ನಟಿ, ನಿರೂಪಕಿ ಅಪರ್ಣಾ ಅವರ ನಿಧನದ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಸಮುದಾಯದ
ಅಭಿಮಾನಿಯೊಬ್ಬರು, ಈ ಸಾವು ತಮ್ಮ ಸಮುದಾಯಕ್ಕಾದ ತುಂಬಲಾರದ ನಷ್ಟ ಎಂದು ವಾಟ್ಸ್‌ಆ್ಯಪ್‍ನಲ್ಲಿ ಶೋಕ ಸಂದೇಶವನ್ನು ಹಂಚಿಕೊಂಡಿದ್ದು ಓದಿ ದಿಗ್ಭ್ರಮೆಯಾಯಿತು. ತಮ್ಮ ನಿರೂಪಣೆಯಿಂದ ಕನ್ನಡ ಭಾಷೆಗೆ ಘನತೆ ಮತ್ತು ಹಿರಿಮೆಯನ್ನು ತಂದುಕೊಟ್ಟವರು ಅಪರ್ಣಾ. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಾರ್ವಜನಿಕರು ಅವರ ಸಾವಿಗೆ ಕಂಬನಿ ಮಿಡಿದರು. ಹೀಗಿರುವಾಗ, ತಮ್ಮ ಸಮುದಾಯಕ್ಕಾದ ನಷ್ಟ ಎಂದು ಕಲಾವಿದೆಯನ್ನು ಒಂದು ಗುಂಪಿಗೆ ಸೀಮಿತಗೊಳಿಸುವುದು ಸರಿಯಲ್ಲ.
ಕಲಾವಿದರಿಗೆ ಜಾತಿ ಮತ್ತು ಧರ್ಮದ ಹಂಗಿಲ್ಲ ಎಂದು ರಾಜ್‌ಕುಮಾರ್ ಆದಿಯಾಗಿ ಎಲ್ಲ ಕಲಾವಿದರು ತಮ್ಮ ಅಭಿನಯದ ಮೂಲಕ ಕಾಲಕಾಲಕ್ಕೆ
ಸಾಬೀತುಪಡಿಸಿದ್ದಾರೆ. ಜಾತಿ ಎನ್ನುವ ಸೀಮಿತ ವಲಯವನ್ನು ದಾಟಿದ್ದರಿಂದಲೇ ರಾಜ್‌ಕುಮಾರ್ ಅವರಿಗೆ ಕನಕದಾಸ, ಕುಂಬಾರ, ಕಬೀರ, ತುಕಾರಾಮ, ರಾಘವೇಂದ್ರಸ್ವಾಮಿ, ರಾಮ, ಕೃಷ್ಣ, ಕಾಳಿದಾಸನಂತಹ ಎಲ್ಲ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಲು ಸಾಧ್ಯವಾಯಿತು. ಪ್ರೇಕ್ಷಕವರ್ಗ ಕೂಡ ಯಾವ ಸಂಕುಚಿತ ಭಾವನೆಗಳೂ ಇಲ್ಲದೆ ರಾಜ್‌ಕುಮಾರ್ ಅವರನ್ನು ಇಂತಹ ಪಾತ್ರಗಳಲ್ಲಿ ನೋಡಿ ಆನಂದಿಸಿತು. ಅವರನ್ನು ಯಾವುದೇ ಒಂದು ಸಮುದಾಯಕ್ಕೆ ಕಟ್ಟಿಹಾಕದೆ ಇಡೀ ನಾಡಿನ ಸಾಂಸ್ಕೃತಿಕ ನಾಯಕನೆನ್ನುವ ಗೌರವದಿಂದ ನೋಡಲಾಯಿತು.
ಮನುಷ್ಯ ಸುಶಿಕ್ಷಿತನಾದಷ್ಟೂ ಅವನ ಮನಸ್ಸು ಮತ್ತು ಭಾವನೆಗಳು ಸಂಕುಚಿತಗೊಳ್ಳುತ್ತಿವೆ. ಜಾತಿ, ಧರ್ಮ ಮತ್ತು ವರ್ಗ ಪ್ರೇಮ ಗಾಢವಾಗುತ್ತಿದೆ. ನನ್ನ ಸ್ನೇಹಿತ ಶಿಕ್ಷಕನಾಗಿರುವ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಹಿರಿಯರೊಬ್ಬರು, ತಮ್ಮ ಜಾತಿಗೆ ಸೇರಿದ ವಿದ್ಯಾರ್ಥಿಗಳನ್ನು ಮಾತನಾಡಿಸಿ, ವಿದ್ಯಾಭ್ಯಾಸದ ಪ್ರಗತಿಯ ಬಗ್ಗೆ ವಿಚಾರಿಸಿದರಂತೆ. ಸಮುದಾಯದ ಮುಖಂಡರಿಂದ ಹಣಕಾಸಿನ ನೆರವು ಒದಗಿಸುವ ಆಶ್ವಾಸನೆ ನೀಡಿ, ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಎಂದು ಆಶೀರ್ವದಿಸಿದರಂತೆ. ಹೀಗೆ ಹೇಳುವಾಗ, ಆ ಶಾಲೆಯಲ್ಲಿ ಬೇರೆ ಜಾತಿ ಮತ್ತು ಸಮುದಾಯಗಳ ವಿದ್ಯಾರ್ಥಿಗಳು ಸಹ ಓದುತ್ತಿದ್ದಾರೆ ಎಂಬ ಕಿಂಚಿತ್ ಪ್ರಜ್ಞೆ ಕೂಡ ಅವರಲ್ಲಿ ಇಲ್ಲದಿದ್ದುದು ಆಶ್ಚರ್ಯದ ಸಂಗತಿ. ‘ಮನುಷ್ಯಜಾತಿ ತಾನೊಂದೆ ವಲಂ’ ಎಂದು ತರಗತಿಗಳಲ್ಲಿ ಬೋಧಿಸಿ, ಜಾತಿಯ ಸಂಕೋಲೆಯನ್ನು ಹರಿದೊಗೆಯಬೇಕೆಂದು ಯಾವ ಮಕ್ಕಳಿಗೆ ಪಾಠ ಮಾಡಿದ್ದೆವೋ ಅದೇ ಮಕ್ಕಳೆದುರು ಮುಜುಗರಕ್ಕೆ ಒಳಗಾಗಬೇಕಾಯಿತು ಎಂದು ಸ್ನೇಹಿತ ನೋವು ತೋಡಿಕೊಂಡ.
ಪ್ರತಿ ನಗರದಲ್ಲಿ ಸಮುದಾಯಕ್ಕೊಂದು ಮಠ, ದೇವಸ್ಥಾನ, ಸ್ಮಶಾನ ಭೂಮಿ ನಿರ್ಮಾಣವಾಗುತ್ತಿವೆ. ಸಭಾಭವನ ಹಾಗೂ ಕಲ್ಯಾಣಮಂಟಪಗಳು ಕೂಡ ಸಮುದಾಯದ ಹೆಸರಿನಲ್ಲಿ ಸ್ಥಾಪನೆಯಾಗುತ್ತಿವೆ. ಕಲ್ಯಾಣ ಕರ್ನಾಟಕದಲ್ಲಿ ಹೋಟೆಲ್ ಮತ್ತು ಖಾನಾವಳಿಗಳ ಹೆಸರುಗಳಲ್ಲಿ ಜಾತಿಸೂಚಕ ಪದಗಳನ್ನು ಕಾಣಬಹುದು. ಕಿತ್ತೂರು ಕರ್ನಾಟಕ ಭಾಗದಲ್ಲಿ ಅಪರಿಚಿತರು ಭೇಟಿಯಾದಾಗ ಅವರ ಹೆಸರಿನ ಬದಲು ಜಾತಿಸೂಚಕವಾದ ಮನೆತನದ ಹೆಸರನ್ನು ಕೇಳುವುದು ಇಂದಿಗೂ ರೂಢಿಯಲ್ಲಿದೆ. ಮನೆತನದ ಹೆಸರು ಜಾತಿಸೂಚಕವೆಂದು ತಮ್ಮ ಶಿಷ್ಯರನ್ನು ಅವರ ಊರಿನ ಹೆಸರಿನಿಂದ ಕರೆಯುತ್ತಿದ್ದ ಪುಟ್ಟರಾಜ ಗವಾಯಿಗಳ ನಡೆ ಸಮಾಜಕ್ಕೆ ಮಾದರಿಯಾಗಬೇಕಿದೆ.
ಪುರಸ್ಕಾರ, ಗೌರವ ಕೂಡ ಜಾತಿಪ್ರೇಮದ ಕಬಂಧಬಾಹುಗಳಲ್ಲಿ ಸಿಲುಕಿ ನರಳುತ್ತಿವೆ. ಸಾಧಕರನ್ನು ಗುರುತಿಸಿ ಗೌರವಿಸುವಲ್ಲಿ ಸ್ವಜಾತಿಪ್ರೇಮ ಮುನ್ನೆಲೆಗೆ ಬರುತ್ತಿದೆ. ಪ್ರತಿ ಸಮುದಾಯ ತನ್ನದೇ ಸಮುದಾಯದ ಸಾಧಕರನ್ನು ಮಾತ್ರ ಗೌರವಿಸುವ ಪರಿಪಾಟ ಚಾಲನೆಗೆ ಬಂದಿದೆ. ಒಟ್ಟಾರೆ, ಮನುಷ್ಯ ನಾಗರಿಕನಾದಂತೆ ಅವನೊಂದು ದ್ವೀಪವಾಗುತ್ತಿದ್ದಾನೆ. ಸಾವಿನಂತಹ ಸೂತಕಕ್ಕೂ ಈಗ ಜಾತಿ, ಧರ್ಮ, ಭಾಷೆಯ ಭೂತ ಬೆನ್ನುಹತ್ತಿದೆ.
ಯಶವಂತ ಚಿತ್ತಾಲರ ಕಥೆಯಲ್ಲಿ ಪಾತ್ರವೊಂದು ಹೀಗೆ ಪ್ರಶ್ನಿಸುತ್ತದೆ- ‘ಸತ್ತವಳು ಯಾವ ಜಾತಿಯವಳಾಗಿ, ಕೊಂದವರು ಯಾವ ಜಾತಿಯವರಾದರೆ, ಇಲ್ಲ ಧರ್ಮದವರಾದರೆ, ಇಲ್ಲ ವರ್ಗದವರಾದರೆ ಈ ‘ಸಾವು’ ಮಹತ್ವಪೂರ್ಣವಾದೀತು?’ ಈ ಮಾತು ಮನುಷ್ಯ ಸಂವೇದನೆ ಕಳೆದುಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾನೆ ಎನ್ನುವುದಕ್ಕೊಂದು ದೃಷ್ಟಾಂತ.
ಮನುಷ್ಯರ ಸಂಕುಚಿತ ವರ್ತನೆ ನೋಡಿದಾಗಲೆಲ್ಲ ನನಗೆ ನನ್ನೂರಿನ ಬಾಲ್ಯದ ದಿನಗಳು ನೆನಪಾಗುತ್ತವೆ. ದೀಪಾವಳಿ, ಹೋಳಿಹುಣ್ಣಿಮೆ, ಕಾರಹುಣ್ಣಿಮೆ, ಮೊಹರಂ, ರಂಜಾನ್, ಸಂಕ್ರಾಂತಿ ಹಬ್ಬಗಳಲ್ಲಿ ಜಾತಿ, ಧರ್ಮದ ಹಂಗಿಲ್ಲದಂತೆ ಊರಿನವರೆಲ್ಲ ಅತ್ಯಂತ ಉಮೇದು ಮತ್ತು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ದೀಪಾವಳಿ ಹಬ್ಬದಲ್ಲಿ ಎಲ್ಲರ ಮನೆಗಳಲ್ಲೂ ಪಟಾಕಿಗಳು ಸಿಡಿಯುತ್ತಿದ್ದವು. ಹೋಳಿಹುಣ್ಣಿಮೆಯಂದು ಪರಸ್ಪರ ಓಕುಳಿ ಎರಚಿ ಸಂಭ್ರಮಿಸುತ್ತಿದ್ದರು. ರಂಜಾನ್ ಹಬ್ಬದಂದು ಸೇವಿಸಿದ ಹಾಲಿನ ಖಾದ್ಯದ ಘಮಲು ಇದೇ ಈಗ ಆಘ್ರಾಣಿಸಿದಂತಿದೆ. ಯಾರದಾದರೂ ಮನೆಯಲ್ಲಿ ಸಾವು ಸಂಭವಿಸಿದರೆ ಇಡೀ ಊರಿಗೆ ಸೂತಕದ ಛಾಯೆ ಆವರಿಸುತ್ತಿತ್ತು. ಆ ಮನೆಯವರ ದುಃಖದಲ್ಲಿ ಎಲ್ಲ ಜಾತಿ-ವರ್ಗ-ಸಮುದಾಯದ ಜನ
ಭಾಗಿಯಾಗುತ್ತಿದ್ದರು.
ಸ್ವಜಾತಿ, ಸ್ವಧರ್ಮದ ಕುರುಡು ಮೋಹಕ್ಕೆ ಒಳಗಾದ ಮನುಷ್ಯ ಬೇರೆ ಜಾತಿ, ಧರ್ಮಗಳ ನಿಂದನೆಗೆ ವಾಟ್ಸ್‌ಆ್ಯಪ್, ಫೇಸ್‍ಬುಕ್ಕೆಂಬ ಹತಾರಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾನೆ. ಇಂತಹ ಅಸಹನೀಯ ವಾತಾವರಣದಿಂದ ಹೊರಬರಲು ಹಿಂದಿನ ಸೌಹಾರ್ದದ ದಿನಗಳು ಮರುಕಳಿಸ
ಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.