ಹಸಿವೆಯಿಂದ ಕುಸುಗುಡುವ ಮಗುವನ್ನು ಹೊತ್ತು ಚಡಪಡಿಸುವ ತಾಯಿಗೆ ಅತ್ತ ಇತ್ತ ಯಾರಾದರೂ ಕಂಡರೆ ಎಂದು ಮುಜುಗರದಿಂದ ಕಣ್ಣಾಡಿಸುತ್ತಾ, ಎಲ್ಲೆಲ್ಲೋ ಕುಳಿತು ಮೈಯ್ಯನ್ನು ಹಿಡಿಯಾಗಿಸಿ ಈ ಕೆಲಸ ಮಾಡಬೇಕಾದ ಅನಿವಾರ್ಯ... ಹಾಗಿದ್ದೂ ಎಲ್ಲವನ್ನೂ ಮೀರಿ ಗಾಸಿಗೊಳಿಸುವ ಕ್ರೂರ– ಕಾಮುಕ ನೋಟ, ವ್ಯಂಗ್ಯ ನುಡಿ... ಅಷ್ಟಕ್ಕೂ ಆ ತಾಯಿ ಮಾಡುತ್ತಿರುವ ಕೆಲಸ? ಮಗುವಿಗೆ ಹಾಲುಣಿಸುವ ಸಹಜಕ್ರಿಯೆ!
ಸಾರ್ವಜನಿಕ ಸ್ಥಳಗಳಲ್ಲಿ ಮಗುವಿಗೆ ಹಾಲುಣಿಸುವುದು ತಾಯಂದಿರು ಎದುರಿಸುವ ಬಹುದೊಡ್ಡ ಸಮಸ್ಯೆ. ಹೀಗಿರುವಾಗ ರೈಲ್ವೆ ಇಲಾಖೆ, ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ವಿಭಾಗದ ಎಂಟು ಕಡೆ ಹಾಲುಣಿಸಲು ಕೊಠಡಿ ವ್ಯವಸ್ಥೆ ಯೋಜನೆ ರೂಪಿಸಿರುವುದು ನಿಜಕ್ಕೂ ಒಳ್ಳೆಯ ಕ್ರಮ. ಇದರಿಂದಾಗಿ ಹಾಲುಣಿಸುವಾಗ, ಚಿಕ್ಕ ಮಕ್ಕಳಿಗೆ ಆಹಾರ ತಿನಿಸುವಾಗ ತಾಯಿ ಮತ್ತು ಮಗುವಿನ ಖಾಸಗಿತನಕ್ಕೆ ಭಂಗ ಬರುವುದಿಲ್ಲ. ಜತೆಗೆ ಆಹಾರ ನೀಡುವ ಪ್ರಕ್ರಿಯೆ ಸ್ವಚ್ಛ ಪರಿಸರದಲ್ಲಿ ಸುಲಭವಾಗಿ ಮತ್ತು ಸುಗಮವಾಗಿ ನಡೆಯಲು ಸಹಾಯಕ.
ಈ ಕೊಠಡಿಗಳಲ್ಲಿ ಕುಳಿತುಕೊಳ್ಳಲು ಅನುಕೂಲಕರವಾದ ಮೆತ್ತನೆಯ ಸೀಟು ಮತ್ತು ಡೈಪರ್ ಬದಲಾಯಿಸಲು ಸುಸಜ್ಜಿತವಾದ ಟೇಬಲ್ ವ್ಯವಸ್ಥೆ ಇರುತ್ತದೆ. ಕುಡಿಯಲು ನೀರು, ಗಾಳಿಗೆ ಫ್ಯಾನು ಮತ್ತು ಬೆಳಕಿಗಾಗಿ ದೀಪದ ವ್ಯವಸ್ಥೆಯನ್ನೂ ಮಾಡಲಾಗಿದೆ. ಹಾಗೆಯೇ ಹೊಲಸಾದ ಡೈಪರ್‌ಗಳನ್ನು ಬಿಸಾಡಲು ಕಸದ ಬುಟ್ಟಿಯನ್ನು ಇಡಲಾಗಿದ್ದು ಕಾಲಕಾಲಕ್ಕೆ ಅದರ ಸ್ವಚ್ಛತೆಯನ್ನು ಮಾಡಲಾಗುವುದು. ಈಗಾಗಲೇ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಇರುವ ಹಾಲುಣಿಸುವ ಕೊಠಡಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬೆಂಗಳೂರಿನ ರೈಲು ನಿಲ್ದಾಣಗಳಲ್ಲಿ ಆರಂಭಿಸಿ ನಂತರ ರಾಜ್ಯದ ಎಲ್ಲಾ ಕಡೆ ಇದನ್ನು ವಿಸ್ತರಿಸುವ ಆಲೋಚನೆ ಇದೆ ಎಂದು ತಿಳಿಸಲಾಗಿದೆ.
ತಾಯಿಯ ಹಾಲು ಮಗುವಿಗೆ ಅಮೃತ ಎನ್ನುವ ಘೋಷಣೆಯನ್ನು ಕೇಳುತ್ತಲೇ ಬಂದಿದ್ದರೂ ಎದೆಹಾಲು ನೀಡುವುದೆಂದರೆ ಯಾರಿಗೂ ಕಾಣದ ಹಾಗೆ ಗುಟ್ಟಾಗಿ ಮಾಡಬೇಕಾದ ಕ್ರಿಯೆ ಎನ್ನುವ ನಂಬಿಕೆ ನಮ್ಮಲ್ಲಿ ಬಲವಾಗಿಯೇ ಬೇರೂರಿದೆ. ಭಾರತದಲ್ಲಿ ಶೇ 6ರಷ್ಟು ಮಹಿಳೆಯರು ಮಾತ್ರ ಸಾರ್ವಜನಿಕವಾಗಿ ಹಾಲುಣಿ
ಸುವುದನ್ನು ಅನುಮೋದಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಲುಣಿಸಿದರೆ ಕೊಂಕುಮಾತು- ಕೊಳಕು ನೋಟಗಳನ್ನು ಎದುರಿಸುವುದೇ ಹೆಚ್ಚು. ಹೀಗಾಗಿ ಹಾಲುಣಿಸುವ ಸಹಜಕ್ರಿಯೆ ಬಹಳಷ್ಟು ತಾಯಂದಿರಿಗೆ ನಾಚಿಕೆಯ ವಿಷಯವಾಗಿದೆ. ಅದರೊಂದಿಗೆ ಎಲ್ಲಾದರೂ ತಮ್ಮ ದೇಹ ಪ್ರದರ್ಶನವಾದರೆ ಎನ್ನುವ ಹೆದರಿಕೆಯೂ ಸೇರಿದೆ. ಆದರೆ ಸಮಸ್ಯೆ ಎಂದರೆ ಪ್ರಯಾಣದ ಸಮಯದಲ್ಲಿ ಬಸ್‌ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳು ಮಾತ್ರವಲ್ಲ ಅತ್ಯಾಧುನಿಕ ಮಾಲ್‍ಗಳಲ್ಲಿಯೂ ಮಗುವಿಗೆ ಹಾಲುಣಿಸಲು ಯಾವುದೇ ರೀತಿಯ ಪ್ರತ್ಯೇಕ ವ್ಯವಸ್ಥೆ ಇಲ್ಲ.
ಕೆಲ ವರ್ಷಗಳ ಹಿಂದೆ ಕೋಲ್ಕತ್ತದ ಅತ್ಯಾಧುನಿಕ ಮಾಲ್‍ನಲ್ಲಿ ಅಳುತ್ತಿದ್ದ ಏಳು ತಿಂಗಳ ಮಗುವಿಗೆ ನೆಲದಲ್ಲಿ ಕುಳಿತು ಹಾಲುಣಿಸಲು ತಾಯಿ ಪ್ರಯತ್ನಿಸಿದ್ದಳು. ಕೂಡಲೇ ‘ಮಾಲ್ ಇರುವುದು ಶಾಪಿಂಗ್‍ಗೆ ಮಾತ್ರ! ಇಲ್ಲಿ ನೆಲದ ಮೇಲೆ ಕುಳಿತು ಹಾಲು ಉಣಿಸುವಂತಿಲ್ಲ. ಹಾಗಾಗಿ ನೀವು ನಿಮ್ಮ ಮನೆಯ ಕೆಲಸವನ್ನೆಲ್ಲ ಮನೆಯಲ್ಲೇ ಮುಗಿಸಿ ಅಥವಾ ಸರಿಯಾಗಿ ಪ್ಲಾನ್ ಮಾಡಿಕೊಂಡು ಮಾಲ್‍ಗೆ ಬನ್ನಿ. ಬೇಕಾದರೆ ವಾಶ್‍ರೂಮಿನಲ್ಲಿ ಕುಡಿಸಿ’ ಎಂದು ಸಿಬ್ಬಂದಿ ಆಕೆಗೆ ಹೆದರಿಸಿದ್ದು ಸುದ್ದಿಯಾಗಿತ್ತು. ಕೆಲಸ ಮಾಡುವ ಸ್ಥಳಗಳಲ್ಲಿಯೂ ಹಾಲುಣಿಸುವ ಸುಸಜ್ಜಿತ ಸೌಲಭ್ಯಗಳಿಲ್ಲದೇ ಮಹಿಳೆಯರು ತೊಂದರೆಗಳನ್ನು ಅನುಭವಿಸು
ತ್ತಿದ್ದಾರೆ. ಕಾನೂನಿನ ಪ್ರಕಾರ ಐವತ್ತಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ ಹತ್ತಿರದಲ್ಲಿಯೇ ಶಿಶುಪಾಲನಾ ಸೌಲಭ್ಯವನ್ನು ಕಂಪನಿ ನೀಡಬೇಕು. ದಿನಕ್ಕೆ ನಾಲ್ಕು ಬಾರಿ ಈ ಕೇಂದ್ರಕ್ಕೆ ತೆರಳಿ ಆಹಾರ ನೀಡಲು ತಾಯಿಗೆ ಅನುಮತಿ ಇದೆ. ಆದರೆ ಈ ಸೌಲಭ್ಯ ನೀಡುವವರೂ, ಬಳಸುವವರೂ ಕಡಿಮೆ.
ವೈದ್ಯರು ‘ಮಗುವಿಗೆ ಆರು ತಿಂಗಳು ಬರೀ ಎದೆ ಹಾಲನ್ನೇ ಕುಡಿಸಬೇಕು. ನಂತರ ಬೇರೆ ಆಹಾರದ ಜತೆ ಎದೆ ಹಾಲನ್ನೂ ಕುಡಿಸಬೇಕು. ತಾಯಿಯ ಹಾಲು, ಮಗುವಿಗೆ ಎಲ್ಲ ಪೌಷ್ಟಿಕಾಂಶಗಳನ್ನು ಒಳಗೊಂಡ ಸಂಪೂರ್ಣ ಆಹಾರ. ಇದರಿಂದ ವಂಚಿತವಾದ ಮಗು ಅಪೌಷ್ಟಿಕತೆಯಿಂದ ಬಳಲುವುದಲ್ಲದೇ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಹಿಂದುಳಿಯುತ್ತದೆ. ಹಾಲುಣಿಸುವ ಮಹಿಳೆಯರು ದಿನಕ್ಕೆ ಎಂಟರಿಂದ ಹತ್ತು ಬಾರಿ ಹಾಲುಣಿಸದಿದ್ದರೆ ಹಾಲು, ಸ್ತನಗಳಲ್ಲಿ ತುಂಬಿಕೊಳ್ಳುತ್ತದೆ. ಹಾಲಿನ ಒತ್ತಡ ಹೆಚ್ಚಿ
ದಂತೆ ತೀವ್ರತರವಾದ ನೋವು ಕಾಣುತ್ತದೆ. ಹೀಗಾಗಿ ಹಾಲು ಕಟ್ಟಿಕೊಳ್ಳದಂತೆ ಆಗಾಗ್ಗೆ ಹಾಲು ಕುಡಿಸುವುದು ತಾಯಿಯ ಆರೋಗ್ಯದ ದೃಷ್ಟಿಯಿಂದಲೂ ಅಗತ್ಯ’ ಎಂದು ಅಭಿಪ್ರಾಯಪಡುತ್ತಾರೆ.
ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಬಸ್ ನಿಲ್ದಾಣಗಳಲ್ಲಿ ಈ ಹಾಲುಣಿಸುವ ಕೊಠಡಿಗಳನ್ನು ತೆರೆಯಲಾಗಿತ್ತು. ಆದರೆ ಬೇಸರದ ಸಂಗತಿ ಎಂದರೆ ಗಾಳಿ– ಬೆಳಕು ಸರಿಯಾಗಿಲ್ಲದ, ಕೊಳಕಾಗಿದ್ದ ಇಂಥ ಕೋಣೆಗಳನ್ನು ಹೆಚ್ಚಿನ ಮಹಿಳೆಯರು ಬಳಸಲೇ ಇಲ್ಲ. ಮತ್ತೆ ಕೆಲವರು ಭದ್ರತೆ ಸರಿಯಾಗಿಲ್ಲ ಎನ್ನುವ ಕಾರಣಕ್ಕೆ ಹಿಂಜರಿದರು. ಹೀಗಾಗಿ ಹಾಲುಣಿಸುವ ಕೋಣೆಗಳ ಸ್ವಚ್ಛತೆ– ಸುರಕ್ಷತೆಯ ಬಗ್ಗೆಯೂ ಗಮನವಹಿಸುವುದು ಅಗತ್ಯ.
ಎದೆಹಾಲು ಕುಡಿಯುವುದು ಮಗುವಿನ ಹಕ್ಕು. ಅದನ್ನು ಯಾರೂ ನಿರಾಕರಿಸುವಂತಿಲ್ಲ. ತಾಯಿ– ಮಗುವನ್ನು ಬೆಸೆಯುವ ಸಹಜಕ್ರಿಯೆ ಹಾಲುಣಿಸುವಿಕೆ. ಅದನ್ನು ಗೌರವದಿಂದ ಕಾಣಬೇಕು; ಎಲ್ಲಾ ಅನುಕೂಲ ಮಾಡಿಕೊಡಬೇಕು! ತಾಯಂದಿರಿಗೆ ಯಾವುದೇ ರೀತಿಯ ಸಂಕೋಚವಿಲ್ಲದೆ ಸುರಕ್ಷಿತ– ಸ್ವಚ್ಛ ಸ್ಥಳದಲ್ಲಿ ಮಗುವಿಗೆ ಹಾಲುಣಿಸಲು ಅವಕಾಶ ನೀಡುವಲ್ಲಿ ಈ ಯೋಜನೆ ಯಶಸ್ವಿಯಾಗಲಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.