ADVERTISEMENT

ಸಂಗತ | ಸಾವಿಗೂ ಒಂದು ಘನತೆ ಇದೆ, ಅದನ್ನು ಗೌರವಿಸೋಣ

ನಾರಣಪ್ಪನ ಶವ ಕೊಳೆಯುತ್ತಿದೆ!

ಡಾ.ಲಕ್ಷ್ಮಣ ವಿ.ಎ.
Published 29 ಏಪ್ರಿಲ್ 2020, 2:16 IST
Last Updated 29 ಏಪ್ರಿಲ್ 2020, 2:16 IST
   

‘ಸಂಸ್ಕಾರ’ ಕಾದಂಬರಿಯಲ್ಲಿ ಬರುವ ಧರ್ಮಭ್ರಷ್ಟ ನಾರಣಪ್ಪ ತೀರಿಕೊಂಡಾಗ ದೂರ್ವಾಸಪುರ ಎಂಬ ಅಗ್ರಹಾರದ ಬ್ರಾಹ್ಮಣರಿಗೆ ಅವನ ಶವಸಂಸ್ಕಾರ ಯಾರು ಮಾಡಬೇಕೆನ್ನುವುದೇ ದೊಡ್ಡ ಪ್ರಶ್ನೆಯಾಗುತ್ತದೆ. ಕಾಶಿಯಲ್ಲಿ ವೇದಪಾರಂಗತರಾದ, ಅಗ್ರಹಾರದ ಮುಖಂಡ ಪ್ರಾಣೇಶಾಚಾರ್ಯರಿಗೂ ಇದೊಂದು ಬಿಡಿಸಲಾಗದ ಕಗ್ಗಂಟಾಗುತ್ತದೆ. ಬದುಕಿದ್ದಾಗಲೂ ಒಂದು ಸಮಸ್ಯೆಯಾಗಿದ್ದ ನಾರಣಪ್ಪ, ಸತ್ತಾಗಲೂ ದೊಡ್ಡ ತಲೆನೋವಾಗಿ ಪರಿಣಮಿಸುತ್ತಾನೆ.

ಮೃತದೇಹ ಅಂತ್ಯಸಂಸ್ಕಾರ ಕಾಣದೇ ಕೊಳೆತು ನಾರುತ್ತ, ಅಂತರ್‌ಪಿಶಾಚಿಯಾಗಿ ಕಾಡುತ್ತ, ಓದುವವರಲ್ಲಿ ‘ಆ ಶವ ಇನ್ನೂ ಕೊಳೆಯುತ್ತಲೇ ಇದೆ’ ಎಂಬಂತಹ ತಲ್ಲಣ ಸೃಷ್ಟಿಯಾಗುತ್ತದೆ. ಯು.ಆರ್. ಅನಂತಮೂರ್ತಿಯವರು1965ರಲ್ಲಿ ಬರೆದ ಈ ಕಾದಂಬರಿ ಬಹಳಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ವ್ಯಕ್ತಿ ತೀರಿಕೊಂಡ ನಂತರ ಆತನ ಅಂತ್ಯಸಂಸ್ಕಾರವನ್ನು ಆತನ ಧರ್ಮದ ನಂಬಿಕೆಗಳಿಗೆ ಅನುಗುಣವಾಗಿ ಘನತೆಯಿಂದ ನೆರವೇರಿಸಬೇಕೆಂಬ ಮಾತಿದೆ. ಅಂತ್ಯಸಂಸ್ಕಾರ ಶಾಸ್ತ್ರಸಮ್ಮತವಾಗಿ ನಡೆದರೆ ಮಾತ್ರ ಮೃತ ವ್ಯಕ್ತಿಗೆ ಮೋಕ್ಷಪ್ರಾಪ್ತಿ ಎಂದು ಹಿಂದೂ ಧರ್ಮ ನಂಬಿದೆ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ– ಪುಂಸವನ ಕರ್ಮದಿಂದ ಅಂತ್ಯಸಂಸ್ಕಾರದವರೆಗೆ– ಒಟ್ಟು ಹದಿನಾರು (ಶೋಡಷ ಸಂಸ್ಕಾರ) ಸಂಸ್ಕಾರಗಳು ಬಹು ಪ್ರಾಮುಖ್ಯ ಪಡೆದಿವೆ.

ಯುದ್ಧದಲ್ಲಿ ಮರಣ ಹೊಂದಿದ ಶತ್ರುದೇಶದ ಯೋಧ, ನೇಣುಗಂಬಕ್ಕೇರಿಸಿದ ಕೈದಿಗಳ ಅಂತ್ಯಸಂಸ್ಕಾರವನ್ನು ಅವರ ಧರ್ಮದ ನಂಬಿಕೆಗಳಿಗೆ ಅನುಸಾರವಾಗಿಯೇ ನಡೆಸಲಾಗುತ್ತದೆ. ವ್ಯಕ್ತಿಯೊಬ್ಬನ ಮೃತದೇಹದ ಗುರುತೇ ಸಿಗದಂತಾಗಿದ್ದರೂ, ಆತನ ಸಂಭಾವ್ಯ ಧರ್ಮಕ್ಕನುಗುಣವಾಗಿ ಅಂತ್ಯಸಂಸ್ಕಾರ ಮಾಡುವ ರೂಢಿ ಭಾರತದಲ್ಲಿದೆ. ಕೊಲೆಗಾರ ಶವವನ್ನು ಯಾವ ರೀತಿ ನಿರ್ವಹಿಸಿದ ಎಂಬುದನ್ನು ಆಧರಿಸಿಯೂ ಕೊಲೆಗಾರನಿಗೆ ಶಿಕ್ಷೆ ವಿಧಿಸುವ ಉಲ್ಲೇಖ ಭಾರತೀಯ ದಂಡಸಂಹಿತೆಯಲ್ಲಿ ಇದೆ.

ಆದರೆ ಕೋವಿಡ್–19 ಎಂಬ ರಕ್ಕಸ ಕಾಯಿಲೆ ಎಲ್ಲ ನಂಬಿಕೆಗಳನ್ನು ಬುಡಮೇಲು ಮಾಡಲೆಂದೇ ಬಂದಿರುವಂತೆ ಗೋಚರಿಸುತ್ತಿದೆ. ಭಾರತದಲ್ಲಿ ಇಲ್ಲಿಯತನಕ 29 ಸಾವಿರ ಜನ ಕೊರೊನಾ ವೈರಾಣು ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 900 ಜನ ಪ್ರಾಣ ತೆತ್ತಿದ್ದಾರೆ. ಇದರಲ್ಲಿ ಕೊರೊನಾ ಯೋಧರೆಂದೇ ಕರೆಯಲಾಗುವ ವೈದ್ಯರು, ದಾದಿಯರು, ಸಫಾಯಿ ಕರ್ಮಚಾರಿಗಳು ಕೂಡ ಸೇರಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು, ವೈಜ್ಞಾನಿಕ ಬರಹದ ಹೆಸರಿನಲ್ಲಿ ಸ್ಫೋಟಗೊಳ್ಳುವ ಕಪೋಲಕಲ್ಪಿತ ಮಾಹಿತಿಗಳು ತಮ್ಮದೇ ಆದ ಪ್ರಭಾವ ಬೀರುತ್ತಿವೆ. ನಿಜ ಯಾವುದು, ಸುಳ್ಳು ಯಾವುದು ಎಂಬುದನ್ನು ನಿರ್ಧರಿಸಲಾಗದ ಜನಸಾಮಾನ್ಯರ ಗೊಂದಲ ಒಂದೆಡೆಯಾದರೆ, ಯೋಜಿತವಲ್ಲದ ಲಾಕ್‌ಡೌನಿನ ಪರಿಣಾಮದಿಂದಾಗಿ ಅಸ್ತವ್ಯಸ್ತಗೊಂಡ ಜನಜೀವನ ಮತ್ತೊಂದೆಡೆ. ಕೆಲವೆಡೆ, ಮೃತರ ಪಾಲಿನ ‘ತಮ್ಮವರು’ ಅಂತ್ಯಸಂಸ್ಕಾರಕ್ಕೆ ಮುಂದಾಗದಿದ್ದಾಗ ಅನ್ಯಧರ್ಮೀಯರು ಆ ಕಾರ್ಯ ನೆರವೇರಿಸಿದ್ದಿದೆ.

ಚೆನ್ನೈನ ವೈದ್ಯರೊಬ್ಬರು ಕೊರೊನಾ ಸೋಂಕಿತರನ್ನು ಉಪಚರಿಸಿ, ತಾವೇ ಆ ಸೋಂಕಿಗೆ ತುತ್ತಾಗಿ ಮರಣಹೊಂದಿದರು. ಅವರ ಮೃತದೇಹ ಹೂಳಲು ತೆರಳಿದ್ದ ವೈದ್ಯಕೀಯ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಚಾಲಕನ ಮೇಲೆ ಕಲ್ಲು ತೂರಾಟ ನಡೆಯಿತು. ಕೊನೆಗೆ ಪೊಲೀಸರ ಸಹಾಯದಿಂದ ಅಂತ್ಯಸಂಸ್ಕಾರ ನಡೆಸಲಾಯಿತು. ಬುದ್ಧಿವಂತರ ಜಿಲ್ಲೆ ಎನಿಸಿಕೊಂಡ ದಕ್ಷಿಣ ಕನ್ನಡದಲ್ಲಿ ವೃದ್ಧೆಯ ಶವ ಹೊತ್ತ ಆಂಬುಲೆನ್ಸನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ತಿರುಗಿಸಿದ ಮನಕಲಕುವ ಪ್ರಸಂಗ ನಡೆದಿದೆ. ಕೊರೊನಾದಿಂದ ಮೃತರಾದ ಆ ವೃದ್ಧೆಯ ಶವಸಂಸ್ಕಾರಕ್ಕೆ ಸ್ವತಃ ವೈದ್ಯರಾದ ಸ್ಥಳೀಯ ಶಾಸಕರೇ ಅಡ್ಡಿಪಡಿಸುತ್ತಾರೆಂದರೆ, ಚಿಕಿತ್ಸೆ ನೀಡಬೇಕಿರುವುದು ದೇಹಕ್ಕೆ ಅಂಟಿರುವ ಕೊರೊನಾ ವೈರಸ್ಸಿಗಷ್ಟೇ ಅಲ್ಲ; ಮನಸ್ಸಿಗೆ ಅಂಟಿರುವ ಸೋಂಕಿಗೂ ನೀಡಬೇಕಿದೆ ಅನಿಸುತ್ತಿದೆ.

ಈಗ ಚೆನ್ನೈನ ವೈದ್ಯರ ಕುಟುಂಬಕ್ಕೂ ಈ ಸೋಂಕು ತಗುಲಿದೆ. ಆದರೆ ಈ ದೈಹಿಕ ತೊಂದರೆಗಿಂತ ಮಾನಸಿಕ ಕ್ಷೋಭೆಯೇ ಇಂಚಿಂಚಾಗಿ ಅವರನ್ನು ಕೊಲ್ಲುತ್ತಿರಬಹುದು. ಕೊರೊನಾ ವಿರುದ್ಧದ ಹೋರಾಟದಲ್ಲಿ ಮೊದಲ ಸಾಲಿನ ಯೋಧರಾದ ವೈದ್ಯರಿಗೇ ಅಂತ್ಯ ಸಂಸ್ಕಾರದ ವೇಳೆ ಅಪಮಾನ ಮಾಡಿದ ಕೃತಘ್ನ ಲೋಕವು ಇವರ ಪಾಲಿಗೆ ಸತ್ತಿರಲಿಕ್ಕೂ ಸಾಕು.

ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಅಂತ್ಯಸಂಸ್ಕಾರದ ವೇಳೆ ಪಾಲಿಸಬೇಕಿರುವ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅವನ್ನು ಪಾಲಿಸಿದರೆ ಮೃತದೇಹದಿಂದ ಸೋಂಕು ಹರಡುವುದಿಲ್ಲವೆಂದು ಹೇಳಿದೆ. ನುರಿತ ವೈದ್ಯ ಸಿಬ್ಬಂದಿ ಹೈಪೋಕ್ಲೋರೈಟ್ ದ್ರಾವಣ ಸಿಂಪಡಿಸಿ ಪ್ಯಾಕ್ ಮಾಡಿದ ದೇಹವನ್ನು ಯಾರೂ ಮುಟ್ಟದಂತೆ ಜಾಗ್ರತೆ ವಹಿಸಿ, ಕೆಲವೇ ಬಂಧು ಬಾಂಧವರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಬಹುದು.

ಅಂತ್ಯಸಂಸ್ಕಾರದ ವೇಳೆ ನಡೆದ ಇಂತಹ ಘಟನೆಗಳು ಭವಿಷ್ಯದಲ್ಲಿ ಜನರಲ್ಲಿ ಇನ್ನಷ್ಟು ಭೀತಿ ಹುಟ್ಟಿಸಬಹುದು. ಭಾರತದಲ್ಲಿ ಈಗ ಕೊರೊನಾ ವೈರಸ್ಸಿಗಿಂತಲೂ ಮಾನಸಿಕ ವೈರಸ್ಸು ವೇಗವಾಗಿ ಹರಡುತ್ತಿದೆ. ಹೀಗಾಗಿ ನಾರಣಪ್ಪನ ಪಾರ್ಥಿವ ಶರೀರ ಅಂತ್ಯಸಂಸ್ಕಾರ ಕಾಣದೆ ಮನಸ್ಸುಗಳಲ್ಲೇ ಕೊಳೆಯುತ್ತಿದೆ.

ಸಾವಿಗೂ ಒಂದು ಘನತೆ ಇದೆ. ಅದನ್ನು ಗೌರವಿಸೋಣ. ಏಕೆಂದರೆ ‘ಇಲ್ಲಿ ಬಂದಿದ್ದು ಸುಮ್ಮನೆ, ಅಲ್ಲಿರುವುದು ನಮ್ಮನೆ’ ಎಂಬ ದಾಸರ ನುಡಿ ಇನ್ನಷ್ಟು ಸ್ಪಷ್ಟವಾಗುವಂತೆ, ವಾಸ್ತವವನ್ನು ಕೊರೊನಾ ನಮ್ಮ ಮುಂದೆ ತೆರೆದಿಡುತ್ತಿದೆ.

ಲೇಖಕ: ಆಯುರ್ವೇದ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.