ADVERTISEMENT

ಸಂಗತ: ಗಂಡಾಳ್ವಿಕೆಯಿಂದ ಗಂಡಿಗೂ ಮುಳುವು!

ಅರುಣ್ ಜೋಳದ ಕೂಡ್ಲಿಗಿ
Published 15 ಜೂನ್ 2024, 0:05 IST
Last Updated 15 ಜೂನ್ 2024, 0:05 IST
<div class="paragraphs"><p>ಸಂಗತ</p></div>

ಸಂಗತ

   

ಭಾರತದಲ್ಲಿ ಯಾವುದೇ ಭಾಷೆಯ ನಟ–ನಟಿಯರು ರೂಪುಗೊಳ್ಳುವುದು ಸಿನಿಮಾಕ್ಕೆ ಬೇಕಾದ ಕೆಲವು ಕನಿಷ್ಠ ತರಬೇತಿಗಳ ಮೂಲಕ. ಡಾನ್ಸ್, ಫೈಟ್‌, ಸಂಗೀತ, ಅಭಿನಯ ತರಬೇತಿ, ದೇಹದಾರ್ಢ್ಯ
ದಂತಹವು ಇದರಲ್ಲಿ ಸೇರಿರುತ್ತವೆ. ಕೆಲವರಂತೂ ಯಾವ ತರಬೇತಿಯೂ ಇಲ್ಲದೆ ಆಕಸ್ಮಿಕ ತಿರುವುಗಳಲ್ಲಿ ನಟ–ನಟಿಯರಾಗಿ ಸಿನಿಮಾರಂಗವನ್ನು ಪ್ರವೇಶಿಸು ತ್ತಾರೆ. ನಂತರ ಅವಶ್ಯ ತರಬೇತಿಗಳನ್ನು ಪಡೆದುಕೊಳ್ಳುವವರೂ ಇದ್ದಾರೆ.

ಬಹುಶಃ ಇಂತಹ ಕಲಿಕೆಗಳಲ್ಲಿ, ಭಾರತದಂತಹ ದೇಶದಲ್ಲಿ ಒಬ್ಬ ನಟ–ನಟಿಗೆ ಇರಬೇಕಾದ ಸಾಮಾಜಿಕ ಹೊಣೆಗಾರಿಕೆ ಏನು, ನಮ್ಮ ಸಾಮಾಜಿಕ ಸಂರಚನೆ ಹೇಗೆ ರೂಪುಗೊಂಡಿದೆ, ಸಿನಿಮಾದ ಆಚೆಗಿನ ನಡಾವಳಿ ಯಾವ ರೀತಿಯದ್ದಾಗಿರಬೇಕು ಎಂಬಂತಹ ಸಂಗತಿಗಳನ್ನು ಕಲಿಸುವ ಸಾಧ್ಯತೆ ಕಡಿಮೆ.

ADVERTISEMENT

ಆದರೆ ಸಮಾಜವನ್ನು ಅರಿಯುವ ವಿಷಯದಲ್ಲಿ ಎಷ್ಟೋ ಸಿನಿಮಾಗಳೇ ಅತ್ಯುತ್ತಮ ಪಾಠಗಳಂತೆ ಇರುತ್ತವೆ. ಕೆಲವರು ಅಂತಹವುಗಳನ್ನೂ ಗಂಭೀರವಾಗಿ ಪರಿಗಣಿಸುವಂತೆ ಕಾಣುವುದಿಲ್ಲ. ಸಾಮಾಜಿಕ ನಡಾವಳಿಗೆ ಸಂಬಂಧಿಸಿದಂತೆ ರಾಜ್‌ಕುಮಾರ್ ಅವರು ಕನ್ನಡದ ನಟ– ನಟಿಯರಿಗೆ ದೊಡ್ಡ ಮಾದರಿ. ಆದರೆ ಈಚಿನ ನಟ–ನಟಿಯರು ರಾಜ್‌ಕುಮಾರ್‌ ಅವರನ್ನು ಮಾದರಿಯಾಗಿ ಪರಿಭಾವಿಸಿದಂತಿಲ್ಲ. ಹೀಗಾಗಿಯೇ ಸಿನಿಮಾರಂಗದ ಹೆಚ್ಚಿನವರು ಸಿನಿಮಾ ಹೊರತಾಗಿ ಸಾಮಾಜಿಕ ವಿದ್ಯಮಾನಗಳ ಬಗ್ಗೆ ಮಾತನಾಡಿದಾಗ, ಎಷ್ಟು ಪೊಳ್ಳು ವ್ಯಕ್ತಿತ್ವಗಳು ಎನಿಸದೇ ಇರದು.

ಮತ್ತೊಂದು ನೆಲೆಯಲ್ಲಿ, ಭಾರತೀಯ ಸಿನಿಮಾ ಗಳು ಗಂಡಾಳ್ವಿಕೆಯ ಪಡಿಯಚ್ಚುಗಳು. ಸಮಾಜದಲ್ಲಿ ಗಂಡುಯಜಮಾನಿಕೆ ಮತ್ತಷ್ಟು ಬಿಗಿಯಾಗಲು ಅವು ಹೆಚ್ಚಿನ ಕೊಡುಗೆ ನೀಡಿವೆ. ಗಂಡುಗಳು ತಾವು ಗಂಡುಗಳು ಎನ್ನುವುದನ್ನು ಮರೆಯದಂತೆ ಗಂಡುಯಜಮಾನಿಕೆಯ ಬೀಜಗಳನ್ನು ಬಿತ್ತಿ ನೀರು, ಗೊಬ್ಬರ ಹಾಕಿ ಪೋಷಿಸಿವೆ. ಇಂತಹವನ್ನೆಲ್ಲಾ ಸಿಳ್ಳೆ ಹೊಡೆದೋ ಕೇಕೆ ಹಾಕಿಯೋ ಗೌಜು ಗದ್ದಲಗಳ ಮಧ್ಯೆಯೋ ಸಿನಿಮಾಗಳನ್ನು ನೋಡಿ ಅವುಗಳನ್ನು ಗೆಲ್ಲಿಸಿದ್ದೂ ಗಂಡು ಸಮಾಜವೆ. ಹಾಗಾಗಿ, ಇಂತಹ ಗಂಡುಅಹಮಿಕೆಯ ಚಿತ್ರಗಳಿಗೆಲ್ಲಾ ನಮ್ಮ ಸಮ್ಮತಿಯನ್ನು ಕೊಟ್ಟು ಬೆಳೆಸಿದ್ದೇವೆ.

ಕೆಲವರಾದರೂ ನಟ–ನಟಿಯರು ಸಿನಿಮಾ ಬೇರೆ, ನಿಜಜೀವನ ಬೇರೆ ಎನ್ನುವ ಪರಿಜ್ಞಾನವನ್ನು ಇಟ್ಟುಕೊಂಡು ಕನಿಷ್ಠವಾದರೂ ಸಜ್ಜನಿಕೆಯನ್ನು ಪ್ರದ ರ್ಶಿಸುತ್ತಾರೆ. ಆದರೆ ಬಹುಪಾಲು ನಟ–ನಟಿಯರು ಸಿನಿಮೀಯವಾಗಿಯೇ ಬದುಕುತ್ತಾರೆ. ಹೀಗೆ ನಡೆದುಕೊಳ್ಳುವವರಲ್ಲಿ ನಟ ದರ್ಶನ್ ಅವರನ್ನೂ ಹೆಸರಿಸಬಹುದು ಎನ್ನಿಸುತ್ತದೆ. ಅವರು ಈವರೆಗೆ ವಿವಾದಗಳಿಗೆ ಸಿಲುಕಿದ ಪ್ರಕರಣಗಳನ್ನು ಮುಂದಿಟ್ಟು, ಸಿನಿಮಾದ ಆಚೆಗಿನ ಅವರ ನಡವಳಿಕೆಗಳನ್ನು ಗಮನಿಸಿದರೆ, ವಾಸ್ತವ ಜಗತ್ತಿನಿಂದ ದೂರವಾದ ‘ಹೀರೊಯಿಸಂ’ ನಿಜಜೀವನದಲ್ಲೂ ಅವರನ್ನು ಆವರಿಸಿ ಕೊಂಡಿರುವಂತೆ ಕಾಣುತ್ತದೆ. ಈಗ ಚಿತ್ರದುರ್ಗದ ರೇಣುಕಸ್ವಾಮಿ ಅವರ ಕೊಲೆ ಸಿನಿಮೀಯ ರೀತಿಯಲ್ಲೇ ನಡೆದಿದೆ. ಒಂದುವೇಳೆ ದರ್ಶನ್‌ ವಿರುದ್ಧದ ಆರೋಪ ಸಾಬೀತಾದರೆ, ನಂತರದ ಪ್ರಕ್ರಿಯೆಗಳು ಅವರಿಗೆ ನಿಜಜೀವನದ ದರ್ಶನ ಮಾಡಿಸಬಹುದು.

ಈ ಪ್ರಕರಣಕ್ಕೆ ಮತ್ತೊಂದು ಮುಖವಿದೆ. ಅದೆಂದರೆ, ರೇಣುಕಸ್ವಾಮಿ ಮಾಡಿದ್ದರು ಎನ್ನಲಾಗುವ ಸೈಬರ್ ಕ್ರೈಮ್. ಇಂತಹ ನಡವಳಿಕೆ ಕೂಡ ಗಂಡಾಳ್ವಿಕೆಯ ಮತ್ತೊಂದು ವಿಕೃತಿ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಬಹುತೇಕ ಪುರುಷರಿಗೆ ನೈಜ ಮುಖದೊಂದಿಗೆ ವಿಕೃತ ಮುಖವೂ ಒಂದಿರುತ್ತದೆ. ಸಮಾಜದಲ್ಲಿ ಸಜ್ಜನರಂತೆ ನಟಿಸುವವರು ಸಾಮಾಜಿಕ ಜಾಲತಾಣದಲ್ಲಿ ಗಂಡು ಅಹಮಿಕೆಯ ವಿಕೃತ ಮುಖವನ್ನು ತೋರುತ್ತಾರೆ. ಎಷ್ಟೋ ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಯ ಇನ್‍ಬಾಕ್ಸ್ ಮೆಸೇಜುಗಳನ್ನು ಬಹಿರಂಗ ಪಡಿಸಿದರೆ, ದೊಡ್ಡ ಗಂಡಾಂತರವೇ ಘಟಿಸಬಹುದು.

ದೆಹಲಿಯ ಜೆಎನ್‍ಯು ಪ್ರೊಫೆಸರ್ ಅರುಣಿಮಾ ಅವರು ವಿಶ್ಲೇಷಿಸುವಂತೆ, ಸಾಮಾಜಿಕ ಜಾಲತಾಣದಲ್ಲಿ ಹೆಣ್ಣಿನ ಹೆಸರಿನಲ್ಲಿ ಗಂಡುಗಳು ನಕಲಿ ಖಾತೆ ಸೃಷ್ಟಿಸಿ, ಆ ಮೂಲಕ ಗಂಡುಗಳೊಂದಿಗೆ ಯಾವ ನಿರ್ಬಂಧವೂ ಇಲ್ಲದಂತೆ ವ್ಯವಹರಿಸುತ್ತಾರೆ. ಹೀಗಾಗಿ, ಅವರ ಮನಸ್ಸುಗಳಲ್ಲಿ ಸದಾ ಕಾಮಕ್ಕೆ ಹಪಹಪಿಸುವ ‘ಹೆಣ್ಣಿನ’ ಚಿತ್ರ ಮೂಡಿರುತ್ತದೆ. ಅಂತಹ ಗಂಡಸರು ನೈಜ ಸಮಾಜದ ಹೆಣ್ಣುಗಳನ್ನೂ ಹಾಗೆಯೇ ನೋಡುತ್ತಾರೆ. ಸಮಾಜದಲ್ಲಿ ಅತ್ಯಾಚಾರದ ಪ್ರಮಾಣ ಹೆಚ್ಚಾಗಲು ಇದೂ ಒಂದು ಕಾರಣ ಎನ್ನುತ್ತಾರೆ. ‌

ಅಂದರೆ, ಸಾಮಾಜಿಕ ಜಾಲತಾಣದಲ್ಲಿ ಕೃತಕವಾದ ‘ಗಂಡು’ ವಿಕೃತಿಗಳನ್ನು ಸೃಷ್ಟಿಸಲು ಹೆಣ್ಣನ್ನೇ ಅಸ್ತ್ರವ ನ್ನಾಗಿಸಿಕೊಳ್ಳಲಾಗುತ್ತಿದೆ. ದರ್ಶನ್ ಪ್ರಕರಣದಲ್ಲಿ,ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿದ ಗಂಡು ‘ವಿಕೃತಿ’ಯನ್ನು ಸಿನಿಮೀಯ ‘ಗಂಡು’ ಅಹಮಿಕೆ ದಮನಿಸಲು ಸೆಣಸಾಡಿದಂತೆ ಕಾಣುತ್ತಿದೆ. ಇದು ಗಂಡುಯಜಮಾನಿಕೆಯು ಕೊನೆಗೆ ಗಂಡುಗಳನ್ನೂ ಬಲಿ ಪಡೆಯುತ್ತದೆ ಎನ್ನುವುದರ ಸಂಕೇತದಂತೆ ಇದೆ.

ಅಮೆರಿಕದ ಸ್ತ್ರೀವಾದಿ ಚಿಂತಕಿ ಬೆಲ್‍ಹುಕ್ಸ್ ತಮ್ಮ ‘ಫೆಮಿನಿಸಂ ಈಸ್ ಫಾರ್ ಎವೆರಿಬಡಿ: ಪ್ಯಾಶನೇಟ್ ಪಾಲಿಟಿಕ್ಸ್’ ಕೃತಿಯಲ್ಲಿ, ಗಂಡಾಳ್ವಿಕೆ ಹೇಗೆ ಅಂತಿಮವಾಗಿ ಗಂಡುಗಳನ್ನೂ ವಿನಾಶದತ್ತ ಒಯ್ಯುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಹಾಗಾಗಿ, ‘ಮಹಿಳಾವಾದ’ ಸ್ವತಃ ಗಂಡುಲೋಕದ ಉಳಿವಿಗೂ ಬೇಕಾಗಿದೆ. ಗಂಡುಗಳ ಒಳಗೂ ಎಲ್ಲರನ್ನೂ ಪೊರೆವ ತಾಯ್ತನದ ಹೆಣ್ಣಿನ ಕಣ್ಣೋಟ ಚಿಗುರೊಡೆದಾಗ ಮಾತ್ರ ಗಂಡಾಳ್ವಿಕೆಯು ನಿಧಾನವಾಗಿ ಗಂಡು– ಹೆಣ್ಣಿನ ಭೇದರಹಿತ ಸಮತೆಯತ್ತ ಚಲಿಸುತ್ತದೆ ಎನ್ನುತ್ತಾರೆ. ಹೀಗೆ ರೇಣುಕಸ್ವಾಮಿ ಕೊಲೆ ಪ್ರಕರಣವು ಗಂಡಾಳ್ವಿಕೆಯ ಮನಃಸ್ಥಿತಿ ಅಂತಿಮವಾಗಿ ಗಂಡಿಗೇ ಹೇಗೆ ಮುಳುವಾಗಬಹುದು ಎನ್ನುವುದಕ್ಕೆ ನಿದರ್ಶನ. ಗಂಡುಗಳು ಇನ್ನಾದರೂ ತಮ್ಮೊಳಗಿನ ಗಂಡುಅಹಮಿಕೆಯನ್ನು ಚೂರು ಚೂರಾದರೂ ದಹಿಸಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.