ಅವರೊಬ್ಬ ನಿವೃತ್ತ ಪ್ರಾಂಶುಪಾಲರು. ಅವರ ಪಕ್ಕದ ಮನೆಯ ಇಬ್ಬರು ಹೆಣ್ಣುಮಕ್ಕಳು ಎರಡೂ ಮನೆಗಳ ಮಧ್ಯದ ಆವರಣ ಗೋಡೆ ಬಳಿ ತರಗೆಲೆ ರಾಶಿ ಹಾಕಿ ಬೆಂಕಿ ಹಚ್ಚುತ್ತಿದ್ದರು. ಇದರಿಂದ ಆ ವಯೋವೃದ್ಧರಿಗೆ ದಮ್ಮು ಕಟ್ಟುತ್ತಿತ್ತು. ಬೆಂಕಿಯ ಕಿಡಿ ಅಕಸ್ಮಾತ್ ಮನೆಗೆ ಹಾರಿದರೆ ಏನಾದರೂ ಅನಾಹುತ ಸಂಭವಿಸಬಹುದೆಂಬ ಭಯವಿತ್ತು.
ಹೀಗೆ ಮಾಡಬಾರದೆಂದು ಹೇಳಿದರೆ ಆ ಹೆಣ್ಣುಮಕ್ಕಳು ಪ್ರಾಂಶುಪಾಲರ ಮೈಮೇಲೆ ಏರಿ ಬಂದರು. ‘ಜಾಗ ನಮ್ಮದು. ಏನು ಬೇಕಿದ್ರೂ ಮಾಡ್ಕೊಳ್ತೀವಿ. ನಿಮಗೆ ತೊಂದರೆಯಾಗುವುದಿದ್ದರೆ ಆವರಣ ಗೋಡೆಯನ್ನು ಇನ್ನೂ ಎತ್ತರಕ್ಕೆ ಕಟ್ಟಿಸಿಕೊಳ್ಳಿ. ಆಕ್ಷೇಪಿಸಿದರೆ ನೀವು ನಮ್ಮನ್ನು ಬಲಾತ್ಕರಿಸಲು ಬಂದಿರುವುದಾಗಿ ದೂರು ಕೊಟ್ಟು ಒಳಗೆ ಹಾಕಿಸ್ತೀವಿ’ ಎಂದು ಧಮಕಿ ಹಾಕಿದರು.
ನಿವೃತ್ತ ಪ್ರಾಂಶುಪಾಲರು ಹೆಣ್ಣುಮಕ್ಕಳ ಮಾತು ಗಳನ್ನು ಧ್ವನಿಮುದ್ರಿಸಿಕೊಂಡಿದ್ದರು. ಮುಂದೇನು ಮಾಡಬೇಕೆಂದು ತಿಳಿಯದಿದ್ದಾಗ ಅವರಿಗೆ ಗೆಳೆಯರೊಬ್ಬರು ಟೋಲ್ ಫ್ರೀ ಸಂಖ್ಯೆಯೊಂದನ್ನು ಕೊಟ್ಟರು. ಅದಕ್ಕೆ ಕರೆ ಮಾಡಿದ ಕೂಡಲೇ ಸ್ಪಂದನ ದೊರಕಿತು. ಅವರ ಸಮಸ್ಯೆಯನ್ನು ಅವರ ಮನೆಗೆ ಸಮೀಪದ ಸಂಸ್ಥೆಗೆ ರವಾನಿಸಲಾಯಿತು. ಹೆಣ್ಣುಮಕ್ಕಳ ಮನೆಗೆ ಕರೆ ಹೋಯಿತು. ವಯೋವೃದ್ಧರನ್ನು ಅವಾಚ್ಯ ಮಾತು ಗಳಿಂದ ನಿಂದಿಸಿದರೆ, ತೊಂದರೆ ಕೊಟ್ಟರೆ ಕಾನೂನಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಯಿತು. ಮರುದಿನ
ದಿಂದ ಪ್ರಾಂಶುಪಾಲರು ಯಾವುದೇ ಕಿರುಕುಳ ಇಲ್ಲದೆ ನಿರಾಳರಾದರು. ಸಹಾಯವಾಣಿಯು ವೃದ್ಧರ ನೆರವಿಗಾಗಿ ಪೊಲೀಸ್ ನೆರವು ಒದಗಿಸುವ ವ್ಯವಸ್ಥೆಯನ್ನೂ ಹೊಂದಿತ್ತು.
ಆ ಟೋಲ್ ಫ್ರೀ ಸಂಖ್ಯೆ 14567. ಬೆಳಿಗ್ಗೆ 8ರಿಂದ ರಾತ್ರಿ 8ರ ತನಕ ವಯಸ್ಸಾದವರು ಕರೆ ಮಾಡಿ ತಮ್ಮ ಯಾವುದೇ ದೂರು ದುಮ್ಮಾನಗಳನ್ನು ಹೇಳಿಕೊಳ್ಳಬಹುದು. ಶೀಘ್ರವಾಗಿ ಪರಿಹಾರವನ್ನೂ ಪಡೆಯಬಹುದು. ಬಹಳಷ್ಟು ವಯೋವೃದ್ಧರಿಗೆ ಈ ಸಂಖ್ಯೆಯ ನೆರವಿನ ಅರಿವೇ ಇಲ್ಲ. ಭಾರತದ ಎಲ್ಲ ರಾಜ್ಯಗಳಲ್ಲೂ ನೆರವಿಗಾಗಿ ಈ ಸಹಾಯವಾಣಿ ತುದಿಗಾಲಲ್ಲಿ ನಿಂತಿದೆ.
ಕೋವಿಡ್ ಕಾಲಘಟ್ಟದಲ್ಲಿ ವಯೋವೃದ್ಧರ ವೈದ್ಯಕೀಯ ಮತ್ತಿತರ ತುರ್ತು ನೆರವಿಗಾಗಿ ತೆಲಂಗಾಣದ ವಿಜಯವಾಹಿನಿ ಚಾರಿಟಬಲ್ ಟ್ರಸ್ಟ್ ಮತ್ತು ಟಾಟಾ ಸಂಸ್ಥೆಯ ಸಹಯೋಗದಲ್ಲಿ ಆರಂಭವಾದ ಸಹಾಯವಾಣಿಯನ್ನು ರಾಜ್ಯ ಸರ್ಕಾರ ತನ್ನ ಕಾರ್ಯ
ಕ್ರಮಗಳ ಪಟ್ಟಿಗೆ ಸೇರಿಸಿಕೊಂಡಿತು. ಅದರ ಸಾಫಲ್ಯವನ್ನು ಮನಗಂಡ ಕೇಂದ್ರ ಸರ್ಕಾರವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ಸಾಮಾಜಿಕ ರಕ್ಷಣಾ ಸಂಸ್ಥೆಯ ಸಹಯೋಗದಲ್ಲಿ ಇದನ್ನು ಅಭಿವೃದ್ಧಿಪಡಿಸಿದೆ. ಆದರೆ ಇಂತಹ ಸೌಲಭ್ಯ ಇದೆ, ನಿಮ್ಮ ಸಮಸ್ಯೆಗಳ ಸಂದರ್ಭದಲ್ಲಿ ಅದನ್ನು ಬಳಸಿಕೊಳ್ಳಿ ಎಂದು ಹೇಳುವಲ್ಲಿ ಗ್ರಾಮ ಪಂಚಾಯಿತಿಗಳು, ತಾಲ್ಲೂಕು ಮತ್ತು ಜಿಲ್ಲಾಡಳಿತಗಳು ಸಂಪೂರ್ಣ ವಿಫಲವಾಗಿವೆ.
ಈ ರಾಷ್ಟ್ರೀಯ ಸಹಾಯವಾಣಿಯ ನೆರವು ವಯಸ್ಸಾದವರಿಗೆ ಬಹು ವಿಧದಲ್ಲಿ ಲಾಭದಾಯ ಆಗಿದೆ. ನಿರಾಶ್ರಿತರು ರಕ್ಷಣೆ ಪಡೆಯಬಹುದು. ವೃದ್ಧಾಶ್ರಮಗಳನ್ನು ಸೇರಬಹುದು. ಪಿಂಚಣಿ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬಹುದು. ನಿಂದನೆ, ಕಿರುಕುಳ, ತೊಂದರೆಗಳನ್ನು ನೀಡುವ ವ್ಯಕ್ತಿಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು. ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಸರ್ಕಾರದ ಯೋಜನೆಗಳ ಲಾಭ ಗಳಿಸಬಹುದು. ಭಾವನಾತ್ಮಕ ಬೆಂಬಲ, ಆತಂಕ ಪರಿಹಾರ, ಒಂಟಿತನ, ಆರೋಗ್ಯ, ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಂದ ಮುಕ್ತಿ, ಪಡಿತರ, ಔಷಧ ಎಲ್ಲ ಸಹಾಯಕ್ಕೂ ಕೈಚಾಚಬಹುದು.
ಜನಗಣತಿ ಹೇಳುವ ಪ್ರಕಾರ, ದೇಶದಲ್ಲಿ ವಯೋವೃದ್ಧರ ಸಂಖ್ಯೆ ಏರಿಕೆಯಾಗುತ್ತಿದೆ. ವಯೋವೃದ್ಧರ ನೆರವಿನ ಕಲ್ಯಾಣ ಕಾಯ್ದೆಯು 15 ವರ್ಷಗಳ ಹಿಂದೆಯೇ ಜಾರಿಗೆ ಬಂದಿದೆ. ವಯಸ್ಸಾದ ತಂದೆ ತಾಯಿಯ ಪೋಷಣೆಗೆ ಗಂಡುಮಕ್ಕಳಷ್ಟೇ ಹೆಣ್ಣುಮಕ್ಕಳೂ ಬಾಧ್ಯರು. ಸಂಪಾದನೆ ಕಡಿಮೆಯಿದೆ ಎಂದು ಹೇಳಿ ಪೋಷಕರನ್ನು ಬೀದಿಪಾಲು ಮಾಡುವಂತಿಲ್ಲ. ಆದರೆ ಮಕ್ಕಳಿದ್ದರೂ ಅನಾಥ ಬದುಕಿನ ಪ್ರತಿಬಿಂಬವಾಗುತ್ತಿರುವ ದಯನೀಯ ಪರಿಸ್ಥಿತಿಯನ್ನು ನಿವಾರಿಸುವಲ್ಲಿ ಕಾನೂನಿನ ಉದ್ದೇಶ ನೆರವೇರಿಲ್ಲ.
ವಯೋವೃದ್ಧರ ಆಸ್ತಿ ಸಮಸ್ಯೆಗಳು, ಕಿರುಕುಳ ಇದಕ್ಕೆಲ್ಲ ಒಂದು ತಾಸಿನೊಳಗೆ ವಕೀಲಿ ನೆರವು ಪಡೆಯುವ ವ್ಯವಸ್ಥೆಯೂ ನಮ್ಮಲ್ಲಿದೆ. ಅದು ಸಂತ್ರಸ್ತ ವೃದ್ಧರನ್ನು ತಲುಪುವಂತೆ ಮಾಡುವಲ್ಲಿ ಆಡಳಿತಶಾಹಿ ನಿಷ್ಕ್ರಿಯವಾಗಿದೆ. ರಾಷ್ಟ್ರೀಯ ಸಹಾಯವಾಣಿ ಜಾರಿ
ಯಾದ ನಾಲ್ಕು ತಿಂಗಳಲ್ಲಿ ಬಂದ ಕರೆಗಳ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ. ಒಡಿಶಾದಲ್ಲಿ 30 ಸಾವಿರ ಕರೆಗಳು ಬಂದದ್ದು ಪಿಂಚಣಿ ಸಮಸ್ಯೆಯ ನಿವಾರಣೆಗೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಡತವನ್ನು ಮೂರು ವರ್ಷಗಳಿಂದ ಮುಟ್ಟಿರಲಿಲ್ಲ ಎಂಬ ಸತ್ಯವೂ ಬೆಳಕಿಗೆ ಬಂದಿತು.
ವೃದ್ಧರನ್ನು ಗೌರವಿಸಿದರೆ ದೇವರನ್ನು ಗೌರವಿಸದಂತೆ ಎಂಬ ವಾಕ್ಯ ಸರ್ಕಾರಿ ಬಸ್ಸಿನ ಬಾಗಿಲಿನ ಬಳಿ ಬರೆದಿರುತ್ತದೆ. ಅವರಿಗೆ ಟಿಕೆಟ್ ದರದಲ್ಲಿ ಶೇ 25ರ ರಿಯಾಯಿತಿಯೂ ಇದೆ. ಆದರೆ ಅವರಿಗೆಂದು ಮೀಸಲಾದ ಆಸನವನ್ನು ಬಿಟ್ಟುಕೊಡುವ ಸಹೃದ
ಯತೆ ಮಾತ್ರ ಬರಡಾಗಿದೆ. ಇಂತಹ ಅದೆಷ್ಟೋ ಸಮಸ್ಯೆಗಳಿಂದ ಹಿರಿಯ ಜನಾಂಗ ಮುಕ್ತವಾಗುವಲ್ಲಿ ತಮ್ಮ ಪಾತ್ರವೇನು ಎಂಬ ಆತ್ಮವಿಮರ್ಶೆಗೆ ಯುವಜನಾಂಗ ಮುಂದಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.