ಮೊದಲೊಂದು ಪ್ರಸಂಗ ನೆನಪಿಸುವೆ. ‘ವಿದೇಶಿ ವಸ್ತ್ರ ಸುಡಿ’ ಎಂಬ ಗಾಂಧಿ ಕರೆಯಿಂದಾಗಿ ಇಂಗ್ಲೆಂಡಿನ ಲ್ಯಾಂಕ್‌ಶೈರ್‌ನ ಬಟ್ಟೆ ಗಿರಣಿಗಳು ಮುಚ್ಚುವಂತಾಗಿ, ಅಲ್ಲಿನ ಕಾರ್ಮಿಕರು ಗಾಂಧೀಜಿಯನ್ನು 1931ರ ಸೆ. 26ರಂದು ಸುತ್ತುವರಿದು ಕಷ್ಟ ಹೇಳಿಕೊಂಡಾಗ ಗಾಂಧಿ ಆಡಿದ ನುಡಿಗಳು ಹೀಗಿವೆ:
‘ಇಲ್ಲಿನ ನಿರುದ್ಯೋಗ ಕಂಡು ನೋವಾಗಿದೆ. ಆದರೆ, ಇಲ್ಲಿ ಹಸಿವು ಮತ್ತು ಅರೆಹೊಟ್ಟೆ ಬದುಕು ಇಲ್ಲ. ಇಂಡಿಯಾದಲ್ಲಿ ನಮಗೆ ಎರಡೂ ಇವೆ. ನೀವು ಇಂಡಿಯಾದ ಹಳ್ಳಿಗಳಿಗೆ ಹೋಗಿ ನೋಡಿದರೆ, ಆ ಹಳ್ಳಿಗಳ ಕಣ್ಣಲ್ಲಿ ತೀವ್ರ ಹತಾಶೆ ಕಾಣುತ್ತೆ. ಅಲ್ಲಿ ಕಾಣುವುದು ಅರೆಹೊಟ್ಟೆಯ ಎಲುಬುಗೂಡುಗಳು, ಜೀವಂತ ಶವಗಳು. ಇವುಗಳಿಗೆ ಕೆಲಸದ ರೂಪದಲ್ಲಿ ಅನ್ನ ಕೊಟ್ಟು ಜೀವ ತುಂಬಿದರೆ ಜಗತ್ತಿಗೆ ಆ ಭಾರತ ನೆರವಾಗುತ್ತದೆ. ನನ್ನ ದೇಶದಲ್ಲಿ, ‘ಈ ಅರೆಹೊಟ್ಟೆಯ ಲಕ್ಷಾಂತರ ಜನರ ಜೀವವನ್ನು ಕೊನೆಗಾಣಿಸಿದರೆ ಉಳಿದವರು ಬದುಕುತ್ತಾರೆ’ ಅನ್ನುವ ಗುಂಪೂ ಇದೆ. ಇದಕ್ಕೆ ನಾನೊಂದು ಮಾನವೀಯ ವಿಧಾನವನ್ನು ಕಂಡುಕೊಂಡೆ. ಅದೇನೆಂದರೆ, ಅವರಿಗೆ ಗೊತ್ತಿರುವ ಕೆಲಸವನ್ನು ಕೊಡೋದು. ಅವರು ಅದನ್ನು ತಮ್ಮ ಜೋಪಡಿಯಲ್ಲಿ ಮಾಡಬಹುದು. ಅದಕ್ಕೆ ದೊಡ್ಡ ಬಂಡವಾಳ ಅಗತ್ಯ ಇಲ್ಲ. ಈ ಉತ್ಪನ್ನಗಳ ಮಾರಾಟ ಸುಲಭವಾಗಿರುವುದು– ಅಂಥದ್ದು’. ಈ ನುಡಿಗಳನ್ನು ನನ್ನ ಮನಸ್ಸಲ್ಲಿ ಮೂಡಿಸಿಕೊಂಡೆ. ಗೊಮ್ಮಟನನ್ನು ಕಂಡಂತಾಯ್ತು. ಇಲ್ಲಿ ಬರುವ ಒಂದು ವಾಕ್ಯ ಗಮನಿಸಬೇಕು- ‘ಅರೆಹೊಟ್ಟೆಯ ಲಕ್ಷಾಂತರ ಜನರ ಜೀವವನ್ನು ಕೊನೆಗಾಣಿಸಿದರೆ, ಉಳಿದವರು ಬದುಕುತ್ತಾರೆ ಅನ್ನುವ ಗುಂಪೂ ಇದೆ’. ನೋಡಿದರೆ, ಇಂದು ನಮ್ಮ ಕಣ್ಣೆದುರು ಆಗುತ್ತಿರುವುದು ಇದೇ ಏನೋ ಅನಿಸಿಬಿಡುತ್ತದೆ.
ಮನುಷ್ಯನ ದುರಾಸೆಯ ಪರಿಣಾಮದಿಂದ ಉಂಟಾದ ಜಾಗತಿಕ ತಾಪಮಾನದಿಂದಾಗಿ ಪ್ರಕೃತಿ ಕುಪಿತಗೊಂಡು, ಒಂದೆಡೆ ನೆರೆಯಿಂದ ಜನರ ಬದುಕು ಮುಳುಗಡೆ ಆಗುತ್ತಿದೆ. ಅದರ ಪಕ್ಕದಲ್ಲೇ, ಮಳೆ ಇಲ್ಲದೆ ಬೆಳೆ ಮತ್ತು ಜನ ಒಣಗಿ ಹೋಗುತ್ತಿದ್ದಾರೆ. ಜೊತೆಗೆ ಭಾರತದ ಆರ್ಥಿಕತೆ ಕುಸಿಯುತ್ತಿದೆ. ಉದ್ಯೋಗಗಳು ಕುಸಿಯುತ್ತಿವೆ. ಈ ಕುಸಿಯುತ್ತಿರುವ ಭಾರತದ ಮೇಲೆ ಮೋದಿ–ಶಾದ್ವಯರು, ಪೂತನಿ (ಕ್ರೋನಿ) ಬಂಡವಾಳಶಾಹಿ ಜೊತೆಗೂಡಿಕೊಂಡು ಕುಣಿದು ಕುಪ್ಪಳಿಸಿ ತುಳಿದು, ಹಾಲಿ ಇರುವ ಕುಸಿತವನ್ನು ಪಾತಾಳ ಕಾಣುವಂತೆ ಮಾಡುತ್ತಿದ್ದಾರೆ. ಸಾರ್ವಜನಿಕ ಸಂಪತ್ತನ್ನು ಖಾಸಗಿಗೆ ಮಾರಾಟ ಮಾಡಿಕೊಂಡು ಸರ್ಕಾರ ತನ್ನ ಜೀವನ ಸಾಗಿಸುವುದು ಹೆಚ್ಚುತ್ತಿದೆ. ಇದರಿಂದಲೂ ಉದ್ಯೋಗ ಉದುರಿ ಹೋಗುತ್ತಿದೆ, ಆತ್ಮಹತ್ಯೆ ಹೆಚ್ಚುತ್ತಿದೆ.
ನೋಡಿ, ಈಗ ಕೇಂದ್ರ ಸರ್ಕಾರವು 16 ದೇಶಗಳ ನಡುವೆ ಆರ್‌ಸಿಇಪಿ ಎಂಬ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರಕ್ಕೆ ಹೆಬ್ಬೆಟ್ಟು ಒತ್ತಲು ರೆಡಿಯಾಗಿದೆ. ಹೀಗೆ ಮಾಡಿದರೆ ಏನಾಗುತ್ತೆ? ಒಂದೇ ಉದಾಹರಣೆ ಸಾಕು- ಭಾರತದಲ್ಲಿ ಸಣ್ಣಸಣ್ಣ ರೈತರು ಹಾಗೂ ಮತ್ತೊಂದಿಷ್ಟು ಜನಸಾಮಾನ್ಯರು ಸೇರಿದಂತೆ ಕೋಟ್ಯಂತರ ಜನ ಹಾಲು ಉತ್ಪಾದನೆಯನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಹೆಚ್ಚಾಗಿ ಮಹಿಳೆಯರ ಬದುಕು ಇದನ್ನು ಅವಲಂಬಿಸಿಯೇ ಉಸಿರಾಡುತ್ತಿದೆ. ಮುಕ್ತ ವ್ಯಾಪಾರಕ್ಕೆ ಭಾರತ ಹೆಬ್ಬೆಟ್ಟು ಒತ್ತಿದರೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಹಾಲಿನ ಉತ್ಪನ್ನಗಳು ಭಾರತಕ್ಕೆ ಬಂದು ದಾಳಿ ಮಾಡುತ್ತವೆ. ಈ ಹಾಲಿನ ಯುದ್ಧವಾದರೆ, ಭಾರತದಲ್ಲಿ ಹಾಲನ್ನೇ ಜೀವನಾಧಾರ ಮಾಡಿಕೊಂಡವರ ಬದುಕು ಮಟಾಷ್ ಆಗುತ್ತದೆ. ಮಹಿಳೆಯರೂ ಆತ್ಮಹತ್ಯೆಗೆ ಶರಣಾಗತೊಡಗುತ್ತಾರೆ. ಯಾಕೆ ಪುರುಷರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಮಹಿಳೆಯರು ಇಲ್ಲ ಎಂದು ಸರ್ಕಾರ ಚಿಂತಿಸಿ ಈ ಒಪ್ಪಂದಕ್ಕೆ ರುಜು ಹಾಕುತ್ತಿರಬಹುದೇ? ಗಾಂಧಿ ಹೇಳುವ– ನನ್ನ ದೇಶದಲ್ಲಿ ಈ ಅರೆಹೊಟ್ಟೆಯ ಲಕ್ಷಾಂತರ ಜನರ ಜೀವವನ್ನು ಕೊನೆಗಾಣಿಸಿದರೆ ಉಳಿದವರು ಬದುಕುತ್ತಾರೆ ಅನ್ನುವ ಗುಂಪೂ ಇದೆ– ಎನ್ನುವ ಮಾತು ನಿಜವಿರಬಹುದೇ?
ಜಾಗತೀಕರಣ ನಂತರದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ನಾವು, ಇಥಿಯೋಪಿಯಾದ ಪ್ರಧಾನಿ ಅಬಿ ಅಹಮದ್ ಅವರ ಕಡೆಗೆ ನೋಡಬೇಕಾಗಿದೆ. ಹಸಿವಿನಿಂದ ಎಲುಬಿನ ಗೂಡಾಗಿದ್ದ ದೇಶಕ್ಕೆ ಆತ ಪ್ರಧಾನಿಯಾಗಿ ಬರುತ್ತಾನೆ. ಇನ್ನೂ ಎರಡು ವರ್ಷಗಳು
ತುಂಬಿಲ್ಲ, ಅವನ ಕಾರ್ಯವೈಖರಿ ಯುದ್ಧವಿಲ್ಲದೆ ಎಲ್ಲವನ್ನೂ ಎಲ್ಲರನ್ನೂ ಗೆದ್ದುಕೊಳ್ಳುತ್ತಿದೆ. ಆತ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆದು ಸಂವಾದ ನಡೆಸಿದ. ಉಗ್ರಗಾಮಿ ಸಂಘಟನೆಗಳ ಜೊತೆ ಮಾತುಕತೆ ಆಡಿದ. ದೌರ್ಜನ್ಯ ನಡೆಸುವ ಮಿಲಿಟರಿ ಅಧಿಕಾರಿಗಳಿಗೆ ಗೇಟ್‌ಪಾಸ್ ಕೊಟ್ಟ. ಜನಾಂಗೀಯ ಹಿಂಸಾಚಾರ ಮಟ್ಟ ಹಾಕಿದ. ಯುವಜನರಿಗೆ ಉದ್ಯೋಗ ನೀಡಲು ಮುಂದಾದ. ಅಧಿಕಾರಕ್ಕೆ ಬಂದ ದಿನದಿಂದ ತನ್ನ ಕಚೇರಿ ಬಾಗಿಲನ್ನು ಮುಚ್ಚಲಿಲ್ಲ. ದ್ವೇಷದ ನಾಡಲ್ಲಿ ಶಾಂತಿ, ಕ್ಷಮೆ, ಸಹಬಾಳ್ವೆ ಕಟ್ಟತೊಡಗಿದ. ತನ್ನ ಪಕ್ಕಾ ಎದುರಾಳಿಯನ್ನು ಚುನಾವಣೆ ಆಯೋಗದ ಅಧ್ಯಕ್ಷನನ್ನಾಗಿ ಮಾಡಿದ! ಅಲ್ಲೂ ಒಬ್ಬ ಗೋಡ್ಸೆ ಇರುತ್ತಾನೆ. ಪ್ರಧಾನಿ ಅಬಿ ಅಹಮದ್ ಹತ್ಯೆಗೆ ಪ್ರಯತ್ನಿಸುತ್ತಾನೆ. ಈ ಮರಿ ಗಾಂಧಿ ಹೇಳುತ್ತಾನೆ– ‘ಪ್ರೀತಿ ಯಾವಾಗಲೂ ಗೆಲ್ಲುತ್ತದೆ’.
ಇಷ್ಟಾದ ಮೇಲೆ, ಬಹಳ ಮುಖ್ಯವಾಗಿ, ಇಥಿಯೋಪಿಯಾದ ಜೊತೆಗೆ ಯಾವಾಗಲೂ ಗಡಿ ತಕರಾರು ಮಾಡುತ್ತ ಬಡಿದಾಡುತ್ತಿದ್ದ ಪಕ್ಕದ ದೇಶ ಎರಿಟ್ರಿಯಾ ಜೊತೆ ಮಾತುಕತೆ ನಡೆಸುತ್ತಾನೆ. ವೈರಿ ದೇಶವನ್ನು ತನ್ನ ಪ್ರೀತಿಯ ವರಸೆಯಲ್ಲಿ ಗೆಲ್ಲುತ್ತಾನೆ. ಅಂತರ್ಯುದ್ಧದಲ್ಲಿ ಸೋತು ಸುಣ್ಣವಾಗಿದ್ದ ಸುಡಾನ್‍ನಲ್ಲಿ ಶಾಂತಿ ಮಾತುಕತೆ ಮಾಡಿಸುತ್ತಾನೆ. ಎರಿಟ್ರಿಯಾ– ಸೊಮಾಲಿಯಾ ನಡುವೆ ಶಾಂತಿ ಒಪ್ಪಂದ ಮಾಡಿಸುತ್ತಾನೆ. ಕೀನ್ಯಾ ಮತ್ತು ಸೊಮಾಲಿಯಾ ನಡುವೆ ರಾಜಿ ಮಾಡಿಸುತ್ತಾನೆ. ಇಡೀ ಆಫ್ರಿಕಾದ ಬೆಳವಣಿಗೆಗೆ ನೀಲಿನಕ್ಷೆ ರೂಪಿಸುತ್ತಾನೆ. ಇದಕ್ಕೆ ಏನು ಬೇಕು? 56 ಇಂಚಿನ ಎದೆ ಅಲ್ಲ, ಆ ಎದೆ ಒಳಗಿನ ಹೃದಯದೊಳಗೆ ಮಾನವೀಯ ಸ್ಪಂದನೆಗಳು ಬೇಕು, ಅಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.