ಕನ್ನಡದಲ್ಲಿ ಕಾಲಕಾಲಕ್ಕೆ ಒಂದಿಡೀ ಕಾಲಘಟ್ಟವನ್ನು ಪ್ರಭಾವಿಸಿದ ‘ವಿದ್ಯಮಾನ’ ಅಥವಾ ಬರೆಯುವ ಎಲ್ಲರೊಳಗೆ ಒಂದು ಪ್ರಧಾನ ಎಳೆಯಾಗಿ ಹಾದು ಹೋದ ಸಂಗತಿಗಳನ್ನು ಆಧರಿಸಿ ಒಂದು ಸಾಹಿತ್ಯದ ಘಟ್ಟವನ್ನು ಹೆಸರಿಸಿದ್ದೇವೆ. ಹೀಗೆ ಅವುಗಳನ್ನು ನವ್ಯ, ನವೋದಯ, ಪ್ರಗತಿಶೀಲ, ದಲಿತ, ಬಂಡಾಯ ಎಂದೆಲ್ಲ ಗುರುತಿಸಿದ್ದೇವೆ. ಕನ್ನಡ ಸಾಹಿತ್ಯದ ಹಿಂದಿನ ಒಂದೆರಡು ದಶಕಗಳಲ್ಲಿ ಬರಹಗಾರರ ಮೇಲೆ ಪ್ರಭಾವ ಬೀರಿರುವ ಅಂಶಗಳನ್ನು ಪರಿಶೀಲಿಸಿದರೆ, ಮುನ್ನೆಲೆಗೆ ಬರುವುದು ಸಾಹಿತ್ಯ ‘ಸ್ಪರ್ಧೆ’, ‘ಬಹುಮಾನ’ ಮತ್ತು ‘ಪ್ರಶಸ್ತಿ’ಗಳೆಂಬ ಪ್ರೋತ್ಸಾಹದ ಹೆಸರಿನ ಆಮಿಷಗಳು.
ಇದನ್ನು ವಿವರವಾಗಿ ಪರಿಶೀಲಿಸೋಣ. ಒಂದೆ ರಡು ದಶಕಗಳಿಂದ ಬರಹ ವಲಯವನ್ನು ಪ್ರವೇಶಿಸ ಬಯಸುವ ಬಹುತೇಕರಿಗೆ ಕತೆ, ಕವಿತೆ, ಕಾದಂಬರಿ ಸ್ಪರ್ಧೆಗಳು, ಬಹುಮಾನಗಳು, ಪ್ರಶಸ್ತಿಗಳು ಒಂದು ಗುರುತನ್ನು ಕೊಟ್ಟು ಬರಹ ಲೋಕದ ಒಳಕ್ಕೆ ಕರೆದುಕೊಳ್ಳುತ್ತಿವೆ. ಹೀಗೆ ಸ್ಪರ್ಧೆ, ಬಹುಮಾನ, ಪ್ರಶಸ್ತಿಗಳ ಕೈಹಿಡಿದು ಸಾಹಿತ್ಯಲೋಕವನ್ನು ಪ್ರವೇಶಿಸುವ ಬರಹಗಾರರಲ್ಲಿ ಅನೇಕರು ಮತ್ತದೇ ಸ್ಪರ್ಧೆ, ಪ್ರಶಸ್ತಿ ಗಾಗಿ ಬರೆಯಲು ತೊಡಗುತ್ತಾರೆ. ಬರೆಯುವ ಹೊಸ ತಲೆಮಾರಿಗೆ ‘ಯಾಕಾಗಿ ಬರೆಯುತ್ತಿದ್ದೀರಿ?’ ಎಂದರೆ, ತಕ್ಷಣಕ್ಕೆ ‘ಪ್ರಶಸ್ತಿಗಾಗಿ’ ಎಂದೇ ಉತ್ತರಿಸಬಹುದು ಅಥವಾ ಬೇರೆ ಉತ್ತರ ಕೊಡ ಬಹುದು. ಈ ಅರ್ಥದಲ್ಲಿ ಸಾಹಿತ್ಯ ಸ್ಪರ್ಧೆ, ಬಹುಮಾನ, ಪ್ರಶಸ್ತಿಗಳ ಜನಪ್ರಿಯತೆಯು ಆಧುನಿಕ ಮಾರುಕಟ್ಟೆಯ ವ್ಯಕ್ತಿವಾದಿ ಕೊಡುಗೆಯಾಗಿದೆ.
ಬರಹವನ್ನು ಉತ್ತೇಜಿಸಲು ಬಹುಮಾನವನ್ನೋ ಪ್ರಶಸ್ತಿಯನ್ನೋ ಕೊಡುವುದು ತಪ್ಪಲ್ಲ. ಆರಂಭದ ಬರಹಗಾರರಿಗೆ ಪ್ರೋತ್ಸಾಹದ ನೆಲೆಯಲ್ಲಿ ಸರಿ. ಆದರೆ ಒಮ್ಮೆ ಪ್ರಶಸ್ತಿ ಪಡೆದವರಿಗೆ ಪ್ರಶಸ್ತಿಗಳನ್ನು ಹೊರತುಪಡಿಸಿ ಬರೆಯುವ ಅಭ್ಯಾಸವೇ ಇಲ್ಲದಂತೆ ಆಗುತ್ತಿರುವುದು ದುರಂತ. ಪ್ರಶಸ್ತಿ ಪಡೆಯುವುದಕ್ಕೆ ಮಾತ್ರವಲ್ಲ, ಪ್ರಶಸ್ತಿಗಳನ್ನು ಕೊಡಲು ಸಹ ವಿವಿಧ ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರ ನೂಕುನುಗ್ಗಲು ನಡೆಸಿವೆ. ಇದೊಂದು ಅಚ್ಚರಿಯ ಸಂಗತಿ.
ಶಾಲಾ ಶಿಕ್ಷಣದಲ್ಲಿ ಒಂದು ತರಗತಿ ಪಾಸಾದವರು ಮುಂದಿನ ತರಗತಿಗೆ ಹೋಗುತ್ತಾರೆ. ಅಕಸ್ಮಾತ್ ಹಿಂದಿನ ತರಗತಿಯಲ್ಲಿ ಪಾಸಾಗದಿದ್ದವರು ಮಾತ್ರ ಮತ್ತದೇ ತರಗತಿಯ ಪರೀಕ್ಷೆ ಬರೆಯುತ್ತಾರೆ. ಆದರೆ ಸಾಹಿತ್ಯ ಸ್ಪರ್ಧೆಯಲ್ಲಿ ಹಾಗಲ್ಲ. ಒಂದು ಸ್ಪರ್ಧೆಯಲ್ಲಿ ಗೆದ್ದವರು ಮತ್ತದೇ ಸ್ಪರ್ಧೆಗೆ ಸ್ಪರ್ಧಿಸುತ್ತಲೇ ಇರುತ್ತಾರೆ. ಒಂದು ಕಥನ ಮಾದರಿಯನ್ನೇ ಹುಟ್ಟುಹಾಕಿದವರಲ್ಲಿಯೂ ಇಂತಹ ನಡೆ ಕಂಡುಬರುತ್ತಿರುವುದು ಆತಂಕದ ಸಂಗತಿಯಾಗಿದೆ. ಅಂದರೆ, ಹೆಚ್ಚು ಮೊತ್ತದ ಬಹುಮಾನ ಹೊಂದಿರುವ ಸ್ಪರ್ಧೆಗಳು ಬರೆಯುವ ವರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿವೆಯೇನೋ ಅಂದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಸ್ಪರ್ಧೆ, ಪ್ರಶಸ್ತಿಗಳು ಹೆಚ್ಚಾದಂತೆ ಇವು ಒಂದು ಬಗೆಯ ಬರಹದ ಮಾದರಿಗಳನ್ನು ಹುಟ್ಟುಹಾಕು ತ್ತವೆ. ಹೇಗೆ ಮತ್ತು ಯಾವ ವಿಷಯ ಬರೆದರೆ ಸ್ಪರ್ಧೆ ಗೆಲ್ಲಬಹುದು, ಪ್ರಶಸ್ತಿ ಪಡೆಯಬಹುದು ಎಂಬ ‘ತರಬೇತಿ’ ಆದಾಗ ಈ ಮಾದರಿಯ ಕೃತಕ, ಅಪ್ರಾಮಾ ಣಿಕ ಬರಹಗಳು ಸೃಷ್ಟಿಯಾಗುತ್ತವೆ. ಅಂತೆಯೇ ಬರಹದ ಜತೆ ಅನ್ಯ ಪ್ರಭಾವಗಳನ್ನು ಬಳಸಿ ಹೇಗೆ ಪ್ರಶಸ್ತಿ ಗಳನ್ನು ಪಡೆದುಕೊಳ್ಳಬಹುದು ಮತ್ತು ಸ್ಪರ್ಧೆಗಳಲ್ಲಿ ಗೆಲ್ಲಬಹುದು ಎನ್ನುವುದರಲ್ಲಿ ಬರಹಗಾರರು ಕಾರ್ಯಪ್ರವೃತ್ತರಾಗುತ್ತಾರೆ. ಇದಕ್ಕಾಗಿ ಕೆಟ್ಟದಾದ ಲಾಬಿಗಳಲ್ಲಿ ತೊಡಗುತ್ತಾರೆ. ಗುಂಪುಗಾರಿಕೆ ಶುರುವಾಗುತ್ತದೆ. ಆತ್ಮಸಾಕ್ಷಿಯನ್ನು ಕೊಂದುಕೊಂಡು, ಸಾಹಿತ್ಯದ ಮೂಲ ಬೇರು ಎಂದು ಗುರುತಿಸಬಹುದಾದ ಸೂಕ್ಷ್ಮ ಮನೋಭಾವ ಮರೆಯಾಗಿ, ಲಜ್ಜೆಗೆಟ್ಟ ನಡತೆಗಳನ್ನು ರೂಢಿಸಿಕೊಳ್ಳುತ್ತಾರೆ. ನಿಧಾನಕ್ಕೆ ಕೃತಕ ನಡಾವಳಿಗಳು, ಉಬ್ಬು ಮಾತುಗಳು, ಹೊಗಳಿಕೆ, ಓಲೈಕೆ ರೂಢಿಯಾಗಿ ಅವು ಸಹಜವಾಗುತ್ತವೆ. ಇದೀಗ ಕನ್ನಡದಲ್ಲಿ ಕೆಲವು ಅಪವಾದಗಳನ್ನು ಹೊರತುಪಡಿಸಿ ಹಿರಿಯರು ಕಿರಿಯ ರೆನ್ನದೆ ಅನೇಕರು ಇಂತಹ ರೂಢಿಯ ಭಾಗವಾಗಿದ್ದಾರೆ.
ಆಧುನಿಕತೆಯ ಉಪ ಉತ್ಪನ್ನವೆಂದರೆ ಮನುಷ್ಯ ರನ್ನು ‘ವ್ಯಕ್ತಿವಾದಿ’ಗಳನ್ನಾಗಿಸುವುದು. ಇದು ಭ್ರಷ್ಟಾಚಾರ, ಅನೈತಿಕತೆ, ಮೂಲಭೂತವಾದ, ಸರ್ವಾಧಿಕಾರ, ಮನುಷ್ಯವಿರೋಧಿ ನಡೆಗಳನ್ನು ವಿರೋಧಿಸದ, ಈ ಎಲ್ಲವನ್ನೂ ಮೌನವಾಗಿಯೇ ಒಪ್ಪಿಕೊಂಡ ಒಂದು ಗುಣ. ಆಧುನಿಕ ಮಾರುಕಟ್ಟೆಯು ವ್ಯಕ್ತಿಗಳನ್ನು ಬಿಡಿಬಿಡಿ ಘಟಕಗಳನ್ನಾಗಿಸುತ್ತದೆ. ವ್ಯಕ್ತಿ ವ್ಯಕ್ತಿಗಳ ನಡುವೆ ಸ್ಪರ್ಧೆಯನ್ನು ಹುಟ್ಟುಹಾಕುತ್ತದೆ. ವ್ಯಕ್ತಿಗಳ ನಡುವಿನ ಅಂತರವನ್ನು ಹೆಚ್ಚಿಸಿ, ಜನರೆಲ್ಲಾ ಒಟ್ಟಾಗದಂತೆ, ಒಂದು ದೊಡ್ಡ ಶಕ್ತಿಯಾಗದಂತೆ ತಡೆಯುತ್ತದೆ. ಆಳದಲ್ಲಿ ಈ ಸಾಹಿತ್ಯ ಸ್ಪರ್ಧೆಗಳು, ಪ್ರಶಸ್ತಿಗಳು ಹೀಗೆ ಬರೆಯುವವರನ್ನು ‘ವ್ಯಕ್ತಿವಾದಿ’ಗಳನ್ನಾಗಿ ತರಬೇತುಗೊಳಿಸು
ತ್ತವೆ. ಹಾಗಾಗಿ, ಬರೆಯುವವರಲ್ಲಿ ವ್ಯವಸ್ಥೆಯ ಬಗೆಗೆ ಸಿಟ್ಟು, ಆಕ್ರೋಶ ಇಲ್ಲದಂತಾಗಿ, ವ್ಯವಸ್ಥೆಯನ್ನು ಓಲೈಸುವ ಅಥವಾ ವ್ಯವಸ್ಥೆಯ ಬಗೆಗೆ ಮೌನ ತಾಳುವ ಸಿನಿಕರಾಗಿ ಅವರು ಬದಲಾಗುತ್ತಾರೆ. ಬೇರೆಯವರ ಸಾಹಿತ್ಯ ಅಥವಾ ಬರಹದ ಬಗ್ಗೆ ಪ್ರಾಮಾಣಿಕ ವಿಮರ್ಶೆ ಇಲ್ಲದೆ ಹೊಗಳುಭಟ್ಟರಾಗುತ್ತಾರೆ. ಇದರ ಭಾಗವಾಗಿಯೇ ದೇಶವ್ಯಾಪಿ ಲಿಟರರಿ ಫೆಸ್ಟುಗಳು ತಲೆ ಎತ್ತುತ್ತಿವೆ. ಇದು ನಾನು ಗ್ರಹಿಸಿದಂತೆ ಕನ್ನಡ ಸಾಹಿತ್ಯ ವಲಯದ ಸದ್ಯದ ಚಹರೆಯಾಗಿದೆ. ಹಾಗಾಗಿಯೇ ಕನ್ನಡ ಸಾಹಿತ್ಯ ವಲಯವು ಒಂದು ವಾಗ್ವಾದವನ್ನು ಹುಟ್ಟುಹಾಕುವ ಚರ್ಚೆ, ಸಂವಾದಗಳು ನಡೆಯದೆ ಬರಡಾಗಿದೆ. ವಿಮರ್ಶೆ ಪಾತಾಳಕ್ಕಿಳಿದಿದೆ. ಈ ಸಂಗತಿ ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಕಾಲಘಟ್ಟವನ್ನು ‘ಪ್ರಶಸ್ತಿ ಸಾಹಿತ್ಯ’ದ ಓಲೈಕೆ ಕಾಲಘಟ್ಟ ಎಂದು ಕರೆಯಬಹುದೇನೊ?!
ಲೇಖಕ: ಸಹಾಯಕ ಪ್ರಾಧ್ಯಾಪಕ, ಡಾ. ಅಂಬೇಡ್ಕರ್ ಕಲಾ- ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರ, ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.