ADVERTISEMENT

ಎಚ್ಚರ... ಗುಡ್ಡ ಗುಡುಗೀತು!

ಡಾ.ರಾಜೇಗೌಡ ಹೊಸಹಳ್ಳಿ
Published 17 ಡಿಸೆಂಬರ್ 2019, 19:34 IST
Last Updated 17 ಡಿಸೆಂಬರ್ 2019, 19:34 IST
ಗುಡ್ಡ ಕುಸಿದಿರುವುದು  (ಸಾಂದರ್ಭಿಕ ಚಿತ್ರ)
ಗುಡ್ಡ ಕುಸಿದಿರುವುದು (ಸಾಂದರ್ಭಿಕ ಚಿತ್ರ)   

‘ಗಿರಿಶ್ರೇಣಿ: ತೆರೆದಿಟ್ಟ ತಿಜೋರಿ’ ಎಂಬ ಗುರುರಾಜ್ ಎಸ್. ದಾವಣಗೆರೆ ಅವರ ಲೇಖನವು (ಸಂಗತ, ಡಿ. 11) ಈ ದೇಶದ, ಅಷ್ಟೇ ಏಕೆ ಜಗತ್ತಿನ ವಿನಾಶದ ಎಚ್ಚರಿಕೆ ಗಂಟೆಗೆ ರೂಪಕದಂತಿದೆ. ನಮ್ಮ ರಾಜ್ಯದಲ್ಲಿ ಒಬ್ಬರು ಪ್ರತಿಭಾವಂತ ಧಾಡಸಿ ಸಚಿವರಿದ್ದರು. ‘ಏನು ಮಾಡೋದ್ರಿ, ನಮ್ಮ ಚಿತ್ರದುರ್ಗದ ಕಡೆಗೆ ಮಳೆ ಬರುವುದೇ ಇಲ್ಲ. ಪಶ್ಚಿಮಘಟ್ಟದ ಬಳಿ ಅದೇನು ಸುರಿಯುತ್ತದಪ್ಪಾ!’ ಎಂದರು. ಅಲ್ಲಿದ್ದ ಐಎಎಸ್ ಆಧಿಕಾರಿಯೊಬ್ಬರು ‘ಅಲ್ಲಿ ಗಿರಿಶಿಖರಗಳು ಮಳೆ ತಡೆದು ಸುರಿಸಿ ಬಿಡುತ್ತವಲ್ಲವೇ ಸಾರ್’ ಅಂದರು. ಹಿಂದೆಮುಂದೆ ಯೋಚನೆ ಮಾಡದೆ ‘ಫೈಲ್ ಪುಟ್‌ಅಪ್ ಮಾಡ್ರಿ! ಬೆಟ್ಟಗಳ ತುದಿ ಐವತ್ತರವತ್ತಡಿ ಚಾಪ್ ಮಾಡೋಣ’ ಅಂದರು.

ಅಧಿಕಾರಿಗೆ ಪೀಕಲಾಟಕ್ಕೆ ಬಂತು. ಫೈಲೇನೋ ಬಂತು. ಮೇಲಧಿಕಾರಿಗಳು ಒಳಗೊಳಗೇ ನಕ್ಕರು. ಸಚಿವರು ನಗಲಿಲ್ಲ. ಕೋಪ ಉಕ್ಕಿ, ಅಭಿಪ್ರಾಯ ಕೇಳಿ ತಜ್ಞರಿಗೆ ಬರೆದೇಬಿಟ್ಟರು. ಮಂತ್ರಿಗಿರಿ ಹೋಯ್ತು. ಗಿರಿಶ್ರೇಣಿ ನಕ್ಕಿತು. ಆ ಸ್ಥಳವೇ, ಎತ್ತಿನಹೊಳೆ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಕಡೆಗೆ ತರುತ್ತೇವೆಂದು ಗುತ್ತಿಗೆದಾರರು, ರಾಜಕಾರಣಿಗಳ ವಕ್ರದೃಷ್ಟಿ ಬಿದ್ದ ಧನದ ದಾಹತಾಣ. ಅಂದೇನಾದರೂ ಸಚಿವರ ಆದೇಶ ಊರ್ಜಿತವಾಗಿದ್ದರೆ, ಹಣ ಬಾಚುವವರು ‘ಅಯ್ಯೋ ಎಂಥಾ ತಿಜೋರಿ ಕೊಟ್ಟರಪ್ಪಾ’ ಎಂದು ಮುಸಿಮುಸಿ ನಗುತ್ತಿದ್ದರು ಅನ್ನಿ.

ಗಣಿಗಾರಿಕೆಯಿಂದ ನಲುಗಿದ ಬಳ್ಳಾರಿ ಮೂಲ, ಬಳಿದು ಬಾಚಿ ಉಳಿದಿರುವ ಕುದುರೆಮುಖ ಮೂಲ, ಸಣ್ಣಪುಟ್ಟ ಬೆಟ್ಟದ ಸಾಲು... ಇಂಥವುಗಳುಈಗ ಮಲಗಿ ನಿದ್ರಿಸಿ ಭೂನಿಧಿ ಕಾಯುತ್ತಿಲ್ಲ. ಭಾರಿ ಯಂತ್ರಗಳು ಬಂದು ಎದೆ ಮೇಲೆ ನಿಂತರೆ ಹೇಗಪ್ಪಾ ಭಾರ ತಾಳುವುದು ಎಂದು ಅರೆಎಚ್ಚರವಾಗಿ, ನಿದ್ರೆ ಬಿಟ್ಟು ಹಲುಬುತ್ತಿವೆ. ಈ ಹಲುಬುವಿಕೆಯನ್ನು ಕೇಳಲು ಸಮಾಜಕ್ಕಾಗಲೀ ರಾಜಕಾರಣಕ್ಕಾಗಲೀ ಕಿವಿಯೇ ಇಲ್ಲ. ನಿಜ, ಒಂದು ಗುಡ್ಡ, ಒಂದು ಬೆಟ್ಟವು ನೆಲದ ನಡುವೆ ಎದ್ದು ನಿಂತಿದ್ದರೆ ಅದೊಂದು ಯಜಮಾನಿಕೆ ಕುರುಹು. ಅಲ್ಲಿ ಮಳೆರಾಯನು ಗಂಗಮ್ಮನ ಮಡಿಲಿಗೆ ಮಳೆ ಸುರಿಸಿ ಕೆರೆಕಟ್ಟೆ ತುಂಬುತ್ತ ಪೋಷಿಸುವ ನೀರ ನಿಧಿಗಳು ಅವು.

ADVERTISEMENT

ನಮ್ಮೂರಲ್ಲಿ ಒಂದು ಗುಡ್ಡವಿತ್ತು. ಬೆಂಗಳೂರು– ಮಂಗಳೂರು ಹೆದ್ದಾರಿಗೆ ಜಲ್ಲಿ ನೀಡಿ, ಭೂಮಿ ಮಟ್ಟಕ್ಕಿಂತ ಕೆಳಗೆ ಇಳಿದು, ಈಗ ಅದೊಂದು ದನ ಕೂಡ ಕುಡಿಯಲಾರದ ಪಾಚಿ ನೀರಿನ ಹೊಂಡ. ನಿಮ್ಮ ಊರುಗಳಲ್ಲೂ ಇದೇ ಕತೆ. ಇದೇ ದೇಶದ ಕತೆ. ಇದು ಅಭಿವೃದ್ಧಿ ಎಂದು ಆಲಾಪಿಸುತ್ತಿರುವ ಜಗದಂತ್ಯದ ಕಥನ. ಗಿರಿ ಕಡಿದ ಹೆದ್ದಾರಿಗಳು ಕುಸಿಯುತ್ತಿವೆ. ಹಿಮಾಲಯದ ನೆತ್ತಿಮೇಲಿನ ಯಾತ್ರಾಸ್ಥಳ
ಗಳು ಜರುಗಿಬಿದ್ದಿವೆ. ಪಶ್ಚಿಮಘಟ್ಟ, ಹಿಮಾಲಯವು ಮನುಷ್ಯನ ಲಾಲಸೆಗೆ ಸೇಡು ತೀರಿಸಿಕೊಳ್ಳಲು ಹೊರಟಿವೆ. ನೀರು ಎಂಬುದು ತೀರ್ಥ. ಅದು, ಅಡವಿ ಮೂಲದಲ್ಲಿ ಗಿರಿಶಿಖರದೊಡನಾಡುವ ಜಗದ ಪಸೆಯ ಪೋಷಕ. ಇಂದು ವಿಕ್ಟೋರಿಯಾ ಜಲಪಾತ ಒಣಗುತ್ತಿದೆಯಂತೆ. ಅಮೆಜಾನ್ ಅಡವಿ ಸಿಡಿಮದ್ದಾಗುತ್ತಿದೆಯಂತೆ. ಈ ಅಂತೆಕಂತೆಗಳ ಕಡೆ ಜಗದ ಭೂಪರಿಗೆ ಒಲವಿಲ್ಲ. ಬಾಚಿ ಬಳಿದು ಆಮ್ಲಜನಕ ಬರಿದಾಗುತ್ತಿರುವುದಕ್ಕೆ ಬೆನ್ನುಹಾಕಿ ನಿಂತಿದೆ ಜಗತ್ತು.

ಗಣಿಗಾರಿಕೆ, ಸುರಂಗ ಮಾರ್ಗ, ಜಲವಿದ್ಯುತ್, ಅಣುಸ್ಥಾವರ ಎಂಥೆಂಥಾ ಯೋಜನೆಗಳು! ಗಾಂಧಿ ಹೆಜ್ಜೆಗಳು, ಬುದ್ಧನ ದಾರಿಗಳು ಕಾಡುದಾರಿಗಳಂತೆ. ಕಾಡು ಯಃಕಶ್ಚಿತ್ ಅಂತೆ. ನಾಡು ಬೆಳೆಯಬೇಕಂತೆ. ಆಕಾಶದಲ್ಲಿ ಪುಷ್ಪಕವಿಮಾನಗಳ ಸಂತೆ. ರಾವಣಾಸುರ ಅಂದು ಲಂಕೆಗೆ ಆಪತ್ತು ತಂದ. ಭೂಮಾತೆಯನ್ನು ಕೆಣಕಿ ನಾವೀಗ ಇನ್ನೂ ದೊಡ್ಡ ಆಪತ್ತಿಗೆ ಸಿಲುಕಿದ್ದೇವೆ. ಭವಿಷ್ಯವು ಕೇವಲ ರಾಮಾಯಣವನ್ನು ಸೃಷ್ಟಿಸುವು ದಿಲ್ಲ. ಅದರೊಳಗೆ ನಿರ್ಜನ, ನಿರ್ಜಲ, ನಿರ್ವನ, ಕಡೆಗೆ ಲಾವಾರಸದ ಆಗಮನ ತರುತ್ತಿದೆ.

ಅಡವಿ ಜನಕ್ಕೆ ನನ್ನದು ಎಂಬುದಿಲ್ಲ. ಎಲ್ಲವೂ ನಮ್ಮದು ಎಂಬ ಮಾರ್ಕ್ಸ್‌ ಮೂಲದ ತತ್ವ. ಈ ತತ್ವಕ್ಕೆ ಮಿಗಿಲಾದ ಸಾಮರಸ್ಯದ ಸಹಮತ. ಆದರೆ, ಆಡಳಿತವು ಅವರನ್ನು ಅಡವಿಯೊಳಕ್ಕೆ ಬಿಡುತ್ತಿಲ್ಲ. ಬೆದರಿಸಿ ಆಚೆ ನೂಕುವ ಕಾಲ ದಾಟಿ ಈಗಂತೂ ಅವರನ್ನು ಅತಂತ್ರರನ್ನಾಗಿಸುತ್ತಿದೆ. ‘ಗಿರಣಿಗಳ ಹೊಗೆ ಹಾಗೂ ಕಾರ್ಖಾನೆಗಳ ಹೊಗೆ ಮತ್ತು ಕಿವುಡುಗೊಳಿಸುವಂತಹ ಸದ್ದುಗಳಿಂದ ಅಸಹ್ಯಕರವೆನಿಸಿದ ಮತ್ತು ಅವಸರವಾಗಿ ಮುನ್ನುಗ್ಗುತ್ತಿರುವ ಯಂತ್ರ ಸಾಧನಗಳು, ವೇಗದಿಂದ ಧಾವಿಸುವ ಮೋಟಾರುಗಳು ಹಾಗೂ ಕಿಕ್ಕಿರಿದ ಜನಸಂಚಾರದಿಂದ, ಕೂಡಿ ನಡೆಯಲು ಕಷ್ಟವೆನಿಸುವ ರಸ್ತೆಗಳಿಂದ ತುಂಬಿದ ನಗರಗಳಲ್ಲಿ ದೇವರು ಇರುವನೆಂದು ಊಹಿಸುವುದು ಕಷ್ಟಕರವೇ ಹೌದು’– ಗಾಂಧಿ ತಾತನ ಈ ಪ್ರವಾದಿ ಮಾತು ಅದೆಷ್ಟು ವಾಸ್ತವ!

ಇಂದಿನ ಯುವಜನರಿಗೆ ಚಾರಣಗಳ ಬಗ್ಗೆ ಇರುವ ಪ್ರೀತಿಯು ಗಾಂಧಿ ತಾತನ ಮಾತಿಗೆ, ಗ್ರೇತಾ ಥನ್‌ಬರ್ಗ್ ರೀತಿಗೆ ಪರಿವರ್ತಿತವಾದರೆ ಗಿರಿಶಿಖರ, ಜಲತಿಜೋರಿ ಉಳಿದೀತು! ಪಶ್ಚಿಮಘಟ್ಟ ಸಾಲಿನ ಬೆಳೆ ಅವನತಿ, ಅಲ್ಲಿಯ ಜನರು ಕಾಡುಪ್ರಾಣಿಗಳೊಡನೆ ಗುದ್ದಾಡುವುದು, ಪ್ರಕೃತಿ ಮುನಿದಿರುವುದು ಇವನ್ನು ಗಮನಿಸಿದರೆ ಜಲತಿಜೋರಿ, ಅಡವಿ ಸಾಂದ್ರತೆ ತನ್ನನ್ನು ಕಾಪಾಡಿಕೊಳ್ಳುವ ಕಾಲ ದೂರವಿಲ್ಲ ಎಂದೆನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.