ದೇಶದಲ್ಲಿ ಪ್ರತಿವರ್ಷ ನವೆಂಬರ್ 14ರಿಂದ 20ರವರೆಗೆ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ’ ಆಚರಿಸಲಾಗು
ತ್ತದೆ. ಈ ಆಚರಣೆಯ ಅಂಗವಾಗಿ ಗ್ರಂಥಾಲಯಗಳಲ್ಲಿ ಪುಸ್ತಕ ಪ್ರದರ್ಶನ, ವಿಶೇಷ ಉಪನ್ಯಾಸದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಗ್ರಂಥಾಲಯ ಮತ್ತು ಪುಸ್ತಕಗಳ ಮಹತ್ವವನ್ನು ಓದುಗರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತದೆ.
ದುರದೃಷ್ಟವೆಂದರೆ, ಗ್ರಂಥಾಲಯ ಸಪ್ತಾಹದ ಆಚರಣೆಯು ಸಾರ್ವಜನಿಕ ಗ್ರಂಥಾಲಯಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಶೈಕ್ಷಣಿಕ ಗ್ರಂಥಾಲಯಗಳೆಂದು ಕರೆಯಲಾಗುವ ಶಾಲೆ, ಕಾಲೇಜು ಮತ್ತು ವಿಶ್ವ
ವಿದ್ಯಾಲಯ ಗ್ರಂಥಾಲಯಗಳಲ್ಲಿ ಈ ಆಚರಣೆ ವಿರಳ. ಈ ಗ್ರಂಥಾಲಯಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವ್ಯಾಪಕವಾಗಿ ಉಪಯೋಗಿಸುತ್ತಿದ್ದಾರೆ ಎಂದೇನಿಲ್ಲ. ಇಲ್ಲಿ ಓದುಗರ ಕೊರತೆ ಬಹುಮುಖ್ಯ ಸಮಸ್ಯೆ.
ಬಹುತೇಕ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗ್ರಂಥಾಲಯಗಳೇ ಇಲ್ಲ. ಕಟ್ಟಡ, ಪೀಠೋಪಕರಣಮತ್ತು ಶಿಕ್ಷಕರ ಕೊರತೆಯೇ ಬಹಳಷ್ಟಿರುವಾಗ ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ಸೌಲಭ್ಯವನ್ನು ನಿರೀಕ್ಷಿಸುವುದು ದೂರದ ಮಾತು. ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಗ್ರಂಥಾಲಯಗಳು ಇವೆಯಾದರೂ ಅವುಗಳನ್ನು ಕಾಟಾಚಾರಕ್ಕೆ ಎನ್ನುವಂತೆ ಸ್ಥಾಪಿಸಲಾಗಿದೆ. ಒಂದೆರಡು ಅಲ್ಮೆರಾಗಳಲ್ಲಿ ಪುಸ್ತಕಗಳನ್ನಿಟ್ಟು, ಅದನ್ನೇ ಗ್ರಂಥಾಲಯ ಎಂದು ತೋರಿಸಲಾಗುತ್ತದೆ.
ಮಕ್ಕಳಲ್ಲಿ ಪುಸ್ತಕಗಳ ಓದಿನ ಅಭಿರುಚಿಯನ್ನು ಮೂಡಿಸಲು ಶಾಲಾ ಹಂತದಲ್ಲೇ ಗ್ರಂಥಾಲಯ
ಗಳನ್ನು ಸ್ಥಾಪಿಸುವುದು ಅಗತ್ಯ. ಪಠ್ಯಪುಸ್ತಕಗಳ ಜೊತೆಗೆ ‘ಮಕ್ಕಳ ಸಾಹಿತ್ಯ’ ಕೃತಿಗಳನ್ನು ಸಂಗ್ರಹಿಸಿಟ್ಟು ಓದಲು ಕೊಡಬೇಕು. ತರಗತಿಯ ವೇಳಾಪಟ್ಟಿಯಲ್ಲಿ ಗ್ರಂಥಾಲಯದ ಬಳಕೆಗೆ ಜಾಗವಿದೆಯಾದರೂ ಆ ಅವಧಿಯನ್ನು ಶಿಕ್ಷಕರು ಪಾಠ ಮಾಡಲು ಬಳಸಿ
ಕೊಳ್ಳುವುದೇ ಹೆಚ್ಚು.
ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್) ಪ್ರಯತ್ನದಿಂದಾಗಿ ಹಿಂದಿನ ಒಂದು ದಶಕದಿಂದ ಪದವಿ ಕಾಲೇಜುಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರತ್ಯೇಕ ಕಟ್ಟಡಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ, ಪುಸ್ತಕಗಳು, ಪೀಠೋಪಕರಣ ಖರೀದಿಯಂತಹ ಚಟುವಟಿಕೆಗಳು ಮುನ್ನೆಲೆಗೆ ಬಂದಿವೆ. ಆದರೆ ಗ್ರಂಥಾಲಯಗಳ ಬಳಕೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ.
ಸಾಮಾನ್ಯವಾಗಿ ಕಾಲೇಜುಗಳಲ್ಲಿ ಗ್ರಂಥಾಲಯದ ಬಳಕೆ ಮತ್ತು ಚಟುವಟಿಕೆಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಸೃಷ್ಟಿಸಿ, ಮಾನ್ಯತಾ ಮಂಡಳಿ ಎದುರು ಪ್ರಸ್ತುತಪಡಿಸಲಾಗುತ್ತಿದೆ. ಒಟ್ಟಾರೆ, ಕಾಲೇಜುಗಳಲ್ಲಿ ಗ್ರಂಥಾಲಯದ ಉಪಯೋಗವು ದಾಖಲೆಗಳಲ್ಲಿ ಗೋಚರಿಸುತ್ತಿದೆಯೇ ವಿನಾ ವಾಸ್ತವ
ದಲ್ಲಿ ಕಾಣುತ್ತಿಲ್ಲ. ಈ ಮಾತನ್ನು ವಿಶ್ವವಿದ್ಯಾಲಯ ಗ್ರಂಥಾಲಯಗಳಿಗೂ ಅನ್ವಯಿಸಿ ಹೇಳಬಹುದು.
ಕಾಲೇಜೊಂದಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿನ ಗ್ರಂಥಾಲಯವು ಓದುಗರಿಂದ ತುಂಬಿದ್ದನ್ನು ನೋಡಿ ಖುಷಿಯಾಯಿತು. ನೂರಾರು ಓದುಗರಿದ್ದರೂ ಬೆರಳೆಣಿಕೆಯಷ್ಟು ಪುಸ್ತಕಗಳು ಮಾತ್ರ
ವಿತರಣೆಯಾಗಿದ್ದದ್ದು ಅಲ್ಲಿನ ಸಿಬ್ಬಂದಿಯನ್ನು ಮಾತನಾಡಿಸಿದಾಗ ತಿಳಿಯಿತು. ತಮ್ಮಲ್ಲಿರುವ ಗೈಡ್ ಮಾದರಿಯ ಪುಸ್ತಕ ಅಥವಾ ಮೊಬೈಲ್‌ನಂತಹ ಗ್ಯಾಜೆಟ್‍ಗಳನ್ನು ಹಿಡಿದು ಓದುವವರ ಸಂಖ್ಯೆ ಹೆಚ್ಚಾಗಿತ್ತು. ವಿಶೇಷವಾಗಿ, ಸ್ಪರ್ಧಾತ್ಮಕ ಮತ್ತು ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಾಗಿ ಓದುತ್ತಿದ್ದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಓದುಗರ ಈ ಅಗತ್ಯವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಗ್ರಂಥಾಲಯಗಳನ್ನು ಸ್ಥಾಪಿಸ
ಲಾಗುತ್ತಿದೆ. ಸಭಾಂಗಣದಂತಹ ದೊಡ್ಡ ಕೋಣೆಯಲ್ಲಿ ಮೇಜು ಮತ್ತು ಕುರ್ಚಿಗಳನ್ನು ವ್ಯವಸ್ಥೆಗೊಳಿಸಿ, ನಿರ್ದಿಷ್ಟ ಶುಲ್ಕ ಪಡೆದು, ಓದಲು ಅನುಕೂಲವಾದ ವಾತಾವರಣ ಸೃಷ್ಟಿಸಲಾಗುತ್ತಿದೆ. ಪುಸ್ತಕದಂತಹ ಓದಿನ ಸಾಮಗ್ರಿ
ಅಲ್ಲಿರುವುದಿಲ್ಲ!
ಶಿಕ್ಷಕರಲ್ಲೇ ಓದಿನ ಅಭಿರುಚಿಯ ಕೊರತೆ ಇದೆ. ಅಧ್ಯಾಪನಕ್ಕೆ ಅಧ್ಯಯನವೇ ಬಂಡವಾಳ ಎನ್ನುವ ಮಾತನ್ನು ಶಿಕ್ಷಕರು ಮರೆತಂತಿದೆ. ಶಿಕ್ಷಕ ಹುದ್ದೆಗೆ ಹೊಸದಾಗಿ ನೇಮಕಗೊಂಡ ಶಿಷ್ಯನು ಮಾರ್ಗ
ದರ್ಶನಕ್ಕಾಗಿ ಮನೆಗೆ ಬಂದ ಸಂದರ್ಭದಲ್ಲಿ ಜಿ.ಪಿ.ರಾಜರತ್ನಂ ಹೀಗೆ ಹೇಳಿದ್ದರಂತೆ: ‘ಪ್ರತಿದಿನ ತರಗತಿಗೆ ಪಾಠ ಮಾಡಲು ಹೋಗುವ ಪೂರ್ವದಲ್ಲಿ ಪುಸ್ತಕಗಳನ್ನು ಓದಿ, ಒಂದು ಗಂಟೆಯ ಅವಧಿಯ ಪ್ರವಚನಕ್ಕೆ ಎರಡು ಗಂಟೆಗಳಿ
ಗಾಗುವಷ್ಟು ಟಿಪ್ಪಣಿ ಮಾಡಿಕೊಂಡು ಹೋಗು. ಪಾಠ ಮುಗಿಸಿ ತರಗತಿಯಿಂದ ಹೊರಬಂದ ತಕ್ಷಣ ಮಾಡಿಟ್ಟಿದ್ದ ಟಿಪ್ಪಣಿಯನ್ನು ಹರಿದುಹಾಕು. ಇಲ್ಲದಿದ್ದರೆ ಅದೇ ಟಿಪ್ಪಣಿಯನ್ನು ಪ್ರತಿವರ್ಷ ಬಳಸುವ ಮತ್ತು ಪುಸ್ತಕಗಳನ್ನು ಓದದೇ ಇರುವ ಸಂಪ್ರದಾಯವನ್ನು ನೀನೇ ಸೃಷ್ಟಿಸಿಕೊಂಡಂತೆ ಆಗುತ್ತದೆ’. ರಾಜರತ್ನಂ ಅವರು ಹೇಳಿದ ಈ ಮಾತು ಇಂದಿನ ಕಾಲಕ್ಕೂ ಅನ್ವಯ.
ಗ್ರಂಥಾಲಯಗಳು ಓದುಗರ ಕೊರತೆ ಎದುರಿಸುತ್ತಿರುವ ಈ ಕಾಲದಲ್ಲಿ ಗ್ರಂಥಪಾಲಕ ಹುದ್ದೆ ಹೊರಳು ಹಾದಿಯಲ್ಲಿದೆ. ನಿವೃತ್ತಿಯ ಅಂಚಿನಲ್ಲಿರುವ ಗ್ರಂಥಪಾಲಕರು ಹೊಸ ಪರಿಸರಕ್ಕೆ ಹೊಂದಿಕೊಳ್ಳು
ತ್ತಿಲ್ಲ. ಯುವ ಗ್ರಂಥಪಾಲಕರಿಗೆ ವೃತ್ತಿಯು ಅಸ್ತಿತ್ವದ ಪ್ರಶ್ನೆಯಾಗಿದೆ. ಅದೆಷ್ಟೋ ಸರ್ಕಾರಿ ಕಾಲೇಜುಗಳಲ್ಲಿ ಗ್ರಂಥಪಾಲಕರನ್ನು ಆಡಳಿತಕ್ಕೆ ಸಂಬಂಧಿಸಿದ ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ. ಈ ಎಲ್ಲ ವೈರುಧ್ಯಗಳಿಂದ ಗ್ರಂಥಾಲಯ ಮತ್ತು ಗ್ರಂಥಪಾಲಕ ವೃತ್ತಿಯನ್ನು ಹೊರತರಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.