ADVERTISEMENT

ಸಂಗತ | ಕುಡಿಗಳಿಗಾಗಿ, ಎಲ್ಲ ಕುಡಿಗಳಿಗಾಗಿ!

ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಡ್ಡಿಯಾಗಿದೆ ಅಧಿಕಾರದ ವಂಶಪಾರಂಪರ್ಯ ವರ್ಗಾವಣೆಯ ಚಿಂತನೆ

ಆರ್.ಲಕ್ಷ್ಮೀನಾರಾಯಣ
Published 21 ಮಾರ್ಚ್ 2024, 23:59 IST
Last Updated 21 ಮಾರ್ಚ್ 2024, 23:59 IST
   

‘ಬರುತ್ತಾ ಬರುತ್ತಾ ರಾಯರ ಕುದುರೆ ಕತ್ತೆಯಾಯಿತು’ ಎಂಬ ಕನ್ನಡದ ಹಳೆಯ ಗಾದೆ ಸದ್ಯ ನಮ್ಮ ರಾಜಕಾರಣಿಗಳ ಕೈಗೆ ಸಿಕ್ಕಿ ಅರ್ಥ ಕಳೆದುಕೊಳ್ಳುತ್ತಿರುವ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಅತ್ಯಂತ ಚೆನ್ನಾಗಿ ಅನ್ವಯಿಸುತ್ತದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವೆಂದು ನರ ನರವನ್ನೂ ಸೆಟೆಸಿಕೊಂಡು ವೇದಿಕೆಗಳ ಮೇಲಿನಿಂದ ಸ್ವಾತಂತ್ರ್ಯೋತ್ಸವದಂದು, ಗಣರಾಜ್ಯೋತ್ಸವದಂದು ಭಾಷಣ ಬಿಗಿಯುತ್ತಾರೆ ನಮ್ಮ ರಾಜಕೀಯ ಧುರೀಣರು. ಅಂತಹವರು, ಪ್ರಜಾಪ್ರಭುತ್ವ ಸ್ಥಾಪಿತವಾಗಿ 75 ವರ್ಷಗಳನ್ನು ಕಳೆದು ಶತಮಾನದತ್ತ ದಾಪುಗಾಲು ಹಾಕುತ್ತಿರುವ ಹೊತ್ತಿನಲ್ಲಿ ಅತ್ಯಂತ ಅಪ್ರಬುದ್ಧರಾಗಿ ನಡೆದುಕೊಳ್ಳುತ್ತಿರುವುದನ್ನು ನೋಡಿ ದಾಗ ‘ಮತದಾನ ಅತ್ಯಂತ ಪವಿತ್ರವಾದ ಕರ್ತವ್ಯ’ ಎಂಬ ಮಾತಿಗೇನಾದರೂ ಅರ್ಥ ಉಳಿದಿದೆಯೇ ಎಂದು ತಲೆಕೆಡಿಸಿಕೊಳ್ಳುವಂತೆ ಆಗುತ್ತದೆ. ಅದು ಅವರಂಥ
ವರನ್ನು ಅಧಿಕಾರಕ್ಕೆ ಏರಿಸುವುದಕ್ಕಷ್ಟೇ ಎಂಬುದು ನಮ್ಮ ದೇಶದ ಸಂದರ್ಭದಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಮೂವತ್ತು, ನಲವತ್ತು ವರ್ಷಗಳು ಒಂದು ಪಕ್ಷದಲ್ಲಿದ್ದು, ಆ ಪಕ್ಷದ ಸಿದ್ಧಾಂತಕ್ಕೆ ಬದ್ಧರೆಂದು ಸಾರುತ್ತ, ಪಕ್ಷವೆಂದರೆ ತಾಯಿ ಇದ್ದಂತೆ, ತಾಯಿಗೆ ದ್ರೋಹ ಬಗೆಯುವ ಕೆಲಸ ಎಂದಿಗೂ ಮಾಡುವುದಿಲ್ಲ ಎಂದೆಲ್ಲ ಹೇಳುತ್ತಲೇ, ರಾತ್ರಿ ಕಳೆದು ಬೆಳಗಾಗುವು ದರೊಳಗೆ ತಮ್ಮ ಮಾತುಗಳನ್ನೆಲ್ಲ ಗಾಳಿಗೆ ತೂರಿ ಇನ್ನೊಂದು ಪಕ್ಷದ ಕಚೇರಿಯ ಬಾಗಿಲು ಕಾಯುತ್ತ ನಿಂತುಕೊಂಡುಬಿಡುವುದಕ್ಕೆ ನಿಜಕ್ಕೂ ಏನಾದರೂ ಮಹತ್ವದ ಕಾರಣವಿದೆಯೇ? ಅಧಿಕಾರದಾಹ, ಹಣದ ಹಪಹಪಿ ಬಿಟ್ಟರೆ ಉಳಿದೆಲ್ಲ ಕಾರಣಗಳು ಬರೀ ನೆಪಗಳೆಂಬುದನ್ನು ಅರಿತುಕೊಳ್ಳಲು ವಿಶೇಷ ಶ್ರಮವೇನೂ ಬೇಕಾಗುವುದಿಲ್ಲ. ದೇಶದ ಉದ್ದಗಲಕ್ಕೂ ಎಲ್ಲ ಪಕ್ಷಗಳಲ್ಲೂ ಚುನಾವಣೆಯ ಸಮಯದಲ್ಲಿ, ಚುನಾವಣೆಗಳು ಮುಗಿದು ಮಂತ್ರಿಮಂಡಲ ರಚನೆಯ ಸಂದರ್ಭದಲ್ಲಿ ಇದು ಎಂದಿನ ಸಾಮಾನ್ಯ ದೃಶ್ಯವಾಗುತ್ತಿದೆ.

ಸಾಮಾನ್ಯ ಕಾರ್ಯಕರ್ತರು ಹಲವಾರು ವರ್ಷ ತಮ್ಮ ಧುರೀಣರ ಪಲ್ಲಕ್ಕಿಗಳನ್ನು ಹೊತ್ತು ಮೆರೆಸಿ, ಈ ಪಕ್ಷದಲ್ಲಿ ತಮಗೇನೂ ಬರ್ಕತ್ತಾಗದೆಂದು, ತಮ್ಮ ಹಣೆಯಲ್ಲಿ ಬರೆದುದು ಇಷ್ಟೇ ಎಂದು ತೀರ್ಮಾನಿಸಿ ಪಕ್ಷ ಬದಲಿಸಿದರೆ ಅದಕ್ಕಾದರೂ ಒಂದು ಅರ್ಥವಿದ್ದೀತು. ಆದರೆ ಮೂರು– ನಾಲ್ಕು ದಶಕಗಳ ಕಾಲ ಶಾಸಕರಾಗಿಯೋ ಸಂಸತ್ ಸದಸ್ಯರಾಗಿಯೋ ಮುಖ್ಯಮಂತ್ರಿಯಾಗಿಯೋ ಪಕ್ಷದ ಅಧ್ಯಕ್ಷರಾಗಿಯೋ ವಿರೋಧ ಪಕ್ಷದ ನಾಯಕರಾಗಿಯೋ ಅಧಿಕಾರ, ಸವಲತ್ತು, ಎಲ್ಲವನ್ನೂ ಅನುಭವಿಸಿ, ತಮ್ಮ ಮೂರು ನಾಲ್ಕು ತಲೆಮಾರಿಗಾಗುವಷ್ಟು ಸಂಪತ್ತನ್ನು ಭ್ರಷ್ಟ ಮಾರ್ಗದಿಂದ ದಕ್ಕಿಸಿಕೊಂಡವರೂ ತಮಗೆ ಮತ್ತೆಯೂ ಟಿಕೆಟ್ ಕೊಡಲಿಲ್ಲವೆಂದೋ ತಮ್ಮ ಮಗನಿಗೋ ಮಗಳಿಗೋ ಹೆಂಡತಿಗೋ ಟಿಕೆಟ್‌ ಕೊಡಲಿಲ್ಲವೆಂದೋ ಮುಖಂಡನೆನಿಸಿಕೊಂಡ ಯಾವುದೋ ವ್ಯಕ್ತಿ ಮೋಸ ಮಾಡಿದನೆಂದೋ ಪಕ್ಷಗಳನ್ನು ತೊರೆಯುತ್ತಿರು
ವುದನ್ನು ಏನೆಂದು ಅರ್ಥೈಸಬೇಕು?

ADVERTISEMENT

ವಿದ್ಯಾವಂತರು, ಟೆಕಿಗಳು ಮತಗಟ್ಟೆಗಳತ್ತ ಸುಳಿಯುವುದಿಲ್ಲವೆಂದು ಆಕ್ಷೇಪಿಸುವವರು, ತಮ್ಮ ಇಂತಹ ನಡೆಯಿಂದ ಮತದಾರರು ಅದೆಷ್ಟು ಭ್ರಮ ನಿರಸನಗೊಳ್ಳುತ್ತಾರೆ ಎಂದು ಒಮ್ಮೆಯಾದರೂ ಯೋಚಿಸುತ್ತಾರೆಯೇ? ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸುವ ಇವರ ಇಂಥ ನಡೆಯಿಂದ ಯಾರಿಗಾದರೂ ಜನತಂತ್ರದಲ್ಲಿ ನಂಬಿಕೆ ಉಳಿದುಬರಲು ಸಾಧ್ಯವೇ? ಕೊನೆಯಪಕ್ಷ ಬಹಳಷ್ಟು ಕಾಲ ಅಧಿಕಾರಸ್ಥಾನಗಳಲ್ಲಿ ಇದ್ದವರು ಇನ್ನು ರಾಜಕೀಯ ಸಾಕು ಎಂದು ನಿವೃತ್ತಿಯನ್ನಾದರೂ ಪಡೆದುಕೊಂಡರೆ ಅಷ್ಟರಮಟ್ಟಿಗೆ ಮರ್ಯಾದೆಯಾದರೂ ಉಳಿದೀತು. ಆದರೆ ಹಾಗೆ ನಿವೃತ್ತಿ ಘೋಷಿಸುವುದು ಕೂಡ ಮತ್ತೆ ತಮ್ಮ ವಂಶದ ಕುಡಿಗಳಿಗೆ ಸ್ಥಾನ ಕೊಡಿಸುವ ನೆಪವಾಗಿ ಅಷ್ಟೆ.

ಕೋಮುವಾದಿ ಪಕ್ಷವೆಂದು ಅತ್ಯಂತ ಕಟು ಶಬ್ದಗಳಲ್ಲಿ ಟೀಕಿಸಿದ ಪಕ್ಷದತ್ತಲೇ ಅದರ ಪರಿವೆಯೇ ಇಲ್ಲದೆ ಹೇಗಾದರೂ ಮುಖ ಮಾಡುತ್ತಾರೆ? ಅಥವಾ ಅದೇ ಕೋಮುವಾದಿ ಎನ್ನುವ ಪಕ್ಷದಲ್ಲಿ ಜೀವಮಾನವಿಡೀ ಇದ್ದು, ಅದರ ವಿರುದ್ಧ ಪಕ್ಷಕ್ಕೆ ಸೇರಿದ ಕೂಡಲೇ ಬಿಟ್ಟುಬಂದ ಪಕ್ಷವನ್ನು ಕೋಮುವಾದಿ ಎಂದು ಆ ಪಕ್ಷದವರೊಂದಿಗೆ ಸೇರಿಕೊಂಡು ಪಲ್ಲವಿ ಹಾಡತೊಡಗುತ್ತಾರೆ. ಇದಕ್ಕೆ ಆತ್ಮಸಾಕ್ಷಿ ಒಪ್ಪುತ್ತದೆಯೇ ಎಂದರೆ, ಬಹುಶಃ ಹಾಗೆಂದರೇನೆಂದು ಕೇಳಿಯಾರು.ಅಥವಾ ಇವರು ಸೇರಿದ ಕೂಡಲೇ ಅದು ಪವಿತ್ರ ಪಕ್ಷವಾಗಿ ಬಿಡುತ್ತದೆಂದು ಮತದಾರರು ತಿಳಿಯುತ್ತಾರೆ ಎಂದರೆ, ಹಾಗೇನೂ ಇಲ್ಲ ಎಂದು ಅವರಿಗೂ ಗೊತ್ತು. ಬರೀ ಜಾತಿ, ಧರ್ಮ, ಹಣ, ಮದ್ಯದ ಮೇಲೆ ನಡೆಯುವ ಚುನಾವಣೆಗಳಲ್ಲಿ ಯಾರಾದರೂ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವವನ್ನು ಹುಡುಕುತ್ತಾರೆ ಎಂದರೆ ಅವರು ಕವಿ ಜನ್ನನ ಮಾತಿನಲ್ಲಿ ‘ಮೊರಡಿಯೊಳೆ
ಮಾದುಪಳವನರಸದಿರಂ’.

ರಾಜಕೀಯಸ್ಥರಿಗೆ ತಮ್ಮ ಮಕ್ಕಳು ರಾಜಕೀಯಕ್ಕೇ ಬರಬೇಕೆಂದು ಏಕಾದರೂ ಅನ್ನಿಸಬೇಕು? ಸಮಾಜದಲ್ಲಿ ಎಷ್ಟೆಲ್ಲ ರಂಗಗಳಿವೆ? ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ... ಇಲ್ಲ ಇದಾವುದೂ ಆಗದು. ಅಧಿಕಾರದ ಮುಂಚೂಣಿಯಲ್ಲೇ ಅವರೂ ಇರಬೇಕು, ಇವರಂತೆ ಅವರೂ ದೇಶೋದ್ಧಾರವನ್ನೇ ಮಾಡಬೇಕು!

ಈ ಧ್ರುತರಾಷ್ಟ್ರ ಪುತ್ರವ್ಯಾಮೋಹ ಮತ್ತು ಅದು ಆಸ್ತಿಯೋ ಅಧಿಕಾರವೋ ಯಾವುದಾದರೂ ಸರಿ ಪಿತ್ರಾರ್ಜಿತವಾಗಿಯೇ ಮಕ್ಕಳಿಗೆ ವರ್ಗಾವಣೆಯಾಗಿಬಿಡಬೇಕೆಂಬ ರಾಜಕಾರಣಿಗಳ ಚಿಂತನೆಯೇ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಡ್ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.