ADVERTISEMENT

ಸಂಗತ | ಕತ್ತೆತ್ತಿ ಕಂಡಿರಾ ಉದ್ದನೆಯ ಬಾಲ?!

ಬಹಳ ವರ್ಷಗಳ ನಂತರ ಬರಿಗಣ್ಣಲ್ಲಿ ನೋಡಲು ಸಿಕ್ಕಿದೆ ಧೂಮಕೇತು

ಬಿ.ಎಸ್.ಶೈಲಜಾ
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
   

ವರ್ಷಕ್ಕೆ 20– 25 ಧೂಮಕೇತುಗಳು ಬಂದು ಹೋಗುತ್ತವೆ. ಆದರೆ ಅವುಗಳಲ್ಲಿ ಯಾವುದೊಂದೂ ಬರಿಗಣ್ಣಿಗೆ ಕಾಣುವಷ್ಟು ಪ್ರಕಾಶಮಾನವಾಗಿ ಇಲ್ಲದೇ ಇರುವುದರಿಂದ ಜನಸಾಮಾನ್ಯರಿಗೆ ಅವುಗಳ ಬಗ್ಗೆ ತಿಳಿಯುವುದೇ ಇಲ್ಲ. ಈಗ್ಗೆ ಹಲವು ವರ್ಷಗಳಲ್ಲಿ ಬಂದು ಹೋದ ಕೆಲವು, ಹೆಚ್ಚು ಪ್ರಕಾಶಮಾನವಾಗಿ ಇರಬಹುದು ಎಂಬ ಆಸೆ ಹುಟ್ಟಿಸಿ ‘ಠುಸ್‌’ ಪಟಾಕಿಗಳಂತೆ ನಿರಾಸೆ ಮೂಡಿಸಿದವು.

ಇದೀಗ ಬಂದಿರುವ ಧೂಮಕೇತು ಸಿ 2023/3 ಎಂಬ ಸಂಖ್ಯೆಯದು. ಚೀನಾದ ಪರ್ಪಲ್‌ ಮೌಂಟನ್‌ ಅಬ್ಸರ್ವೇಟರಿಯಲ್ಲಿ 2023ರ ಜನವರಿಯಲ್ಲಿ ಕ್ಷೀಣವಾದ ಚುಕ್ಕೆಯನ್ನು ಗುರುತಿಸಲಾಯಿತು. ಆದರೆ ಮುಂದಿನ ದಿನಗಳಲ್ಲಿ ಅದು ಕಾಣದಂತಾಗಿ ಕಳೆದುಹೋಯಿತು. ಕೆಲವೇ ದಿನಗಳಲ್ಲಿ ಅಟ್ಲಾಸ್‌ ಎಂಬ ದೂರದರ್ಶಕಗಳ ಸಮೂಹ ಅದನ್ನು ಪುನಃ ದಾಖಲು ಮಾಡಿತು. ಹೀಗಾಗಿ, ಆ ಧೂಮಕೇತುವಿಗೆ ತ್ಸುಚಿನ್ಶಾನ್‌- ಅಟ್ಲಾಸ್‌ ಎಂಬ ಹೆಸರು ಸಿಕ್ಕಿತು. ತ್ಸುಚಿನ್ಶಾನ್‌ ಎಂಬುದು ಪರ್ಪಲ್‌ ಮೌಂಟನ್‌ನ ಚೀನೀ ಹೆಸರು. ಅಟ್ಲಾಸ್‌ ಎಂಬುದು ಆರು ದೂರದರ್ಶಕಗಳ ಸಮೂಹ– ಆಕಾಶದಲ್ಲಿ ಕಂಡುಬರುವ ಕ್ಷೀಣ ಕಾಯಗಳ ಚಲನೆಯನ್ನು ದಾಖಲು ಮಾಡುವ ಸಲುವಾಗಿಯೇ ಸ್ಥಾಪಿತಗೊಂಡಿವೆ.

ಈ ಕ್ಷೀಣ ಚುಕ್ಕೆಯ ಚಲನೆಯನ್ನು ಹಿಂಬಾಲಿಸಿದ ವಿಜ್ಞಾನಿಗಳಿಗೆ ಅದರ ಕಕ್ಷೆಯ ವಿವರಗಳು ತಿಳಿದವು. ಇದು ದೀರ್ಘ ವೃತ್ತವಲ್ಲ, ಅಪರವಲಯ ಎಂಬ ವರ್ಗಕ್ಕೆ ಸೇರುವ ಕಕ್ಷೆ. ಅಂದರೆ ದೀರ್ಘವೃತ್ತವನ್ನು ತೀರಾ ಚಪ್ಪಟೆಯಾಗುವಂತೆ ಎಳೆದು ಕತ್ತರಿಸಿದ ಹಾಗೆ ಎನ್ನಬಹುದು. ತಾತ್ಪರ್ಯವೆಂದರೆ, ಈ ಧೂಮಕೇತು ಪುನಃ ಬರಲಾರದು; ಬಂದರೂ 80,000ಕ್ಕಿಂತ ಹೆಚ್ಚು ವರ್ಷಗಳ ನಂತರ ಬರಬಹುದು.

ADVERTISEMENT

ಸೌರಮಂಡಲದ ಹೊರವಲಯದಲ್ಲಿ ಧೂಮಕೇತುಗಳ ದೊಡ್ಡ ಉಗ್ರಾಣವೇ ಇದೆ. ಅದರ ಬಗ್ಗೆ ಸೂಚಿಸಿದ ಯಾನ್‌ ಊರ್ಟ್‌ ಎಂಬ ವಿಜ್ಞಾನಿಯ ಹೆಸರೇ ಅದಕ್ಕಿದೆ. ನಿಧಾನವಾಗಿ ಅಲ್ಲಿಂದ ಹೊರಬೀಳುವ, ಧೂಮಕೇತು ಎಂಬ ಪುಟ್ಟ (8–10 ಕಿ.ಮೀ. ಗಾತ್ರ ಅಷ್ಟೇ) ಬಂಡೆ ವಾಸ್ತವದಲ್ಲಿ ಒಂದು ಹಿಮದ ಉಂಡೆ. ಚಿಕ್ಕ ಚಿಕ್ಕ ಕಲ್ಲು, ದೂಳು, ಚಿಕ್ಕ ಚಿಕ್ಕ ಬಂಡೆಗಳನ್ನು ಉಂಡೆ ಕಟ್ಟಿದಂತೆ ಹಿಮ ಹಿಡಿದಿಡುತ್ತದೆ. ಅವು ಸೂರ್ಯನನ್ನು ಸಮೀಪಿಸಿದ ಹಾಗೆ ಹಿಮ ಆವಿಯಾಗಿ ದೂಳು ಅನಿಲ ಹೊರಗೆ ಚಿಮ್ಮುತ್ತದೆ. ಮೂಲ ಬಂಡೆಯ ಸುತ್ತ ಹರಡಿಕೊಳ್ಳುತ್ತದೆ. ಇದಕ್ಕೆ ಕೋಮಾ ಎಂದು ಹೆಸರು. ಒಳಗಿನ ಪುಟ್ಟ ಕಾಯಕ್ಕೆ ನ್ಯೂಕ್ಲಿಯಸ್‌ ಎಂದು ಹೆಸರು.

ಈಗ್ಗೆ ಎರಡು– ಮೂರು ತಿಂಗಳ ಹಿಂದೆ ತ್ಸುಚಿನ್ಶಾನ್‌- ಅಟ್ಲಾಸ್‌ ಧೂಮಕೇತುವಿನ ಕೋಮಾ ಬೆಳೆಯತೊಡಗಿತು. ಸೌರ ಮಾರುತಕ್ಕೆ ಸಿಕ್ಕಿ ಇದು ಬಾಲದಂತೆ ಬೆಳೆಯುತ್ತದೆ, ಈ ಧೂಮಕೇತುವಿಗೆ ಬಹುಶಃ ದೊಡ್ಡ ಬಾಲ ಮೂಡಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರವಾಗಿತ್ತು. ಅದು ಹುಸಿಯಾಗಲಿಲ್ಲ.

ಹದಿನೈದು ದಿನಗಳ ಹಿಂದೆಯೇ (ಸೆಪ್ಟೆಂಬರ್‌ ಮಧ್ಯಭಾಗದಲ್ಲಿ) ಅದು ಪುಟ್ಟ ದೂರದರ್ಶಕಗಳ ವ್ಯಾಪ್ತಿಗೆ ಸಿಕ್ಕಿತು. ಆಗ ಅದು 7 ಕೋಟಿ ಕಿ.ಮೀ. ದೂರದಲ್ಲಿತ್ತು. ಹವ್ಯಾಸಿಗಳು ಮತ್ತು ವೃತ್ತಿಪರರು ಉತ್ಸಾಹದಿಂದ ವೀಕ್ಷಣೆ ನಡೆಸಿದರು. ಬಾಲದ ಬೆಳವಣಿಗೆ ಸ್ಪಷ್ಟವಾಗಿ ಕಂಡಿತು. ಅದನ್ನು ಹುಡುಕಲು ಪ್ರಕಾಶಮಾಲಿನ್ಯವಿಲ್ಲದ ಪ್ರದೇಶಗಳಿಗೆ ಹೋಗುವ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಯಿತು. ತಿಂಗಳ ಕೊನೆಗೆ ಮುಂಜಾವಿನಲ್ಲಿ ಬೆಂಗಳೂರಿನ ನಿವಾಸಿಗಳಿಗೆ ಅದನ್ನು (ಯಾರ ಮಾರ್ಗದರ್ಶನವೂ ಇಲ್ಲದೆಯೇ) ನೋಡುವುದು ಸಾಧ್ಯವಾಯಿತು.

ಈ ಧೂಮಕೇತುವಿನ ಕಕ್ಷೆಯು ಸೂರ್ಯನಿಗೆ ಅತಿ ಸಮೀಪಕ್ಕೆ ಹೋದ ದಿನ ಸೆಪ್ಟೆಂಬರ್‌ 27. ಆಗ ಅದರ ಪ್ರಕಾಶ ಮತ್ತು ದೂಳು ಆವಿಯಾಗಿ ಬಾಲ ಬೆಳೆಯುವ ಪ್ರಕ್ರಿಯೆ ಗರಿಷ್ಠ ಮಟ್ಟ ಮುಟ್ಟಿತು. ಸೂರ್ಯನನ್ನು ಬಳಸಿ ಅದು ತನ್ನ ಹಿಂದಿರುಗುವ ಪ್ರಯಾಣ ಆರಂಭಿಸಿದಾಗ ಉದ್ದನೆಯ ಬಾಲದ ನೋಟ ಕಾಣಸಿಕ್ಕಿತು. ಅಕ್ಟೋಬರ್‌ ಮೊದಲ ವಾರ ಮುಂಜಾವಿನಲ್ಲಿ ಕಂಡ ಅದು ಎರಡನೆಯ ವಾರದಲ್ಲಿ ಸಂಜೆಯ ಆಕಾಶದಲ್ಲಿ ಕಾಣಸಿಗುತ್ತದೆ. ಸೂರ್ಯಾಸ್ತವಾದ ನಂತರ ಪಶ್ಚಿಮ ದಿಗಂತದ ಅಂಚಿನಲ್ಲಿ ಕಾಣುತ್ತದೆ. ಅದನ್ನು ಗುರುತಿಸಲು ಯಾರ ಸಹಾಯವೂ ಬೇಕಾಗುವುದಿಲ್ಲ.

ಅಕ್ಟೋಬರ್‌ 12ರಂದು ಅದು ಭೂಮಿಗೆ ಸಮೀಪವಾಗಿ ಹಾದುಹೋಗುತ್ತದೆ. ಸಮೀಪ ಎಂದರೆ 8 ಕೋಟಿ ಕಿ.ಮೀ.ಗಳು. ಮೂರನೆಯ ವಾರದವರೆಗೂ ಬರಿಗಣ್ಣಿಗೆ ಕಾಣಬಹುದು. ಆಮೇಲೆ ಅದು ಕ್ಷೀಣಿಸಿ ದೂರದರ್ಶಕಗಳಿಗೆ ಮಾತ್ರ ನಿಲುಕುವಂತಿರುತ್ತದೆ. ಇದುವರೆಗೆ ಆಕಾಶವನ್ನೇ ನೋಡಿರದಿದ್ದವರು ಇದೀಗ ಆಕಾಶದ ಅದ್ಭುತಗಳೆಲ್ಲವಕ್ಕೂ ಧೂಮಕೇತುವನ್ನೇ ಕಾರಣವಾಗಿಸುತ್ತಿದ್ದಾರೆ. ಸೆಪ್ಟೆಂಬರ್‌ 30ರ ಸಂಜೆ ಬೆಂಗಳೂರಿನಲ್ಲಿ ಬಣ್ಣಬಣ್ಣದ ಮೋಡಗಳು ಕಂಡವು. ಅವಕ್ಕೂ ಧೂಮಕೇತುವೇ ಕಾರಣ ಎಂಬ ಹೊಸ ಸಿದ್ಧಾಂತ ಬಹಳ ಬೇಗ ಪ್ರಚಾರ ಪಡೆಯಿತು. ಅಂತಹ ಬಣ್ಣದ ಮೋಡಗಳಿಗೆ ಧೂಮಕೇತು ಬೇಕಿಲ್ಲ, ತಾಳ್ಮೆಯಿಂದ ಆಕಾಶವನ್ನು ಗಮನಿಸುವ ವ್ಯವಧಾನ ಬೇಕಷ್ಟೇ.

ಅನೇಕ ಧೂಮಕೇತುಗಳಂತೆ ಇದು ಕೂಡ ಛಿದ್ರವಾಗಬಹುದು ಎಂಬ ಅನುಮಾನ ಇತ್ತು. ಅಂದರೆ, ಮೂಲ ಬಂಡೆ– ನ್ಯೂಕಿಯಸ್‌- ತುಂಡಾಗಿರಬೇಕು ಎಂದೂ ಮೇ- ಜೂನ್‌ನಲ್ಲಿ ಹೊರಬಿದ್ದ ವೀಕ್ಷಣಾ ಫಲಿತಾಂಶಗಳು ತೋರಿಸಿಕೊಟ್ಟಿದ್ದವು. ಸೂರ್ಯನನ್ನು ಹಾದು ಬರುವಾಗ (ಹಿಂದೆ ಬಂದಿದ್ದ ನಿಯೋವೈಸ್‌ನಂತೆ) ಧೂಳೀಪಟವಾಗಬಹುದು ಎಂಬ ಅನುಮಾನವಿತ್ತು. ಇದೀಗ ಯಶಸ್ವಿಯಾಗಿ ಹೊರಬಂದಿದೆ.

ಬಹಳ ವರ್ಷಗಳ ನಂತರ ಹೀಗೊಂದು ಧೂಮಕೇತು ನೋಡಲು ಸಿಕ್ಕಿದೆ. ನೋಡಿ ಆನಂದಪಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.