ಮನುಷ್ಯ ಬದುಕಿರುವಾಗ ಎಷ್ಟೇ ಕಷ್ಟಪಟ್ಟರೂ ಜೀವನಾಂತ್ಯವಾದ ಬಳಿಕ ದೇಹವು ಗೌರವದಿಂದ ಸಂಸ್ಕಾರ ಕಾಣಬೇಕು ಎಂಬುದು ಹೆಚ್ಚಿನವರ ಮನದ ಆಶಯ. ಹಾಗೆಂದು, ಅದು ಹತ್ತು ಹಲವರ ಹಿತಕ್ಕೆ ಬಳಕೆಯಾಗಬೇಕು ಎಂಬ ಹಂಬಲದಿಂದ ದೇಹದಾನ ಮಾಡುವ ಅಪೇಕ್ಷೆಯನ್ನೂ ಈಡೇರಿಸಿಕೊಳ್ಳು
ವವರಿದ್ದಾರೆ. ಗೌರವದ ದೇಹಾಂತ್ಯದ ತಾಣಕ್ಕೆ ರುದ್ರಭೂಮಿ ಎಂಬ ವಿಶಿಷ್ಟ ಹೆಸರನ್ನೂ ನೀಡಲಾಗಿದೆ.
ದಶಕಗಳ ಹಿಂದೆ ಅಂತ್ಯಸಂಸ್ಕಾರ ಸಮಸ್ಯೆ ಎನಿಸಿರಲಿಲ್ಲ. ತಮ್ಮದೇ ಸ್ಥಳದಲ್ಲಿ ಬೆಳೆದ ಕಟ್ಟಿಗೆಯನ್ನು ಬಳಸಿ ಹೊಲದ ಬಳಿ ದೇಹವನ್ನು ದಹಿಸುವ ವಿಧಾನ ಸುಲಭವಾಗಿತ್ತು ಅಥವಾ ಸ್ವಂತ ಜಾಗದಲ್ಲಿ ಹೊಂಡ ತೆಗೆದು ಹೂಳುತ್ತಿದ್ದರು. ಆದರೆ ಜನಸಂಖ್ಯೆ ಬೆಳೆದಂತೆ ಮನೆಗಳು ಹೆಚ್ಚಾಗುತ್ತಿವೆ. ಖಾಲಿ ಸ್ಥಳಗಳು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಾಡಳಿತಗಳು ಶವಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಸ್ಥಳವನ್ನು ಕಾದಿರಿಸುವುದು ಕಡ್ಡಾಯ ನಿಯಮವಾಗಿದ್ದರೂ ಇನ್ನೂ ಸ್ಥಳ ಕಾದಿರಿಸದ ಪಂಚಾಯಿತಿಗಳಿವೆ. ಬಡವರಿಗೆ ಶವಸಂಸ್ಕಾರಕ್ಕೆ ಸರ್ಕಾರ ತುರ್ತು ಹಣದ ನೆರವು ನೀಡುತ್ತಿದೆ ನಿಜ. ಆದರೆ ಸಾವಿನ ನೆರಳು ಚಾಚುವ ಸಮಯಕ್ಕೆ ಅಧಿಕಾರಿಗಳು ಕಾದಿರುವುದಿಲ್ಲ. ಅನೇಕರ ಪಾಲಿಗೆ ಒದಗದೆ ಮರಣದ ಹಣ ಮರೀಚಿಕೆಯಾಗಿ ಬಿಡುತ್ತದೆ.
ಸುಮಾರು ಹನ್ನೆರಡು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ರುದ್ರಭೂಮಿಗಳ ಆಧುನೀಕರಣ ಸುದ್ದಿ ಮಾಡಿತ್ತು. ಚಿತಾಗಾರ ನಿರ್ಮಾಣ, ಆಧುನೀಕರಣ, ಅಭಿವೃದ್ಧಿ ಕಾಮಗಾರಿಗಳು ನಡೆಯುವುದಾಗಿ ಸರ್ಕಾರದ ಕಡೆಯಿಂದ ಹೇಳಿಕೆಗಳೂ ಬಂದಿದ್ದವು. ಆದರೆ ಹಲವು ಊರುಗಳಲ್ಲಿ ಶವ ಸುಡಲು ಅಥವಾ ಹೂಳಲು ಅಂಗೈಯಗಲದ ಜಾಗವೂ ಸಿಗದೆ ಹತಾಶ ಜನರು ಶವವನ್ನು ತಾಲ್ಲೂಕು ಕಚೇರಿಯ ಮುಂದೆ ಇರಿಸಿಕೊಂಡು ಧರಣಿ ನಡೆಸಿದ ಸಂದರ್ಭಗಳು ಈಗಲೂ ಸುದ್ದಿಯಾಗುತ್ತಲೇ ಇವೆ.
ರುದ್ರಭೂಮಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಹಣಕಾಸಿನ ನೆರವು ನೀಡುವುದುಂಟು. ಅದರಲ್ಲಿ ರುದ್ರಭೂಮಿಗೆ ತಗಡಿನ ಚಾವಣಿ, ಶವ ದಹನಕ್ಕೆ ಕಡಿಮೆ ಕಟ್ಟಿಗೆ ಬಳಸಿ ಶೀಘ್ರವಾಗಿ ಭಸ್ಮ ಮಾಡಲು ಸಹಕಾರಿಯಾದ ಛೇಂಬರ್, ದಫನ ಮಾಡಲು ಅನುವಾಗುವಂತೆ, ಹೊಂಡ ತೆಗೆಯುವ ಸ್ಥಳವನ್ನು ಮಳೆಗಾಲದಲ್ಲಿ ನೀರು ನಿಲ್ಲದ ರೀತಿ ರಕ್ಷಿಸಲು ವ್ಯವಸ್ಥೆ ಮಾಡಿ ಎಲ್ಲ
ಸಂಪ್ರದಾಯದವರಿಗೂ ಅನುಕೂಲ ಕಲ್ಪಿಸಲಾಗಿದೆ. ಆದರೆ ಇನ್ನು ಕೆಲವೆಡೆ ಮೇಲ್ಚಾವಣಿಯ ತಗಡು ತೂತು ಬಿದ್ದು, ಮಳೆ ಬಂದರೆ ಶವಸಂಸ್ಕಾರ ಮಾಡಲಾಗದ ದುಃಸ್ಥಿತಿ ಎದ್ದು ಕಾಣುತ್ತದೆ. ಇನ್ನು ಸ್ಮಶಾನವೇ ಇಲ್ಲದೆ ದೂರದ ಊರಿಗೆ ಶವವನ್ನು ಸಾಗಿಸಬೇಕಾದ ಪ್ರಸಂಗವೂ ಕಿರಿಕಿರಿಯುಂಟು ಮಾಡುವಂತಿದೆ.
ಕೇರಳದಿಂದ ಕರ್ನಾಟಕಕ್ಕೆ ಕಾಲಿಟ್ಟ ಶವದಹನದ ಪೆಟ್ಟಿಗೆಯು ಆಯ್ದ ಸಹಕಾರಿ ಸಂಘಗಳ ಮೂಲಕ ಬಾಡಿಗೆಗೆ ದೊರಕುತ್ತಿತ್ತು. ತೆಂಗಿನ ಚಿಪ್ಪು ಬಳಸಿ ಮುಚ್ಚಿದ ಪೆಟ್ಟಿಗೆಯೊಳಗೆ ಮನೆಯಂಗಳದಲ್ಲಿಯೇ ತಾಸಿನೊಳಗೆ ದೇಹವನ್ನು ಬೂದಿ ಮಾಡುವ ಈ ಸೌಲಭ್ಯ ಆರಂಭದಲ್ಲಿ ಸದ್ದು ಮಾಡಿತ್ತು. ಆದರೆ ಅದರಿಂದ ಅನನುಕೂಲಗಳು ತಲೆದೋರಲು ಆರಂಭವಾದುದು ಕಂಡು ಜನ ಅದನ್ನು ಬಳಸಲು ಹಿಂಜರಿಯು
ವಂತಾಯಿತು. ಈಗ ಉಡುಪಿಯಲ್ಲಿ ಸಂಚಾರಿ ಶವದಹನದ ವ್ಯವಸ್ಥೆಯೊಂದು ಆರಂಭವಾಗಿದ್ದು, ಅದು ಎಷ್ಟು ಅನುಕೂಲಕರವೆಂಬುದು ಮುಂದೆ ತಿಳಿಯಬೇಕಷ್ಟೇ.
ಇನ್ನೊಂದೆಡೆ, ಅಂತ್ಯಸಂಸ್ಕಾರಕ್ಕೆ ದಲಿತರಿಗೆ ಅವಕಾಶ ನೀಡದೆ ಸಾವಿನ ಬಳಿಕ ಭೌತಿಕ ದೇಹಕ್ಕೆ ಜಾತಿಯ ಪಟ್ಟಿ ಕಟ್ಟುವ ಜನರು, ಸ್ಮಶಾನಕ್ಕೆ ಮೀಸಲಾದ ಭೂಮಿಯನ್ನು ಸದ್ದಿಲ್ಲದೆ ಕಬಳಿಸುವ ಪ್ರಭಾವಿಗಳು, ಇವರೆಲ್ಲರೂ ಮೃತದೇಹದ ಗೌರವಯುತ ಅಂತ್ಯಕ್ಕೆ ಅಡ್ಡಿಯಾಗುತ್ತಿರುವುದೇ ವಿಪರ್ಯಾಸ. ಶವ ಹೂಳುವ ಪದ್ಧತಿ ಇರುವವರಿಗೆ ಸ್ಥಳಾವಕಾಶದ ಕೊರತೆ ಕಾಡಿದರೆ, ದಹನದ ಪದ್ಧತಿ ಇರುವವರಿಗಾಗಿ ಎಲ್ಲ ಕಡೆ ವಿದ್ಯುತ್ ಚಿತಾಗಾರಗಳ ಲಭ್ಯತೆ ಇಲ್ಲ. ಒಂದು ದೇಹ ಬೂದಿಯಾಗಲು ಕನಿಷ್ಠ ಮೂರರಿಂದ ನಾಲ್ಕು ಕ್ವಿಂಟಲ್ ಒಣ ಕಟ್ಟಿಗೆ ಬೇಕಾಗುತ್ತದೆ. ಪ್ರಕೃತಿಯನ್ನು ಬರಿದುಗೊಳಿಸುವ ಅಂತ್ಯಸಂಸ್ಕಾರದ ವಿಧಿಯನ್ನು ಸರಳಗೊಳಿಸುವ ಯೋಜನೆಗಳಿಗೆ ಸರ್ಕಾರ ಮನಸ್ಸು ಮಾಡಬೇಕಾಗಿದೆ.
ಇದರ ಜೊತೆಗೆ ಪ್ರತಿಯೊಂದು ಗ್ರಾಮದಲ್ಲೂ ರುದ್ರಭೂಮಿ ಇರಲೇಬೇಕೆಂದು ಗ್ರಾಮಾಡಳಿತಕ್ಕೆ ಕಡ್ಡಾಯಗೊಳಿಸಬೇಕು. ಅಲ್ಲಿ ನೀರಿನ ಸೌಲಭ್ಯ ಮತ್ತು ಎಲ್ಲ ಋತುಗಳಲ್ಲೂ ನಿಶ್ಚಿಂತೆಯಿಂದ ಅಂತ್ಯಸಂಸ್ಕಾರಕ್ಕೆ ಅಗತ್ಯವಾದ ಏರ್ಪಾಡುಗಳನ್ನು ಮಾಡುವ ನಿಯಮ ಇರಬೇಕು. ಸತ್ತ ಮೇಲೂ ಜಾತಿಗಾಗಿ ಹಣಾಹಣಿ ಮಾಡುವ ಪ್ರವೃತ್ತಿಗೆ ಮೋಕ್ಷ ಸಿಗಬೇಕು. ಶವ ಸಾಗಾಟಕ್ಕೆ ತಕ್ಷಣ ಸಿಗುವ ವಾಹನ ವ್ಯವಸ್ಥೆಯೂ ಇರಬೇಕು.
ಮನುಷ್ಯ ಸಾವನ್ನು ಗೆಲ್ಲಲಾರ. ಆದರೆ ಮೃತ ವ್ಯಕ್ತಿಯ ಸಂಬಂಧಿಕರ ಪಾಲಿಗೆ ಸ್ಮಶಾನದ ಅವ್ಯವಸ್ಥೆಗಳು, ಕೊರತೆಗಳು ಬದುಕಿನಲ್ಲಿ ಘೋರ ಅನುಭವ ನೀಡುವಂತಾದರೆ ಇದು ಅಸಹನೀಯ ಅಲ್ಲವೆ! ಸತ್ತ ಬಳಿಕ ದೇಹವು ಕೊಳೆಯುವ ಮೊದಲು ಮಣ್ಣು ಸೇರಲು ಸ್ಥಳವೇ ಇಲ್ಲದೆ ಪರದಾಡುವ ಗ್ರಾಮಗಳು ಎಷ್ಟಿವೆ ಎಂಬುದನ್ನು ಚುನಾವಣೆಯ ಹೊಸ್ತಿಲಿನಲ್ಲಿ ನಿಂತಿರುವವರೂ ಎಣಿಕೆ ಮಾಡಿದಂತೆ ಕಾಣಿಸದು.
ರೋಹಿತಾಶ್ವನ ದೇಹದ ಅಂತ್ಯಸಂಸ್ಕಾರಕ್ಕೆ ಶುಲ್ಕವನ್ನು ತೆರಲಾಗದ ಚಂದ್ರಮತಿಯ ಕತೆಯನ್ನು ಹೇಳುವ ಈ ನಾಡಿನಲ್ಲಿ, ಯುಗಾಂತರದ ಬಳಿಕವೂ ಶವಸಂಸ್ಕಾರವೆಂಬುದು ಅದೇ ಪ್ರಯಾಸದ ಸಂಗತಿಯಾಗಿರುವುದು ತಲೆ ತಗ್ಗಿಸಬೇಕಾದ್ದೇ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.