ADVERTISEMENT

ಸಂಗತ: ವಾರ್ಡ್‌ರೋಬ್‌ ಮುಂದೆ ಒಂದು ಕ್ಷಣ

ಫ್ಯಾಷನ್‌ಗಾಗಿ ಬದಲಾಗದೆ ನಮ್ಮ ಅನುಕೂಲಕ್ಕೆ ಸರಿಹೊಂದುವಂತೆ ಫ್ಯಾಷನ್ನನ್ನೇ ಬದಲಿಸುವಲ್ಲಿ ನಮ್ಮ ಅಸ್ಮಿತೆ ಇದೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 0:11 IST
Last Updated 25 ಜುಲೈ 2024, 0:11 IST
.
.   

ಬಿ.ಎಸ್‌.ಭಗವಾನ್‌

‘ಹೀಗೂ ದುರುಳತನ ಉಂಟೇ’ ಎಂದು ಮೂಗಿನ ಮೇಲೆ ಬೆರಳಿಡುವಂತಹ ವಿಪರ್ಯಾಸವೊಂದು ಬೆಂಗಳೂರಿನಲ್ಲಿ ಇತ್ತೀಚೆಗಷ್ಟೆ ಸಂಭವಿಸಿದೆ. ಮಾಲ್‌ವೊಂದರಲ್ಲಿ ಸಿನಿಮಾ ನೋಡಲೆಂದು ಪುತ್ರನ ಸಮೇತ ಕೃಷಿಕರೊಬ್ಬರು ಪ್ರವೇಶಿಸುತ್ತಾರೆ. ಭದ್ರತೆಗೆ ಅಲ್ಲಿ ನಿಯೋಜನೆಗೊಂಡಿದ್ದ ವ್ಯಕ್ತಿಯು ಮಗನನ್ನು ಒಳಬಿಟ್ಟು, ಪಂಚೆಯುಟ್ಟಿದ್ದ ಕಾರಣಕ್ಕೆ ಆ ಕೃಷಿಕರನ್ನು ತಡೆಯುತ್ತಾರೆ! ಮೊದಲ ಆದ್ಯತೆ ಪಡೆದುಕೊಳ್ಳಬೇಕಾದ ಅಪ್ಪಟ ದೇಶಿ ಉಡುಪಿಗೆ ಇಂತಹ ಅವಮಾನವೇ? ಹಾಗಾದರೆ ಮಾಲ್‌ ಆಡಳಿತದ ದೃಷ್ಟಿಯಲ್ಲಿ ಶಿಷ್ಟ ದಿರಿಸುಗಳ ಪಟ್ಟಿಯಲ್ಲಿ ಶಾರ್ಟ್ಸ್‌,‌ ಜೀನ್ಸ್‌, ಟೀ ಷರ್ಟ್‌ ಇವೆಯೇ?

ರಾಜಧಾನಿಯ ‘ಮೆಟ್ರೊ’ ರೈಲು ನಿಲ್ದಾಣದಲ್ಲೂ ಇಂತಹ ಅನಾದರ ಸುದ್ದಿಯಾಗಿತ್ತು. ಮನವರಿಕೆ ಆಗಿಯೊ, ಜನಾಕ್ರೋಶಕ್ಕೆ ಮಣಿದೊ ಅಂತೂ ಸೆಕ್ಯೂರಿಟಿ ಸಿಬ್ಬಂದಿ ಕ್ಷಮೆ ಯಾಚಿಸಿದರು. ಮಾಲ್‌ನ ಮಾಲೀಕ ರಿಂದ ಆ ಕೃಷಿಕರನ್ನು ಸನ್ಮಾನಿಸಿದ್ದು ಬೇರೆ ಮಾತು.

ADVERTISEMENT

ಇಂತಹ ಪ್ರಕರಣಗಳು ಬೇರೊಂದು ಹಿನ್ನೆಲೆಯಲ್ಲಿ ನಮ್ಮ ಗಮನ ಸೆಳೆಯಬೇಕಿದೆ. ಮೂಗಿಲ್ಲದವರ ದ್ವೀಪದಲ್ಲಿ ಮೂಗಿರುವಾತನೇ ಕುರೂಪಿಯಂತೆ! ಚಿತ್ರವಿಚಿತ್ರ ವೇಷಭೂಷಣಗಳಿಗೆ ನಾವೆಷ್ಟು ಮರುಳಾಗಿದ್ದೇವೆ ಎಂದರೆ, ದೇಶಿ ಪೋಷಾಕುಗಳೇ ನಮಗೆ ಅಪರಿಚಿತ, ಅನುಚಿತ ಎನಿಸತೊಡಗಿವೆ. 

ಪರಂಪರಾಗತ ದಿರಿಸು ನಮಗೆ ಮಾತ್ರವಲ್ಲ, ಅದು ನಮ್ಮ ಸಂಸ್ಕೃತಿಯನ್ನು ಮತ್ತು ನಮ್ಮ ಪೂರ್ವಜರನ್ನು ಗೌರವಿಸುತ್ತದೆ. ಧರಿಸುವ ಪೋಷಾಕು ನಡವಳಿಕೆಯ ಪ್ರತೀಕ. ಅದು ಸೂಕ್ಷ್ಮ ಸಂದೇಶಗಳ ವಾಹಕ. ನಾವು ದಿರಿಸುಗಳ ಭಾಷೆಯಲ್ಲಿ ಮಾತನಾಡುತ್ತೇವೆ. ನಮ್ರತೆಯು ಶಿಷ್ಟ ಉಡುಗೆಯ ಅವಿಭಾಜ್ಯ ಅಂಗ. ಮನೆ
ಯಲ್ಲಿ ಸರಾಗವಾಗಿ ಧರಿಸಬಹುದಾದ ದಿರಿಸೇ ನಿರಾಳಕ್ಕೆ ಕೀಲಿಕೈ. ಆದರೆ ಹೊರಗೆ ಬಂದಾಗ ಸದಭಿರುಚಿ ಮೇಲುಗೈ ಆಗಬೇಕಾಗುತ್ತದೆ.

ನಾಜೂಕಾಗಿ ಪಂಚೆಯುಟ್ಟ ಪತಿ, ಸೀರೆಯುಟ್ಟ ಸತಿ- ದಂಪತಿ ಸಂಗೀತ ಕಛೇರಿಗೆ ಬಂದರೆ ಆ ನೋಟವೇ ಸೊಗಸು. ವೇದಿಕೆಯಿಂದ ಪ್ರವಹಿಸುವ ನಾದಕ್ಕೆ ಅದು ಸಾಥ್‌ ನೀಡಿರುತ್ತದೆ. ಅವರೇ ಹಾಡುತ್ತಿದ್ದಾರೋ ಎಂಬ ಅನುಭಾವಕ್ಕೆ ವಶವಾಗಿರುತ್ತೇವೆ.

ಉಡುಗೆ– ತೊಡುಗೆ ತನಗಷ್ಟೇ ಅಂದ ಚಂದಆದರೆ ಸಾಲದು, ನೋಡುವವರಿಗೂ ಸೊಗಸಾಗಿರುವ ಅಗತ್ಯವಿದೆ. ಈ ದಿಸೆಯಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ
ಮತ್ತೆ ಮತ್ತೆ ನೆನಪಾಗುತ್ತಾರೆ. ಅವರ ಮನೆಗೆ ಸಂದರ್ಶಕರು ಹೋದಾಗ ಸೂಟುಧಾರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಹೀಗೇಕೆ? ಬಿಡುಬೀಸಾಗಿದ್ದರೆ ಆಗದೇ ಎಂಬ ಆಪ್ತರ ಪ್ರಶ್ನೆಗಳಿಗೆ ಅವರು ಈ ಉಡುಗೆ ತನಗಲ್ಲ, ಭೇಟಿಯಾಗುವವರಿಗೆ ಎನ್ನುತ್ತಿದ್ದರು.

ದಿರಿಸಿಗೆ ಜವಾಬ್ದಾರಿಯಿದೆ. ನಮ್ಮನ್ನು ನಾವೇ ಇಷ್ಟಪಡುವ ಮಿತಿಯಲ್ಲಿ ಇತರರನ್ನು ಮೆಚ್ಚಿಸಲು ಉಡುವುದು, ತೊಡುವುದು ಸರಿಯೆ. ನಾವು ಯಾವುದೇ ಮಾತನ್ನು ಆಡುವ ಮುನ್ನವೇ ನಮ್ಮ ಬಗ್ಗೆ ನಮ್ಮ ವೇಷಭೂಷಣ ಎಲ್ಲವನ್ನೂ ಅಭಿವ್ಯಕ್ತಿಸಿರುತ್ತದೆ.
ಅದು ಆತ್ಮಾಭಿಮಾನದ ಜೊತೆಗೆ ಪರರ ಬಗ್ಗೆ ನಮಗಿರುವ ಗೌರವವನ್ನೂ ಪ್ರಕಟಿಸಿರುತ್ತದೆ. ಎಲ್ಲರೂ ಅಹುದಹುದೆನ್ನುವ ಸಭ್ಯ ಉಡುಗೆಯೇ ನಮ್ಮ ಪಾಲಿಗೆ ಸಂತೋಷದ ಭರವಸೆ.

ಷೇಕ್ಸ್‌ಪಿಯರ್‌ ತನ್ನ ‘ಪೊಲೊನಿಯಸ್‌ ಅಡ್ವೈಸ್‌ ಟು ಹಿಸ್‌ ಸನ್‌’ ಕವನದಲ್ಲಿ ಅಪ್ಪನು ಮಗನಿಗೆ ನೀಡುವ ಹಿತನುಡಿ ಪ್ರಸ್ತುತವಾಗಿದೆ: ‘ಒಳ್ಳೆಯ ಉಡುಪು ಖರೀ
ದಿಸು. ಆದರೆ ಎದ್ದು ಕಾಣುವ ಆಡಂಬರದ್ದು ಬೇಡ’.

ವಾರ್ಡ್‌ರೋಬ್‌ (ಉಡುಪಿನ ಕಪಾಟು) ಮುಂದೆ ನಿಂತಾಗ ಒಂದು ಕ್ಷಣ ಯಾವ ಬಗೆಯ ದಿರಿಸು ತೊಟ್ಟರೆ ಜಗತ್ತಿನ ಬಗ್ಗೆ ನಮ್ಮ ದೃಷ್ಟಿ ಹಾಗೂ ನಮ್ಮ ಬಗ್ಗೆ ಜಗತ್ತಿನ ದೃಷ್ಟಿ ಉತ್ತಮವೆಂಬ ಆಲೋಚನೆ ಮುಖ್ಯವಾಗುವುದು. ನಮಗೂ ನೋಡುವವರಿಗೂ ಯಾವುದು ಹಿತವೆಂಬ ವಿವೇಚನೆಗೆ ವ್ಯವಧಾನ ಅಗತ್ಯ. 

ಕಿರಿಯರಂತೆ ತೋರಲು ಕೃತಕ ಒಪ್ಪ ಓರಣದ ಮೊರೆ ಹೇಗೂ ಇರಲಿ. ಎಂತಹ ವೇಷಭೂಷಣಕ್ಕಾಗಲಿ, ಸೌಂದರ್ಯವರ್ಧಕಕ್ಕಾಗಲಿ ವಯಸ್ಸಿನೊಂದಿಗೆ ರಾಜಿ
ಯಾಗಲು ಇತಿಮಿತಿಗಳಿವೆ. ಅದು ನಿಸರ್ಗ ನಿಯಮ. ಮುಖದ ಸುಕ್ಕು, ಕೇಶದ ನೆರೆ ಮರೆಮಾಚಲು ಯತ್ನಿಸಿ ಸೋಲೊಪ್ಪಿ ಯಥಾಸ್ಥಿತಿಯನ್ನು ಅಪ್ಪುವ ಸಂದರ್ಭಗಳೇ ಹೆಚ್ಚು.

ಫ್ಯಾಷನ್‌ಗಾಗಿ ಬದಲಾಗದೆ ನಮ್ಮ ಅನುಕೂಲಕ್ಕೆ ಸರಿಹೊಂದುವಂತೆ ಫ್ಯಾಷನ್ನನ್ನೇ ಬದಲಿಸುವಲ್ಲಿ ನಮ್ಮ ಅಸ್ಮಿತೆಯಿದೆ. ‘ವಸ್ತ್ರ ಭೂತ ಸಂಸ್ಥಾಪನಾರ್ಥಂ’ ಎಂಬ ನುಡಿಯಂತೆ, ಉಡುಪು ಧರಿಸುವುದು ಒಬ್ಬರ ಸ್ವವ್ಯಕ್ತಿತ್ವಕ್ಕೆ. ಕೆಲವು ದೇಶಗಳಲ್ಲಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರೀಯ ಉಡುಪನ್ನೇ ಅಧಿಕೃತ ಸಮವಸ್ತ್ರವಾಗಿ ನಿಯೋಜಿಸಲಾಗಿದೆ. ಪಂಚೆ, ಸೀರೆ ಉಡುವ ಶೈಲಿ ಬೇರೆ ಬೇರೆಯಾದರೂ ವಿಶ್ವವ್ಯಾಪಿ. ಎಲ್ಲ ಧರ್ಮಗಳಲ್ಲೂ ಅವಕ್ಕೆ ಮನ್ನಣೆ, ಮಾನ್ಯತೆಯಿದೆ. ಭಾರತದಲ್ಲಂತೂ ಪಂಚೆಯುಟ್ಟ ರೀತಿ ನೋಡಿಯೇ ಅವರು ಯಾವ ರಾಜ್ಯದವರೆಂದು ಗುರುತಿಸಬಹುದು. ಪಂಚೆಧಾರಿಯ ಹೆಗಲಿನ ಮೇಲ್ವಸ್ತ್ರವು ಸಾಂದರ್ಭಿಕ ಸ್ವಚ್ಛತೆಗೆ, ರಕ್ಷಣೆಗೆ ಉಪಯೋಗಿಸಬಹುದಾದ ಸಾಧನ. ಎಂದ ಮೇಲೆ ಪಂಚೆ, ಸೀರೆ ವೈಜ್ಞಾನಿಕ
ದಿರಿಸು.

ಪಂಚೆಯ ಬಹೂಪಯೋಗಿತ್ವ ಸಾರುವ ನವಿರು ಕವನವಿದು: ‘ಉಟ್ಟರೆ ಪಂಚೆಯಾದೆ/ ಹಾಸಿದರೆ ಹಾಸಿಗೆಯಾದೆ/ ಹೊದ್ದರೆ ಹೊದಿಕೆಯಾದೆ/ ಸುತ್ತಿದರೆ ತಲೆಗೆ ರುಮಾಲಾದೆ/ಸಂಡಿಗೆ ಒಣಹಾಕಲು ಅಜ್ಜಿಗೆ ಚಾಪೆಯಾದೆ/ ನೀನಾರಿಗಾದೆಯೋ ಎಲೆ ಪ್ಯಾಂಟೆ?’. ಬೆಂಜಮಿನ್‌ ಫ್ರ್ಯಾಂಕ್ಲಿನ್ ‘ನಿಮಗೆ ತೃಪ್ತಿಯಾಗುವಂತೆ ಊಟ ಮಾಡಿ, ಪರರಿಗೆ ತೃಪ್ತಿಯಾಗುವಂತೆ ಉಡುಪು ಧರಿಸಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.