುದ್ಧನೆಂದಂತೆ, ಬಾಹ್ಯ ವ್ಯಕ್ತಿಗಳೆಂದೂ ನಮ್ಮ ಆತ್ಮಶಕ್ತಿಯನ್ನು ಆಳಲು ಸಾಧ್ಯವಿಲ್ಲ ಎನ್ನುವ ಪ್ರಜ್ಞೆ ಮೂಡುವ ದಿನವೇ ನಿಜವಾದ ಸ್ವಾತಂತ್ರ್ಯ ಪಡೆಯುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.