ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಅಂತೂ ಪರಿಹಾರವೊಂದು ಸಿಗುವ ಹಾಗೆ ಕಾಣುತ್ತಿದೆ. ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದ ಬೆಂಗಳೂರಿಗರು ಇನ್ನು ಕಸ ಬಿಸಾಡುವ ಮುನ್ನ ಯೋಚಿಸಬೇಕು. ರಾತ್ರಿ ಹೊತ್ತು ಯಾರಿಗೂ ಕಾಣದ ಹಾಗೆ ಎಲ್ಲೋ ಮೂಲೆಯಲ್ಲಿ, ಪಕ್ಕದ ಖಾಲಿ ಸೈಟಿನಲ್ಲಿ ಕಸ ಸುರಿದು ಇಲ್ಲವೇ ದ್ವಿಚಕ್ರ ವಾಹನದಲ್ಲಿ ಅಥವಾ ಕಾರಿನಲ್ಲಿ ಹೋಗುತ್ತ ರಸ್ತೆಯ ಬದಿಯಲ್ಲಿ ಕಸದ ಚೀಲಗಳನ್ನು ಎಸೆದು ಪರಾರಿಯಾಗುವಂತಿಲ್ಲ. ಹಾಗೆ ಮಾಡಿದಲ್ಲಿ ಅವರು ಕೋರ್ಟಿನ ಮೆಟ್ಟಿಲು ಹತ್ತಬೇಕಾಗುತ್ತದೆ. ‘ರೋಗಗಳನ್ನು ಹರಡಲು ಕಾರಣವಾಗುತ್ತಿದ್ದೀರಿ’ ಎಂಬ ಆಪಾದನೆ ಹೊರಬೇಕಾಗುತ್ತದೆ.
ಈ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಈವರೆಗೆ 4982 ಪ್ರಕರಣಗಳು ದಾಖಲಾಗಿವೆ. ಕೆಎಂಸಿ ಕಾಯ್ದೆಯಡಿ ದಂಡ ವಸೂಲಿ ಮಾಡಲಾಗಿದೆ. ಮೂರು ವಾರಗಳಿಂದ ಹೀಗೆ ಪ್ರಕರಣ ದಾಖಲಿಸುವ ಕೆಲಸ ನಡೆದಿದೆ.
ಇದರಲ್ಲಿರುವ ಆಸಕ್ತಿದಾಯಕ ವಿಷಯವೆಂದರೆ, ಕೇಸು ಹಾಕಿಸಿಕೊಂಡಿರುವವರಲ್ಲಿ ಬಹುಪಾಲು ಜನರು ವಾಣಿಜ್ಯ ಮಳಿಗೆಗಳ ಕೆಲಸಗಾರರು. ಅವರು ತಮ್ಮ ಮಾಲೀಕರ ಆಣತಿಯಂತೆ ರಾತ್ರಿ ಹೊತ್ತು ರಸ್ತೆ ಬದಿಯಲ್ಲಿ ಇಲ್ಲವೇ ಹತ್ತಿರದ ಮೂಲೆಗಳಲ್ಲಿ ಕಸ ಹಾಕುತ್ತಿದ್ದರು. ಅಂತಹ ಹೊತ್ತಿನಲ್ಲಿಯೇ ಮಾರ್ಷಲ್‌ಗಳು ಅವರನ್ನು ಹಿಡಿದಿದ್ದಾರೆ. ಇದಕ್ಕಾಗಿ ವಿಶೇಷ ದಳವೊಂದು ರಾತ್ರಿ ಹೊತ್ತು ಗಸ್ತು ತಿರುಗುತ್ತಿದೆ. ಇದುವರೆಗೆ ಬೆಂಗಳೂರಿನ ಬಾಣಸವಾಡಿ, ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ, ಭಾರತಿನಗರ ಹಾಗೂ ಪುಲಿಕೇಶಿ ನಗರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪ್ರದೇಶಗಳಲ್ಲಿ ಬಹುದೊಡ್ಡ ಸಂಖ್ಯೆಯ ವಾಣಿಜ್ಯ ಘಟಕಗಳಿವೆ. ಅವು ಹೆಚ್ಚು ಪ್ರಮಾಣದಲ್ಲಿ ಕಸ ಉತ್ಪಾದಿಸುತ್ತವೆ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎಂಬುದು ಆರೋಪ.
ಕಸ ಸುರಿಯುವ ವ್ಯಕ್ತಿಗಳಿಗೆ ₹ 500ರವರೆಗೆ ದಂಡ ವಿಧಿಸಬಹುದು. ವಾಹನದಲ್ಲಿ ತಂದು ಸುರಿದರೆ ವಾಹನವನ್ನು ವಶಕ್ಕೆ ಪಡೆದು, ಹೆಚ್ಚಿನ ದಂಡ ವಿಧಿಸಲು ಅವಕಾಶ ಇದೆ. ವಾಣಿಜ್ಯ ವಹಿವಾಟು ನಡೆಸುವವರಿಗೆ ದಂಡ ದೊಡ್ಡ ಮೊತ್ತವಲ್ಲ. ಆದರೆ ಕೇಸು, ಕೋರ್ಟು ಅಂತ ಅಲೆಯುವಂತಾದಾಗ ಅವರು ಕಿರಿಕಿರಿ ಅನುಭವಿಸುತ್ತಾರೆ. ಕಾನೂನಿನ ಪ್ರಕ್ರಿಯೆ ತಿಂಗಳುಗಟ್ಟಲೆ ಜರುಗುತ್ತದೆ, ಆರೋಪಿ ಖುದ್ದಾಗಿ ಹಾಜರಿರಬೇಕಾದುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ಈ ಕಾರಣಕ್ಕಾಗಿ, ಎಲ್ಲೆಂದರಲ್ಲಿ ಕಸ ಸುರಿಯುವ ಚಾಳಿಗೆ ತುಸು ಕಡಿವಾಣ ಬೀಳಬಹುದು.
ಕಂಡ ಕಂಡಲ್ಲಿ ಕಸ ಸುರಿಯುವವರ ಮೇಲೆ ಕಣ್ಣಿಟ್ಟು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಅಕ್ಟೋಬರ್‌ನಲ್ಲಿ ಹೈಕೋರ್ಟ್ ಆದೇಶಿಸಿತ್ತು. ಇದರ ಬಿಸಿ ಈ ರೂಪದಲ್ಲಿ ತಟ್ಟತೊಡಗಿರುವುದು ಸಮಾಧಾನದ ಸಂಗತಿ. ‘ಇದೇನಿದ್ದರೂ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದ್ದು, ನಮಗಲ್ಲ’ ಎಂದು ನಾವು ನಿಶ್ಚಿಂತರಾಗುವಂತಿಲ್ಲ. ಇದು ನಮಗೂ ಅನ್ವಯಿಸುತ್ತದೆ. ಆನ್‌ಲೈನ್ ಮಾರಾಟ ಮಳಿಗೆಗಳು ರಿಯಾಯ್ತಿ ಘೋಷಿಸಿದ ಕೂಡಲೇ ಕೊಳ್ಳುಬಾಕತನ ಹೆಚ್ಚಾಗುವುದು ಸಹಜ. ಅದರೊಂದಿಗೆ ಪ್ಯಾಕೇಜಿಂಗ್ ವಸ್ತುಗಳಾದ ರಟ್ಟಿನ ಡಬ್ಬಿಗಳು, ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್‌ನಂಥ ವಸ್ತುಗಳು ಸಹ ಕಸದ ರಾಶಿ ಸೇರುತ್ತವೆ.
ಹಾಗೆಯೇ ಅಂಗಡಿ, ಮಾಲ್‌ಗಳಿಂದ ತರುವ ವಸ್ತುಗಳ ಜೊತೆಗೆ ಬರುವ ಪ್ಯಾಕೇಜಿಂಗ್ ವಸ್ತುಗಳು ಸಹ ಬೇಡದ ಘನತ್ಯಾಜ್ಯಗಳೇ. ಇತ್ತೀಚೆಗೆ ಮನೆಗಳಿಗೆ ತಿಂಡಿ–ತಿನಿಸುಗಳನ್ನು ತರಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಅದರೊಂದಿಗೆ ಅಲ್ಯೂಮಿನಿಯಂ ಫಾಯಿಲ್‌ಗಳು, ಪ್ಲಾಸ್ಟಿಕ್ ಡಬ್ಬಿಗಳೂ ಮನೆ ಸೇರುತ್ತವೆ. ಮಾಲ್‌ಗಳಲ್ಲಿ ಈಗ ಕ್ಯಾಬೇಜ್, ಬ್ರೊಕಲಿ, ಸೊಪ್ಪು, ಕಾಲಿಫ್ಲವರ್ ಕೂಡಾ ಪ್ಲಾಸ್ಟಿಕ್‌ನ ಹೊದಿಕೆ ಹೊದ್ದೇ ಬರುತ್ತವೆ. ಹೀಗಿರುವಾಗ ಪ್ರತೀ ಮನೆಯಿಂದ ಹೊರ ಹೋಗುವ ಕಸದ ಪ್ರಮಾಣವೂ ಹೆಚ್ಚುತ್ತಿದೆ.
ಕಸ ವಿಲೇವಾರಿಯು ಬೆಂಗಳೂರಿನಲ್ಲಿ ಬಹು ದೊಡ್ಡ ಸಮಸ್ಯೆಯಾಗಿದೆ. ಈ ನಗರದಲ್ಲಿ ಪ್ರತಿದಿನ ಸುಮಾರು 6,300 ಟನ್ ಕಸ ಉತ್ಪಾದನೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶೇ 60ರಷ್ಟು ಹಸಿಕಸ. ಹಸಿ ಕಸವನ್ನು ಕಾಂಪೋಸ್ಟ್ ಮಾಡಬಹುದು. ಆದರೆ ಈ ನಿಟ್ಟಿನಲ್ಲಿ ಸಂಪೂರ್ಣ ಯಶಸ್ಸು ದೊರೆತಿಲ್ಲ. ಬೆಂಗಳೂರಿನಲ್ಲಿ ಕಸದ ಪ್ರಮಾಣ ಹೆಚ್ಚಾಗಲು ಕಸ ಬೇರ್ಪಡಿಸದಿರುವುದೂ ಒಂದು ಮುಖ್ಯ ಕಾರಣ. ಕೊನೆಗೆ ಸ್ಥಿತಿ ಎಲ್ಲಿಗೆ ಮುಟ್ಟಿದೆಯೆಂದರೆ, ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ನಿಯಂತ್ರಿಸಲು ಮಾರ್ಷಲ್
ಗಳನ್ನು ನಿಯೋಜಿಸಬೇಕಾಗಿದೆ. ಮನೆಯೊಂದು ಪ್ರತಿದಿನ ಉತ್ಪಾದಿಸಬಹುದಾದ ಕಸಕ್ಕೆ ಮಿತಿ ಹೇರುವ ಮುನ್ನ ನಾವೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.
ಹೊರಗಿನಿಂದ ಸಾಮಾನು ತರುವಾಗ ಉದಾಹರಣೆಗೆ ಚಪ್ಪಲಿ ಅಥವಾ ಶೂ ತರುವಾಗ ಅದರ ಮೇಲಿನ ಡಬ್ಬ, ಪ್ಲಾಸ್ಟಿಕ್ ಹಾಳೆ, ಪ್ಲಾಸ್ಟಿಕ್‌ನ ಸಪೋರ್ಟ್ ಮೆಟೀರಿಯಲ್ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಬನ್ನಿ. ಪ್ರತಿದಿನ ನಿಮ್ಮ ಮನೆಯಿಂದ ಉತ್ಪತ್ತಿಯಾಗುವ ಕಸವನ್ನು ಹೇಗೆ ಕಡಿಮೆ ಮಾಡಬಹುದು ಎಂದು ಯೋಚಿಸಿ. ನೆನಪಿರಲಿ, ಕಸವನ್ನು ಎಲ್ಲೆಲ್ಲಿಯೋ ಹಾಕುವಂತಿಲ್ಲ, ಕ್ಯಾಮೆರಾಗಳು ಕಣ್ಣಿಟ್ಟಿರುತ್ತವೆ, ಮಾರ್ಷಲ್‌ಗಳು ನೋಡುತ್ತಿರುತ್ತಾರೆ. ಇದೆಲ್ಲವೂ ನಮ್ಮ ಬೆಂಗಳೂರಿಗಾಗಿ ನಾವು ಮಾಡಲೇಬೇಕಾದ ಕರ್ತವ್ಯ ಎಂಬುದು ತಿಳಿದಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.