ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದು, ಪರೀಕ್ಷೆ ಬರೆದ ಮಕ್ಕಳು ಹಾಗೂ ಪರೀಕ್ಷಾ ಕಾರ್ಯ ನಡೆಸಿದ ಸಿಬ್ಬಂದಿ ನಿರಾಳರಾಗಿ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಕೈಗೊಂಡ ವಿನೂತನ ಪ್ರಯತ್ನದಿಂದ ‘ಪರೀಕ್ಷೆಗಳಿಗೇ ಪರೀಕ್ಷೆ’ ಒಡ್ಡಿದಂತಾಯಿತು.
ಹಿಂದಿನ ಕೆಲ ವರ್ಷಗಳಿಂದ ಪರೀಕ್ಷಾ ಕೊಠಡಿಯಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾದ ಕಣ್ಗಾವಲು ವ್ಯವಸ್ಥೆಯ ಪರಿಪಾಟವಿತ್ತು. ಆದಾಗ್ಯೂ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯಗಳನ್ನು ಪರಿಶೀಲಿಸಿ, ಸಂದರ್ಭಾನುಸಾರ ಕ್ರಮ ಜರುಗಿಸದಿದ್ದಲ್ಲಿ ಯಾವುದೇ ಪರಿಣಾಮ ಇರದು. ಈ ಕಾರಣದಿಂದ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪರೀಕ್ಷಾ ಕೊಠಡಿಗಳ ಸಿ.ಸಿ. ಟಿ.ವಿ. ಕ್ಯಾಮೆರಾಗಳ ದೃಶ್ಯಗಳನ್ನು ವೆಬ್‌ಹೋಸ್ಟ್ ಮಾಡಿಸಿ, ಪರೀಕ್ಷಾ ಕೊಠಡಿಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಇಲಾಖೆಯ ಆಯ್ದ ಅಧಿಕಾರಿಗಳು ಕೂಲಕಂಷವಾಗಿ ಪರಿಶೀಲಿಸಿ, ಅನುಮಾನಾಸ್ಪದ ಪ್ರಕರಣಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಯಿತು. ಇದರಿಂದ, ಕೆಲವೆಡೆ ನಡೆಯುತ್ತಿದ್ದ ಪರೀಕ್ಷಾ ಅಕ್ರಮ ಪ್ರಕರಣಗಳನ್ನು ಸಮರ್ಥವಾಗಿ ತಡೆಯಲು ಸಹಕಾರಿಯಾಯಿತು ಹಾಗೂ ಆ ಮೂಲಕ ಪರೀಕ್ಷೆಗಳ ಕುರಿತು ಕಠಿಣ ಸಂದೇಶ ನೀಡಲಾಯಿತು. ಇಲಾಖೆಯ ಈ ಹೊಸ ಹೆಜ್ಜೆಯನ್ನು ಕೆಲವರು ಪ್ರಶಂಸಿಸಿ ಪದ್ಯಗಳನ್ನು ರಚಿಸಿದ್ದು, ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗಿದೆ.
ಸಂಚಾರ ನಿಯಮ ಉಲ್ಲಂಘಿಸುವವರನ್ನು ಸಿ.ಸಿ. ಟಿ.ವಿ. ಕ್ಯಾಮೆರಾ ಮೂಲಕ ಗುರುತಿಸಿ, ದಂಡ ವಿಧಿಸುವ ಕ್ರಮಗಳು ಜಾರಿಯಲ್ಲಿವೆ. ಸಾರ್ವಜನಿಕ ವಲಯದಲ್ಲಿ ಈ ಕುರಿತು ಸಹಮತವೂ ಇದೆ. ಬೇರೆ ಬೇರೆ ಬಗೆಯ ಅಕ್ರಮಗಳನ್ನು ತಡೆಗಟ್ಟಲು ಸಹ ತಂತ್ರಜ್ಞಾನದ ಸಹಾಯ ಪಡೆಯಲಾಗುತ್ತಿದೆ. ಅದೇರೀತಿ ಗುಣಮಟ್ಟದ ಶಿಕ್ಷಣಕ್ಕೆ ದೊಡ್ಡ ಅಡ್ಡಿಯಾಗಿರುವ ಪರೀಕ್ಷಾ ಅಕ್ರಮಗಳ ತಡೆಗೆ ಸಿ.ಸಿ. ಟಿ.ವಿ. ಕ್ಯಾಮೆರಾ, ವೆಬ್‌ಹೋಸ್ಟಿಂಗ್‌ನಂತಹ ಕ್ರಮಗಳು ನೆರವು ನೀಡುತ್ತವೆ.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದು ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಬಹಳ ಪ್ರಮುಖವಾದ ಅಂಶವಾಗಿದೆ. ಪರೀಕ್ಷೆಗಳನ್ನು ಗಂಭೀರವಾಗಿ ನಡೆಸದಿದ್ದರೆ ಪರೀಕ್ಷಾ ಪಾವಿತ್ರ್ಯವೇ ಇಲ್ಲದಂತೆ ಆಗಿಬಿಡುತ್ತದೆ. ಪಠ್ಯವನ್ನು ಸರಿಯಾಗಿ ಓದಿದವರಿಗೂ ಓದದೆ ಇರುವವರಿಗೂ ಯಾವುದೇ ವ್ಯತ್ಯಾಸ ಇಲ್ಲದಂತೆ ಆಗುತ್ತದೆ. ಎಸ್‌ಎಲ್ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ನಕಲು ಮಾಡಿ ಪಾಸಾಗಬಹುದು ಎಂಬ ಸಂದೇಶ ವ್ಯಾಪಕವಾದಲ್ಲಿ ಕೆಳಹಂತದ ತರಗತಿಗಳ ವಿದ್ಯಾರ್ಥಿಗಳೂ ಕಲಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
‘ಎಲ್ಲರೂ ನಕಲು ಮಾಡಿಯೇ ಪಾಸಾಗಿರುತ್ತಾರೆ’ ಎಂಬ ಭಾವನೆ ಕೆಲವು ವಿದ್ಯಾರ್ಥಿಗಳಲ್ಲಿ ಬೇರೂರಿರುವುದನ್ನು ನಾವು ಗಮನಿಸಬಹುದು. ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿಯ ಸದಸ್ಯರೊಬ್ಬರು ‘ಬೇರೆ ಬೋರ್ಡ್‌ನವರು ಮಕ್ಕಳನ್ನು ಉದಾರವಾಗಿ ಪಾಸು ಮಾಡುವ ವ್ಯವಸ್ಥೆ ಇರುವಾಗ, ರಾಜ್ಯ ಪಠ್ಯಕ್ರಮ ಓದುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಇಷ್ಟೊಂದು ಕಠಿಣವಾಗಿ ನಡೆಸಿದರೆ ಹೇಗೆ? ಹೀಗಾದಲ್ಲಿ ಹೆಚ್ಚಿನ ಶಾಲೆಗಳು ಉದಾರ ಧೋರಣೆಯ ಬೋರ್ಡ್‌ಗಳ ಶಿಕ್ಷಣಕ್ಕೆ ಬದಲಾಗುತ್ತಾರೆ’ ಎಂದರು.
ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡುವುದು ಅಥವಾ ಶಿಕ್ಷಕರು ಒಂದಷ್ಟು ಉತ್ತರಗಳನ್ನು ಹೇಳಿಕೊಡುವುದು ತಪ್ಪಿಲ್ಲ ಎಂಬ ಭಾವನೆಯನ್ನು ಕೆಲ ಪೋಷಕರೂ ಹೊಂದಿದ್ದಾರೆ. ಪರೀಕ್ಷೆಗಳನ್ನು ವಸ್ತುನಿಷ್ಠವಾಗಿ ನಡೆಸುವುದು ಅಗತ್ಯವಾಗಿ ಮಾಡಲೇಬೇಕಾದ ಕಾರ್ಯ ಎಂಬ ಅಂಶವನ್ನು ಶಿಕ್ಷಣದ ಭಾಗೀದಾರರೆಲ್ಲರಿಗೂ ಮನದಟ್ಟು ಮಾಡುವ ಅಗತ್ಯವಿದೆ.
ಶಾಲಾ ಹಂತದಲ್ಲಿ ಎಲ್ಲಾ ತರಗತಿಗಳಿಗೆ ನಡೆಸುವ ಸಮಗ್ರ ಮತ್ತು ವ್ಯಾಪಕ ಮೌಲ್ಯಮಾಪನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ವಿವಿಧ ತರಗತಿಗಳಿಗೆ ನಡೆಸುವ ಮೌಲ್ಯಾಂಕನ ಪರೀಕ್ಷೆಗಳು ಹಾಗೂ ವಾರ್ಷಿಕ ಪರೀಕ್ಷೆಗಳನ್ನು ಮಕ್ಕಳಸ್ನೇಹಿ ವಾತಾವರಣದಲ್ಲಿ ಪಾರದರ್ಶಕವಾಗಿ, ವಸ್ತುನಿಷ್ಠವಾಗಿ ನಡೆಸುವ ಪರಿಪಾಟ ಸೃಷ್ಟಿಯಾಗಬೇಕು. ಇದಕ್ಕೆ ಹೊಂದಿಕೊಳ್ಳುವ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳನ್ನು ಸಮಗ್ರ ತಯಾರಿಯ ಸಹಿತ ಎದುರಿಸಲು ಸಜ್ಜಾಗುತ್ತಾರೆ.
ಪರೀಕ್ಷಾ ಅಕ್ರಮ ಎನ್ನುವುದು ಒಂದು ಜಾಗತಿಕ ಪಿಡುಗಾಗಿದೆ. ದಕ್ಷಿಣ ಆಫ್ರಿಕಾದ ನೈಜೀರಿಯ ಹಾಗೂ ಘಾನಾ ದೇಶದಲ್ಲಿ ಶಿಕ್ಷಣದ ಎಲ್ಲಾ ಹಂತಗಳಲ್ಲಿ ನಡೆಸುವ ಪರೀಕ್ಷೆಗಳಲ್ಲಿ ಅಕ್ರಮಗಳು ವ್ಯಾಪಕವಾಗಿ ನಡೆಯುವ ಪರಿಸ್ಥಿತಿಯಿದ್ದು, ಶಿಕ್ಷಣದ ಗುಣಮಟ್ಟಕ್ಕೆ ದೊಡ್ಡ ಹೊಡೆತ ನೀಡಿರುವ ಬಗ್ಗೆ ಅಧ್ಯಯನ ವರದಿಗಳಿವೆ. ಪರೀಕ್ಷೆ ಅಥವಾ ವಿವಿಧ ಮೌಲ್ಯಾಂಕನಗಳಲ್ಲಿ ಅಕ್ರಮಗಳು ನಡೆದಾಗ, ಅವುಗಳಿಂದ ಬಂದ ಫಲಿತಾಂಶವನ್ನು ವಿದ್ಯಾರ್ಥಿ, ಶಾಲೆ, ತಾಲ್ಲೂಕು, ಜಿಲ್ಲೆ, ರಾಜ್ಯ, ದೇಶಗಳ ನಡುವೆ ಹೋಲಿಸುವ ಪ್ರಕ್ರಿಯೆಯು ತಾರತಮ್ಯದಿಂದ ಕೂಡಿರುತ್ತದೆ ಮತ್ತು ಇದು ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.
ಪಾರದರ್ಶಕ ಪರೀಕ್ಷಾ ವ್ಯವಸ್ಥೆಯಿಂದ ಬರುವ ಫಲಿತಾಂಶವು ಶಿಕ್ಷಣ ವ್ಯವಸ್ಥೆಯ ಕೈಗನ್ನಡಿಯಾಗಿ ನೈಜ ಬಿಂಬವನ್ನು ಪ್ರತಿಬಿಂಬಿಸುತ್ತದೆ. ಇದರ ಆಧಾರದ ಮೇಲೆ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಾದ ದೂರಗಾಮಿ ಕಾರ್ಯತಂತ್ರ ಹಾಗೂ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ದಿಸೆಯಲ್ಲಿ ದೃಢವಾದ ಹೆಜ್ಜೆಗಳನ್ನಿರಿಸಲು ಇದು ಸಕಾಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.