ADVERTISEMENT

ಸಂಗತ: ಮೂಢನಂಬಿಕೆ ಎಂಬ ಸ್ವಾರ್ಥ ನಂಬಿಕೆ

sa

ಯೋಗಾನಂದ
Published 23 ಜೂನ್ 2023, 23:31 IST
Last Updated 23 ಜೂನ್ 2023, 23:31 IST
   

ಮಳೆಗಾಗಿ ಪ್ರಾರ್ಥಿಸಿ ಆರಾಧನೆ, ಬಂಧುಮಿತ್ರರ ಆರೋಗ್ಯಕ್ಕಾಗಿ ಇಡುಗಾಯಿ, ಉರುಳು ಸೇವೆ- ಇಂತಹ ಆಚರಣೆಗಳ ಹಿಂದಿನ ಲೋಕಹಿತದ ಆಶಯದಲ್ಲಿ ಎರಡು ಮಾತಿಲ್ಲ. ಆದರೆ ಅವುಗಳಿಂದ ಇಷ್ಟಾರ್ಥ ಸಿದ್ಧೀಸೀತೆ ಎನ್ನುವುದು ಪ್ರಶ್ನೆ. ಮೂಢನಂಬಿಕೆ ಎಂದರೆ ಕಾರ್ಯಕಾರಣಕ್ಕೆ ಹೊರತಾದ ಪ್ರಶ್ನಿಸದ ನಂಬಿಕೆ, ಎತ್ತು ಕರು ಹಾಕಿತೆಂದರೆ ಕೊಟ್ಟಿಗೆಗೆ ಕಟ್ಟು ಎನ್ನುವ ವಿವೇಚನಾರಹಿತ ಕಾತರ.

ಸಾಗರದ ನೀರು ಆವಿಯಾಗಿ ಘನೀಕರಣಗೊಂಡು ಮೋಡ, ಮೋಡದಿಂದ ಮಳೆ- ಇದು ಎಲ್ಲರಿಗೂ ತಿಳಿದಿರುವ ಸರಳ ಸಂಗತಿ. ಮೋಡ ರೂಪುಗೊಂಡ ಮಾತ್ರಕ್ಕೆ ಮಳೆ ಸುರಿಯದು. ದ್ರವರೂಪದ ನೀರಿನ ಹನಿಗಳು ಪರಸ್ಪರ ಲಗತ್ತಾಗಿ ದೊಡ್ಡ ಗಾತ್ರದ ಹನಿಗಳಾದರೆ ಮಾತ್ರ ಮಳೆಯಾಗುವುದು. ಇವುಗಳ ಸಂಖ್ಯೆ ಕಡಿಮೆಯಾದರೆ ಅವು ಮುಗಿಲಿನಲ್ಲಿ ತ್ರಿಶಂಕು ಸ್ಥಿತಿಯಲ್ಲಿ ಓಲಾಡುತ್ತವೆಯೇ ವಿನಾ ಮಳೆ ಅಸಂಭವ.

ಮಳೆ ನಿಸರ್ಗದ ವಿದ್ಯಮಾನ. ನಮ್ಮ ಕೋರಿಕೆಗೆ ಅತೀತವಾದ ಆಗುಹೋಗು ಅದು. ರಾಸಾಯನಿಕ ಸಿಂಪಡಿಸಿ ಮೋಡವು ಮಳೆ ಸುರಿಸುವಂತೆ ಪ್ರಭಾವಿಸುವ ಮಾತು ಬೇರೆ. ಆದರೆ ನೀರಿನಲ್ಲಿ ಕುಳಿತು ಜಪ, ತಪ ನೆರವೇರಿಸುವುದರಿಂದ ಮಳೆಯಾಗಲು ಸಾಧ್ಯವೇ? ಹಾಗೊಂದು ವೇಳೆ ಪೂಜೆಯಿಂದ ಮಳೆಯಾಗುವುದೆನ್ನಿ. ಅದೇ ಮಳೆ ಅತಿವೃಷ್ಟಿಗೆ ಆಸ್ಪದವಾಗದಂತೆಯೊ ಇಲ್ಲವೆ ತುಂತುರಾಗಿ ಬೀಳುವಂತೆಯೊ, ಕಡೆಗೆ ಮೇಘಗಳು ನಾಲ್ಕು ಹನಿ ಕೂಡ ಸುರಿಸದಂತೆಯೊ ಒಂದು ಕೋರಿಕೆಯ ಕ್ರಮ ಇರಬೇಕಲ್ಲ! ಅಂದಹಾಗೆ ಮಳೆಗಾಗಿ ಏಕೆ ತಾನೆ ಮೊರೆಯಿಡುವುದು? ಒಂದು ಹೆಜ್ಜೆ ಮುಂದಿಟ್ಟು ನೀರಿನ ಬದಲು ಅಕ್ಕಿ, ಬೇಳೆ, ಜೋಳ, ತರಕಾರಿ, ಹಣ್ಣು ಹಂಪಲುಗಳನ್ನೇ ಆಕಾಶದಿಂದ ವರ್ಷಿಸುವಂತೆ ಪ್ರಾರ್ಥಿಸಬಹುದಲ್ಲ?

ADVERTISEMENT

‘ಪ್ರಾರ್ಥನೆಯಿಂದ ಈಡೇರುವ ಯಾವುದೇ ಶಕ್ತಿ ಜಗತ್ತಿನಲ್ಲಿ ಇಲ್ಲ’ ಎಂದು ಗೌತಮ ಬುದ್ಧ ಹೇಳಿ ಎರಡೂವರೆ ಸಹಸ್ರಮಾನಗಳು ಸಂದಿವೆ. ವಿಚಾರವಾದವು ಸಂದರ್ಭದ ಸಂಭಾವ್ಯ ಆಗುಹೋಗುಗಳ ಅವಲೋಕನಗಳಿಗೆ ನಮ್ಮನ್ನು ದೂಡುತ್ತದೆ. ಒಂದು ವೃತ್ತಾಂತ ನೆನಪಾಗುವುದು. ಕುಗ್ರಾಮವೊಂದರ ದೊಡ್ಡ ಮನೆಯಲ್ಲಿ ಒಬ್ಬಂಟಿಯಾಗಿದ್ದ ವಾಸಿಗೆ ನಡುರಾತ್ರಿ ಸರಸರನೆ ಮಹಡಿ ಮೆಟ್ಟಿಲುಗಳನ್ನೇರಿ ಯಾರೋ ಮೇಲೇರಿದ ಭಯ ಕಾಡುತ್ತದೆ. ಆತ ಶರಣಾಗುವುದು ತರ್ಕಕ್ಕೆ. ಅರೆ! ಮರದ ಮೆಟ್ಟಿಲು ಸದ್ದಾಗಲಿಲ್ಲ ಏಕೆ? ಭ್ರಮೆ ಹರಿಯಲು ಆತನಿಗೆ ಕ್ಷಣ ಆಲೋಚನೆಯೆ ಸಾಕಾಗುವುದು. ಚಲಿಸಿದ್ದು ಕಂದೀಲು ಹಿಡಿದಿದ್ದ ಅವನದೇ ನೆರಳು!

ಪ್ರಕೃತಿಯ ಭಾಗವೇ ಆದ ನಾವು ಕಾಮನಬಿಲ್ಲು, ಜಲಪಾತ, ಸೂರ್ಯೋದಯದಂತೆಯೇ ಮಳೆಯ ಅಭಾವವನ್ನಾಗಲಿ, ಪ್ರವಾಹವನ್ನಾಗಲಿ ಒಪ್ಪಬೇಕು, ನಿರ್ವಹಿಸಬೇಕು, ಆನಂದಿಸಬೇಕು. ಪ್ರತಿಯೊಂದು ವಿದ್ಯಮಾನದ ಹಿಂದೆ ಕಾರಣವಿದ್ದೀತು. ಹಾಗಾಗಿ ಅದನ್ನು ಭವಿತವ್ಯದಲ್ಲಿ ಘಟಿಸುವ ಸಂಗತಿಗೆ ತಯಾರಿಯಂತೆ ಪರಿಗಣಿಸುವುದು ವಿವೇಕ. ನಿಸರ್ಗದ ವಿದ್ಯಮಾನಗಳಿಗೆ ವಿಜ್ಞಾನ ಸಾಕ್ಷ್ಯಾಧಾರಿತ ವಿವರಣೆ
ಗಳನ್ನು ಪೂರೈಸುವುದು. ಮಹಾತ್ಮ ಗಾಂಧೀಜಿ ‘ನಂಬಿಕೆಗೆ ಕಾರಣವಿರಬೇಕು. ನಂಬಿಕೆ ಕುರುಡಾದರೆ ಅದು ಸಾಯುವುದು’ ಎಂದರು. ಆಧಾರವಿಲ್ಲದೆ ನಂಬುವುದು ಅಪರಾಧವೇ ಹೌದು. ಸಂಖ್ಯೆ 13 ಅನಿಷ್ಟವೆಂದು ಕಟಕಟೆಯಲ್ಲಿ ನಿಲ್ಲಿಸಿ 12ನ್ನು ಎರಡುಬಾರಿ ಎಣಿಸುವುದು ಮೌಢ್ಯ ತಾನೆ?

ವೈಚಾರಿಕತೆ ನಮ್ಮನ್ನು ಅನವರತ ವಿದ್ಯಾರ್ಥಿಯನ್ನಾಗಿಸುತ್ತದೆ. ‘ವೈಜ್ಞಾನಿಕ ಧ್ಯಾನ’ ಎನ್ನುವುದಿದೆ. ನಮ್ಮ ಏಕಾಗ್ರತೆ, ಇಚ್ಛಾಶಕ್ತಿ ಹೆಚ್ಚುವಂತೆ, ಕೋಪ, ತಾಪ, ಅಸಹಿಷ್ಣುತೆ ತಗ್ಗುವಂತೆ ಮನಸ್ಸನ್ನು ಒಂದು ಹದಕ್ಕೆ ತರಬಲ್ಲ ಶಿಸ್ತಿನ ಧ್ಯಾನ ಯಾರಿಗೆ ತಾನೆ ಬೇಡ. ಮಳೆ ಸುರಿಯುವ ಬಗೆ ಹೇಗೆ? ಅಭಾವ ಏಕೆ ತಲೆದೋರುತ್ತದೆ? ಸೂರ್ಯ ಕೆಲವೊಮ್ಮೆ ತೀವ್ರ ಬಿಸಿ ಕಾರುವನೇಕೆ? ಚಂದ್ರನೇಕೆ ಭೂಮಿಗಪ್ಪಳಿಸನು?- ಮುಂತಾದವು ಈಗ ಒಗಟುಗಳೇನಲ್ಲವಲ್ಲ, ಅವಕ್ಕೆ ವೈಜ್ಞಾನಿಕ ಸಮಜಾಯಿಷಿಗಳು ಲಭಿಸಿವೆ. ಹೀಗಿದ್ದರೂ ಮಳೆಗಾಗಿ ಕತ್ತೆಗಳ ಮೆರವಣಿಗೆ, ಸುಭಿಕ್ಷಕ್ಕಾಗಿ ಅಮೂಲ್ಯ ಬಟ್ಟೆ ಬರೆ, ದವಸ, ಹಣ್ಣು ಕಾಯಿಯನ್ನು ಹೋಮ ಹವನದ ಹೆಸರಲ್ಲಿ ಸುಡುವುದು ತರವೇ? ಗೇಣು ಬಟ್ಟೆ ತಯಾರಿಸುವುದರ, ಹಿಡಿ ಭತ್ತ ಬೆಳೆಯುವುದರ ಅಥವಾ ಗೋಲಿ ಗಾತ್ರದ ಬೆಣ್ಣೆ ತೆಗೆಯುವುದರ ಹಿಂದೆ ಅದೆಷ್ಟು ಪರಿಶ್ರಮವಿದೆ.

ತುಪ್ಪದ ಹೊಗೆ ಮೋಡವನ್ನು ಪ್ರಭಾವಿಸಿ ವರ್ಷ ಸಂಭವಿಸುವುದೆನ್ನಲು ಯಾವ ಪ್ರಮಾಣವೂ ಇಲ್ಲ. ವರ್ತಮಾನವನ್ನು ನಿರ್ಲಕ್ಷಿಸಿ ಎಂದೂ ನೆರವೇರದ ಅತಾರ್ಕಿಕ ಪ್ರತಿಕ್ರಿಯೆಗಳ ನಿರೀಕ್ಷೆ ಅವೈಜ್ಞಾನಿಕ. ಯಾವುದೂ ಒಮ್ಮಿಂದೊಮ್ಮೆಗೇ ಆಗದು. ಅದೃಷ್ಟ ಎನ್ನುವುದಿಲ್ಲ. ಏನಿದ್ದರೂ ಕ್ರಿಯೆ ಪರಿಣಾಮದ ರೂಪದಲ್ಲಿ ಮರಳುತ್ತದೆ. ಅಂಧಾಚರಣೆಗಳ ಬೆನ್ನೇರಬೇಕಿಲ್ಲ, ಅತಾರ್ಕಿಕ ವಿಧಿಗಳಿಗೆ ಮೊರೆ ಅಗತ್ಯವಿಲ್ಲ. ಅಂತಹ ಅವಲಂಬನೆಗಳಿಂದ ಕಡೆಗೆ ಬಲಿಪಶು
ಗಳಾಗುವವರು ನಾವೇ.

ಮೂಢನಂಬಿಕೆಗಳು ಪರಹಿತಕ್ಕೂ ಮಿಗಿಲಾಗಿ ಬಹುತೇಕ ಸ್ವಯಂ ಹೇರಿಕೊಳ್ಳುವ ಬರೀ ಸ್ವಾರ್ಥ ನಂಬಿಕೆಗಳು. ವಿಜ್ಞಾನ ಮೇಲ್ನೋಟಕ್ಕೆ ಮಿಥ್ಯೆಯೆಂದು ತೋರಿದ್ದನ್ನು ಸತ್ಯವಾಗಿಸಬಲ್ಲ, ಅಸಾಧ್ಯವೆಂದು ತೋರಿದ್ದನ್ನು ಸಾಧ್ಯವಾಗಿಸಬಲ್ಲ ನಿರಪೇಕ್ಷ ಅರಿವು. ತನಗೆ ಅರ್ಥವಾಗದ್ದನ್ನು ಶತಾಯಗತಾಯ ಅರಿಯುವ ಪ್ರಾಮಾಣಿಕ ಮತ್ತು ಸತತ ಪ್ರಯತ್ನ ವಿಜ್ಞಾನದ್ದು. ಅದು ಮನ್ನಣೆಗೆ ಹಿಗ್ಗದು, ಪರಿಷ್ಕರಣೆಗೆ ಕುಗ್ಗದು. ಪ್ರಕೃತಿಗೆ ಅವಸರವಾಗಲಿ, ಆಡಂಬರವಾಗಲಿ ಇಲ್ಲ. ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡಬೇಕೆಂಬ ಹಿತವಾದದಲ್ಲಿರುವ ಕಾರ್ಯಶೀಲ ಇಂಗಿತ ಗುರುತಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.