‘ಪವಿತ್ರ ಬಂಧನಕ್ಕೆ ಅತ್ಯಾಚಾರ ಆರೋಪದ ನಳಿಕೆ ಏಕೆ?’ ಎಂಬ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರ ಲೇಖನ (ಚರ್ಚೆ, ಏ. 9) ಚರ್ಚೆಗೆ ಇಂಬು ನೀಡುವಂತಿದೆ. ವೈವಾಹಿಕ ಸಂಬಂಧದ ಒಳಗಿನ ಅತ್ಯಾಚಾರಕ್ಕೆ ವಿನಾಯಿತಿಯನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಜಾರಿಗೆ ಬಂದಾಗಿನಿಂದಲೂ ನೀಡಲಾಗಿದೆ. ಈ ಕಾಯ್ದೆ ಬ್ರಿಟಿಷರ ಕಾಲದ್ದು.
ಹೆಣ್ಣೊಬ್ಬಳು ಮದುವೆಗೆ ಒಪ್ಪಿದರೆ ಗಂಡನಿಗೆ ಅನಿರ್ಬಂಧಿತ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆ ಕೊಟ್ಟಂತೆ ಎಂಬುದನ್ನು ಮೊದಲಿಗೆ ಪ್ರತಿಪಾದಿಸಿದವರು 1671ರಲ್ಲಿ ಇಂಗ್ಲೆಂಡಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮ್ಯಾಥ್ಯೂ ಹೇಲ್. ಬ್ರಿಟನ್ ಮತ್ತು ಅದರ ಅಂಕೆಯಲ್ಲಿದ್ದ ಬಹುತೇಕ ಕಾಮನ್‌ವೆಲ್ತ್ ದೇಶಗಳು ಮ್ಯಾಥ್ಯೂ ಅವರು ಪ್ರತಿಪಾದಿಸಿದ ಅಂಶವನ್ನು ಪಕ್ಕಕ್ಕೆ ಸರಿಸಿ ಹೊಸ ಹಾದಿಯನ್ನು ತುಳಿದು ಹಲವಾರು ದಶಕಗಳೇ ಕಳೆದಿವೆ. ನಮ್ಮಲ್ಲಿ ಈ ಸಂಗತಿ ಈಗ ಚರ್ಚೆಯ ಮುನ್ನೆಲೆಗೆ ಬಂದಿದೆ.
‘ಒಬ್ಬ ಕೊಲೆಗಾರ ತನ್ನ ಎದುರಾಳಿಯ ದೇಹವನ್ನಷ್ಟೇ ನಾಶ ಮಾಡುತ್ತಾನೆ, ಅತ್ಯಾಚಾರಿಯು ಅಸಹಾಯಕ ಹೆಣ್ಣಿನ ಆತ್ಮವನ್ನೇ ಹೊಸಕಿ ಹಾಕುತ್ತಾನೆ’ ಎಂದು ಸ್ಟೇಟ್ ಆಫ್ ಪಂಜಾಬ್ ಮತ್ತು ಗುರ್ಮಿತ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹೆಣ್ಣಿನ ಕೋಮಲ ಭಾವನೆಗಳ ಮೇಲೆ ಪೆಟ್ಟು ಬೀಳುವುದರಿಂದ ತನ್ನನ್ನು ಕಾಡಿದ ವ್ಯಕ್ತಿಯ ವಿರುದ್ಧ ಆಕೆ ಸಾಮಾನ್ಯವಾಗಿ ಸುಳ್ಳಾಡುವುದಿಲ್ಲ ಎಂಬ ನಿಲುವನ್ನು ನ್ಯಾಯಾಲಯಗಳು ಹೊಂದಿವೆ.
ಕೊಲೆ, ಸುಲಿಗೆಯಂಥ ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಾಕ್ಷ್ಯವನ್ನು ಒರೆಗೆ ಹಚ್ಚಲು ನ್ಯಾಯಾಲಯಗಳು ಬಳಸುವ ಮಾನದಂಡಗಳಿಗೂ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಸಾಕ್ಷ್ಯ, ಪುರಾವೆಯನ್ನು ಪರಿಗಣಿಸುವ ಮಾನದಂಡಕ್ಕೂ ದೊಡ್ಡ ಅಂತರವಿದೆ. ಕೊಲೆ, ಹಲ್ಲೆ, ದರೋಡೆಯನ್ನು ಸಾಬೀತುಪಡಿಸಲು ಪ್ರಬಲವಾದ ಸ್ವತಂತ್ರ ಮತ್ತು ಸಾಂದರ್ಭಿಕ ಸಾಕ್ಷ್ಯದ ಅನಿವಾರ್ಯ ಇದೆ. ಆದರೆ ನಾಲ್ಕು ಗೋಡೆಗಳೊಳಗೆ ಜರುಗುವ ಗಂಡ-ಹೆಂಡತಿ ನಡುವಿನ ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಸ್ವತಂತ್ರ ಸಾಕ್ಷ್ಯ ಸಿಗಲಾರದು! ಹಾಗಾಗಿ, ಒಲ್ಲದ ಗಂಡನ ವಿರುದ್ಧ ಹೆಂಡತಿಯು ವೈವಾಹಿಕ ಅತ್ಯಾಚಾರವನ್ನು ಬಲವಾದ ಆಯುಧವಾಗಿ ಬಳಸುವ ಸನ್ನಿವೇಶವೇ ಹೆಚ್ಚು ಎಂಬ ಲೇಖಕರ ಅಭಿಪ್ರಾಯ ಸರಿಯಿದೆ.
ದೇಶದ ಎಲ್ಲ ಸಮುದಾಯ, ಜನಾಂಗಗಳಲ್ಲೂ ಕುಟುಂಬ ಮತ್ತು ಮದುವೆಗೆ ಪಾವಿತ್ರ್ಯದ ಪರಿಕಲ್ಪನೆಇದೆ. ಆದರೆ ಲೇಖಕರು ಈ ಪರಿಕಲ್ಪನೆಯನ್ನು ಒಂದು ನಿರ್ದಿಷ್ಟ ಧರ್ಮಕ್ಕೆ ಸೀಮಿತಗೊಳಿಸಿ ನೆಲೆಗೊಳಿಸಿರುವುದು ಆಶ್ಚರ್ಯಕರ!
ಸದ್ಯ ಜಾರಿಯಲ್ಲಿರುವ ಐಪಿಸಿ ಕಲಂ 375ರ ಅಡಿಯಲ್ಲಿ ಗಂಡನನ್ನು ಅತ್ಯಾಚಾರ ಆರೋಪದ ಅಡಿಯಲ್ಲಿ ಶಿಕ್ಷಿಸಲಾಗದು. ಆದರೆ ಲೇಖಕರು ಪ್ರತಿಪಾದಿಸಿದಂತೆ ವೈವಾಹಿಕ ಅತ್ಯಾಚಾರದ ಆರೋಪದ ಮೇಲೆ ಡೊಮೆಸ್ಟಿಕ್ ವಯೊಲೆನ್ಸ್ ಆ್ಯಕ್ಟ್ (ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ) ಅಡಿಯಲ್ಲಿ ಕೂಡ ಶಿಕ್ಷಿಸಲಾಗದು! ಜೈಲುವಾಸವನ್ನು ಈ ಕಾಯ್ದೆಯಲ್ಲಿ ನೀಡಲಾಗದು. ಕೇವಲ ಹಣದ ರೂಪದಲ್ಲಿ ದಂಡ ವಿಧಿಸಿ ಅದನ್ನು ಬಾಧಿತ ಹೆಂಡತಿಗೆ ನೀಡಬಹುದು.
ದೆಹಲಿಯ ನಿರ್ಭಯಾ ಪ್ರಕರಣದ ನಂತರ ಅತ್ಯಾಚಾರದ ವ್ಯಾಖ್ಯಾನವನ್ನು ಮತ್ತಷ್ಟು ಹಿಗ್ಗಿಸಲಾಗಿದೆ. ಅಲ್ಲದೆ ಅತ್ಯಾಚಾರ ಎಸಗಲಾಗಿದೆ ಎಂಬುದನ್ನು ಪುಷ್ಟೀಕರಿಸಲು ವೈದ್ಯಕೀಯ ಪುರಾವೆಗಳು ಕೂಡ ಬೇಕಾಗಿಲ್ಲ ಎಂದು ಉನ್ನತ ನ್ಯಾಯಾಲಯಗಳು ತೀರ್ಪುಗಳನ್ನು ನೀಡಿವೆ. ಇಂತಹ ಸನ್ನಿವೇಶದಲ್ಲಿ ಆರೋಪಿಯಾಗುವ ಗಂಡನ ಮುಂದೆ ಬೆಟ್ಟದಷ್ಟು ಸವಾಲುಗಳಿರುತ್ತವೆ ಎಂಬುದು ಕೂಡ ವಾಸ್ತವ. ಹಾಗೆಂದ ಮಾತ್ರಕ್ಕೆ ಕತ್ತಲೆಯ ಕೋಣೆಯೊಳಗೆ ಜರುಗುವ ಕಾರ್ಯಕ್ಕೆ ಪವಿತ್ರ ಸಂಬಂಧದ ರಿಯಾಯಿತಿ ನೀಡಬಹುದೇ?!
ಯಾವುದೇ ಕಾಯ್ದೆ, ಕಾನೂನು ದುರ್ಬಳಕೆಯಾಗಬಲ್ಲದು ಎಂಬ ಕಾರಣಕ್ಕೆ ಅದನ್ನು ಜಾರಿಗೊಳಿಸ
ಬಾರದು ಎಂಬುದು ಸರಿಯಲ್ಲ. ಕಾಲಘಟ್ಟದಲ್ಲಿ ಎಲ್ಲಾ ಕಾಯ್ದೆ, ಕಾನೂನುಗಳೂ ಒಂದಲ್ಲಾ ಒಂದು ಬಗೆಯಲ್ಲಿ ದುರ್ಬಳಕೆಗೆ ಒಳಗಾಗಿವೆ! ಅಂತೆಯೇ ಸುಳ್ಳು ಆರೋಪಗಳನ್ನು ಮಾಡುವವರನ್ನು ಶಿಕ್ಷೆಗೆ ಒಳಪಡಿಸಲು ಕೂಡ ಐಪಿಸಿಯಲ್ಲಿ ಅವಕಾಶವಿದೆ.
ಕಾನೂನು ಎಂದಿಗೂ ನಿಂತ ನೀರಲ್ಲ. ಅದು ಎಲ್ಲ ಕಾಲಕ್ಕೂ, ಎಲ್ಲ ಸೀಮೆಯಲ್ಲೂ ವಿಕಾಸವಾಗುತ್ತಿದೆ ಎಂಬುದು ಚಾರಿತ್ರಿಕ ಸತ್ಯ. ನ್ಯಾಯಶಾಸ್ತ್ರದ ವಿಕಾಸದ ದೃಷ್ಟಿಯಿಂದ ಅಮೆರಿಕ ಮತ್ತು ಯುರೋಪ್ ದೇಶಗಳು ಸದಾ ಒಂದು ಹೆಜ್ಜೆ ಮುಂದೆ ಎಂಬುದು ದಿಟ. ವೈವಾಹಿಕ ಅತ್ಯಾಚಾರಕ್ಕೆ ನೀಡಿದ್ದ ವಿನಾಯಿತಿಯನ್ನು ರದ್ದುಗೊಳಿಸಿದ ನಂತರ ಬ್ರಿಟನ್ ಮತ್ತಿತರ ದೇಶಗಳಲ್ಲಿ ದಾಖಲಾದ ಪ್ರಕರಣಗಳು, ಅವುಗಳ ತನಿಖೆ, ತೀರ್ಪುಗಳು, ಸುಳ್ಳು ಆರೋಪ ಮಾಡಿದ ಹೆಂಡತಿಗೆ ನ್ಯಾಯಾಲಯಗಳು ನೀಡಿದ ಶಿಕ್ಷೆ ಕುರಿತಾದ ಆಳವಾದ ಅಧ್ಯಯನವು ಸುಧಾರಣೆಯ ಹೊಳಹುಗಳನ್ನು ತೋರಬಲ್ಲದು.
ಕಾನೂನು ಸುಧಾರಣೆ ಶಾಸಕಾಂಗಕ್ಕೆ ಮಾತ್ರ ಮೀಸಲಾಗಿ ಉಳಿದಿಲ್ಲ. ಕಾಲಕಾಲಕ್ಕೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಮಹತ್ವದ ತೀರ್ಪುಗಳ ಮೂಲಕ ಕಾನೂನು ಆಯೋಗದಂತೆ ಹಲವಾರು ಶಿಫಾರಸುಗಳನ್ನು ಶಾಸನಸಭೆಗಳಿಗೆ ನೀಡಿವೆ. ಹಾಗಾಗಿ ಲೇಖಕರು ಪ್ರತಿಪಾದಿಸಿದಂತೆ ಈ ತೀರ್ಪು ಶಾಸಕಾಂಗದ ವ್ಯಾಪ್ತಿಯಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಎನ್ನಲಾಗದು. ನ್ಯಾಯಮೂರ್ತಿ ನಾಗ ಪ್ರಸನ್ನ ಅವರು ಅತ್ಯಾಚಾರದ ವ್ಯಾಖ್ಯಾನವನ್ನು ಕಾನೂನಿನ ನೆಲೆಗಟ್ಟಿನಿಂದ ನ್ಯಾಯದ ನೆಲೆಗಟ್ಟಿಗೆ ಕೊಂಡೊಯ್ದಿದ್ದಾರೆ. ಈ ಮೂಲಕ ಸಂಸತ್ ಮತ್ತು ಕಾನೂನು ಆಯೋಗವು ಮುಂದೆ ತುಳಿಯಬೇಕಾದ ಹಾದಿ ಯಾವುದೆಂದು ಈ ತೀರ್ಪು ಹೇಳಿದಂತಿದೆ.
ಲೇಖಕ: ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.