ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ನಡೆಸಿದ ಸಮೀಕ್ಷೆಯ ವರದಿ ಕೆಲ ದಿನಗಳ ಹಿಂದೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ರಾಜ್ಯದಲ್ಲಿ ಇಂದಿಗೂ ಮ್ಯಾನ್‌ಹೋಲ್‍ನೊಳಗೆ ಸ್ವತಃ ಇಳಿದು ಸ್ವಚ್ಛಗೊಳಿಸುವ 7,493 ಮಂದಿ ಇದ್ದಾರೆ ಎಂಬ ಅಂಶವನ್ನು ಸಮೀಕ್ಷೆ ತಿಳಿಸಿತ್ತು. ಒಳಚರಂಡಿಯ ಹೂಳು ತೆಗೆಯಲು ಡೀಸಿಲ್ಟಿಂಗ್, ಜೆಟ್ಟಿಂಗ್ ಯಂತ್ರಗಳನ್ನು ಬಳಸಬೇಕು, ಮ್ಯಾನ್‌ಹೋಲ್‍ಗೆ ಜನರನ್ನು ಇಳಿಸಬಾರದು ಎಂದು ಕಾನೂನು ಹೇಳಿದ್ದರೂ ಕೆಲವೆಡೆ ಹಳೆಯ ವಿಧಾನವೇ ಮುಂದುವರಿದಿದೆ.
ಅನಿವಾರ್ಯ ಪರಿಸ್ಥಿತಿಗಳಲ್ಲಿ ಮ್ಯಾನ್‌ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್‍ಗಳಿಗೆ ಜನರನ್ನು ಇಳಿಸುವಾಗ ಕನಿಷ್ಠ ಸುರಕ್ಷಾ ಪರಿಕರಗಳನ್ನೂ ಸ್ಥಳೀಯ ಸಂಸ್ಥೆಗಳು ಒದಗಿಸುವುದಿಲ್ಲವಂತೆ. ಪರಿಣಾಮ, ಇಂದಿಗೂ ರಾಜ್ಯದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳು ಮೃತಪಡುವ ಸುದ್ದಿಯನ್ನು ಆಗಾಗ್ಗೆ ಕೇಳುತ್ತಲೇ ಇದ್ದೇವೆ.
ನಿಮ್ಮ ಮನೆಗಳ ಮುಂದೆ ಕಸ ತುಂಬಿಕೊಂಡು ಹೋಗುವ ನಗರಸಭೆಯ ವಾಹನದೊಂದಿಗೆ ಬರುವ ನೌಕರರನ್ನು ಗಮನಿಸಿ. ಹೆಚ್ಚಿನವರು ಯಾವ ಸುರಕ್ಷಿತ ಪರಿಕರಗಳನ್ನೂ ಧರಿಸಿರುವುದಿಲ್ಲ. ಬರಿಕೈಗಳಿಂದಲೇ ಡಬ್ಬಿಯ ಕಸವನ್ನು ಬಳಿದು ವಾಹನಕ್ಕೆ ತುಂಬುತ್ತಿರುತ್ತಾರೆ.
ಆಸ್ಪತ್ರೆಯ ಪ್ರಯೋಗಾಲಯಗಳಲ್ಲಿ ರೋಗಿಗಳ ರಕ್ತ, ಮೂತ್ರ, ಮಲದಂತಹ ಮಾದರಿಗಳನ್ನು ಸಂಗ್ರಹಿಸುವ ತಂತ್ರಜ್ಞರನ್ನು ಸೂಕ್ಷ್ಮವಾಗಿ ಗಮನಿಸಿ. ಅನೇಕ ಕಡೆ ಅವರು ಕೈಗವಸು, ಮಾಸ್ಕ್ ಇಲ್ಲದೆಯೇ ಕೆಲಸದಲ್ಲಿ ತೊಡಗಿರುತ್ತಾರೆ. ಇವು ಕೆಲವು ಉದಾಹರಣೆಗಳಷ್ಟೆ. ಇಂತಹ ಅಸಡ್ಡೆ ಮತ್ತು ನಿರ್ಲಕ್ಷ್ಯವನ್ನು ಹಲವಾರು ಉದ್ಯೋಗ ಸ್ಥಳಗಳಲ್ಲಿ ಕಾಣಬಹುದು.
ನೌಕರಿ ಎಂತಹದ್ದೇ ಇರಲಿ, ಆದರೆ ಅದು ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿರಬೇಕು. ಮುಖ್ಯವಾಗಿ, ನಮ್ಮ ಆರೋಗ್ಯದ ಮೇಲೆ ಅಪಾಯಕರ ಪರಿಣಾಮ ಬೀರಬಾರದು. ಈ ಅಂಶವನ್ನು ಪ್ರತಿಯೊಬ್ಬರೂ ತಿಳಿದಿರಬೇಕು. ಮುಖ್ಯವಾಗಿ, ಉದ್ಯೋಗ ಸೃಷ್ಟಿ ಮಾಡುವ ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು, ಕಾರ್ಖಾನೆಗಳು, ಆಸ್ಪತ್ರೆಗಳ ಆಡಳಿತ ವರ್ಗದವರಿಗೆ ಈ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರಬೇಕು. ಬರೀ ತಿಳಿದಿದ್ದರೆ ಸಾಲದು, ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಒದಗಿಸಿಕೊಡಬೇಕು. ನೌಕರರು ಅದರ ಸದುಪಯೋಗ ಪಡೆದುಕೊಳ್ಳಬೇಕು.
ಉದ್ಯೋಗ ಸ್ಥಳದಲ್ಲಿನ ಬಹುತೇಕ ಅಪಾಯಗಳನ್ನು ಸೂಕ್ತ, ಸುರಕ್ಷಿತ ಪರಿಕರಗಳು ಅಥವಾ ನಿರ್ದಿಷ್ಟ ಉಪಕ್ರಮಗಳ ಬಳಕೆಯಿಂದ ತಪ್ಪಿಸಬಹುದು. ಆದರೆ ಎಲ್ಲಾ ಕಡೆ ಇದು ಸಾಧ್ಯವಾಗುತ್ತಿಲ್ಲ, ಏಕೆ? ಇದಕ್ಕೆ ಮುಖ್ಯ ಕಾರಣಗಳು ಮೂರು. ಮೊದಲನೆಯದು, ಸಮಸ್ಯೆಯ ಅರಿವು ನೌಕರರಿಗೆ, ಆಡಳಿತ ವರ್ಗದವರಿಗೆ ಇದ್ದರೂ, ಸುರಕ್ಷಿತ ಕ್ರಮಗಳಿಗೆ ಒತ್ತು ಕೊಡದಿರುವುದು. ಎರಡನೆಯದು, ಆ ಬಗ್ಗೆ ನೌಕರರಿಗೆ ಮಾಹಿತಿ ಇದ್ದರೂ ಸೂಕ್ತ ಪರಿಕರಗಳನ್ನು ಒದಗಿಸಲು ಆಡಳಿತ ವರ್ಗದವರು ನಿರ್ಲಕ್ಷ್ಯ ತೋರುವುದು. ಮೂರನೆಯದು, ಆಡಳಿತ ನಿರ್ವಾಹಕರು ಸೂಕ್ತ ಸಲಕರಣೆಗಳನ್ನು ಪೂರೈಕೆ ಮಾಡಿದರೂ ಉಡಾಫೆಯ ಮನೋಭಾವದಿಂದಲೋ ಅಥವಾ ಅಪಾಯದ ಗಾಂಭೀರ್ಯವನ್ನು ಅರಿಯದೆಯೋ ನೌಕರರು ಅವುಗಳನ್ನು ಬಳಕೆ ಮಾಡದಿರುವುದು. ಮೂರು ಸನ್ನಿವೇಶಗಳಲ್ಲಿಯೂ ನೌಕರರ ಆರೋಗ್ಯ ಅಪಾಯದಲ್ಲಿರುತ್ತದೆ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ.
ಸುರಕ್ಷತಾ ಕ್ರಮಗಳು ಎಂದೊಡನೆ ಅವು ದುಬಾರಿ, ಅವುಗಳ ಪೂರೈಕೆ ಕಠಿಣ ಎಂದೇನೂ ಇಲ್ಲ. ಎಷ್ಟೋ ಸ್ಥಳಗಳಲ್ಲಿ ಶರೀರದ ತೆರೆದ ಭಾಗವಾದ ಕೈ, ಕುತ್ತಿಗೆಯನ್ನು ಮುಚ್ಚಿಕೊಳ್ಳುವ ಮೇಲುಡುಗೆ, ಬೂಟು, ಕೈಗವಸು, ಹೆಲ್ಮೆಟ್‌ನಂತಹವೇ ಬಹಳಷ್ಟು ರಕ್ಷಣೆಯನ್ನು ಒದಗಿಸಬಲ್ಲವು. ಕನ್ನಡಕಗಳು, ಮೂಗು, ಬಾಯಿಯನ್ನು ಮುಚ್ಚಿಕೊಳ್ಳುವ ಮಾಸ್ಕ್‌ನಿಂದ ಕೂಡ ಉದ್ಯೋಗ ಸ್ಥಳದಲ್ಲಿನ ಅನೇಕ ಸಮಸ್ಯೆಗಳನ್ನು ತಡೆಯಬಹುದು. ನಿರ್ದಿಷ್ಟ ಕಾಯಿಲೆಗಳ ವಿರುದ್ಧ ಹಾಕಿಸಿಕೊಳ್ಳುವ ಲಸಿಕೆಗಳೂ ವಿವಿಧ ಸೋಂಕುಗಳ ವಿರುದ್ಧ ರಕ್ಷಣೆಯನ್ನು ಒದಗಿಸಬಲ್ಲವು. ಆದರೆ ಈ ಬಗ್ಗೆ ಉದಾಸೀನ ತೋರಬಾರದಷ್ಟೆ.
ಕಾರ್ಖಾನೆಗಳಲ್ಲಿ ಮೂಲಸೌಕರ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು. ಅಲ್ಲಿ ಉತ್ಪತ್ತಿಯಾಗುವ ವಿಷಕಾರಕ ಉಪ ಉತ್ಪನ್ನಗಳ ಸಮರ್ಪಕ ವಿಲೇವಾರಿ, ಉಪಕರಣಗಳ ನಿಯಮಿತ ಪರಿವೀಕ್ಷಣೆ, ದೋಷಯುಕ್ತ ಉಪಕರಣಗಳ ದುರಸ್ತಿ ಮತ್ತು ಯೋಗ್ಯವಲ್ಲದ ಸಲಕರಣೆಗಳ ವಿಲೇವಾರಿಯಂತಹ ಕ್ರಮಗಳು ನಿಯಂತ್ರಣ ಮಂಡಳಿಯ ಆದೇಶದ ಅನುಸಾರ ನಡೆಯಬೇಕು. ಅನಾಹುತವಾದ ನಂತರ ಪಶ್ಚಾತ್ತಾಪ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ.
ಹೊಲಗದ್ದೆಗಳಲ್ಲಿ ಕೆಲಸ ಮಾಡುವ ರೈತರೂ ಇಂತಹ ಸಮಸ್ಯೆಗಳಿಂದ ದೂರವಿಲ್ಲ. ಮುಖ್ಯವಾಗಿ, ಕೀಟನಾಶಕ ಮತ್ತು ಕಳೆನಾಶಕ ಔಷಧಗಳನ್ನು ಸಿಂಪಡಿಸುವವರು ಸಿಂಪಡಣೆ ಮುಗಿದ ನಂತರ ಕೈಕಾಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸಿಕೊಳ್ಳುವುದು ಮತ್ತು ಸಿಂಪಡಿಸುವಾಗ ಮೂಗು, ಬಾಯಿಯನ್ನು ಮಾಸ್ಕ್‌ನಿಂದ ಮುಚ್ಚಿಕೊಳ್ಳುವುದು ಬಹಳ ಮುಖ್ಯ. ಕನ್ನಡಕಗಳನ್ನು ಹಾಕಿಕೊಂಡರೆ ಅದು ಇನ್ನೂ ಸುರಕ್ಷಿತ. ಈ ಬಗ್ಗೆ ಮಾಲೀಕರು ಅವರಿಗೆ ತಿಳಿಹೇಳಬೇಕು.
ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಶುಶ್ರೂಷಕರು ಮತ್ತು ಇತರ ಸಿಬ್ಬಂದಿ ವರ್ಗದವರು ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮಾಸ್ಕ್, ಕೈಗವಸು, ಮೇಲುಡುಗೆಗಳನ್ನು ಧರಿಸುವುದು, ಆರೈಕೆ ಮುಗಿದ ನಂತರ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಅವರ ವೈಯಕ್ತಿಕ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ರೋಗಿಗಳೊಂದಿಗೆ ನಿಕಟ ಸಂಪರ್ಕಕ್ಕೆ ಬರುವ ಸಿಬ್ಬಂದಿ ಹೆಪಟೈಟಿಸ್ ಬಿ ಹಾಗೂ ಕೆಲವು ಬಗೆಯ ಫ್ಲೂಗಳ ವಿರುದ್ಧದ ಲಸಿಕೆಗಳನ್ನು ಕಾಲಕಾಲಕ್ಕೆ ತೆಗೆದುಕೊಂಡಿದ್ದರೆ ಒಳಿತು.
ವೈದ್ಯಕೀಯ ಸಂಶೋಧನೆಗಳಲ್ಲಿ ನಿರತರಾದವರು ಸಹ ಬಹಳ ಎಚ್ಚರಿಕೆಯಿಂದ ಇರಬೇಕು. ಸುಶಸ್ತ್ರ ಸಜ್ಜಿತರಾಗದೇ ಪ್ರಯೋಗಾಲಯಗಳ ಒಳಗೆ ಕಾಲಿಡಬಾರದು. ಸ್ವಲ್ಪ ಎಚ್ಚರ ತಪ್ಪಿದರೂ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಮನೆಗೆಲಸಕ್ಕೆಂದು ನೇಮಿಸಿಕೊಂಡ ಎಷ್ಟೋ ಮಹಿಳೆಯರು ಸಾಬೂನಿನ ಅಲರ್ಜಿ, ಕಾಲು ಬೆರಳುಗಳ ಸಂದಿಯಲ್ಲಿ ಶಿಲೀಂಧ್ರದ ಸೋಂಕಿನಂತಹ (ಕೆಸರು ಗುಳ್ಳೆ) ಸಮಸ್ಯೆಗಳಿಂದ ಬಳಲುತ್ತಾರೆ. ವಿಪರೀತ ಯಾತನೆಯನ್ನು ಅನುಭವಿಸುತ್ತಾರೆ. ಇದನ್ನು ಗಮನಿಸಿ, ಪರಿಹಾರ ಒದಗಿಸುವ ಸಂವೇದನಾಶೀಲತೆ ಮನೆಯ ಮಾಲೀಕರಿಗೆ ಇರಬೇಕು.
ಒಮ್ಮೊಮ್ಮೆ ವ್ಯಕ್ತಿಯ ದೇಹಸ್ಥಿತಿ ಕೆಲವು ಉದ್ಯೋಗಗಳಿಗೆ ಹೊಂದುವುದಿಲ್ಲ. ಉದಾಹರಣೆಗೆ, ಸಿಮೆಂಟ್ ಮತ್ತು ಗಾಜಿನ ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ದೂಳಿನ ಕಣಗಳು ಶ್ವಾಸಕೋಶಗಳಿಗೆ ಅಪಾಯಕರ. ಮೊದಲೇ ಶ್ವಾಸಕೋಶದ ಕ್ಷಮತೆಯಲ್ಲಿ ವ್ಯತ್ಯಯವಿರುವಂತಹ, ಅಂದರೆ ಅಸ್ತಮಾ, ಅಲರ್ಜಿಯಂತಹ ಸಮಸ್ಯೆಗಳಿಂದ ಬಳಲುವವರು ಇಲ್ಲಿ ಕೆಲಸ ಮಾಡುವುದು ಸುರಕ್ಷಿತವಲ್ಲ. ಅಂತಹವರಿಗೆ ಬದಲಿ ನೌಕರಿಯ ವ್ಯವಸ್ಥೆ ಮಾಡುವುದು ಉತ್ತಮ. ಯಾವುದೇ ನೌಕರಿಯು ಆರೋಗ್ಯದ ಕಾರಣದಿಂದ ನಮಗೆ ಹೊಂದುವುದೇ ಇಲ್ಲ ಎಂದಾದಲ್ಲಿ ಅದನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ, ಆರೋಗ್ಯವೇ ಹದಗೆಟ್ಟಾಗ ಎಲ್ಲಿಯ ಉದ್ಯೋಗ, ಎಲ್ಲಿಯ ಸಂಬಳ?
ನಿಜ, ಆರೋಗ್ಯವೇ ನಿಜವಾದ ಸಂಪತ್ತು. ಹಾಗಿದ್ದ ಮೇಲೆ, ಉದ್ಯೋಗ ಸ್ಥಳಗಳಲ್ಲಿ ನೌಕರರ ಆರೋಗ್ಯವನ್ನು ಕಾಪಾಡುವಂತಹ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಖಂಡಿತಾ ಇದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲೆಂದೇ ಪ್ರತಿವರ್ಷ ಏಪ್ರಿಲ್ 28ರಂದು ‘ವಿಶ್ವ ಉದ್ಯೋಗ ಸ್ಥಳದಲ್ಲಿನ ಸುರಕ್ಷತೆ ಮತ್ತು ಆರೋಗ್ಯದ ದಿನ’ ಆಚರಿಸಲಾಗುತ್ತದೆ.
ಮುಂದುವರಿದ ದೇಶಗಳು ಉದ್ಯೋಗ ಸ್ಥಳಗಳಲ್ಲಿ ನೌಕರರ ಸುರಕ್ಷತೆಗಾಗಿ ಆಧುನಿಕ ಸೂಕ್ಷ್ಮಾತಿಸೂಕ್ಷ್ಮ ತಂತ್ರಜ್ಞಾನದ ಬಳಕೆಗೆ ಒತ್ತು ನೀಡುತ್ತಿವೆ. ತಂತ್ರಜ್ಞಾನದ ಜೊತೆ ಜೊತೆಯಲ್ಲಿಯೇ ಈ ಸರಳ ಉಪಕ್ರಮಗಳೂ ನೌಕರರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಪೂರಕವಾಗುತ್ತವೆ ಎಂಬುದನ್ನು ಖಂಡಿತಾ ಅಲ್ಲಗಳೆಯಲಾಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.