ದೂರದ ಊರಿನಿಂದ ಆಗಾಗ ಶಿವಮೊಗ್ಗಕ್ಕೆ ಬರುವ ಗೆಳೆಯನೊಬ್ಬ, ನಗರದಲ್ಲಿ ಶೌಚಕ್ಕೆ ಹೋಗಲು ಸಂಕಟಪಟ್ಟುಕೊಳ್ಳುತ್ತಾನೆ. ನಿಲ್ದಾಣಗಳಲ್ಲಿರುವ ಸಾರ್ವಜನಿಕ ಶೌಚಾಲಯ ಕಂಡರೆ ಸಾಕು, ಅಕ್ಷರಶಃ ಗಂಟಲಲ್ಲಿ ಏನೋ ಸಿಕ್ಕಿಹಾಕಿಕೊಂಡವನಂತೆ ಹಲುಬುತ್ತಾನೆ. ಎಲ್ಲೋ ಹೊರಗೆ ಜನರ ಕಣ್ಣು ತಪ್ಪಿಸಿ ದೇಹಬಾಧೆ ತೀರಿಸಿಕೊಳ್ಳುತ್ತಾನೆ. ಇದು ಸಭ್ಯತೆ ಅಲ್ಲ ಅನ್ನುತ್ತೇನೆ ನಾನು. ಅವನು ಸಾರ್ವಜನಿಕ ಶೌಚಾಲಯ, ಅಲ್ಲಿನ ಅಶುಚಿತ್ವ ಮತ್ತು ವಸೂಲಿಬಾಜಿತನದ ಬಗ್ಗೆ ದೂರುತ್ತಾನೆ.
ರಾಜ್ಯದಾದ್ಯಂತ ಬಹುತೇಕ ಬಸ್ ನಿಲ್ದಾಣಗಳಲ್ಲಿ, ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಇರುವ ಶೌಚಾಲಯಗಳ ಸ್ಥಿತಿ ಗಾಬರಿ ಹುಟ್ಟಿಸುತ್ತದೆ. ಗಬ್ಬುನಾತ ಮೂಗಿಗೆ ರಾಚಿ, ಉಬ್ಬಳಿಕೆ ತರಿಸುತ್ತದೆ. ಅನಿವಾರ್ಯಕ್ಕೆ ನಮ್ಮ ವಿಧಿಗಳನ್ನು ಮುಗಿಸಿಕೊಂಡು ನಾವು ಆಚೆ ಬರಬೇಕಾಗುತ್ತದೆ. ನಿಜಕ್ಕೂ ಅದೊಂದು ರೀತಿಯ ಹಿಂಸೆ. ಎಲ್ಲೋ ಒಂದೆರಡು ಕಡೆ ತುಂಬಾ ವ್ಯವಸ್ಥಿತವಾದ ಮತ್ತು ಸ್ವಚ್ಛವಾದ ಶೌಚಾಲಯಗಳಿರಬಹುದು. ಆದರೆ ಅವುಗಳ ಸಂಖ್ಯೆ ತೀರಾ ಕಡಿಮೆ.
‘ಲೋಕಲ್‌ಸರ್ಕಲ್ಸ್’ ಎಂಬ ಸಂಸ್ಥೆಯು ದೇಶದಲ್ಲಿ ಇತ್ತೀಚೆಗೆ ಒಂದು ಸಮೀಕ್ಷೆ ನಡೆಸಿದೆ. ಅದರಲ್ಲಿ ಸಾರ್ವಜನಿಕ ಶೌಚಾಲಯಗಳ ದುಃಸ್ಥಿತಿಯ ಬಗ್ಗೆ ಮಾಹಿತಿ ಇದೆ. ‘ಸುಲಭ್ ಇಂಟರ್‌ನ್ಯಾಷನಲ್’ನಂತಹ ಪಾವತಿ ಬಳಕೆಯ ಶೌಚಾಲಯಗಳು ಸ್ವಲ್ಪಮಟ್ಟಿಗೆ ಸಮಾಧಾನ ತರುವಂತೆ ಇದ್ದರೂ ಕೆಲವು ಕಡೆ ಅವುಗಳ ಸ್ಥಿತಿಯೂ ಅಷ್ಟಕ್ಕಷ್ಟೆ. ಉಳಿದಂತೆ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಅಸಹನೀಯವಾಗಿದೆ. ಸಮೀಕ್ಷೆಯಲ್ಲಿ ಶೇ 52ರಷ್ಟು ಮಂದಿ, ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಸುಧಾರಿಸಿಯೇ ಇಲ್ಲ, ಅತ್ಯಂತ ಕಳಪೆ ಮತ್ತು ಬಳಸಲಾಗದ ಸ್ಥಿತಿಯಲ್ಲಿವೆ ಎಂದು ಹೇಳಿದ್ದಾರೆ.
ಇದಕ್ಕೆ ಕಾರಣ ಏನಿರಬಹುದು? ಶೌಚಾಲಯ ನಿರ್ವಹಿಸುವವರು ಮತ್ತು ಬಳಸುತ್ತಿರುವವರು ಇಬ್ಬರೂ ಕಾರಣರೇ. ಈ ಜನ ಶೌಚಾಲಯವನ್ನು ಮಲ, ಮೂತ್ರ ಹೊರಹಾಕುವ ಜಾಗ ಮಾತ್ರ ಅಂದುಕೊಂಡಿದ್ದಾರೊ, ಜೊತೆ ಜೊತೆಗೆ ತಮ್ಮ ಕಸವನ್ನೆಲ್ಲ ಹಾಕುವ ಜಾಗ ಅಂದುಕೊಂಡಿದ್ದಾರೊ ಎಂಬ ಪ್ರಶ್ನೆ ಮೂಡುತ್ತದೆ. ಅಗಿದ ಗುಟ್ಕಾವನ್ನು ಅಲ್ಲೇ ಉಗಿಯುತ್ತಾರೆ. ಜಗಿದ ಚೂಯಿಂಗಂ ಅನ್ನು ಅಲ್ಲೇ ಉಗುಳುತ್ತಾರೆ. ಅದು ರಂಧ್ರಗಳಲ್ಲಿ ಸಿಕ್ಕಿಹಾಕಿಕೊಂಡು ಇನ್ನಷ್ಟು ಹೊಲಸು ನಿಲ್ಲಲು ಕಾರಣವಾಗುತ್ತದೆ.
ಬೀಡಿ, ಸಿಗರೇಟು ತುಣುಕುಗಳು, ಕುಡಿದು ಬಿಸಾಡಿದ ಬಾಟಲಿಗಳು, ತಿಂದುಳಿದ ಎಲೆ ಅಡಿಕೆಯ ಚರಟ, ಪೇಪರ್ ತುಣುಕು... ಒಂದೇ ಎರಡೇ? ಶೌಚಾಲಯವನ್ನು ಬಳಸಿದ ಮೇಲೆ ನೀರು ಹಾಕದೆ ಹಾಗೇ ಬರುವವರು ಬಹಳಷ್ಟು ಮಂದಿ. ಅಲ್ಲಿ ಕೂತು ಗೋಡೆಯ ಮೇಲೆ ಏನೇನೋ ಅಸಭ್ಯವಾಗಿ ಬರೆದಿರುತ್ತಾರೆ. ದುಡ್ಡು ಕೊಟ್ಟಿದ್ದೇವೆ ಎನ್ನುವ ಉಡಾಫೆಯಿಂದ ಅಲ್ಲಿ ಹಾಗೆಲ್ಲ ನಡೆದುಕೊಳ್ಳಬಹುದೇ? ನಮಗೆ ಕನಿಷ್ಠ ಮಟ್ಟದ ಸ್ವಚ್ಛತಾ ಪ್ರಜ್ಞೆಯಾದರೂ ಇರಬೇಕಲ್ಲವೇ? ಗಲೀಜಿಗೆ ನಾವೇ ಕಾರಣರಾಗಿ, ಮತ್ತೆ ಸರಿಯಿಲ್ಲ ಎಂದು ನಾವೇ ದೂರುವುದು ಎಷ್ಟು ಸರಿ?
ಶೌಚಾಲಯ ನಿರ್ವಹಿಸುವವರ ಕಡೆಯಿಂದಲೂ ಬಹಳಷ್ಟು ತಪ್ಪುಗಳಿವೆ. ಅವರು ಹಣ ಪಡೆಯುವ ವಿಚಾರದಲ್ಲಿ ತೋರುವಷ್ಟು ಬಿಗಿಯನ್ನು ಶೌಚಾಲಯದ ಸ್ವಚ್ಛತೆಗೆ ತೋರಿಸುವುದಿಲ್ಲ. ಬೆಳಿಗ್ಗೆ ಒಮ್ಮೆ ಹಾಗೋ ಹೀಗೋ ಸ್ವಚ್ಛಗೊಳಿಸಿಬಿಟ್ಟರೆ ಮರುದಿನದವರೆಗೂ ಅಲ್ಲೇನಾಗಿದೆ ಎಂದು ನೋಡುವುದಿಲ್ಲ. ಒಡೆದುಹೋದ, ಮುರಿದುಹೋದ ಮತ್ತು ಮುಚ್ಚಲಾದ ಪೈಪುಗಳನ್ನು, ಟಾಯ್ಲೆಟ್ ಬೌಲ್‌ಗಳನ್ನು ಕಾಲಕಾಲಕ್ಕೆ ಸರಿಪಡಿಸುವುದಿಲ್ಲ. ಕೆಲವು ಕಡೆ ಸಮರ್ಪಕ ನೀರಿನ ವ್ಯವಸ್ಥೆ ಕೂಡ ಇರುವುದಿಲ್ಲ ಮತ್ತು ನೀರು ಬಳಸಲು ಸರಿಯಾದ ಮಗ್ಗುಗಳನ್ನೂ ಇಟ್ಟಿರುವುದಿಲ್ಲ.
ಇನ್ನೊಂದು ಮುಖ್ಯ ವಿಚಾರ, ಶೌಚಾಲಯದವರ ವಸೂಲಿಬಾಜಿತನ. ‘ಮೂತ್ರ ಉಚಿತ’ ಎಂದು ಬೋರ್ಡ್ ಹಾಕಿದ್ದರೂ ಹಣ ಪೀಕುತ್ತಾರೆ. ಎಷ್ಟೋ ಜನ ಇದಕ್ಕೆಲ್ಲ ಯಾಕೆ ವಾದ ಎಂದುಕೊಂಡು ಹಣ ಕೊಟ್ಟು ಬರುತ್ತಾರೆ. ಕೆಲವು ಕಡೆ ಅವರು ಕೇಳಿದಷ್ಟನ್ನು ಮುಲಾಜಿಲ್ಲದೇ ಕೊಟ್ಟುಬಿಡಬೇಕು. ‘ಮೂತ್ರ ಉಚಿತ’ ಎಂಬ ಬೋರ್ಡ್ ಇದ್ದೆಡೆಯೂ ಒಬ್ಬ ಹಳ್ಳಿ ಮಹಿಳೆಯಿಂದ ಮೂವತ್ತು ರೂಪಾಯಿ ವಸೂಲಿ ಮಾಡುತ್ತಿದ್ದುದನ್ನು ನಾನು ನೋಡಿದ್ದೇನೆ. ಕೆಲವು ಮಹಿಳೆಯರು ಮುಜುಗರದ ಕಾರಣದಿಂದ ವಾದ ಮಾಡದೆ ಕೇಳಿದಷ್ಟು ಹಣ ಕೊಟ್ಟು ಬರುತ್ತಾರೆ. ಈ ಬಗ್ಗೆ ಯಾರಿಗೆ, ಎಲ್ಲಿ ದೂರು ಕೊಡಬೇಕೆಂದು ಗೊತ್ತೇ ಆಗುವುದಿಲ್ಲ. ಶೌಚಾಲಯ ನಿರ್ವಹಣೆಯನ್ನು ಗುತ್ತಿಗೆ ಕೊಟ್ಟವರು ಮತ್ತು ಪಡೆದವರಿಗೆ ಒಂದು ನೀತಿ-ನಿಯಮ ಇರಬೇಡವೇ?
ಮನುಷ್ಯನಿಗೆ ಉತ್ತಮ ಆಹಾರ ಮತ್ತು ನೀರಿನ ಅವಶ್ಯಕತೆ ಇರುವಷ್ಟೇ ಅದನ್ನು ಹೊರ ಹಾಕುವಾಗ ಶುಚಿತ್ವದ ಅವಶ್ಯಕತೆಯೂ ಇರುತ್ತದೆ. ಇಲ್ಲದಿದ್ದರೆ ಶೌಚಾಲಯ ಎಂಬುದು ಹಲವು ಕಾಯಿಲೆಗಳ ವಾಹಕ ಆಗಬಹುದು. ಅಷ್ಟೇಅಲ್ಲದೆ, ಶುಚಿತ್ವ ಇಲ್ಲದ ಕಡೆ ಶೌಚಕ್ರಿಯೆ ಒಂದು ಮಾನಸಿಕ ಹಿಂಸೆ. ನಾವೀಗ ‘ಬಯಲುಶೌಚಮುಕ್ತ ದೇಶ’ ಘೋಷಣೆಯ ಹೊಸ್ತಿಲಲ್ಲಿದ್ದೇವೆ ಎಂಬುದನ್ನು ಮರೆಯಬಾರದು.
ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛವಾಗಿ ಇಡುವಲ್ಲಿ ಸಾರ್ವಜನಿಕರ ಸಹಕಾರ ತುಂಬಾ ಮುಖ್ಯವಾದದ್ದು. ನಮ್ಮ ಜನರಿಗೆ ಅದರ ಅರಿವಿರಬೇಕು ಮತ್ತು ಶೌಚಾಲಯ ನಿರ್ವಹಣೆಯನ್ನು ಗುತ್ತಿಗೆಗೆ ಕೊಡುವಾಗ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಬೇಕು. ಅದನ್ನು ಅನುಸರಿಸದೇ ಹೋದರೆ ಮುಲಾಜಿಲ್ಲದೆ ಗುತ್ತಿಗೆಯ ಕರಾರು ರದ್ದಾಗಬೇಕು. ಮನಸ್ಸಿಗೆ ಬಂದಂತೆ ಹಣ ವಸೂಲಿ ಮಾಡುವ ದಂಧೆ ನಿಲ್ಲಬೇಕು. ಶೌಚಾಲಯವನ್ನು ಸದಾ ಸ್ವಚ್ಛವಾಗಿ ಇಡಬೇಕು. ಸ್ವಚ್ಛತೆಯೇ ಆರೋಗ್ಯದ ಮೊದಲ ಸೂತ್ರ ಎಂಬುದನ್ನು ಯಾರೂ ಮರೆಯಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.