ADVERTISEMENT

ಆಚರಣೆ, ಅನುಕರಣೆ ಮತ್ತು ಸಂಸ್ಕೃತಿ

ದುಂದುಗಾರಿಕೆಯ ಆಚರಣೆಗಳಿಂದ ನಮ್ಮ ಸಮಾಜಕ್ಕೆ, ಸಂಸ್ಕೃತಿಗೆ ವಿಶೇಷವಾದುದು ಏನಾದರೂ ದಕ್ಕಿದೆಯೇ?

ಕೆ.ಟಿ.ಗಟ್ಟಿ
Published 2 ಜನವರಿ 2019, 20:15 IST
Last Updated 2 ಜನವರಿ 2019, 20:15 IST
   

ವಿದೇಶಿಯರ ಆಗಮನದೊಂದಿಗೆ ಬಂದ, ಅವರದಾದ ಹಲವು ಬಗೆಯ ರೀತಿ–ನೀತಿ, ರಿವಾಜುಗಳ ಜೊತೆಯಲ್ಲಿ ಬಂದ ‘ಹೊಸ ವರ್ಷ’ ಎಂಬ ಕಲ್ಪನೆ ಮತ್ತು ಅದು ಜನವರಿಯಲ್ಲಿ ಎಂಬ ಪರಿಗಣನೆ ಇತ್ಯಾದಿಗಳಿಂದ ನಮ್ಮ ದೇಶದಲ್ಲಿ ಯಾವುದೇ ಸಾಂಸ್ಕೃತಿಕ ಪಲ್ಲಟಗಳು ಆಗಿಲ್ಲ ಎಂಬುದು ಸಮಾಧಾನಕರವಾದ ಸಂಗತಿ.

ಆದರೆ, ಪಾಶ್ಚಾತ್ಯರಿಂದಲೇ ಬಂದ ‘ಹ್ಯಾಪಿ ಬರ್ತ್ ಡೇ’ ಎಂಬ ಹುಟ್ಟುದಿನದ ಮತ್ತು ಅದನ್ನು ಹಬ್ಬವಾಗಿ ಆಚರಿಸುವ, ಭಾರತೀಯ ಸಂಸ್ಕೃತಿಗೆ ದೂರವಾದ ವರ್ಣಮಯ ಆಚರಣೆಯಿಂದ ನಾವು ಮೆಚ್ಚಿಕೊಳ್ಳುವುದಕ್ಕಿಂತ ಮೆಚ್ಚಿಕೊಳ್ಳಲು ಆಗದಿರುವಂಥದ್ದೇ ಹೆಚ್ಚು ನಡೆಯುತ್ತಿದೆ. ಇಂಥ ಆಡಂಬರದ, ಅಪಾರ ವೆಚ್ಚದ ದುಂದುಗಾರಿಕೆಯ ಹಬ್ಬಗಳಿಂದ ನಮ್ಮ ಸಂಸ್ಕೃತಿಗೆ ಮತ್ತು ನಮ್ಮ ಸಮಾಜಕ್ಕೆ ಸಾಂಸ್ಕೃತಿಕವಾಗಿ ವಿಶೇಷವಾದ ಸುಖ, ಸಂತೋಷ ದೊರೆತಿಲ್ಲ ಎಂಬುದು ಸ್ಪಷ್ಟ.

ಹುಟ್ಟುಹಬ್ಬ ಎಂಬುದು ಒಂದು ಅರ್ಥರಹಿತ ಆಚರಣೆ. ಈ ಆಚರಣೆಯಲ್ಲದ ಆಚರಣೆಯನ್ನು ಮಹಾವೈಭವದ ಹಬ್ಬವಾಗಿಸಿ, ನಮ್ಮ ಪ್ರಜಾಸತ್ತಾತ್ಮಕ ದೇಶದಲ್ಲಿ ಆಡಳಿತ ಕಕ್ಷೆಯಲ್ಲಿರುವ ಮಂತ್ರಿಗಳು, ಶಾಸಕರು, ಸಂಸದರು ಮತ್ತು ಚಲನಚಿತ್ರ ನಟ–ನಟಿಯರು ವಿಚಾರವಂತರಲ್ಲದ ಪ್ರಜೆಗಳಿಗೆ ಕಣ್ಣಿಗೆ ಕಾಣಿಸದ ತಮ್ಮ ಬೇಳೆಯಲ್ಲಿ ಅರೆಬೆಂದ ಪಾಯಸ ತಿನಿಸಿ, ಜನರನ್ನು ಕೋತಿಗಳನ್ನು ಕುಣಿಸುವಂತೆ ಕುಣಿಸುವುದರಿಂದ ನಮ್ಮ ದೇಶಕ್ಕೆ ಏನು ಒಳ್ಳೆಯದು ಆಗುತ್ತಿದೆ ಎಂದು ಪ್ರಾಜ್ಞರು ಯೋಚಿಸಿ ನೋಡಿದರೆ ಜನಕೋಟಿಗೆ ಒಳ್ಳೆಯದಾಗಬಹುದು.

ADVERTISEMENT

ಯಾವುದೇ ಸಾಂಸ್ಕೃತಿಕ ಲಕ್ಷಣವಿಲ್ಲದ ‘ಹೊಸ ವರ್ಷ’ ಎಂಬ ಭ್ರಮೆಯಲ್ಲಿ, ಹಾಡು, ಕುಡಿತ, ಕುಣಿತ ಮತ್ತು ಇತರ ಅಸಾಂಸ್ಕೃತಿಕ ಮನರಂಜನೆಯಲ್ಲಿ ಮೈಮರೆತು ಅದೆಷ್ಟೋ ಯುವಕ– ಯುವತಿಯರು ಸಾವನ್ನಪ್ಪುವುದು ಅಥವಾ ಏನೇನೋ ಅವಘಡಗಳಿಗೆ ತುತ್ತಾಗುವುದು ಪ್ರತಿವರ್ಷ ನಡೆಯುತ್ತಲೇ ಇದೆ.

ನಮ್ಮ ದೇಶದಲ್ಲಿ ತಾವು ಅಪಾರ ಬುದ್ಧಿವಂತರೆಂದು ಕೊಂಡವರು ಮತ್ತು ಅವೈಜ್ಞಾನಿಕವಾಗಿ ಯೋಚಿಸುವವರು ಏನಾದರೂ ಹೊಸದನ್ನು ಮಾಡಬೇಕೆಂಬ ಭಾವದಲ್ಲಿ ನಿಷ್ಪ್ರಯೋಜಕವಾದ ಏನಾದರೂ ಹೊಸದನ್ನು ಮಾಡುತ್ತಾ ಇರುತ್ತಾರೆ. ಹೆಸರು ಬದಲಿಸುವ ವಿಚಾರ ಈಗ ಉರುಳಾಡುತ್ತಿದೆ. ಇದು ಇತಿಹಾಸವನ್ನು ತಿದ್ದುವ ಹಾಸ್ಯಾಸ್ಪದವಾದ ಅನಗತ್ಯ ಕೆಲಸ. ಇದೇ ರೀತಿ, ಊರಿಗೆ, ಬೀದಿಗೆ ಹೊಸ ಹೆಸರಿಡುವುದು, ಮಳೆ ಸುರಿಯುವಂತೆ ಹಣ ಸುರಿಯಲಿ ಎಂದು ಅಳಿದು ಹೋದ ದೇಶ ನಾಯಕರ ಪ್ರತಿಮೆಗಳನ್ನು ಸ್ಥಾಪಿಸುತ್ತಲೇ ಇರುವುದು ನಡೆಯುತ್ತದೆ. ಇದರಿಂದ ದೇಶ ಹೇಗೆ ಶ್ರೇಷ್ಠವಾಗುತ್ತದೆ, ಸಮಾಜಕ್ಕೆ ಏನು ಒಳ್ಳೆಯದಾಗುತ್ತದೆ ಎಂಬ ಯೋಚನೆ ಯಾಕೆ ಯಾರ ತಲೆಯಲ್ಲೂ ಹುಟ್ಟುತ್ತಿಲ್ಲ?

ಭಾರತಕ್ಕೆ ಬ್ರಿಟಿಷರು ಬಂದ ನಂತರ ತಲೆಯೆತ್ತಿದ ಕೇಕ್ ಕತ್ತರಿಸುವ ಸಂಪ್ರದಾಯದಿಂದ ತೊಡಗಿ, ಕುಡಿದು ಕುಣಿದು ಕುಪ್ಪಳಿಸುವ ಮನರಂಜನೆಯೆಂದು ಭಾವಿಸಲಾಗುವ, ಆದರೆ ಮನೋರಂಜಕವಲ್ಲದ ಅನೇಕ ಉಪ ಆಚರಣೆಗಳನ್ನು ಸೃಷ್ಟಿಸಿ ಅರ್ಥಹೀನ
ವಾದ ಮನರಂಜನೆಗೆ ಹೆಚ್ಚು ಹೆಚ್ಚು ಅವಕಾಶ ನೀಡಲಾಯಿತು. ಮದುವೆ ಎಂಬುದು ಒಂದು ಮಹಾ ಮನೋರಂಜಕ ಸಮಾರಂಭವಾಗಿ ರೂಪುಗೊಂಡಿತು. ನಿಜವಾದ ಸಂಗೀತದಿಂದ ಹೊರ ತಲೆಹಾಕುವ ಆರ್ಕೆಸ್ಟ್ರಾ ಎಂಬುದು ಕೇಳುಗರ ಕಿವಿ ತಮಟೆ ಕತ್ತರಿಸುವ ಒಂದು ಹೊಸ ಶಬ್ದರಾಕ್ಷಸನಾಗಿ ಮೆರೆಯತೊಡಗಿದ ನಂತರ ಸಂಗೀತ ಮತ್ತು ಹಾಡುಗಾರಿಕೆ ಎಂದರೇನು, ಅದರಲ್ಲೂ ವಾದ್ಯ ಸಂಗೀತ ಎಂಬುದು ಹೇಗಿರಬೇಕು ಎಂಬುದು ಯಾರಿಗೂ ತಿಳಿಯದಂತಾಯಿತು. ಇವತ್ತು ಘನ ಘೋರ ವಾದ್ಯ ಸಂಗೀತದ ಆರ್ಕೆಸ್ಟ್ರಾದ ಪರಾಕ್ರಮದಿಂದಾಗಿ ಸಂಗೀತ ಅದೃಶ್ಯವಾಗಿದೆ.

ಹೊಸ ವರ್ಷ ಎಂಬ ಒಂದು ಲಾಂಛನವನ್ನು ಮನದಲ್ಲಿರಿಸಿಕೊಂಡು ಹೊಸದನ್ನು ಮಾಡಲು ಬಯಸುವವರು ಹತ್ತು ಹಲವು ಹೊಸ ಕೆಲಸಗಳನ್ನು ಮಾಡಬಹುದು. ಅಂಥ ಯಾವುದೇ ಲಾಂಛನದ ಅಗತ್ಯವಿಲ್ಲದೆ, ಸರ್ಕಾರದ ನೆರವಿಲ್ಲದೆ, ಅದೆಷ್ಟೋ ಸಾಮಾನ್ಯ ವ್ಯಕ್ತಿಗಳು ಹೊಸ ಕೆಲಸಗಳನ್ನು ಮಾಡುತ್ತಿದ್ದಾರೆ. ಮುರಿದುಬಿದ್ದ, ಮುಚ್ಚಲಾದ ಸರ್ಕಾರಿ ಶಾಲೆಗಳ ಜಾಗದಲ್ಲಿ ಹೊಸ ಶಾಲೆಗಳನ್ನು ನಿರ್ಮಿಸಿದ್ದಾರೆ, ನಿರ್ಮಿಸುತ್ತಿದ್ದಾರೆ. ಅರಣ್ಯ ನಾಶವಾಗಿರುವಲ್ಲಿ ಗಿಡಗಳನ್ನು ನೆಟ್ಟು ಹೊಸ ಅರಣ್ಯಗಳನ್ನು ಬೆಳೆಸಿದ್ದಾರೆ. ರಸ್ತೆಯ ಬಳಿಯಲ್ಲಿ ಪಕ್ಷಿಗಳನ್ನು ಆಕರ್ಷಿಸುವಂಥ ರೆಂಜೆ, ನೇರಳೆ ಮುಂತಾದ ಗಿಡಗಳನ್ನು ಬೆಳೆಸುತ್ತಿದ್ದಾರೆ. ಚಳವಳಿಯ ಸ್ವರೂಪದಲ್ಲಿ ಇಂಥ ಹೊಸ ಕೆಲಸಗಳು ದೇಶದುದ್ದಗಲಕ್ಕೂ ನಡೆದರೆ, ದೇಶದ ಸ್ವರೂಪವೇ ಬದಲಾಗುತ್ತದೆ. ಇಂಥ ಕೆಲಸ ಮಾಡುತ್ತಿರುವ ಶ್ರಮಜೀವಿಗಳ ಬೆನ್ನ ಹಿಂದೆ ಅವರ ಕೆಲಸಕ್ಕೆ ಇಂಬಾಗಿ ನಿಲ್ಲಬೇಕಾದ್ದು ಗಿಡ, ಮರ, ಸಸ್ಯಗಳ ಬಗ್ಗೆ ಸಾಕಷ್ಟು ತಿಳಿವಳಿಕೆಯಿರುವವರು.

ವಾಸ್ತವದಲ್ಲಿ, ಹೊಸ ವರ್ಷ ಎಂಬುದು ಇಲ್ಲ. ನಿರಂತರ ದುಡಿಮೆಯಲ್ಲಿ ಮಗ್ನನಾಗಿರುವ ಕೃಷಿಕರಿಗೆ, ಕುಶಲಕರ್ಮಿಗಳಿಗೆ, ಕಲಾವಿದರಿಗೆ ಜನವರಿಯೂ ಕಾಣಿಸುವುದಿಲ್ಲ, ಹೊಸ ವರ್ಷವೂ ಕಾಣಿಸುವುದಿಲ್ಲ, ಹೊಸ ವರ್ಷ ಮತ್ತು ಹಳೆಯ ವರ್ಷ ಬೇರೆ ಬೇರೆಯಾಗಿ ಕಾಣಿಸುವುದು ಸೋಮಾರಿಗೆ ಮಾತ್ರ; ಸಂತುಷ್ಟನಾಗಿ, ಕೆಲಸದಲ್ಲಿ ದೇವರನ್ನು ಕಾಣುವ ಶ್ರಮಿಕನಿಗೆ ಕಾಣಿಸುವುದು ನೆಲದ ಬದುಕು ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.