ADVERTISEMENT

ಜಾನಪದ ಶಿಕ್ಷಣಕ್ಕೆ ಉದ್ಯೋಗವೇನು?

ಜಾನಪದಕ್ಕಾಗಿ ಸ್ಥಾಪನೆಯಾದ ಪ್ರತ್ಯೇಕ ವಿಶ್ವವಿದ್ಯಾಲಯವು ಎಂಟನೇ ವರ್ಷಕ್ಕೆ ಕಾಲಿಡುತ್ತಿದೆ. ಜಾನಪದ ಅಧ್ಯಯನ ಮಾಡಿದ ಪದವೀಧರರ ಭವಿಷ್ಯ ...?!

ಅರುಣ್ ಜೋಳದ ಕೂಡ್ಲಿಗಿ
Published 24 ಡಿಸೆಂಬರ್ 2018, 19:53 IST
Last Updated 24 ಡಿಸೆಂಬರ್ 2018, 19:53 IST
   

ಈಚೆಗೆ ನಡೆದ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪಡೆದ ಕಲಾವಿದ ಟಿ.ಬಿ. ಸೊಲಬಕ್ಕನವರ ಮಾತನಾಡುತ್ತಾ, ‘ಜಾನಪದ ವಿಶ್ವವಿದ್ಯಾಲಯದಲ್ಲಿ ಓದಿ ಪದವಿ ಪಡೆದವರು ಎಲ್ಲಿ ಕೆಲಸ ಮಾಡಬೇಕು, ಅವರಿಗೆ ಉದ್ಯೋಗದ ಸಾಧ್ಯತೆ ಏನು’ ಎಂಬ ಪ್ರಶ್ನೆಯನ್ನು ಎತ್ತಿದ್ದರು. ಘಟಿಕೋತ್ಸವ ಭಾಷಣ ಮಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಈ ವಿಚಾರವನ್ನು ಇನ್ನಷ್ಟು ವಿಸ್ತಾರವಾಗಿ ಚರ್ಚಿಸಿದರು. 1966ರಲ್ಲಿ ದೇಜಗೌ ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ಅಧ್ಯಯನದಲ್ಲಿ ಜಾನಪದವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಸೇರಿಸಿದ ದಿನದಿಂದಲೇ ಈ ಪ್ರಶ್ನೆಯೂ ಹುಟ್ಟಿಕೊಂಡಿದೆ. ಜಾನಪದಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಎಂಟನೇ ವರ್ಷಕ್ಕೆ ಕಾಲಿಡುತ್ತಿದೆ. ಅಲ್ಲಿಂದ ಪದವೀಧರರು ಹೊರಬರುತ್ತಿದ್ದಾರೆ. ಅವರ ಭವಿಷ್ಯ ಮಾತ್ರ ಶೂನ್ಯವಾಗಿದೆ.

ಇದೀಗ ಕರ್ನಾಟಕದಲ್ಲಿ ಕನಿಷ್ಠ 1,500ರಷ್ಟು ಜಾನಪದ ಪದವೀಧರರಿದ್ದಾರೆ. ಅವರಾರಿಗೂ ಉದ್ಯೋಗದ ಆಯ್ಕೆಗಳಿಲ್ಲ. ನಾನೂ ಒಬ್ಬ ಜಾನಪದ ಪದವೀಧರನಾಗಿದ್ದು, ಕಳೆದ ಒಂದು ದಶಕದಲ್ಲಿ ಸ್ನೇಹಿತರೊಡಗೂಡಿ ಬೇರೆ ಬೇರೆ ನೆಲೆಯಲ್ಲಿ ಈ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದೇನೆ. ಏನೂ ಪರಿಣಾಮ ಆಗಲಿಲ್ಲ. ಇದೀಗ ಜಾನಪದ ಕಲಿತ ಎಲ್ಲಾ ಪದವೀಧರರು ಒಟ್ಟಾಗಿ ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜಾನಪದವು ಶಿಕ್ಷಣ ಮತ್ತು ಉದ್ಯೋಗ ಕೊಡಬಲ್ಲ ಪಠ್ಯವಾಗುವ ಸಾಧ್ಯತೆ ಬಗೆಗೆ ಚರ್ಚೆ ನಡೆಯಬೇಕಾಗಿದೆ. ಅಂತಹ ಒಂದು ಪ್ರಸ್ತಾವ ಇಲ್ಲಿದೆ.

ಜಾನಪದವು ಶಿಕ್ಷಣ ಮತ್ತು ಉದ್ಯೋಗದ ಪಠ್ಯವಾಗಬೇಕೆಂದರೆ ಇವೆರಡೂ ಜನಪದೀಕರಣ ಪ್ರಕ್ರಿಯೆಗೆ ಒಳಗಾಗಬೇಕು. ಈಚೆಗೆ, ನಾಡಿನ ಪ್ರಾಥಮಿಕ ಶಾಲೆಗಳು ಪ್ರತಿಭಾ ಕಾರಂಜಿಯನ್ನು ನಡೆಸಿದವು. ಅಲ್ಲಿ ವಿವಿಧ ಶಾಲೆಗಳ ಮಕ್ಕಳು ಜನಪದ ಕಲೆಯೊಂದನ್ನು ಅಭಿನಯಿಸಿದರು. ಇದಕ್ಕೆ ದೊಡ್ಡಮಟ್ಟದಲ್ಲಿ ಜನಸ್ಪಂದನ ಸಿಕ್ಕಿತು. ಈ ಅಭಿನಯವನ್ನು ಶಾಲೆಯ ಶಿಕ್ಷಕರೇ ಅವರಿಗೆ ಕಲಿಸಿದ್ದರು. ಈ ವೇಳೆಯಲ್ಲಿ ಪ್ರತಿ ಶಾಲೆಗೂ ಒಬ್ಬ ‘ಜಾನಪದ ಶಿಕ್ಷಕ’ರ ಅಗತ್ಯ ಎದ್ದು ಕಾಣುತ್ತಿತ್ತು. ಅಂದರೆ ಗ್ರಾಮದ ಜತೆ ಸಾವಯವ ಸಂಬಂಧ ಬೆಸೆದು, ಗ್ರಾಮ ಪರಂಪರೆಯ ಜತೆ ಮಕ್ಕಳ ಕಲಿಕೆಯನ್ನು ಬೆಸೆದು ದೇಸಿ ಶಿಕ್ಷಣ ಪದ್ಧತಿಯೊಂದನ್ನು ರೂಪಿಸಲು ಜಾನಪದ ಶಿಕ್ಷಕರ ಅಗತ್ಯವಿದೆ. ಇದು ಸರ್ಕಾರಿ ಕನ್ನಡ ಶಾಲೆಗಳ ಉಳಿವಿನ ಒಂದು ಶಕ್ತಿಯೂ ಆಗಬಲ್ಲದು.

ADVERTISEMENT

ಈ ಜಾನಪದ ಶಿಕ್ಷಕರನ್ನು ತರಬೇತುಗೊಳಿಸಲು ಪ್ರತ್ಯೇಕ ಜಾನಪದ ಶಿಕ್ಷಕ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಅಥವಾ ಈಗಿರುವ ಶಿಕ್ಷಕರ ತರಬೇತಿ ಕೇಂದ್ರಗಳಲ್ಲಿಯೇ ಜಾನಪದವನ್ನು ಐಚ್ಛಿಕ ಅಥವಾ ಕಡ್ಡಾಯ ವಿಷಯವಾಗಿ ಕಲಿಯಲು ಅವಕಾಶ ಇರಬೇಕು. ಶಿಕ್ಷಕರ ತರಬೇತಿಗೆ ಪದವಿಪೂರ್ವ ಶಿಕ್ಷಣದಲ್ಲಿ ಜಾನಪದವನ್ನು ಐಚ್ಛಿಕ ಪಠ್ಯವನ್ನಾಗಿ ಓದಿದವರನ್ನು ಅರ್ಹರನ್ನಾಗಿಸಬೇಕು. ಹೀಗೆಯೇ ಜಾನಪದ ಪಠ್ಯ, ಹೈಸ್ಕೂಲಿನಲ್ಲೂ ಮುಂದುವರಿಯಬೇಕು. ಅದಕ್ಕಾಗಿ ಬಿಇಡಿಯಲ್ಲಿಯೂ ಜಾನಪದ ಐಚ್ಛಿಕ ವಿಷಯದಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ಆಯ್ಕೆ ಮಾಡಬೇಕು. ಇದಕ್ಕೆ ಮೊದಲು, ಪದವಿ ತರಗತಿಗಳಲ್ಲಿಯೂ ಜಾನಪದ ಐಚ್ಛಿಕ ವಿಷಯ ವಾಗಿ ಕಲಿತ ವಿದ್ಯಾರ್ಥಿಗಳಿಗೆ ಬಿಇಡಿ ತರಬೇತಿಗೆ ಅವಕಾಶವಿರಬೇಕು. ಪದವಿ ವಿದ್ಯಾರ್ಥಿಗಳಿಗೆ ಬೋಧಿಸಲು ಜಾನಪದ ಸ್ನಾತಕೋತ್ತರ ಪದವೀಧರರು ಈಗಾಗಲೇ ಸಿದ್ಧರಾಗಿದ್ದಾರೆ. ಸ್ನಾತಕೋತ್ತರ ಪದವಿ ಕೊಡುವ ಕೆಲಸವನ್ನು ಹಲವು ವಿ.ವಿ.ಗಳು ಈಗಾಗಲೇ ಮಾಡುತ್ತಿವೆ. ಹೀಗೆ ಶಿಕ್ಷಣದ ಜಾನಪದೀಕರಣವಾಗಬೇಕಿದೆ.

ಎರಡನೆಯದಾಗಿ, ಹೀಗೆ ಜಾನಪದ ಶಿಕ್ಷಣ ಪಡೆದು ಹೊರಬಂದ ಪದವೀಧರರಿಗೆ ಪೂರಕವಾಗಿ ಉದ್ಯೋಗದ ಜನಪದೀಕರಣವಾಗಬೇಕು. ಆಡಳಿತ ಯಂತ್ರವನ್ನು ಜನಪರವಾಗಿಸಲು ಆಡಳಿತವನ್ನು ದೇಸೀಕರಣಕ್ಕೆ ಒಳಪಡಿಸುವ ಅಗತ್ಯವಿದೆ. ಮುಖ್ಯವಾಗಿ ಗ್ರಾಮ ಜಗತ್ತಿನೊಂದಿಗೆ ನಂಟು ಬೆಸೆದ ಎಲ್ಲಾ ಉದ್ಯೋಗಗಳಲ್ಲಿ ಜಾನಪದ ಪದವಿ ಪಡೆದವರಿಗೆ ಮೀಸಲಾತಿ ಕಡ್ಡಾಯವಾಗಬೇಕು. ಉದಾಹರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಉದ್ಯೋಗಗಳಲ್ಲಿ ಜಾನಪದ ಪದವೀಧರರಿಗೆ ಆದ್ಯತೆ ಇರಬೇಕು. ಪಂಚಾಯತ್‌ರಾಜ್, ಕೃಷಿ, ನೀರಾವರಿ, ಪ್ರವಾಸೋದ್ಯಮ, ರಕ್ಷಣೆ, ಅರಣ್ಯ... ಹೀಗೆ ಗ್ರಾಮೀಣ ಜನರ ಜತೆ ಸಂಪರ್ಕಕ್ಕೆ ಬರುವ ಎಲ್ಲಾ ಉದ್ಯೋಗಗಳ ಆಯ್ಕೆಯಲ್ಲಿ ಜಾನಪದ ಓದಿದವರಿಗೆ ಆದ್ಯತೆ ಕೊಡಬೇಕು.

ಹೀಗೆ ಓದು ಮತ್ತು ಉದ್ಯೋಗಕ್ಕೆ ಪೂರಕವಾಗಿ ‘ಜಾನಪದ’ದ ವ್ಯಾಖ್ಯೆಯನ್ನು ಸಾಂಪ್ರದಾಯಿಕ ಚೌಕಟ್ಟಿನಿಂದ ಬಿಡಿಸಬೇಕು. ಅಗತ್ಯವಿರುವ ಪಾರಂಪರಿಕ ಪರ್ಯಾಯ ಜ್ಞಾನವನ್ನು ಮರುರೂಪಿಸಬೇಕು. ಅಂತೆಯೇ ಹೊಸಕಾಲದ ‘ನವಜಾನಪದ’ವನ್ನು ಅಧ್ಯಯನಕ್ಕೊಳಪಡಿಸಬೇಕು. ಹೀಗೆ ಶಿಕ್ಷಣ ಮತ್ತು ಉದ್ಯೋಗ ಜನಪದೀಕರಣಗೊಂಡರೆ ಜಾನಪದ ವಿಶ್ವವಿದ್ಯಾಲಯದ ಹೊಣೆಗಾರಿಕೆ ವಿಸ್ತಾರಗೊಳ್ಳುತ್ತದೆ. ಹೀಗಾದಾಗ ‘ಜಾನಪದವನ್ನು ಉಳಿಸಿ’ ಎನ್ನುವ ಭಾಷಣದ ವಿಷಯ ಪ್ರಾಯೋಗಿಕ ನೆಲೆಯಲ್ಲಿ ಮರುಹುಟ್ಟು ಪಡೆಯುತ್ತದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಈಗಿನ ಅಧ್ಯಕ್ಷ, ಜಾನಪದ ಸಂವೇದನೆಯನ್ನು ಸೃಜನಶೀಲ ಸಾಹಿತ್ಯಕ್ಕೆ ಬೆಸೆದು ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರೊ. ಚಂದ್ರಶೇಖರ ಕಂಬಾರ ಅವರನ್ನು ಒಳಗೊಂಡಂತೆ ಎಲ್ಲಾ ಜಾನಪದ ವಿದ್ವಾಂಸರು, ಸಂಸ್ಕೃತಿ ಚಿಂತಕರು ಒಟ್ಟಾಗಿ ಶಿಕ್ಷಣ ಮತ್ತು ಉದ್ಯೋಗದ ಜನಪದೀಕರಣಕ್ಕೆ ಸರ್ಕಾರವನ್ನು ಒತ್ತಾಯಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.