ADVERTISEMENT

ಸಂಕಷ್ಟದಲ್ಲಿ ಸಕ್ಕರೆ ಉದ್ಯಮ

ಬಸವರಾಜ ಶಿವಪ್ಪ ಗಿರಗಾಂವಿ
Published 27 ಸೆಪ್ಟೆಂಬರ್ 2018, 19:45 IST
Last Updated 27 ಸೆಪ್ಟೆಂಬರ್ 2018, 19:45 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಭಾರತದಲ್ಲಿ ಕಬ್ಬು ಬೆಳೆಯು ಎರಡನೇ ಅತಿದೊಡ್ಡ ವಾಣಿಜ್ಯ ಬೆಳೆ. ಈ ಬೆಳೆಯನ್ನು ಇಂದು ಕನಿಷ್ಠ 50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ವೈಜ್ಞಾನಿಕ ಪದ್ಧತಿಯಿಂದ ಕೃಷಿ ಕೈಗೊಂಡ ರೈತರಿಗೆ ಇದು ಖಂಡಿತವಾಗಿಯೂ ಲಾಭದಾಯಕ. ಬೆಳವಣಿಗೆ ಹಂತದಲ್ಲಿ ಕಾರ್ಮಿಕ ಶ್ರಮ ಕಡಿಮೆ ಬೇಡುವ ಕಾರಣ ವರ್ಷದಿಂದ ವರ್ಷಕ್ಕೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಸಕ್ಕರೆಯ ಆಂತರಿಕ ಬಳಕೆಯಲ್ಲಿ ವಿಶ್ವದಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ನಂತರ ಎರಡನೇ ಸ್ಥಾನದಲ್ಲಿದೆ.

ಭಾರತದಲ್ಲಿ ಅಂದಾಜು 700 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಕೋಟ್ಯಂತರ ಜನರಿಗೆ ಈ ಉದ್ಯಮ ಕೆಲಸ ಒದಗಿಸಿದೆ. ಆದರೂ ಉದ್ಯಮ ಇಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸಕ್ಕರೆ ಉದ್ಯಮಕ್ಕೆ ಉತ್ಕೃಷ್ಟ ಗುಣಮಟ್ಟದ ಕಬ್ಬು ಮೂಲ ಕಚ್ಚಾವಸ್ತುವಾಗಿದೆ. ರೈತರು ತಮ್ಮ ನೀರಾವರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕಬ್ಬು ಬೆಳೆದು ಸಕ್ಕರೆ ಕಾರ್ಖಾನೆಗಳಿಗೆ ಪೂರೈಸುವುದು ವಾಡಿಕೆ. ಪೂರೈಸಿದ ಕಬ್ಬಿಗೆ
ಯೋಗ್ಯ ಬೆಲೆಯ ಬೇಡಿಕೆ ಇಡುವುದು ಸ್ವಾಭಾವಿಕ. ಕಾರ್ಖಾನೆಗಳೂ ರೈತರಿಗೆ ಯೋಗ್ಯ ಬೆಲೆ ಕೊಡಲೇಬೇಕಾದ ಧರ್ಮಸಂಕಟದಲ್ಲಿವೆ. ಯೋಗ್ಯ ಬೆಲೆ ಕೊಡದಿದ್ದ ಪಕ್ಷದಲ್ಲಿ ರೈತರು ಪರ್ಯಾಯ ಬೆಳೆಗಳತ್ತ ಮುಖ ಮಾಡಿದರೆ ಹೇಗೆ, ಗೋದಾಮಿನಲ್ಲಿನ ಸಕ್ಕರೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ರೈತರಿಗೆ ಕೊಡಬೇಕಾದ ಹಣ ಕೊಟ್ಟರೆ ಉಳಿದ ಖರ್ಚುಗಳನ್ನು ನಿಭಾಯಿಸುವುದು ಹೇಗೆ ಎಂಬ ಭಯ ಉದ್ಯಮವನ್ನು ಕಾಡುತ್ತಿದೆ.

ಕಬ್ಬಿನ ವಿವಿಧ ಉತ್ಪನ್ನಗಳಿಗೆ ಸ್ಥಿರವಾದ ಬೆಲೆಯಿಲ್ಲದ ಕಾರಣ ಸಕ್ಕರೆ ಉದ್ಯಮವು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ. ಕಬ್ಬಿಗೆ ರೈತರು ಬಯಸುತ್ತಿರುವ ಬೆಲೆ ಹಾಗೂ ಸಕ್ಕರೆ ಉದ್ಯಮದಿಂದ ಮಾರಾಟವಾಗುವ ಉತ್ಪನ್ನಗಳಿಂದ ಬರುವ ವರಮಾನದಲ್ಲಿ ಬಹಳಷ್ಟು ವ್ಯತ್ಯಾಸ ಇದೆ. ಈ ಕಾರಣಕ್ಕಾಗಿಯೇ ಮುಳುಗುವ ಹಡಗಾಗುತ್ತಿರುವ ಸಕ್ಕರೆ ಉದ್ಯಮವನ್ನು ತೇಲಿಸಿ ದಡ ತಲುಪಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಕೇಂದ್ರ ಸರ್ಕಾರವು ಕಬ್ಬು ಬೆಳೆಗೆ ಎಫ್‌.ಆರ್‌.ಪಿ. (fair and remunerative price) ನಿಗದಿಗೊಳಿಸುತ್ತಿರು
ವುದು ಸರಿಯಾದ ಕ್ರಮವಲ್ಲ. ಸಕ್ಕರೆ ಉದ್ಯಮದಿಂದ ಹಲವಾರು ಬಗೆಯಲ್ಲಿ ತೆರಿಗೆ ಸಂಗ್ರಹಿಸುವ ಸರ್ಕಾರಗಳು ರೈತರಿಗೆ ಯೋಗ್ಯ ದರ ಕೊಡುವಷ್ಟು ಶಕ್ತಿಯನ್ನು ಸಕ್ಕರೆ ಉದ್ಯಮಕ್ಕೆ ಕಲ್ಪಿಸಬೇಕಾಗಿರುವುದು ಅವುಗಳ ಕರ್ತವ್ಯ. ಕಬ್ಬು ಬೆಳೆಗೆ ನಿರ್ದಿಷ್ಟವಾದ ಎಫ್‌.ಆರ್‌.ಪಿ. ನಿಗದಿಪಡಿಸಿದಂತೆ ಸಕ್ಕರೆ ಉದ್ಯಮದ ಉತ್ಪನ್ನಗಳಿಗೂ ನಿರ್ದಿಷ್ಟ ದರ ನಿಗದಿಪಡಿಸಬೇಕು. ಯಾವುದೇ ದರದಲ್ಲಿ ವ್ಯತ್ಯಾಸ
ವಾದರೆ ಸರ್ಕಾರವೇ ಸಂಬಂಧಿಸಿದವರಿಗೆ ನಷ್ಟ ತುಂಬಿಕೊಡುವ ಪದ್ಧತಿ ಜಾರಿಯಾದಾಗ ಮಾತ್ರ ಸಕ್ಕರೆ ಉದ್ಯಮ ಉಳಿಯಲಿದೆ. ಇಲ್ಲವಾದಲ್ಲಿ ಹತ್ತಿ (ನೂಲಿನ) ಗಿರಣಿಗಳಂತೆ ಸಕ್ಕರೆ ಕಾರ್ಖಾನೆಗಳೂ ಅವನತಿ ಹೊಂದುವ ಅಪಾಯ ಇದೆ.

ಸರ್ಕಾರದ ನಿಯಂತ್ರಣದ ಪರಿಣಾಮವಾಗಿ ಸರ್ಕಾರಿ ಹಾಗೂ ಸಹಕಾರಿ ರಂಗದ ಕಾರ್ಖಾನೆಗಳು ನಷ್ಟದಲ್ಲಿವೆ. ಖಾಸಗಿ ವಲಯದ ಕಾರ್ಖಾನೆಗಳು, ರೈತರ ಕಬ್ಬನ್ನು ಸಕಾಲಕ್ಕೆ ನುರಿಸುತ್ತ ಕಬ್ಬಿಗೆ ಹೇಗೋ ಸ್ಪರ್ಧಾತ್ಮಕ ದರ ಹೊಂದಿಸುತ್ತ ಮುನ್ನಡೆದಿರುವುದು ಮೆಚ್ಚಬೇಕಾದ ಸಂಗತಿ. ಇಂತಹ ಹೊತ್ತಲ್ಲಿ ಸರ್ಕಾರದ ಅನಧಿಕೃತ ಹಸ್ತಕ್ಷೇಪ ಮತ್ತು ಅವೈಜ್ಞಾನಿಕವಾದ ಧೋರಣೆಗಳು ಖಾಸಗಿ ವಲಯದ ಕಾರ್ಖಾನೆಗಳಿಗೂ ಮಾರಕವಾಗಿ ಪರಿಣಮಿಸುತ್ತಿರುವುದು ನೋವಿನ ಸಂಗತಿ.

ವಿಶ್ವದಲ್ಲಿ ಸಕ್ಕರೆ ಉತ್ಪಾದನೆಯ ಪ್ರಮಾಣ ಕೆಲವು ವರ್ಷಗಳಿಂದ ಏರುಗತಿಯಲ್ಲಿ ಸಾಗಿದೆ. ಪರಿಣಾಮವಾಗಿ ಸಕ್ಕರೆ ಬೆಲೆ ಇಳಿಮುಖವಾಗಿದೆ. ಭಾರತದಲ್ಲಿ ಆಂತರಿಕ ಸಕ್ಕರೆ ಮಾರಾಟ ದರ ಸದ್ಯ ಪ್ರತೀ ಕೆ.ಜಿ.ಗೆ ₹ 28ರಷ್ಟಿದೆ. ಆದರೆ ಹೊರ ದೇಶಗಳಲ್ಲಿ ಸಕ್ಕರೆ ಮಾರಾಟ ದರ ಪ್ರತೀ ಕೆ.ಜಿ.ಗೆ ಕೇವಲ ₹ 18. ಪ್ರಸಕ್ತ 2017-18ನೇ ಸಕ್ಕರೆ ಸಾಲಿನಲ್ಲಿ ಭಾರತದಲ್ಲಿ ಉತ್ಪಾದನೆಯಾಗಿ ಬಳಕೆಯಾಗದೆ 133 ಲಕ್ಷ ಟನ್ ಸಕ್ಕರೆ ಉಳಿಯುವ ಅಂದಾಜಿದೆ. 2018-19ನೇ ಸಕ್ಕರೆ ವರ್ಷದಲ್ಲಿ ಒಟ್ಟಾರೆ 365 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುವ ಸಂಭವವಿದೆ. ಅಂದರೆ ಒಟ್ಟು 500 ಲಕ್ಷ ಟನ್ ಸಕ್ಕರೆ ಭಾರತದಲ್ಲಿ ಲಭ್ಯವಾಗುವ ಮುನ್ಸೂಚನೆ ಇದೆ. ಹೀಗಾಗಿ ಬಹುಕಾಲ ಶೇಖರಿಸಿಡಲಾರದ ಈ ಸಕ್ಕರೆ ದಾಸ್ತಾನನ್ನು ಹೇಗೆ ನಿಭಾಯಿಸುವುದು? ಇದರಲ್ಲಿ, ಭಾರತ ತನ್ನ ಆಂತರಿಕ ಬಳಕೆಗಾಗಿ 240 ಲಕ್ಷ ಟನ್ ಸಕ್ಕರೆ ಉಪಯೋಗಿಸಿ, ಇನ್ನುಳಿದ 260 ಲಕ್ಷ ಟನ್ ಸಕ್ಕರೆಯನ್ನು ಏನು ಮಾಡಬೇಕು. ಈ ಪ್ರಶ್ನೆಗಳು ಸಕ್ಕರೆ ಉದ್ಯಮಕ್ಕೆ ನುಂಗಲಾರದ ತುತ್ತಾಗಿವೆ.

2016-17ರಲ್ಲಿ ದೇಶದಲ್ಲಿ ಬರ ಇದ್ದ ಕಾರಣ ಸಕ್ಕರೆ ಉತ್ಪಾದನೆ ಕುಂಠಿತಗೊಂಡಿತ್ತು. ಆಗ ವ್ಯಾಪಾರಿಗಳು ಸಕ್ಕರೆ ಆಮದಿಗೆ ಅನುಮತಿ ಪಡೆದುಕೊಂಡರು. ನೂರಾರು ಟನ್‌ ಸಕ್ಕರೆ ದೇಶಕ್ಕೆ ಬಂದು ಬಿತ್ತು. ಬಳಿಕ ಒಂದೇ ವರ್ಷದಲ್ಲಿ ಸಕ್ಕರೆ ಉತ್ಪಾದನೆ ಮಿತಿಮೀರಿದ ಕಾರಣ ಆಮದಿಗೆ ನೀಡಿದ್ದ ಅನುಮತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತು. ಈ ನಿರ್ಧಾರದ ವಿರುದ್ಧ ಸಕ್ಕರೆ ವ್ಯಾಪಾರಿಗಳು ಈಗ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ನ್ಯಾಯಾಲಯದ ತೀರ್ಪು ಸಕ್ಕರೆ ವ್ಯಾಪಾರಿಗಳ ಪರವಾಗಿ ಬಂದಲ್ಲಿ ಸಕ್ಕರೆ ಉದ್ಯಮದ ಕಥೆ ಮುಗಿದೇ ಹೋಯಿತು ಎಂಬಂತಾಗಿದೆ.

ಬಗ್ಯಾಸ್‍ನಿಂದ ಉತ್ಪಾದನೆಯಾಗುವ ವಿದ್ಯುತ್‍ನಿಂದ ಉತ್ಪಾದನಾ ವೆಚ್ಚವೂ ಹುಟ್ಟುತ್ತಿಲ್ಲ. ಯೂನಿಟ್ ದರ ಅತ್ಯಂತ ಕನಿಷ್ಠ ಮಟ್ಟಕ್ಕೆ ನಿರ್ಧರಿಸಲಾಗಿದೆ. ಜತೆಗೆ ನೂರೆಂಟು ಷರತ್ತುಗಳು. ಹಾಗಾಗಿ ಬಗ್ಯಾಸ್‍ನಿಂದ ವಿದ್ಯುತ್ ಉತ್ಪಾದಿಸುವ ಬದಲು ಬಗ್ಯಾಸನ್ನು ಹೊರಗಡೆ ಮಾರಾಟ ಮಾಡುವುದೇ ಲೇಸು ಎನ್ನುವಂತಾಗಿದೆ. ದೇಶದ ಎಲ್ಲೆಡೆ ಕಾಕಂಬಿಯ ವಿಪರೀತ ಹೆಚ್ಚಳದಿಂದಾಗಿ ಅದರ ಬೆಲೆ ನೆಲಕಚ್ಚಿದೆ. ಸಕ್ಕರೆ ಉದ್ಯಮದ ಸ್ಥಿತಿ-ಗತಿ ಅಭ್ಯಸಿಸಿದ ಬ್ಯಾಂಕುಗಳು ಕಾರ್ಖಾನೆಗಳಿಗೆ ಸಾಲ ನೀಡಲು ಮುಂದೆ ಬರುತ್ತಿಲ್ಲ. ಹೀಗಿರುವಾಗ ರೈತರಿಗೆ ಎಫ್‌.ಆರ್‌.ಪಿ. ದರ ಕೊಡುವುದು ಹೇಗೆ?

ಸಕ್ಕರೆ ಉದ್ಯಮ ಮತ್ತು ರೈತರ ಹಿತ ಕಾಯಲು ಕೆಲವು ಸುಧಾರಣಾ ಕ್ರಮಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿತು. ರೈತರ ಖಾತೆಗೆ ಪ್ರತಿ ಟನ್ ಕಬ್ಬಿಗೆ 55 ರೂಪಾಯಿ ನೇರವಾಗಿ ಜಮೆ ಮಾಡುವುದು, ಎಥೆನಾಲ್ ದರದಲ್ಲಿ ಹೆಚ್ಚಳ ಹಾಗೂ ಕಾರ್ಖಾನೆಗಳು ಸಕ್ಕರೆ ಬದಲಾಗಿ ನೇರವಾಗಿ ಎಥೆನಾಲ್ ತಯಾರಿಕೆಗೆ ಅನುಮತಿ ನೀಡುವುದಾಗಿ ಹೇಳಲಾಯಿತು. ಆದರೆ, ಈ ಯಾವುದೇ ಭರವಸೆಗಳು ಅನುಷ್ಠಾನಗೊಂಡಿಲ್ಲ. ಕಾರ್ಖಾನೆಗಳಿಗೆ ಸಕ್ಕರೆ ಬದಲಾಗಿ ಎಥೆನಾಲ್ ತಯಾರಿಕೆಗೆ ಅನುಮತಿ ನೀಡಿರುವುದು ಸ್ವಾಗತಾರ್ಹವಾದರೂ ಎಲ್ಲ ಕಾರ್ಖಾನೆಗಳು ಒಮ್ಮೆಲೇ ಕೋಟ್ಯಂತರ ಹಣ ವಿನಿಯೋಗಿಸಿ ಎಥೆನಾಲ್ ಉತ್ಪಾದನೆಯ ಯಂತ್ರೋಪಕರಣಗಳನ್ನು ಅಳವಡಿಸುವುದು ಕಷ್ಟಸಾಧ್ಯದ ಮಾತು. ಸಾಲ ಮಾಡಿ ಈ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡರೂ ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಇಳಿಕೆಯಾದಾಗ ದೇಶದಲ್ಲಿಯೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆಯಾಗುವುದು ಸ್ವಾಭಾವಿಕ. ಆಗ ಕೇಂದ್ರ ಸರ್ಕಾರವು ದಿಢೀರನೆ ಎಥೆನಾಲ್ ಬೆಲೆ ಕಡಿಮೆ ಮಾಡಿದರೆ ಗತಿ ಏನು ಎಂಬ ಚಿಂತೆ ಸಕ್ಕರೆ ಉದ್ಯಮವನ್ನು ಬಾಧಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.