ADVERTISEMENT

ಸಂಗತ: ಕೃತಕ ಬುದ್ಧಿಮತ್ತೆಯೂ ಕರ್ಣನ ಬ್ರಹ್ಮಾಸ್ತ್ರವೂ

ಎಷ್ಟೇ ಅತ್ಯಾಧುನಿಕ ತಂತ್ರಜ್ಞಾನವಾದರೂ ನಮ್ಮ ಅಗತ್ಯಕ್ಕೆ ತಕ್ಕಂತೆ ಅದನ್ನು ಬಳಸಿಕೊಳ್ಳುವ ಸಾಮರ್ಥ್ಯ ನಮಗೆ ಇರಲೇಬೇಕಾಗುತ್ತದೆ

ಶಿವಲಿಂಗಸ್ವಾಮಿ ಎಚ್.ಕೆ.
Published 31 ಆಗಸ್ಟ್ 2023, 23:40 IST
Last Updated 31 ಆಗಸ್ಟ್ 2023, 23:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೃತಕ ಬುದ್ಧಿಮತ್ತೆಯ ಆಗಮನದಿಂದ ಉಂಟಾಗಿರುವ ತಲ್ಲಣಗಳು ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ಉಂಟುಮಾಡಿದ ತಲ್ಲಣಗಳನ್ನು ನೆನಪಿಸುವಂತಿವೆ. ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ, ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂಪನ್ಮೂಲಗಳನ್ನು ಸದೃಢಗೊಳಿಸುವ ದಿಸೆಯಲ್ಲಿ ಸಮರೋಪಾದಿಯಲ್ಲಿ ಯಂತ್ರಗಳ ನಿರ್ಮಾಣ ಪ್ರಾರಂಭವಾಯಿತು. ಈ ಕ್ರಾಂತಿಯ ಮೊದಲ ಹಂತದಲ್ಲಿಯೇ ಜನರಲ್ಲಿ ಮೂಡಿದ ಆತಂಕಗಳೆಂದರೆ, ಭವಿಷ್ಯದಲ್ಲಿ ಮಾನವ ಸಂಪನ್ಮೂಲ ಎಂಬುದಕ್ಕೆ ಅಸ್ತಿತ್ವವೇ ಇರುವುದಿಲ್ಲ, ಇನ್ನುಮುಂದೆ ಯಂತ್ರಗಳು ನಮ್ಮ ಜೀವನವನ್ನು ನಿಯಂತ್ರಿಸುತ್ತವೆ, ರೈತಾಪಿ ಬದುಕಿಗೆ ಎಲ್ಲರೂ ಬೆನ್ನು ತೋರಿಸುತ್ತಾರೆ...

ಹಾಗೆಯೇ, ಕೃತಕ ಬುದ್ಧಿಮತ್ತೆಯ ಕುರಿತಾಗಿ ಎಲ್ಲೆಡೆ ವ್ಯಕ್ತವಾಗಿರುವ ಆತಂಕವೆಂದರೆ, ಪ್ರಸ್ತುತ ಜಗತ್ತು ಸಂಪೂರ್ಣ ಮಾನವೋತ್ತರವಾಗಿ ರೂಪಾಂತರಗೊಂಡಿದೆ ಎಂಬುದು. ಇದಕ್ಕೆ ಪೂರಕವಾಗಿ ಕೃತಕ ಬುದ್ಧಿಮತ್ತೆಯು ಯಾವುದೇ ಕೆಲಸವನ್ನು ಅಭೂತಪೂರ್ವ ಪ್ರಮಾಣದಲ್ಲಿ ಮತ್ತು ಮನುಷ್ಯರ ಕಲ್ಪನೆಗೂ ನಿಲುಕದ ವೇಗದಲ್ಲಿ ಮಾಡುವುದು ಎಲ್ಲರಲ್ಲಿ ಸೋಜಿಗ ಹಾಗೂ ಅದಕ್ಕಿಂತ ಹೆಚ್ಚಾಗಿ ಆತಂಕವನ್ನು ಉಂಟು ಮಾಡಿದೆ. ತಂತ್ರಜ್ಞಾನ ಅಥವಾ ಕೃತಕ ಬುದ್ಧಿಮತ್ತೆಯು ಮನುಷ್ಯರು ಮಾಡುವ ಕೆಲಸ ಮಾಡುತ್ತದೆ, ನಿಜ. ಆದರೆ, ಅದನ್ನು ಉಪಯೋಗಿಸುವ ಬಗೆ ತಿಳಿದಿದ್ದರೆ ಅದರ ಪ್ರಭಾವವನ್ನು ನಾವು ಮೀರಬಹುದು ಮತ್ತು ಅದು ನಮ್ಮ ನಿಯಂತ್ರಣದಲ್ಲಿ ಇರುತ್ತದೆ.

ADVERTISEMENT

ಇದಕ್ಕೆ ಸಮಾನವಾದ ತಲ್ಲಣಗಳನ್ನು ಕೋವಿಡ್ ವೈರಸ್ ಕೂಡ ಸೃಷ್ಟಿಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕೋವಿಡ್ ವೈರಸ್ಸಿನ ದೆಸೆಯಿಂದ ಇಡೀ ಜಗತ್ತು ತನ್ನ ನಿತ್ಯ ಬದುಕು ಮತ್ತು ವೃತ್ತಿ ಬದುಕಿನ ದಿಕ್ಕುಗಳನ್ನೇ ಬದಲಿಸಿ ವರ್ಚುವಲ್‌ ಪ್ರಪಂಚದ ಕಡೆ ಮುಖ ಮಾಡಿದ್ದು, ಮನುಷ್ಯರ ಹೊಂದಿಕೊಳ್ಳುವ ಸ್ವಭಾವವನ್ನು ಬಿಂಬಿಸುತ್ತದೆ. ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಪ್ರತಿ ಯಂತ್ರದ ಆಗಮನದಿಂದ ನೂರಾರು ಜನರಿಗೆ ಬದಲಿ ವ್ಯವಸ್ಥೆಯಾಯಿತು. ಹಾಗೆಯೇ ಕೋವಿಡ್ ಸಂದರ್ಭದಲ್ಲಿ ಇಡೀ ಭೌತಿಕ ಜಗತ್ತು ಅವಾಸ್ತವಿಕ ಜಗತ್ತಾಗಿ ಪರಿಣಮಿಸುವ ಪ್ರಕ್ರಿಯೆಯಲ್ಲಿ ಪುನಃ ನಿರುದ್ಯೋಗ ಸೃಷ್ಟಿಯ ಆತಂಕ ಜನರನ್ನು ಕಾಡಿತ್ತು. ಆದರೆ ಮಾನವ ಕುಲವು ಆ ಆತಂಕವನ್ನು ಮೆಟ್ಟಿ ನಿಲ್ಲುವ ದಿಟ್ಟತನ ತೋರಲು ಮೂಲ ಕಾರಣ, ಮಾನವನ ವಿಕಾಸದ ಮೂಲ ಗುಣವಾದ ಹೊಂದಿಕೊಳ್ಳುವಿಕೆ.

ಕೃತಕ ಬುದ್ಧಿಮತ್ತೆಯು ಬರೀ ಒಂದು ಸಾಧನ ಎಂಬ ವಿಚಾರವನ್ನು ನಾವು ಮರೆಯಬಾರದು. ಯಾವುದೇ ವ್ಯಕ್ತಿಯು ಎಷ್ಟೇ ಕಸುಬುದಾರನಾಗಿದ್ದರೂ ಆತ ಸಂಪೂರ್ಣ ಸ್ವಾವಲಂಬಿಯಾಗುವುದು ಅಥವಾ ಸಬಲೀಕರಣಗೊಳ್ಳುವುದು ಆತನ ಒಡೆತನದಲ್ಲಿ ಉತ್ತಮ ಸಾಧನಗಳಿದ್ದಾಗ ಮಾತ್ರ. ತನಗೆ ಮತ್ತು ತನ್ನ ಸಹೋದರರಿಗೆ ಕೌರವರಿಂದ ಅನ್ಯಾಯವಾಗಿದೆ ಎಂಬ ಕಾರಣದಿಂದ ಅರ್ಜುನನು ಈಶ್ವರನಿಂದ ಪಾಶುಪತಾಸ್ತ್ರ ಪಡೆಯುವುದು ಸಹ ಇದೇ ಕಾರಣಕ್ಕಾಗಿ. ಅರ್ಜುನನಿಗೆ ಎದುರಾಳಿಯಾಗಿ ಸೆಣಸಾಡುವ ಕರ್ಣ ಕೂಡ ಬ್ರಹ್ಮಾಸ್ತ್ರದ ಒಡೆತನ ಹೊಂದಿರುತ್ತಾನೆ.

ಇಬ್ಬರೂ ಜಗದ್ವಿಖ್ಯಾತ ಬಿಲ್ಲುಗಾರರಾಗಿದ್ದು, ಅಭೂತಪೂರ್ವ ಅಸ್ತ್ರಗಳನ್ನು ತಮ್ಮ ಬತ್ತಳಿಕೆಯಲ್ಲಿ ಹೊಂದಿರುತ್ತಾರೆ. ಆದರೂ ಕರ್ಣನಿಗೆ ಸೋಲಾಗುತ್ತದೆ. ಇದಕ್ಕೆ ಮೂಲ ಕಾರಣ, ಯುದ್ಧದ ಸಮಯದಲ್ಲಿ ತನ್ನ ಅತ್ಯುನ್ನತ ಅಸ್ತ್ರದ ಬಳಕೆಗೆ ಬೇಕಿರುವ ಪ್ರಮುಖವಾದ ಮಂತ್ರವನ್ನೇ ಕರ್ಣ ಮರೆಯುತ್ತಾನೆ. ಕಡೆಗೆ ಅವನ ಬತ್ತಳಿಕೆಯಲ್ಲಿ ಇರುವ ಅಸ್ತ್ರವು ಅನುಪಯುಕ್ತವಾಗುತ್ತದೆ. ಅಂದರೆ, ಸಾಧನ ಇದ್ದರಷ್ಟೇ ಸಾಲದು, ಅದರ ಉಪಯೋಗವನ್ನು ಸಕಾಲದಲ್ಲಿ ಪಡೆದುಕೊಳ್ಳಲು ಅದರ ಬಳಕೆ ತಿಳಿದಿರಬೇಕು.

ಇದಕ್ಕೆ ‘ರೇಸ್‌’ ಎಂಬ ಬಾಲಿವುಡ್ ಚಲನಚಿತ್ರವನ್ನು ಉದಾಹರಣೆಯಾಗಿ ಕೊಡಬಹುದು. ಸಹೋದರರು ಜಿದ್ದಿಗಾಗಿ ಕಾರ್ ರೇಸ್ ಮಾಡುವ ಸಂದರ್ಭದಲ್ಲಿ, ಅಣ್ಣನು ತಮ್ಮನಿಗೆ ಹೇಳುವ ಮಾತು ಬಹಳ ಪರಿಣಾಮಕಾರಿಯಾಗಿದೆ. ಅವರ ಪಂದ್ಯ ಪ್ರಾರಂಭವಾಗುವ ಮುನ್ನ ಇಬ್ಬರೂ ತಮ್ಮ ಕಾರುಗಳನ್ನು ಅಕ್ಕಪಕ್ಕ ನಿಲ್ಲಿಸಿದಾಗ, ತಮ್ಮನು ತನ್ನ ಅಣ್ಣನದು ಸ್ಪೋರ್ಟ್ಸ್ ಕಾರು, ತನ್ನದು ಸಾಧಾರಣ ಕಾರು ಎಂದು ಹಲುಬುತ್ತಾನೆ. ಆಗ ಅಣ್ಣ ‘ರೇಸ್ ಗೆಲ್ಲುವುದು ಕಾರಲ್ಲ, ಚಾಲಕ’ ಎನ್ನುತ್ತಾನೆ. ಈ ಮಾತು, ನಮ್ಮಲ್ಲಿ ಎಷ್ಟೇ ಅತ್ಯಾಧುನಿಕ ತಂತ್ರಜ್ಞಾನ ಇದ್ದರೂ ಅದರ ಸಮರ್ಥ ಬಳಕೆ ಮಾತ್ರ ಅದಕ್ಕೆ ಶೋಭೆ ತರಬಹುದು ಎಂದು ತೋರಿಸುತ್ತದೆ. ಇಲ್ಲವಾದಲ್ಲಿ ತಂತ್ರಜ್ಞಾನವು ಯುದ್ಧದಲ್ಲಿ ಸಕಾಲದಲ್ಲಿ ಬಳಕೆಯಾಗದ ಕರ್ಣನ ಬ್ರಹ್ಮಾಸ್ತ್ರದಂತೆ ಆಗುತ್ತದೆ.

ಕೃತಕ ಬುದ್ಧಿಮತ್ತೆ ನಮ್ಮನ್ನು ಸಂಪೂರ್ಣವಾಗಿ ಸ್ಥಾನಪಲ್ಲಟಗೊಳಿಸುತ್ತದೆ ಎಂಬುದು ಸತ್ಯಕ್ಕೆ ದೂರ. ಬದಲಾಗಿ ಅದನ್ನು ಮಾನವನ ಆವಿಷ್ಕಾರಗಳ ಸರಣಿಗೆ ಅದ್ಭುತ ಜೋಡಣೆ ಎಂದು ಅರ್ಥಮಾಡಿಕೊಳ್ಳಬಹುದು. ಕೃತಕ ಬುದ್ಧಿಮತ್ತೆ ಮಾರಕವಾಗುವುದು ತಂತ್ರಜ್ಞಾನದ ಅರಿವಿಲ್ಲದವರಿಗೆ ಮಾತ್ರ. ಇಂದಿನ ಯುಗದಲ್ಲಿ ವಿದ್ಯಾವಂತ ಎಂದರೆ ಆತನಿಗೆ ಕನಿಷ್ಠ ಮಟ್ಟದಲ್ಲಿಯಾದರೂ ತಂತ್ರಜ್ಞಾನ ಬಳಕೆಯ ಅರಿವಿರಬೇಕು. ಆದ್ದರಿಂದ ಸಮಗ್ರ ಶಿಕ್ಷಣಕ್ಕೆ ಒಳಗಾದ ಪ್ರತಿಯೊಬ್ಬರೂ ಗಣಕಯಂತ್ರದ ಬಳಕೆ ಮತ್ತು ಸಮಕಾಲೀನ ಜಗತ್ತಿನಲ್ಲಿ ಲಭ್ಯವಿರುವ ನೂರಾರು ಆ್ಯಪ್‌ಗಳ ಬಳಕೆಯನ್ನು ತಿಳಿದಿರಲೇಬೇಕಿದೆ.

ಚಾಟ್‌ಜಿಪಿಟಿ ಒಂದು ಮಂತ್ರದಂತೆ ಕೆಲಸ ಮಾಡುವುದಿಲ್ಲ ಮತ್ತು ನಮಗೆ ಬೇಕಿದ್ದನ್ನೆಲ್ಲ ಹಿಡಿಹಿಡಿಯಾಗಿ ಕೊಡುವುದಿಲ್ಲ. ಅದು ಕೆಲಸ ಮಾಡುವ ಬಗೆ ಮತ್ತು ಅದರ ಇತಿಮಿತಿ ತಿಳಿದಿದ್ದರೆ ಮಾತ್ರ ಅದು ನಮ್ಮ ನಿಯಂತ್ರಣದಲ್ಲಿ ಇರುವ ಸಾಧನವಾಗುತ್ತದೆ. ಕೃತಕ ಬುದ್ಧಿಮತ್ತೆಯೊಂದಿಗೆ ಸಂವಹನ ನಡೆಸುವ ಕಲೆ ಹಾಗೂ ಭಾಷಾಜ್ಞಾನ ನಮ್ಮಲ್ಲಿ ಇರಬೇಕು. ಹಾಗೆಯೇ ಅದು ನೀಡುವ ಮಾಹಿತಿಯನ್ನು ಯಥಾವತ್ತಾಗಿ ಬಳಸಲು ಬರುವುದಿಲ್ಲ. ಅನುವಾದ ಮಾಡುವ ತಂತ್ರಜ್ಞಾನ ಇದೆ ಎಂದಾದರೆ, ಅದು ಮಾಡುವ ಅನುವಾದವೆಲ್ಲ ದೋಷರಹಿತವಾಗಿ ಇರುತ್ತದೆ ಎಂದು ಭಾವಿಸುವಂತಿಲ್ಲ. ಹಾಗೆ ಭಾವಿಸಿದರೆ ಪ್ರಮಾದಗಳು ಸಂಭವಿಸುತ್ತವೆ. ಹಾಗೆಯೇ ಚಾಟ್‌ಜಿಪಿಟಿಯಿಂದ ಕೆಲಸ ಮಾಡಿಸಿಕೊಳ್ಳಲು, ಮೊದಲಿಗೆ ನಾವು ನೀಡುವ ಸೂಚನೆಗಳು ಮುಖ್ಯ ಎಂಬ ಪರಿಜ್ಞಾನ ಬೇಕು. ನಂತರ ಅದು ಕೊಡುವ ಮಾಹಿತಿಯನ್ನು ಒಮ್ಮೆ ಓದಿ ಬಳಿಕ ಅದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ಮಾಡಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿ ಇರಬೇಕು. ಇಲ್ಲವಾದಲ್ಲಿ ಈ ಕೃತಕ ಬುದ್ಧಿಮತ್ತೆಯು ನಿರ್ಣಾಯಕ ಕಾಲಘಟ್ಟದಲ್ಲಿ ಅನುಪಯುಕ್ತವಾದ ಕರ್ಣನ ಬ್ರಹ್ಮಾಸ್ತ್ರದಂತೆ ಆಗುತ್ತದೆ.

ನವೀನ ಆವಿಷ್ಕಾರಗಳು ನಮ್ಮ ಬದುಕಿನ ದಿಕ್ಕುಗಳನ್ನು ಪ್ರಭಾವಿಸುವುದು ಅನಿವಾರ್ಯ. ಹಾಗೆಯೇ ನಮ್ಮ ಹಳೆಯ ಜೀವನ ಪದ್ಧತಿಗಳು ಬದಲಾಗುವುದೂ ಅನಿವಾರ್ಯ. ಆದ್ದರಿಂದ ಈ ಅನಿವಾರ್ಯಗಳಿಗೆ ಹೊಂದಿಕೊಂಡು ನಮ್ಮ ಸಾಮರ್ಥ್ಯಗಳನ್ನು ಕಾಲಕಾಲಕ್ಕೆ ಎತ್ತರಿಸಿಕೊಳ್ಳಬೇಕಿರುವುದು ಸಹ ಅನಿವಾರ್ಯವೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.