ಮತಾಂತರದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ಗಳಿಗೆಯಲ್ಲಿ ಗಾಂಧೀಜಿ ನೆನಪಾಗುತ್ತಾರೆ. ತಮ್ಮ ಮಗ ಮತಾಂತರಗೊಂಡಾಗ ಅವರು ತೋರಿದ ಸಹಿಷ್ಣುತೆ, ನಡೆದುಕೊಂಡ ರೀತಿ ಒಂದು ಮಾದರಿಯಾಗಿದೆ.
ಗಾಂಧೀಜಿ ಹಿರಿಯ ಪುತ್ರ ಹರಿಲಾಲ್ ಅವರು ಇಸ್ಲಾಂಗೆ ಮತಾಂತರಗೊಂಡು ‘ಅಬ್ದುಲ್ಲಾ ಗಾಂಧಿ’ ಎಂದು ಹೆಸರು ಬದಲಿಸಿಕೊಂಡರು. ಈ ಬಗ್ಗೆ ಪತ್ರಿಕೆಗಳಿಗೆ ಪ್ರಕಟಣೆಯನ್ನೂ ನೀಡಿದರು. ಗಾಂಧೀಜಿ ಇದರಿಂದ ಎಳ್ಳಷ್ಟೂ ವಿಚಲಿತರಾಗಲಿಲ್ಲ. ಮಗನ ನಡೆಯನ್ನು ಧಾರ್ಮಿಕ ಸಮನ್ವಯದ ದೃಷ್ಟಿಯಿಂದ ನೋಡಿದರು.
ದೇಶ ವಿದೇಶಗಳ ಪತ್ರಿಕೆಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಯತೊಡಗಿತು. ಇದನ್ನೆಲ್ಲ ಗಮನಿಸಿ, ಗಾಂಧೀಜಿ ತಾವು ಪ್ರಕಟಿಸುತ್ತಿದ್ದ ‘ಹರಿಜನ’ ಪತ್ರಿಕೆಯಲ್ಲಿ ತಮ್ಮ ಪ್ರತಿಕ್ರಿಯೆ ಪ್ರಕಟಿಸಿದರು. ಇಲ್ಲಿ ವ್ಯಕ್ತವಾದ ಅವರ ವಿಚಾರಗಳು ವಿಶ್ವಬಂಧುತ್ವಕ್ಕೆ ಸಾಕ್ಷಿಯಾಗಿವೆ.
ಗಾಂಧೀಜಿ ಪ್ರತಿಕ್ರಿಯೆಯ ಪೂರ್ಣಪಾಠ ಇಷ್ಟು: ‘ಹರಿಲಾಲ್ ನಿಜವಾಗಿಯೂ ಹೃದಯ ಪರಿವರ್ತನೆ
ಯಿಂದ, ಲೌಕಿಕ ಲಾಭಗಳಿಗೆ ಆಸೆಪಡದೆ ಶುದ್ಧ ಮನಸ್ಸಿನಿಂದ ಮತಾಂತರಗೊಂಡಿದ್ದರೆ ಯಾವ ಅಭ್ಯಂತರವೂ ಇಲ್ಲ. ಇಸ್ಲಾಂ ಎಂಬುದು ನನ್ನ ಧರ್ಮದಷ್ಟೇ ಸತ್ಯವಾದದ್ದು ಎಂದು ನಾನು ನಂಬಿದ್ದೇನೆ. ಆದರೆ ಇದು ಹೃದಯ ಪರಿವರ್ತನೆಯೇ ಅಥವಾ ಬರೀ ಸ್ವಾರ್ಥಕ್ಕಾಗಿ ನಡೆದ ಘಟನೆಯೇ ಎಂಬುದರ ಬಗ್ಗೆ ನನಗೆ ಈಗಲೂ ಸಂದೇಹ ಇದೆ. ಹರಿಲಾಲ್ ಬಗ್ಗೆ ಬಲ್ಲವರಿಗೆ ಇದು ಅರ್ಥವಾಗುತ್ತದೆ’.
‘ಅವನು ಮದ್ಯವ್ಯಸನಿಯಾಗಿದ್ದಾನೆ, ವೇಶ್ಯೆಯರ ಸಹವಾಸ ಮಾಡಿದ್ದಾನೆ, ಹಣಕ್ಕಾಗಿ ಸ್ನೇಹಿತರನ್ನು ಪೀಡಿಸುತ್ತಾನೆ. ಹೆಚ್ಚಿನ ಬಡ್ಡಿಗೆ ಸಾಲ ಪಡೆದು ತೊಂದರೆ ಅನುಭವಿಸುತ್ತಿದ್ದಾನೆ. ಅವನಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ. ಇವರಿಗೆ ಹರಿಲಾಲ್‌ನಿಂದ ಯಾವ ಪೋಷಣೆಯೂ ಸಿಗುತ್ತಿಲ್ಲ. ಇಸ್ಲಾಂ ಬಗ್ಗೆ ನನ್ನ ಮನೋಭಾವ ಏನೆಂದು ಎಲ್ಲ ಮುಸ್ಲಿಮರಿಗೂ ಚೆನ್ನಾಗಿ ಗೊತ್ತು. ಅವನು ಹಿಂದೂ ಧರ್ಮವನ್ನು ಬಿಟ್ಟಿದ್ದರಿಂದ ಆ ಧರ್ಮಕ್ಕೆ ಯಾವ ನಷ್ಟವೂ ಆಗಿಲ್ಲ. ಇಸ್ಲಾಂಗೆ ಸೇರಿದ್ದರಿಂದ ಇಸ್ಲಾಂಗೂ ಯಾವ ಲಾಭವೂ ಆಗಿಲ್ಲ. ಅವನು ಪೋಲಿಯಾಗಿಯೇ
ಇರುತ್ತಾನೆ...’
‘ಹರಿಲಾಲ್ ಭವಿಷ್ಯದಲ್ಲಿ ಸರಿಯಾದ ದಾರಿಯಲ್ಲಿ ಹೋಗುವಂತೆ ನನ್ನ ಮುಸ್ಲಿಂ ಬಾಂಧವರು ನೋಡಿಕೊಳ್ಳಬೇಕು ಎಂದು ಆಶಿಸುತ್ತೇನೆ. ಅವನು ಹಿಂದಿನ ದುರ್ವ್ಯಸನವನ್ನು ಪೂರ್ಣ ತ್ಯಜಿಸಿ, ದೇವರಲ್ಲಿ ಅಚಲ ನಂಬಿಕೆಯಿಟ್ಟು ಯೋಗ್ಯ ಮನುಷ್ಯನಾದರೆ ಸಾಕು. ಅವನು ಅಬ್ದುಲ್ಲಾ ಆಗಿರಲೀ ಹರಿಲಾಲ್ ಆಗಿರಲೀ ನನಗೇನೂ ವ್ಯತ್ಯಾಸವಿಲ್ಲ. ಎರಡೂ ಹೆಸರುಗಳ ಅರ್ಥ ‘ದೇವರ ಭಕ್ತ’ ಎಂದೇ ಆಗುತ್ತದೆ’ ಎಂದು ಅವರು ಸ್ಪಷ್ಟೀಕರಣದಲ್ಲಿ ಬರೆದಿದ್ದಾರೆ.
‘ಹರಿಜನ’ ಪತ್ರಿಕೆಯಲ್ಲಿಯ ಈ ಬರಹ ಗಾಂಧೀಜಿ ವಿರೋಧಿಗಳ ಬಾಯಿ ಮುಚ್ಚಿಸಿತು.
ಈ ಘಟನೆ ನಡೆದ ಕೆಲವು ದಿನಗಳ ನಂತರ ಹರಿಲಾಲರನ್ನು ಭೇಟಿ ಮಾಡಿದ ಗಾಂಧೀಜಿಯವರ ಮೂರನೆಯ ಮಗ ರಾಮದಾಸ್, ಸ್ವಧರ್ಮಕ್ಕೆ ವಾಪಸಾಗುವಂತೆ ತಾಯಿ ಕಸ್ತೂರ ಬಾ ಬರೆದ ಮನವಿ ಪತ್ರವನ್ನು ಅಣ್ಣನಿಗೆ ತಲುಪಿಸಿದರು. ಹರಿಲಾಲ್ ಅವರು ಆರ್ಯ ಸಮಾಜದ ಮೂಲಕ ಹಿಂದೂ ಧರ್ಮಕ್ಕೆ ವಾಪಸಾದರು.
ಮುಸ್ಲಿಂ ಕುಟುಂಬದ ಹೆಣ್ಣುಮಗಳೊಬ್ಬಳು ‘ಮದುವೆಗೋಸ್ಕರ ಹಿಂದೂ ಧರ್ಮಕ್ಕೆ ಮತಾಂತರ
ಗೊಳ್ಳಬೇಕೆಂದಿರುವೆ’ ಎಂದು ಗಾಂಧೀಜಿಗೆ ಪತ್ರ ಬರೆದು ಒಪ್ಪಿಗೆ ಕೋರಿದ್ದಳು. ‘ಮದುವೆಗಾಗಿ
ಮತಾಂತರವಾಗುವುದು ಧರ್ಮದ ಘನತೆ ಕೆಡಿಸುವುದು. ಮತಾಂತರ ಎಂದರೆ ಬಟ್ಟೆ, ಮನೆ ಬದಲಿಸಿದಂತೆ ಬದಲಿಸುವ ವಸ್ತು ಅಲ್ಲ’ ಎಂದು ಅವರು ತಮ್ಮ ಅಭಿಪ್ರಾಯ ತಿಳಿಸಿದರು.
ಭಾರತವನ್ನು ಸರ್ವಧರ್ಮಗಳ ಸಹಬಾಳ್ವೆಯ ರಾಷ್ಟ್ರವಾಗಿ ರೂಪಿಸುವುದು ಅವರ ಮಹಾಪ್ರಯೋಗ
ವಾಗಿತ್ತು. ಗಾಂಧೀಜಿ ಅವರ ಸಮನ್ವಯ ದೃಷ್ಟಿಯನ್ನು ‘ಮುಸ್ಲಿಮರ ಓಲೈಕೆ’ ಎಂದು ಕೆಲವರು ಭಾವಿಸಿದ್ದರು.
ಗಾಂಧೀಜಿ ತಮ್ಮ ಮೈಮೇಲೆ ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸುತ್ತಿರಲಿಲ್ಲ. ಅವರ ಮಕ್ಕಳು, ಪತ್ನಿ ಕಸ್ತೂರ ಬಾ ಕೂಡ ಈ ನಿಯಮ ಪಾಲಿಸುತ್ತಿದ್ದರು.
ಪ್ರವಾಸದಲ್ಲಿ ಸಾಮಾನ್ಯವಾಗಿ ಕೆಳ ಸಮುದಾಯದ ಜನ ವಾಸವಾಗಿರುವಲ್ಲಿ ಅವರು ಉಳಿದುಕೊಳ್ಳುತ್ತಿದ್ದರು. ಎಲ್ಲರಿಗೂ ಪ್ರವೇಶವಿಲ್ಲದ ಮಂದಿರಗಳಿಗೆ ಅವರು ಹೋಗುತ್ತಿರಲಿಲ್ಲ.
ಒಬ್ಬ ಹಿಂದೂ ಉತ್ತಮ ಹಿಂದೂ, ಒಬ್ಬ ಕ್ರಿಶ್ಚಿಯನ್ ಉತ್ತಮ ಕ್ರಿಶ್ಚಿಯನ್ ಆಗಬೇಕು. ಹಾಗೆಯೇ ಒಬ್ಬ ಮುಸ್ಲಿಂ ಉತ್ತಮ ಮುಸ್ಲಿಮನಾಗಬೇಕು, ಅಂದರೆ ಸುಸಂಸ್ಕೃತ ಸಜ್ಜನ ಮನುಷ್ಯನಾಗಬೇಕು ಎಂದು ಅವರು ಹೇಳುತ್ತಿದ್ದರು.
ಧಾರ್ಮಿಕ ವೈವಿಧ್ಯ, ಭ್ರಾತೃತ್ವ ಹಾಗೂ ರಾಷ್ಟ್ರದ ಸಮಗ್ರತೆಯನ್ನು ರಕ್ಷಿಸುವ ದಿಸೆಯಲ್ಲಿ ಎಲ್ಲರೂ ಸರಳತನದಿಂದ ನಡೆದುಕೊಳ್ಳಬೇಕು ಎಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಹಾಗೆಯೇ ಭಾರತವು ಹಲವು ಧರ್ಮಗಳ ಜನರು ಜೊತೆಯಾಗಿ ಬೆಳೆದುಬಂದ ಒಂದು ಮನೋಹರ ಸಂಸ್ಕೃತಿಯ ದೇಶವಾಗಿದೆ, ಯಾವ ಒತ್ತಡದಿಂದಲೂ ಅದಕ್ಕೆ ಧಕ್ಕೆಯಾಗಬಾರದು ಎಂಬುದು ಅವರ ಗಟ್ಟಿ ನಿಲುವಾಗಿತ್ತು.
‘...ಈಶ್ವರ ಅಲ್ಲಾ ತೇರೇ ನಾಮ್, ಸಬ್‌ಕೋ ಸನ್ಮತಿ ದೇ ಭಗವಾನ್’– ಈ ಗೀತೆಯು ಗಾಂಧೀಜಿಯ ನಿತ್ಯದ ಪ್ರಾರ್ಥನೆಯ ಭಾಗವಾಗಿತ್ತು. ಅವರ ಇಡೀ ವ್ಯಕ್ತಿತ್ವಕ್ಕೆ ಈ ಭಜನೆಯು ರೂಪಕದಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.