ADVERTISEMENT

ಸಂಗತ: ಅಂದಗಾತಿ ‘ಜೆಲ್ಲಿ’ ನೀ ಹೊರಟಿದ್ದೆಲ್ಲಿ?

ಸಾಗರದ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುವ ಜೆಲ್ಲಿ ಮೀನುಗಳ ಸಂತತಿ ವೃದ್ಧಿಗೆ ಈಗ ಸಾಗರದ ಮಾಲಿನ್ಯ ಕಂಟಕಪ್ರಾಯವಾಗಿದೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 23:47 IST
Last Updated 31 ಅಕ್ಟೋಬರ್ 2024, 23:47 IST
<div class="paragraphs"><p>ಸಂಗತ</p></div>

ಸಂಗತ

   

ಇದಕ್ಕೆ ಹೃದಯವಿಲ್ಲ. ದೇಹದಲ್ಲಿ ಎಲ್ಲೂ ಮೂಳೆಗಳಿಲ್ಲ. ಮೆದುಳೂ ಇಲ್ಲ! ಆದರೆ ಕೇಂದ್ರ ನರಮಂಡಲ ವ್ಯವಸ್ಥೆ ಇದೆ. ಅದರಿಂದಾಗಿ ಇದಕ್ಕೆ ಬುದ್ಧಿ ಇದೆ. ಇದರ ಹೆಸರು ಜಲ್ಲಿ ಮೀನು. ತೀರಾ ಪ್ರಾಥಮಿಕ ಹಂತದ ನರಮಂಡಲ ವ್ಯವಸ್ಥೆಯುಳ್ಳ ಈ ಮೀನುಗಳು ವಾಸನೆ, ಬೆಳಕನ್ನು ಗ್ರಹಿಸಿ ವಾತಾವರಣಕ್ಕೆ ಪ್ರತಿಕ್ರಿಯಿಸುತ್ತವೆ.

ವಿಶ್ವದ ಎಲ್ಲ ಭಾಗದ ಸಾಗರಗಳ ನೀರಿನಲ್ಲಿ ಕಂಡುಬರುವ ಇವು ವಿವಿಧ ಬಣ್ಣ, ಗಾತ್ರ, ಆಕಾರಗಳಲ್ಲಿ ಕಾಣಸಿಗುತ್ತವೆ. ಇವು ಸಾಗರ ಮಾಲಿನ್ಯ ತಡೆಯುತ್ತವೆ ಎನ್ನುವ ಕಾರಣಕ್ಕೆ ಇವುಗಳ ಪ್ರಾಮುಖ್ಯ ಅರಿಯಲು ದಿನವೊಂದು ನಿಗದಿಯಾಗಿದೆ. ಭೂಮಿಯ ಮೇಲೆ ವಾಸವಿದ್ದ ದೈತ್ಯಪ್ರಾಣಿ ಡೈನೊಸಾರ್‌ಗಿಂತ ಮುಂಚಿನಿಂದ ಜೆಲ್ಲಿ ಮೀನುಗಳಿವೆ. ಪ್ರತಿವರ್ಷ ನವೆಂಬರ್ ಮೂರನೇ ತಾರೀಖಿನಂದು ‘ವಿಶ್ವ ಜೆಲ್ಲಿ ಮೀನು’ ದಿನಾಚರಣೆ ನಡೆಯುತ್ತದೆ.

ADVERTISEMENT

ಜಗತ್ತಿನ ಮೀನುಗಳಲ್ಲೇ ಇದು ಅತ್ಯಂತ ವಿಶಿಷ್ಟ ಎನಿಸಿದ್ದು, ಎಲ್ಲ ಜೀವಿಗಳಿಗೂ ಬಾಯಿಯು ತಲೆಯ ಭಾಗದಲ್ಲಿದ್ದರೆ ಇದಕ್ಕೆ ದೇಹದ ಮಧ್ಯ ಭಾಗದಲ್ಲಿದೆ. ತಿಂದದ್ದನ್ನು ವೇಗವಾಗಿ ಜೀರ್ಣಿಸಿಕೊಳ್ಳುವಶಕ್ತಿ ಇರುವ ಜೆಲ್ಲಿ ಮೀನುಗಳ ಬಾಯಿ ಮತ್ತು ಗುದದ್ವಾರ ಎರಡೂ ಒಂದೇ ಆಗಿದೆ! ಥಟ್ಟನೆ ನೋಡಿದರೆ ದೀಪಾವಳಿ ಹಬ್ಬದಂದು ಉರಿಸುವ ಭೂಚಕ್ರದಂತೆ ವರ್ಣಮಯವಾಗಿ ಕಾಣಿಸುವ ಈ ಮೀನಿಗೆ ಛತ್ರಿ ಆಕಾರದ ತಲೆ ಇದೆ. ಭೂಮಿಯ ದಕ್ಷಿಣ ಗೋಳಾರ್ಧದಲ್ಲಿ ಚಳಿಗಾಲ ಪ್ರಾರಂಭವಾದೊಡನೆ
ಈ ಮೀನುಗಳ ವಲಸೆ ಕಾರ್ಯ ಶುರುವಾಗುತ್ತದೆ. ಬೆಚ್ಚಗಿನ ಉತ್ತರ ಗೋಳಾರ್ಧದ ಕಡೆ ಪ್ರಯಾಣಿಸುವ ಇವು ಕರಾವಳಿ ತೀರದಲ್ಲಿ ಹೆಚ್ಚಾಗಿ ಇರುತ್ತವೆ. ಈ ವಿದ್ಯಮಾನದ ನೆನಪಿಗೆ ಮತ್ತು ಜೆಲ್ಲಿ ಮೀನುಗಳ ಪ್ರಾಮುಖ್ಯವನ್ನು ಜಗತ್ತಿಗೆ ತಿಳಿಸಿದ ಅರ್ನೆಸ್ಟ್
ಹಾಕಲ್ ಜನ್ಮದಿನವನ್ನು ಹತ್ತು ವರ್ಷಗಳಿಂದ ‘ವಿಶ್ವ ಜೆಲ್ಲಿ ಮೀನು’ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.

ಸಾಗರದಲ್ಲಿನ ಬಯೊಮಾಸ್‌, ಪ್ಲಾಂಕ್ಟನ್ ಜೀವಿ ಪರಿಸರ (ಸೂಕ್ಷ್ಮವಾದ ಪ್ರಾಣಿ ಮತ್ತು ಸಸ್ಯಜೀವಿಗಳ ಸಮುದಾಯ), ವಲಸೆ, ಸಾಗರಜೀವಿ ಸಮುದಾಯಗಳ ಸಂರಕ್ಷಣೆಯ ಮೇಲೆ ಮಹತ್ವದ ಪರಿಣಾಮ ಬೀರುವ ಜೆಲ್ಲಿ ಮೀನುಗಳು ಆಹಾರ ಸರಪಳಿಯ ಬಹುಮುಖ್ಯ ಘಟಕಗಳಾಗಿವೆ. ಜನರ ಸ್ವಾದಿಷ್ಟ ಆಹಾರವಾಗಿ ಬಳಕೆಗೊಳ್ಳುವ ಇವು ಪ್ರೋಟೀನ್, ಕೊಲಾಜೆನ್, ಸೆಲೆನಿಯಂ, ಕೊಲೈನ್‌ಗಳ ಆಗರವಾಗಿದ್ದು, ಸರಿಯಾದ ಕ್ರಮದಲ್ಲಿ ಸೇವಿಸಿದಾಗ ಮನುಷ್ಯನ ಆರೋಗ್ಯವನ್ನು ವೃದ್ಧಿಸುತ್ತವೆ ಎಂಬ ಮಾಹಿತಿ ಇದೆ. ಮೀನಿನ ದೇಹದ ಜಿಲೆಟಿನ್ ಸಂಯುಕ್ತವನ್ನು ಆಹಾರಗಳ ಬಂಧಕವನ್ನಾಗಿ ಬಳಸುವುದು ರೂಢಿಯಲ್ಲಿದೆ. ಹಸಿರು ಬಣ್ಣದ ಪ್ರೋಟೀನ್ ಅನ್ನು ಸ್ರವಿಸುತ್ತಾ ಬೆಳಕು ಬೀರುವುದರಿಂದ ವೈದ್ಯಕೀಯ ವಿಜ್ಞಾನದ ಸಂಶೋಧನೆಯಲ್ಲಿ
ಬಳಸಲಾಗುತ್ತದೆ.

ಜೆಲ್ಲಿ ಮೀನುಗಳು ಸಾಮಾನ್ಯವಾಗಿ ಸಮುದ್ರಕಳೆ, ದಾಳಿಕೋರ ಸಂತತಿ, ಸಾಗರ ಕಿರಿಕಿರಿ ಎಂದೆಲ್ಲ ಕರೆಸಿಕೊಳ್ಳುತ್ತವೆ. ಮೀನು, ಸೀಗಡಿ, ಏಡಿ ಮತ್ತು ಕಿರುಸಸ್ಯ
ಗಳನ್ನು ಭಕ್ಷಿಸುವ ಜೆಲ್ಲಿ ಮೀನುಗಳನ್ನು ದಕ್ಷಿಣ ಏಷ್ಯಾದ ದೇಶಗಳಲ್ಲಿ ಮತ್ತು ವಿಶೇಷವಾಗಿ ಚೀನಾ ದೇಶದ ಖಾದ್ಯಗಳಲ್ಲಿ ಯಥೇಚ್ಛವಾಗಿ ಬಳಸುತ್ತಾರೆ.

ನೋಡಲು ತುಂಬಾ ವಿಶಿಷ್ಟವಾಗಿ, ಅಂದವಾಗಿ ಕಾಣುವ, ತಿಂದಾಗ ಸ್ವಾದಿಷ್ಟವೆನಿಸುವ ಜೆಲ್ಲಿ ಮೀನುಗಳ ಕುರಿತು ಜನಸಾಮಾನ್ಯರಿಗೆ ತಿಳಿವಳಿಕೆ ಕಡಿಮೆ. ನೀರಿನಲ್ಲಿರುವಾಗ ಇವು ಕಚ್ಚಿದರೆ ಮನುಷ್ಯನಿಗೆ ದೊಡ್ಡಮಟ್ಟದ ನೋವು ಉಂಟಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಪ್ರಾಣಹಾನಿಯೂ ಆದದ್ದು ಇದೆ. ಸಮುದ್ರಪಕ್ಷಿಗಳು, ಕಡಲ ಆಮೆ ಮತ್ತು ಇತರ ಮೀನುಗಳ ಆಹಾರವಾಗಿರುವ ಜೆಲ್ಲಿ ಮೀನುಗಳು ಸಾಗರದ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ನೀರಿನಲ್ಲಿರುವ ತ್ಯಾಜ್ಯವನ್ನು ಹೀರಿ ತೆಗೆಯುವ ಜೆಲ್ಲಿ ಮೀನುಗಳು ಇತರ ಸಾಗರಜೀವಿಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಾಯುಗುಣ ಬದಲಾವಣೆ, ಅನಿಯಂತ್ರಿತ ಮೀನುಗಾರಿಕೆ ಮತ್ತು ಸಾಗರ ಮಾಲಿನ್ಯವು ಜೆಲ್ಲಿ ಮೀನುಗಳ ಸಂತತಿ ವೃದ್ಧಿಗೆ ಕಂಟಕಪ್ರಾಯ ಎನಿಸಿವೆ. ತಮ್ಮ ದೇಹದಿಂದ ಹೊಮ್ಮುವ ಬೆಳಕಿನಿಂದ
ಶತ್ರುಗಳನ್ನು ಎದುರಿಸಿ ಬದುಕುವ ಕಲೆ ಜೆಲ್ಲಿ ಮೀನುಗಳಿಗೆ ಸಿದ್ಧಿಸಿದೆ.

ಕೆಲವು ದಿನಗಳಿಂದ ಹಿಡಿದು ಗರಿಷ್ಠ ಎರಡು ವರ್ಷಗಳವರೆಗಿನ ಜೀವಿತಾವಧಿ ಇರುವ ಜೆಲ್ಲಿ ಮೀನುಗಳ ದೇಹದಲ್ಲಿ ಶೇಕಡ 95ರಷ್ಟು ನೀರೇ ಇದೆ. ಮೈಯೆಲ್ಲಾ ಕಣ್ಣಾಗಿರುವ, ಅಂದರೆ 24 ಕಣ್ಣುಗಳಿರುವ ‘ಬಾಕ್ಸ್ ಜೆಲ್ಲಿ ಮೀನು’ಗಳನ್ನು ತಜ್ಞರು ಪತ್ತೆ ಮಾಡಿದ್ದಾರೆ. ಕೆಲವು ಜೆಲ್ಲಿ ಮೀನುಗಳು ತಮಗೆ ವಯಸ್ಸಾಗುವುದನ್ನು ತಡೆಯುವ ಗುಣ ಪಡೆದಿವೆ ಎನ್ನುವ ತಜ್ಞರು, ಇದನ್ನು ಮನುಷ್ಯನಿಗೆ ವಯಸ್ಸಾಗುವುದನ್ನು ನಿಯಂತ್ರಿಸಲು ಬಳಸಬಹುದೇ ಎಂದು ಪರೀಕ್ಷಿಸುತ್ತಿದ್ದಾರೆ.

ಗಂಟೆಗೆ ಎಂಟು ಕಿಲೊಮೀಟರ್ ದೂರ ಈಜುವ ಜೆಲ್ಲಿ ಮೀನುಗಳಲ್ಲಿ ಕೆಲವು ಬಣ್ಣವಿರದಂತೆ ಕಂಡುಬಂದರೆ (ಪಾರದರ್ಶಕ) ಇನ್ನೂ ಹಲವು ಗಾಢ ಗುಲಾಬಿ, ನೀಲಿ, ಹಳದಿ ಮತ್ತು ನೇರಳೆ ಬಣ್ಣಗಳಿಂದ ಕಂಗೊಳಿಸುತ್ತವೆ. ಹತ್ತು ಸಾವಿರಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿರುವ ಜೆಲ್ಲಿ ಮೀನುಗಳು ಸಮುದ್ರ ನೀರಿನ ಉಷ್ಣಾಂಶ ಹೆಚ್ಚಿದಾಗ ತಮ್ಮ ಸಂಖ್ಯೆಯನ್ನು ದ್ವಿಗುಣಗೊಳಿಸಿಕೊಳ್ಳುತ್ತವೆ. ಉಷ್ಣ ಸ್ಥಾವರಗಳ ಬಿಸಿಯನ್ನು ಕಡಿಮೆ ಮಾಡಲು ಕೊಳವೆಗಳಲ್ಲಿ ಹಾಯಿಸುವ ಸಮುದ್ರದ ನೀರಿನಲ್ಲಿ ಸೇರಿಕೊಂಡು ನೀರಿನ ಸರಾಗ ಹರಿವಿಗೆ ಬಹಳ ದೊಡ್ಡ ತೊಂದರೆ ಉಂಟು ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.