ADVERTISEMENT

ಸಂಗತ| ಬಾಲ್ಯವಿವಾಹ ಮತ್ತು ವೈಯಕ್ತಿಕ ಕಾನೂನು

ಪೋಕ್ಸೊ ಕಾನೂನಿನ ಕುರಿತು ಹೈಕೋರ್ಟ್‌ಗಳ ಭಿನ್ನ ವ್ಯಾಖ್ಯಾನಗಳು ಗಮನಾರ್ಹವಾಗಿವೆ

ಸಿ.ಎನ್.ರಾಮಚಂದ್ರನ್
Published 17 ಫೆಬ್ರುವರಿ 2023, 19:07 IST
Last Updated 17 ಫೆಬ್ರುವರಿ 2023, 19:07 IST
SANGATHA==18022023
SANGATHA==18022023   

ಬಾಲ್ಯವಿವಾಹದ ವಿರುದ್ಧ ಅಸ್ಸಾಂ ಸರ್ಕಾರ ಜನವರಿಯಿಂದ ಒಂದು ಅಭಿಯಾನವನ್ನೇ ಪ್ರಾರಂಭಿಸಿದೆ. 18 ವರ್ಷವಾಗದ ಯುವತಿ ಅಥವಾ 21 ವರ್ಷವಾಗದ ಯುವಕನ ವಿವಾಹವು ‘ಬಾಲ್ಯವಿವಾಹ’ದ ವ್ಯಾಪ್ತಿಗೆ ಒಳಪಡುತ್ತದೆ. ಸರ್ಕಾರದ ಈ ಅಭಿಯಾನವು ಎಷ್ಟು ಕಠಿಣವಾಗಿದೆಯೆಂದರೆ, ‘ಇದು ಬಾಲ್ಯವಿವಾಹ’ ಎಂದು ಗುರುತಿಸಿದ ಕೂಡಲೇ ಪತಿಯನ್ನು ಬಂಧಿಸಿ ಜೈಲಿಗೆ ಕಳಿಸಲಾಗುತ್ತಿದೆ. ಪತ್ರಿಕಾ ವರದಿಗಳ ಪ್ರಕಾರ, ಈವರೆಗೆ ಈ ರೀತಿ ಬಂಧನಕ್ಕೆ ಒಳಗಾಗಿರುವವರ ಸಂಖ್ಯೆ ಮೂರು ಸಾವಿರಕ್ಕಿಂತ ಹೆಚ್ಚು.

ಹೀಗೆ ಬಾಲ್ಯವಿವಾಹದ ಸಂಬಂಧ ಬಂಧಿತರಾದ ಕುಟುಂಬವೊಂದರ ಸ್ತ್ರೀಯರು ಆ ರಾಜ್ಯದ ಲಾಹರಿಪಾಡಾ ಎಂಬ ಪೊಲೀಸ್ ಠಾಣೆಯ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು. ಬಂಧಿತ ವ್ಯಕ್ತಿಯೊಬ್ಬನೇ ತಮ್ಮ ಕುಟುಂಬದಲ್ಲಿ ದುಡಿಯುವವನಾಗಿರುವುದರಿಂದ ಈಗ ತಾವು ಅನಾಥರಾಗಿದ್ದೇವೆ. ಅನ್ನಾಹಾರಕ್ಕೂ ಗತಿಯಿಲ್ಲದಂತೆ ಆಗಿದೆ ಎಂದು ಅಳಲು ತೋಡಿಕೊಂಡರು.

ಇವರಂತೆಯೇ ಬಂಧಿತರಾಗಿರುವ ಇತರ ಕುಟುಂಬಗಳಲ್ಲಿ ಎಲ್ಲ ಧರ್ಮಗಳಿಗೂ ಸೇರಿದವರು ಇದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದಾರೆ. ಆದರೂ ವಾಸ್ತವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಧಿತರಾಗಿರುವವರು ಇಸ್ಲಾಂ ಧರ್ಮಕ್ಕೆ ಸೇರಿದವರು. ಕಾರಣ, ಅವರು ಅನುಸರಿಸುವ ಶರಿಯತ್ ಕಾನೂನು. ಈ ಕಾನೂನಿನ ಪ್ರಕಾರ, ವಿವಾಹಕಾಲದಲ್ಲಿ ಕನ್ಯೆಗೆ 15 ವರ್ಷಗಳಾಗಿದ್ದರೆ ಸಾಕು, ಆ ವಿವಾಹವು ಸಿಂಧು. ಈಗೊಂದು ವರ್ಷದತನಕ ಇಂತಹ ವಿವಾಹಗಳನ್ನು ನ್ಯಾಯಾಲಯಗಳೂ ಮಾನ್ಯ ಮಾಡುತ್ತಿದ್ದವು.

ADVERTISEMENT

ಈ ಸಂದರ್ಭದಲ್ಲಿ, ಕೇರಳ ಹೈಕೋರ್ಟ್ 2022ರಲ್ಲಿ ನೀಡಿರುವ ತೀರ್ಪನ್ನು ಉಲ್ಲೇಖಿಸಬೇಕು. 2021ರಲ್ಲಿ, 31 ವರ್ಷದ ಮುಸ್ಲಿಂ ಪುರುಷನೊಬ್ಬ 18 ವರ್ಷಗಳಾಗದ ಅದೇ ಸಮುದಾಯದ ಕನ್ಯೆಯನ್ನು ಮದುವೆಯಾದ. ಪಶ್ಚಿಮ ಬಂಗಾಳದ ಆ ಕನ್ಯೆಯನ್ನು ಮದುವೆಯ ನಂತರ ಕೇರಳಕ್ಕೆ ಕರೆದುಕೊಂಡು ಬಂದು, ಅಲ್ಲಿಯೇ ನೆಲೆಸಿದ. ಆನಂತರ, ಗರ್ಭಿಣಿಯಾದ ಆಕೆಯು ಆರೋಗ್ಯ ಕೇಂದ್ರವೊಂದಕ್ಕೆ ತಪಾಸಣೆಗೆಂದು ತೆರಳಿದ್ದಳು. ಆಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು, ಆಕೆ ಇನ್ನೂ ಅಪ್ರಬುದ್ಧಳೆಂಬುದನ್ನು ಅರಿತು, ಆ ವಿಷಯವನ್ನು ಪೊಲೀಸ್ ಠಾಣೆಯ ಗಮನಕ್ಕೆ ತಂದರು. ಕೂಡಲೇ, ಅಪಹರಣ, ಅತ್ಯಾಚಾರ, ಬಾಲ್ಯವಿವಾಹದಂತಹ ಅಪರಾಧಗಳ ಆರೋಪದಲ್ಲಿ ಪತಿಯನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿಟ್ಟರು. ಜಾಮೀನು ಕೋರಿ ಆತ ಕೇರಳ ಹೈಕೋರ್ಟ್ ಮೆಟ್ಟಿಲೇರಿದ. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯದ ಏಕಸದಸ್ಯ ಪೀಠವು 2022ರ ನವೆಂಬರ್ 18ರಂದು ನೀಡಿದ ತೀರ್ಪಿನಲ್ಲಿ ಆತನಿಗೆ ಜಾಮೀನನ್ನು ನಿರಾಕರಿಸಿತು.

ಆರೋಪಿಯ ವಕೀಲರು, ‘ಇದೊಂದು ನ್ಯಾಯಯುತ ವಿವಾಹ. ಮುಸ್ಲಿಮರಿಗೆ ಅನ್ವಯವಾಗುವ ಶರಿಯತ್ ಕಾನೂನಿನ ಪ್ರಕಾರ, ಕನ್ಯೆಗೆ 15 ವರ್ಷಗಳಾಗಿದ್ದರೆ ಸಾಕು, ಅವಳು ವಿವಾಹಕ್ಕೆ ಅರ್ಹಳು. ಈ ಮೊಕದ್ದಮೆಯ ಸಂದರ್ಭದಲ್ಲಿ, ಮದುವೆಯಾಗುವಾಗ ಆಕೆಗೆ 15 ವರ್ಷವಾಗಿತ್ತು. ಆದ್ದರಿಂದ ಆರೋಪಿ ಜಾಮೀನು ಪಡೆಯಲು ಅರ್ಹನಾಗಿದ್ದಾನೆ’ ಎಂದು ವಾದಿಸಿದರು.

ಆದರೆ, ನ್ಯಾಯಮೂರ್ತಿಗಳು ಆ ವಾದವನ್ನು ಒಪ್ಪಲಿಲ್ಲ. ಅವರು ನೀಡಿದ ತೀರ್ಪಿನ ಮುಖ್ಯಾಂಶಗಳು ಹೀಗಿವೆ: ‘ಬಹುಕಾಲದಿಂದ ಮುಸ್ಲಿಮರು ಶರಿಯತ್ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿದ್ದಾರೆ ಮತ್ತು ಅದು ಸಿಂಧುವಾಗಿದೆ ಕೂಡಾ. ಆದರೆ, 2006ರಲ್ಲಿ ಪೋಕ್ಸೊ ಕಾನೂನು (ದಿ ಪ್ರೊಟೆಕ್ಷನ್‌ ಆಫ್‌ ಚಿಲ್ಡ್ರನ್‌ ಫ್ರಮ್‌ ಸೆಕ್ಷುಯಲ್‌ ಅಫೆನ್ಸನ್‌ ಆ್ಯಕ್ಟ್‌– ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆ) ಜಾರಿಯಾಯಿತು. ಈ ಶಾಸನವು ಪ್ರಬುದ್ಧತೆ ಇಲ್ಲದವರನ್ನು, ಮಕ್ಕಳನ್ನು, ದುರ್ಬಲರನ್ನು ರಕ್ಷಿಸಲು ರಚಿಸಿರುವಂತಹ ವಿಶಿಷ್ಟ ಕಾನೂನು. ಆದ್ದರಿಂದ ಇದರ ನಿಯಮಗಳು ಎಲ್ಲ ವೈಯಕ್ತಿಕ ಕಾನೂನುಗಳನ್ನೂ (ಪರ್ಸನಲ್‌ ಲಾಸ್‌) ಮೀರುತ್ತವೆ. ಶರಿಯತ್‍ಗೆ ಕೂಡಾ ಪೋಕ್ಸೊ ಕಾನೂನು ಅನ್ವಯಿಸುತ್ತದೆ’.

ಆದರೆ, ಗುವಾಹಟಿ ಹೈಕೋರ್ಟ್ ಇತ್ತೀಚೆಗೆ ಇದಕ್ಕೆ ವ್ಯತಿರಿಕ್ತವಾದ ತೀರ್ಪು ನೀಡಿದ್ದು, 9 ಮಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಸ್ಸಾಂ ಸರ್ಕಾರಕ್ಕೆ ಈ ಪ್ರಶ್ನೆಗಳನ್ನು ಕೇಳಿದೆ: ‘ಇದರಲ್ಲಿ ಪೋಕ್ಸೊ ಕಾಯ್ದೆ ಅಡಿ ಬರುವ ಅಪರಾಧ ಯಾವುದು? ಈ ಬಂಧನ ಕಾರ್ಯಾಚರಣೆಯು ಪ್ರಜೆಗಳ ಖಾಸಗಿ ಬದುಕಿನ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತಿದೆ. ಮೊದಲು ಆರೋಪಿಗಳ ವಿಚಾರಣೆ ನಡೆಯಲಿ, ಆನಂತರ ಅವರು ಅಪರಾಧಿಗಳೆಂದು ಸಾಬೀತಾದರೆ, ಅವರಿಗೆ ಶಿಕ್ಷೆಯಾಗುವುದಿಲ್ಲವೇ?’

ಎಲ್ಲ ಪ್ರಜೆಗಳಿಗೂ ಸಮಾನವಾಗಿ ಅನ್ವಯವಾಗಬೇಕೆನ್ನುವ 2006ರ ‘ಬಾಲ್ಯವಿವಾಹ ತಡೆ ಶಾಸನ’ ಮತ್ತು ಇಸ್ಲಾಂ ಧರ್ಮಾನುಯಾಯಿ
ಗಳಿಗೆ ಅನ್ವಯಿಸುವ 1936ರ ‘ಶರಿಯತ್ ಶಾಸನ’ದ ನಡುವಿನ ವೈರುಧ್ಯವನ್ನು ಈಗ ಸುಪ್ರೀಂ ಕೋರ್ಟ್ ಮಾತ್ರ ಬಗೆಹರಿಸಲು ಸಾಧ್ಯ.

ಇಂತಹ ಪ್ರಕರಣಗಳು, ಒಂದು ಬೃಹತ್ ರಾಷ್ಟ್ರವು ‘ಬಹುತ್ವ’ವೆಂಬ ಅಮೂರ್ತ ತತ್ವವನ್ನು ವಾಸ್ತವದಲ್ಲಿ ಅಳವಡಿಸಿಕೊಳ್ಳಲು ಮುಂದಾದಾಗ ಅನೇಕಾನೇಕ ಸಂದಿಗ್ಧಗಳನ್ನು ಹಾಗೂ ಸೂಕ್ಷ್ಮ ದ್ವಂದ್ವಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಠೋರ ಸತ್ಯವನ್ನು ಮನೋಜ್ಞವಾಗಿ ನಿದರ್ಶಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.