ADVERTISEMENT

ಸಂಗತ: ಇರಲಿ ಚಿತ್ತ, ಉದ್ಯೋಗ ರಕ್ಷಣೆಯತ್ತ

ಮಾಡು ಇಲ್ಲವೇ ಮಡಿ ಎಂಬಂತಹ ಸಂದರ್ಭ ಸೃಷ್ಟಿಯಾಗಿದೆ ಇಂದು. ಉದ್ಯೋಗ ಸೃಷ್ಟಿ ಮಾಡಿ. ಅದುವೇ ನಮ್ಮ ಕೈಗಾರಿಕಾ ನೀತಿಯಾಗಲಿ

ಪ್ರಸನ್ನ
Published 2 ಜೂನ್ 2021, 23:38 IST
Last Updated 2 ಜೂನ್ 2021, 23:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮಾನ್ಯ ಬಿ.ಎಸ್. ಯಡಿಯೂರಪ್ಪನವರೇ,

ದೇಶವು ಮಹಾಮಾರಿ ಪಿಡುಗೊಂದನ್ನು ನಿರ್ವಹಿಸಲು ಹರಸಾಹಸ ಪಡುತ್ತಿದೆ. ತಾವೂ ಕರ್ನಾಟಕದ ಜನತೆಯನ್ನು ರಕ್ಷಿಸಿಕೊಳ್ಳಲು ಸಾಹಸಪಡುತ್ತಿದ್ದೀರಿ. ನಾವೆಲ್ಲರೂ ತಮ್ಮೀ ಪ್ರಯತ್ನದಲ್ಲಿ ಜೊತೆಗಿದ್ದೇವೆ. ಆದರೆ ಕೊರೊನಾ ಮಹಾಮಾರಿಗಿಂತ ಭಯಾನಕವಾದ ಪಿಡುಗೊಂದನ್ನು ನಾವು ಸಮಾಜದ ಒಡಲಲ್ಲಿಟ್ಟುಕೊಂಡು ಸಲಹುತ್ತಿದ್ದೇವೆ. ಅದುವೆ ಉದ್ಯೋಗ ನಾಶ; ಅದರಲ್ಲೂ ಗ್ರಾಮೀಣ ಉದ್ಯೋಗಗಳ ನಾಶವಾಗಿದೆ; ಅದರಲ್ಲೂ ಶ್ರಮದ ಉದ್ಯೋಗಗಳ ನಾಶವಾಗಿದೆ.

ತಮಗಿದರ ಅರಿವಿಲ್ಲ ಎಂಬ ಉದ್ಧಟತನದಿಂದ ಆಡುತ್ತಿರುವ ಮಾತಲ್ಲವಿದು. ಅರಿವಿದೆ. ಆದರೆ ಒಂದು ಪ್ರತ್ಯೇಕಿತ ಸಮಸ್ಯೆಯತ್ತ ನಮ್ಮೆಲ್ಲ ಗಮನವನ್ನೂ ಕೇಂದ್ರೀಕರಿಸಿ ಕಾರ್ಯಪ್ರವೃತ್ತರಾದಾಗ, ಯುದ್ಧ ಹೂಡುವ ರೀತಿಯಲ್ಲಿ ಕಾರ್ಯಪ್ರವೃತ್ತರಾದಾಗ, ಅತಿರೇಕಕ್ಕೆ ಒಳಗಾಗುವ ಅಪಾಯವಿರುತ್ತದೆ; ಸಮಾಜದ ಸಮಗ್ರ ಹಿತವನ್ನು ಮರೆತು ಉದ್ವಿಗ್ನತೆಯಿಂದ ಕಾರ್ಯನಿರ್ವಹಿಸುವ ಅಪಾಯವಿರುತ್ತದೆ; ಯುದ್ಧ ಕಲೆಯನ್ನು ಬಳಕೆ ಮಾಡುವ ಬದಲು ಯುದ್ಧೋನ್ಮಾದಕ್ಕೆ ಬಲಿಯಾಗುವ ಅಪಾಯವಿರುತ್ತದೆ; ಉದ್ಯೋಗ, ಆಹಾರ, ಆರೋಗ್ಯ, ನೆಲ, ಜಲ ಎಲ್ಲವನ್ನೂ ಕಡೆಗಣಿಸಿ ಕೆಲಸ ಮಾಡುವ ಅಪಾಯ ವಿರುತ್ತದೆ. ಪ್ರತ್ಯೇಕಿತವಾದ ಜ್ಞಾನ, ಪ್ರತ್ಯೇಕಿತವಾದ ತಾತ್ವಿಕತೆ, ಪ್ರತ್ಯೇಕಿತವಾದ ಅಭಿವೃದ್ಧಿಮಾದರಿಗಳನ್ನು ಆರಾಧಿಸತೊಡಗಿದ್ದೇವೆ ನಾವು.

ADVERTISEMENT

ಕೋವಿಡ್ ನಿರ್ವಹಣೆಯನ್ನೇ ತೆಗೆದುಕೊಳ್ಳಿ. ಎಲ್ಲವನ್ನೂ ಈ ತಜ್ಞರ ಕೈಗೊಪ್ಪಿಸಿ ಕುಳಿತಿದ್ದೇವೆ ನಾವು. ಇವರು ಕೋವಿಡ್ ತಜ್ಞರು ಎಂಬ ಬಗ್ಗೆ ಅನುಮಾನವಿಲ್ಲ ನನಗೆ. ಇವರು ಪ್ರತ್ಯೇಕಿತ ತಜ್ಞರು ಎಂದಷ್ಟೆ ಹೇಳುತ್ತಿದ್ದೇನೆ. ಬಡತನ, ಗ್ರಾಮೀಣ ಪರಿಸ್ಥಿತಿ, ಉದ್ಯೋಗ ಪರಿಸ್ಥಿತಿ ಇವರಿಗೆ ತಿಳಿಯದು. ಸದರಿ ಪಿಡುಗನ್ನೇ ಗಮನಿಸೋಣ. ಇದು ಬಂದದ್ದು ಮಹಾನಗರಗಳಿಗೆ. ಅಪಾರ ಜನದಟ್ಟಣೆ, ಹಣದಟ್ಟಣೆ, ಅಧಿಕಾರದಟ್ಟಣೆ, ಅಹಂಕಾರದಟ್ಟಣೆ ಇರುವ ಮಹಾನಗರ ಗಳಿಗೆ ರೋಗ ಬಡಿದಿದೆ. ಮಕ್ಕಳ ಕತೆಗಳಲ್ಲಿ ರಾಕ್ಷಸನ ಜೀವವು ಏಳುಸಮುದ್ರದಾಚೆ ಏಳುಕೋಟೆಯೊಳಗೆ ಪಂಜರದಲ್ಲಿ ಬಂಧಿತವಾಗಿರುವ ಗಿಳಿಯಲ್ಲಿರುವಂತೆ, ನಗರಗಳ ದಟ್ಟಣೆಯಲ್ಲಿಯೇ ಅಡಗಿರಬಹುದಲ್ಲವೇ ಕೋವಿಡ್ ಮರ್ಮ? ಉತ್ತಮ ಬದುಕಿನ ಆಸೆ ಹೊತ್ತು ಮಹಾನಗರ ಸೇರಿದ, ಆದರೆ ಈಗ ಅಲ್ಲಿಯೇ ಬಂಧಿತವಾಗಿರುವ ನಗರಜೀವಿಯೇ ಕೋವಿಡ್‍ಮಾರಿಯನ್ನು ಒಡಲಲ್ಲಿರಿಸಿಕೊಂಡಿರುವ ಸುಂದರ ಗಿಳಿ ಇರಬಹುದಲ್ಲವೇ?

ಮಾರಿಯು ತನ್ನ ಎರಡನೇ ಅಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೂ ಹರಡತೊಡಗಿದೆ ನಿಜ. ದಾರಿದ್ರ್ಯ ಅತಿಯಾಗಿರುವ- ಗುಳೆ ಏಳುವ, ಬೀಳುವ, ಮತ್ತೆ ಏಳುವ ಬಡಗ್ರಾಮಗಳಿಗೆ ಹರಡತೊಡಗಿದೆ. ಆದರೆ ಇಲ್ಲಿಗೆ ದಟ್ಟಣೆಯ ರೋಗ ಮೊದಲು ಪ್ರವೇಶಿಸಿತು, ದಾರಿದ್ರ್ಯದ ದಟ್ಟಣೆಯೂ ಸೇರಿದಂತೆ ಎಂಬುದನ್ನು ಮರೆಯಬಾರದು ನಾವು. ಈ ಯುದ್ಧದಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಲಾಕ್‍ಡೌನ್ ಎಂಬ ಮಹಾ ಅಸ್ತ್ರದ ಬಗ್ಗೆ ಯೋಚಿಸಿ, ಇದೊಂದು ತಾತ್ಕಾಲಿಕ ಪರಿಹಾರ. ಇದೇ ರೀತಿ ಕೃತಕ ಆಮ್ಲಜನಕ, ಕೃತಕ ಸ್ಟೆರಾಯ್ಡ್‌, ಕೃತಕ ಸ್ಯಾನಿಟೈಸರ್ ಕೂಡ ತಾತ್ಕಾಲಿಕ ಪರಿಹಾರವೇ. ಪೊಲೀಸರ ಅತಿಯಾದ ಬಳಕೆ, ಸುಗ್ರೀವಾಜ್ಞೆಗಳ ಅತಿಯಾದ ಬಳಕೆ, ಕೇಂದ್ರೀಕೃತ ಅಧಿಕಾರದ ಅತಿಯಾದ ಬಳಕೆ ಕೂಡ. ದುರಂತವೆಂದರೆ, ದೀರ್ಘಕಾಲೀನ ಪರಿಹಾರಗಳನ್ನು ಮರೆತು ತಾತ್ಕಾಲಿಕ ಪರಿಹಾರಗಳನ್ನೇ ಬೇಕಾಬಿಟ್ಟಿಯಾಗಿ ಬಳಸತೊಡಗಿದ್ದೇವೆ. ಇತ್ತೀಚಿನ ದಶಕಗಳಲ್ಲಿ ಹೆಚ್ಚೂ ಕಡಿಮೆ ಎಲ್ಲ ಪಕ್ಷಗಳ ಎಲ್ಲ ಸಿದ್ಧಾಂತಗಳೂ ಇದನ್ನೇ ಮಾಡಿಕೊಂಡು ಬಂದಿವೆ. ಆದರೆ ಒಂದು ತಪ್ಪನ್ನು ಎಲ್ಲರೂ ಮಾಡುತ್ತಿ ದ್ದೇವೆ ಎಂದ ಮಾತ್ರಕ್ಕೆ ಅದು ಸರಿಯಾಗುತ್ತದೆಯೇ? ಹಾಗೆಂದೇ, ನಿಮ್ಮ ಲಕ್ಷ್ಯ ಉದ್ಯೋಗಗಳ ರಕ್ಷಣೆಯತ್ತ ಇರಬೇಕು.

ಉದ್ಯೋಗ ರಕ್ಷಣೆ ಎಂದೆ, ಉದ್ಯೋಗ ಸೃಷ್ಟಿ ಎನ್ನಲಿಲ್ಲ. ಸಹಜ ಉದ್ಯೋಗಗಳು (ನ್ಯಾಚುರಲ್ ಲೈವ್‍ಲಿಹುಡ್ಸ್) ಸಹಜವಾಗಿ ಹರಡಿಕೊಂಡಿರುತ್ತವೆ, ದಟ್ಟಣೆಗೆ ಅವಕಾಶವನ್ನೇ ನೀಡುವುದಿಲ್ಲ ಅವು. ಹೇಗೆ ಪ್ರಕೃತಿಯಲ್ಲಿ ಹುಲಿಗಳ ಸಂತಾನ ಅತಿಯಾದರೆ ಅದು ಹುಲಿಗಳನ್ನು ಸಾಯಿಸುತ್ತದೆಯೋ ಅಥವಾ ಹುಲ್ಲೆಗಳು ಅತಿಯಾಗಿರುವ ಪ್ರದೇಶಗಳಿಗೆ ಅಟ್ಟುತ್ತದೆಯೋ ಹಾಗೆಯೇ ಸಹಜ ಉದ್ಯೋಗಗಳು. ಬೆಂಗಳೂರಿನಲ್ಲಿ ದಟ್ಟೈಸಲಾರದು ಕೃಷಿ, ಕೈಮಗ್ಗ, ಚಮ್ಮಾರಿಕೆ, ಗೌಳಿಗತನ ಇತ್ಯಾದಿ. ಆದರೆ ಯಂತ್ರಗಳು ಸೃಷ್ಟಿಸಿದ್ದು, ದಟ್ಟಣೆಯನ್ನು ಬೇಡುವ ಅಸಹಜ ಉದ್ಯೋಗಗಳನ್ನು; ಲಾಭದ ದಟ್ಟಣೆಯನ್ನು ಬಯಸುವ ಉದ್ದಿಮೆಗಳನ್ನು. ಇತ್ತೀಚಿನ ದಿನಗಳಲ್ಲಿ ಲಾಭದಟ್ಟಣೆ ಬಯಸುವ ಉದ್ದಿಮೆಗಳು ಉದ್ಯೋಗಿಗಳನ್ನೇ ಬಯಸುತ್ತಿಲ್ಲ. ಯಂತ್ರೋದ್ಯಮವು ಬೆರಳೆಣಿಕೆಯ ಅಂಬಾನಿ, ಅದಾನಿಗಳ ಜೇಬನ್ನು ತುಂಬುತ್ತಿದೆ ಮಾತ್ರ.

ನೀವು ರೈತ ಕುಟುಂಬದಿಂದ ಬಂದವರು. ಸಿದ್ದರಾಮಯ್ಯನವರು ಕುರಿಗಾಹಿ ಕುಟುಂಬದಿಂದ ಬಂದವರು. ನರೇಂದ್ರ ಮೋದಿಯವರು ಗಾಣಿಗ ಕುಟುಂಬದಿಂದ, ಪಿಣರಾಯಿ ವಿಜಯನ್ ಅವರು ಸಣ್ಣ ರೈತ ಕುಟುಂಬದಿಂದ, ಲಾಲೂ ಪ್ರಸಾದ್ ಗೌಳಿಗ ಕುಟುಂಬದಿಂದ ಬಂದವರು. ಇವುಗಳಾವುವೂ ಜಾತಿಗಳಲ್ಲ ವೃತ್ತಿಗಳು. ದುರಂತವೆಂದರೆ, ಈ ಎಲ್ಲ ವೃತ್ತಿಗಳನ್ನೂ ನಾಶ ಮಾಡಿ ಜಾತಿ ಪ್ರಾಬಲ್ಯ ಮೆರೆಯುತ್ತಿದ್ದೇವೆ ನಾವು. ಮಾಡು ಇಲ್ಲವೇ ಮಡಿ ಎಂಬಂತಹ ಸಂದರ್ಭ ಸೃಷ್ಟಿಯಾಗಿದೆ ಇಂದು. ಉದ್ಯೋಗ ಸೃಷ್ಟಿ ಮಾಡಿ. ಅದುವೇ ನಮ್ಮ ಕೈಗಾರಿಕಾ ನೀತಿಯಾಗಲಿ.

ಲೇಖಕ: ನಾಟಕಕಾರ ಹಾಗೂ ಸಂಸ್ಥಾಪಕ, ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರಿ ಸಂಘ, ಭೀಮನಕೋಣೆ, ಸಾಗರ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.