ಅರುಣಾ ಶಾನುಭಾಗ್, ಭಾರತದ ವೈದ್ಯಕೀಯ ಇತಿಹಾಸದಲ್ಲಿ ಕಾಣಸಿಗುವ ದುರಂತಮಯ ಹೆಸರು. 1973ರಲ್ಲಿ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಅರುಣಾ ಅದೇ ಆಸ್ಪತ್ರೆಯ ವಾರ್ಡ್‌ಬಾಯ್ ಸೋಹನ್ ಲಾಲ್ ಎಂಬ ದುರುಳನಿಂದ ದೈಹಿಕ ಹಲ್ಲೆ ಮತ್ತು ಅತ್ಯಾಚಾರಕ್ಕೊಳಗಾಗಿ ಅಖಂಡ ನಲವತ್ತೆರಡು ವರ್ಷ ಕೋಮಾದಲ್ಲೇ ಬದುಕಿದ್ದವರು. ಅದೇ ಆಸ್ಪತ್ರೆಯ ಸಿಬ್ಬಂದಿಯಿಂದ ಆರೈಕೆಗೊಳಗಾಗಿ ಕೊನೆಗೆ ಅಲ್ಲೇ ಕೊನೆಯುಸಿರೆಳೆದದ್ದು ವಿಷಾದಕರ ದಂತಕತೆ.
ದೊಂಬಿ, ಗಲಾಟೆ, ಅಪಘಾತ, ಸಾಮೂಹಿಕ ಹಿಂಸಾಚಾರದಂತಹ ಅತಿ ಸೂಕ್ಷ್ಮ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವಾಗ ರೋಗಿಯ ಕಡೆಯವರ ಕೋಪಕ್ಕೆ ಸುಲಭವಾಗಿ ತುತ್ತಾಗುವವರು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ. ತುರ್ತು ವೈದ್ಯಕೀಯ ವಿಭಾಗ ಹಾಗೂ ಐಸಿಯುನಲ್ಲಿ ಈ ಬಗೆಯ ಹಲ್ಲೆಗಳ ಪ್ರಮಾಣ ಅತಿ ಹೆಚ್ಚು. ಹೀಗಾಗಿ, ಇಲ್ಲಿ ಕೆಲಸ ಮಾಡುವ ವೈದ್ಯರು ತಮ್ಮ ಜೀವವನ್ನು ಪಣಕ್ಕೆ ಇಟ್ಟೇ ಇನ್ನೊಂದು ಜೀವವನ್ನು ಉಳಿಸುವ ಸವಾಲಿನ ಕರ್ತವ್ಯ ನಿರ್ವಹಿಸುವಂತಹ ಪರಿಸ್ಥಿತಿ ಭಾರತದಲ್ಲಿದೆ. ಅದರಲ್ಲೂ ಎಷ್ಟೋ ಕಡೆ ರಾತ್ರಿ ಪಾಳಿಯ ಮಹಿಳಾ ಸಿಬ್ಬಂದಿಯಂತೂ ಭಯದಲ್ಲೇ ಕರ್ತವ್ಯ ನಿರ್ವಹಿಸಬೇಕಾಗಿದೆ.
ದುರದೃಷ್ಟವಶಾತ್, ಭಾರತದಲ್ಲಿ ವೈದ್ಯಕೀಯ ಸಿಬ್ಬಂದಿ ವಿರುದ್ಧದ ಹಿಂಸಾಚಾರವನ್ನು ನಿರ್ದಿಷ್ಟವಾಗಿ ಪತ್ತೆ ಹಚ್ಚುವ ಕೇಂದ್ರೀಕೃತ ವ್ಯವಸ್ಥೆ ಇಲ್ಲ. ಆದಾಗ್ಯೂ, ವಿವಿಧ ಅಧ್ಯಯನ ವರದಿಗಳು ಮತ್ತು ಸಂಶೋಧನೆಗಳಿಂದ ಕೆಲವು ಅಂಕಿಅಂಶಗಳು ಲಭ್ಯವಾಗಿವೆ. ಜರ್ನಲ್ ಆಫ್ ಕ್ಲಿನಿಕಲ್ ಮತ್ತು ಡಯಾಗ್ನೋಸ್ಟಿಕ್ ರಿಸರ್ಚ್‌ನಲ್ಲಿ ಪ್ರಕಟವಾದ 2020ರ ಅಧ್ಯಯನದ ಪ್ರಕಾರ, ಭಾರತದಲ್ಲಿ ಶೇ 46.4ರಷ್ಟು ಆರೋಗ್ಯ ಕಾರ್ಯಕರ್ತರು ದೈಹಿಕ ಹಿಂಸೆಯನ್ನು ಅನುಭವಿಸುತ್ತಾರೆ. ಶೇ 71.4ರಷ್ಟು ಮಂದಿ ಅವಾಚ್ಯ ಬೈಗುಳ ಹಾಗೂ ನಿಂದನೆಗೆ ಗುರಿಯಾಗುತ್ತಾರೆ.
ಭಾರತೀಯ ವೈದ್ಯಕೀಯ ಸಂಘದ (ಐಎಂಎ) 2019ರ ವರದಿ, ದೇಶದಲ್ಲಿ ವೈದ್ಯರು ತಮ್ಮ ಕೆಲಸದ ಅವಧಿಯಲ್ಲಿ ಹಿಂಸೆಗೆ ಒಳಗಾಗುವುದನ್ನು ವಿವರಿಸಿದೆ. ರೋಗಿಗಳು ಅಥವಾ ಅವರ ಸಂಬಂಧಿಕರಿಂದ ವೈದ್ಯರು ಹಲ್ಲೆಗೊಳಗಾಗುತ್ತಾರೆ ಎಂದು ಹೇಳಿದೆ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಕಮ್ಯುನಿಟಿ ಮೆಡಿಸಿನ್ ಆ್ಯಂಡ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟವಾದ 2018ರ ಅಧ್ಯಯನವು ಭಾರತದಲ್ಲಿ ಶೇ 25.6ರಷ್ಟು ಶುಶ್ರೂಷಾ ಸಿಬ್ಬಂದಿ ದೈಹಿಕ ಹಿಂಸೆಯನ್ನು ಮತ್ತು ಶೇ 40.6ರಷ್ಟು ಮಂದಿ ಅವಾಚ್ಯ ಬೈಗುಳ, ನಿಂದನೆಯನ್ನು ಅನುಭವಿಸುತ್ತಾರೆ ಎಂದು ಹೇಳುತ್ತದೆ.
ದೇಶದಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಿಸಲು ಹಲವಾರು ನಿಯಮಗಳು ಮತ್ತು ಕಾನೂನುಗಳಿದ್ದರೂ ಇಂತಹ ಹಿಂಸೆಗಳನ್ನು ತಡೆಯಲು ವ್ಯವಸ್ಥೆ ವಿಫಲವಾಗುತ್ತಿರುವುದು ತೀರಾ ಕಳವಳದ ಸಂಗತಿ. ಪೊಲೀಸು, ಕೋರ್ಟು, ಕಾನೂನಿನ ಭಯ, ಆರ್ಥಿಕ ಹೊರೆ, ಹೆಚ್ಚುವರಿ ಅಲೆದಾಟದ ಭಯ ಅಥವಾ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯ ಕೊರತೆಯಿಂದಾಗಿ ಬಹಳಷ್ಟು ಪ್ರಕರಣಗಳು ವರದಿಯಾಗುವುದೇ ಇಲ್ಲ.
ಸ್ವತಃ ವೈದ್ಯಕೀಯ ಸಿಬ್ಬಂದಿಗೆ ಮತ್ತು ರೋಗಿಗಳ ಕುಟುಂಬಸ್ಥರಿಗೆ ಅಂತಹ ಪ್ರಕರಣಗಳನ್ನು ವರದಿ ಮಾಡುವ, ಕಾನೂನು ಕ್ರಮ ಕೈಗೊಳ್ಳುವ ಕಾನೂನುಗಳು ಹಾಗೂ ಕಾರ್ಯವಿಧಾನಗಳ ಬಗ್ಗೆ ಅರಿವು ಇರುವುದಿಲ್ಲ.
ಕೆಲವೊಮ್ಮೆ ತನಿಖೆಗಳು ಅಪೂರ್ಣ ಅಥವಾ ಪಕ್ಷಪಾತಿಯಾಗಿರಬಹುದು. ಕೆಲವು ಪ್ರಕರಣಗಳಲ್ಲಿ ತೀರ್ಪು ಬರಲು ವರ್ಷಗಳೇ ಆಗಬಹುದು. ಇದು ದೂರುದಾರರಲ್ಲಿ ಹತಾಶೆ ಮತ್ತು ಭ್ರಮನಿರಸನಕ್ಕೆ ಕಾರಣವಾಗುತ್ತದೆ.
ಐಎಂಎ 2020ರ ವರದಿಯ ಪ್ರಕಾರ, ವೈದ್ಯರ ವಿರುದ್ಧದ ಹಿಂಸಾಚಾರದ ಪ್ರತಿ ಐದು ಪ್ರಕರಣಗಳಲ್ಲಿ ಒಂದು ಮಾತ್ರ ಶಿಕ್ಷೆಗೆ ಗುರಿಯಾಗುತ್ತದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 2019ರ ವರದಿ, ಆರೋಗ್ಯ ಕಾರ್ಯಕರ್ತರ ಮೇಲಿನ ಹಿಂಸಾಚಾರದ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವು ಸುಮಾರು ಶೇ 10ರಷ್ಟು ಎಂಬುದನ್ನು ಕಂಡುಕೊಂಡಿದೆ.
ವೈದ್ಯಕೀಯ ಸಿಬ್ಬಂದಿಯ ಮೇಲಿನ ದೌರ್ಜನ್ಯಕ್ಕೆ ಗರಿಷ್ಠ ಶಿಕ್ಷೆಯನ್ನು ವಿಧಿಸುವುದು, ಇಂತಹ ಪ್ರಕರಣಗಳನ್ನು ವ್ಯವಹರಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದು, ಹಿಂಸಾಚಾರ ತಡೆಗಟ್ಟಲು ಮತ್ತು ತನಿಖೆಗಳಲ್ಲಿ ಸಹಾಯ ಮಾಡಲು ಆಸ್ಪತ್ರೆಗಳು, ಆರೋಗ್ಯ ಸೌಲಭ್ಯಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿದರೆ ಹಿಂಸಾತ್ಮಕ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಸಾಕ್ಷ್ಯ ಸಂಗ್ರಹಿಸಲು ಅನುಕೂಲವಾಗಬಹುದು. ಈ ಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ, ನಾವು ವೈದ್ಯಕೀಯ ಸಿಬ್ಬಂದಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಬಹುದು. ಕೋಲ್ಕತ್ತ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯ ಮೇಲಾದಂತಹ ಹೀನ ಕೃತ್ಯಗಳನ್ನು ತಡೆಗಟ್ಟಬಹುದು.
ಕರ್ನಾಟಕದವರೇ ಆದ ಅರುಣಾ ಶಾನುಭಾಗ್ ದೌರ್ಜನ್ಯಕ್ಕೊಳಗಾಗಿ ಈಗ ಐವತ್ತು ವರ್ಷಗಳೇ ಕಳೆದಿವೆ. ಅಂದಿನಿಂದ ಇಂದಿನ ತನಕ ಕಾಲಕಾಲಕ್ಕೆ ಕಾನೂನುಗಳು ಬಲಗೊಳ್ಳುತ್ತಲೇ ಬಂದಿವೆ. ದುರದೃಷ್ಟವೆಂದರೆ, ಇಂತಹ ದುರ್ಘಟನೆಗಳನ್ನು ತಡೆಯಲು ಇಂದಿಗೂ ಸಾಧ್ಯ ಆಗಿಲ್ಲ. ಜೀವವನ್ನು ರಕ್ಷಿಸುವ ಜೀವವೇ ಅಪಾಯದಲ್ಲಿ ಇರುವ ಸಂದರ್ಭಗಳು ಮರುಕಳಿಸದಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.