ADVERTISEMENT

ಸಂಗತ ಅಂಕಣ | ಶಿಕ್ಷಕ ವೃತ್ತಿ: ಬೇಡ ದೈವತ್ವ

ಪು.ಸೂ.ಲಕ್ಷ್ಮೀನಾರಾಯಣ ರಾವ್
Published 21 ಜುಲೈ 2023, 0:01 IST
Last Updated 21 ಜುಲೈ 2023, 0:01 IST
   

‘ಗುರುವಿನ ಮೇಲೆ ಗುರ್ರ್ ಎನ್ನುವ ಮುನ್ನ...’ ಎಂಬ ಲೇಖನದಲ್ಲಿ (ಸಂಗತ, ಜುಲೈ 19), ಒಳ್ಳೆಯ ಶಿಕ್ಷಕರನ್ನು ರೂಪಿಸುವುದು ನಮ್ಮ ಕೈಯಲ್ಲೇ ಇದೆ ಎಂದು ಸದಾಶಿವ್ ಸೊರಟೂರು ಹೇಳಿದ್ದಾರೆ. ಶಿಕ್ಷಕ ವೃತ್ತಿಯ ಬಗ್ಗೆ ಪ್ರಸ್ತುತ ಸಮಾಜದ ದೃಷ್ಟಿ– ಧೋರಣೆಗಳ ಕುರಿತು ಲೇಖನದಲ್ಲಿ ವಿವೇಚಿಸಿರುವುದು ಸೂಕ್ತವಾಗಿದೆ.

ಸಮಾಜದ ಮಧ್ಯದಿಂದಲೇ ಬರುವ ಶಿಕ್ಷಕನನ್ನು ಸಮಾಜದ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕಾಗುತ್ತದೆ. ಶಿಕ್ಷಕ ಇಂದ್ರಜಾಲಿಗನಲ್ಲ. ಮೋಡಿ ಮಾಡುವ ಮಾಟಗಾರನಲ್ಲ. ಇತ್ತೀಚೆಗಂತೂ ಎಲ್ಲಿಯೂ ಸಲ್ಲದವರು ಶಿಕ್ಷಕ ವೃತ್ತಿಯನ್ನು ಕೈಗೊಳ್ಳುವುದೇ ಹೆಚ್ಚಾಗಿದೆ. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಚೆನ್ನಾಗಿ ಅಧ್ಯಯನ ಮಾಡಿದವರು ವೈದ್ಯಕೀಯ, ತಂತ್ರಜ್ಞಾನ ಕ್ಷೇತ್ರಗಳತ್ತ ಮುಖಮಾಡುತ್ತಾರೆ. ಈ ಎರಡೂ ಕ್ಷೇತ್ರಗಳಲ್ಲಿ ಅವಕಾಶ ಲಭ್ಯವಾಗದವರು ವಾಣಿಜ್ಯ ವಿಷಯಗಳ ಅಧ್ಯಯನದಲ್ಲಿ ಆಸಕ್ತಿ ಬೆಳೆಸಿಕೊಂಡು ಆಡಳಿತಾತ್ಮಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ವ್ಯಾಸಂಗದಲ್ಲಿ ಹಿಂದುಳಿದು ವೈಯಕ್ತಿಕವಾಗಿ ಉತ್ಸಾಹಿಗಳೂ ಕ್ರಿಯಾಶೀಲರೂ ಆದ ವ್ಯಕ್ತಿಗಳು ವ್ಯಾಪಾರೋದ್ಯಮಗಳಿಗೆ ಕೈ ಹಾಕಿ ದುಡ್ಡು ಮಾಡಿಕೊಂಡು ಬದುಕು ಸಾಗಿಸುತ್ತಾರೆ. ಬಹುಪಾಲು ಮಂದಿ ಇಲ್ಲೆಲ್ಲೂ ದಾರಿಕಾಣದೆ ಶಿಕ್ಷಕ ತರಬೇತಿಯನ್ನು ಪಡೆದುಕೊಂಡು ‘ಹಾಳೂರಿಗೆ ಉಳಿದವನೇ ಗೌಡ’ ಎಂಬಂತೆ ಶಿಕ್ಷಣ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಾರೆ.

ಶಿಕ್ಷಕರ ನೇಮಕಾತಿಯ ಲಿಖಿತ ಪರೀಕ್ಷೆಗಳಲ್ಲಿ (ಟಿಇಟಿ) ಅರ್ಹತೆ ಪಡೆಯುವವರ ಪ್ರಮಾಣ ಬಹಳ ಕಡಿಮೆ ಎಂಬ ವರದಿಗಳಿವೆ. ಪ್ರಾಥಮಿಕ ಶಾಲಾ ಶಿಕ್ಷಕ ಪರೀಕ್ಷೆಗಳಲ್ಲಿ ಸರಿಸುಮಾರು ಶೇ 20ರಷ್ಟು ಮಂದಿ ಅರ್ಹತೆ ಪಡೆದರೆ, ಪ್ರೌಢಶಾಲಾ ಶಿಕ್ಷಕ ಪರೀಕ್ಷೆಗಳಲ್ಲಿ ಶೇ 30ರಿಂದ 40ರಷ್ಟು ಮಂದಿ ಮಾತ್ರ ಅರ್ಹ ಶಿಕ್ಷಕರಾಗಿ ತೇರ್ಗಡೆಯಾಗುತ್ತಾರೆ. ಬೋಧನಾ ಕೌಶಲಗಳ ಪರೀಕ್ಷೆಯಂತೂ ನಡೆಯುವುದೇ ಇಲ್ಲ. ಇದು ವಾಸ್ತವ. ವಿಷಯಜ್ಞಾನ ಸಂಪನ್ನರು ಈ ಕ್ಷೇತ್ರಕ್ಕೆ ಬರಬೇಕಾದರೆ ಶಿಕ್ಷಕರ ವೇತನವನ್ನು ಆಕರ್ಷಕಗೊಳಿಸಬೇಕಾಗುತ್ತದೆ. ಆಗ ಪ್ರತಿಭಾವಂತರು (ಕನಿಷ್ಠಪಕ್ಷ ವಿಷಯಜ್ಞಾನಕ್ಕೆ ಸಂಬಂಧಿಸಿದಂತೆ) ಈ ಕ್ಷೇತ್ರದತ್ತ ಹರಿದು ಬರುತ್ತಾರೆ. ಈ ಮೂಲಭೂತ ವಿಚಾರದ ಬಗ್ಗೆ ಯಾರೂ ಗಮನ ಹರಿಸುತ್ತಲೇ ಇಲ್ಲ. ಕೆಲವು ವಿದೇಶಗಳಲ್ಲಿ ಶಿಕ್ಷಕರ ವೇತನ ಬೇರೆ ಎಲ್ಲರಿಗಿಂತ ಹೆಚ್ಚು ಎಂದು ಕೇಳಿದ್ದೇನೆ.

ADVERTISEMENT

ಶಿಕ್ಷಣದ ಗುರಿ ಏನು ಎಂಬುದರ ಬಗೆಗೆ ಕೂಡ ನಮ್ಮಲ್ಲಿ ದ್ವಂದ್ವ ನೀತಿಯೇ ಮೊದಲಿನಿಂದಲೂ ಬೆಳೆದುಬಂದಿದೆ. ಸತ್ಪ್ರಜೆಗಳ ನಿರ್ಮಾಣವೇ ಶಿಕ್ಷಣದ ಗುರಿ ಎಂಬುದು ಆದರ್ಶವಾದರೆ, ಗರಿಷ್ಠ ಅಂಕ ಗಳಿಕೆಯೇ ಶಿಕ್ಷಣದ ಗುರಿ ಎಂಬುದು ಪೋಷಕರ ನಿರೀಕ್ಷೆ. ಈ ಎರಡರ ಸೋಗಿನಲ್ಲಿ ದುಡ್ಡು ಮಾಡುವುದೇ ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಮಾಲೀಕರ ಪರಮೋಚ್ಚ ಗುರಿ. ಹೀಗಾಗಿ, ಒಂದು ಕಾಲದಲ್ಲಿ ಮೇಲ್ವರ್ಗಗಳಿಗೆ ಮೀಸಲಾಗಿದ್ದ ಶಿಕ್ಷಣ ಇಂದು ಉತ್ತಮ ಹಾಗೂ ಉನ್ನತ ಶಿಕ್ಷಣವು ಉಳ್ಳವರಿಗೆ ಮಾತ್ರ ಲಭ್ಯವಾಗುವ ಹಾಗೆ ಆಗುತ್ತಿದೆ. ಈ ಪ್ರವಾಹವನ್ನು ಯಾರಿಂದಲೂ ತಡೆಯಲಾಗುತ್ತಿಲ್ಲ. ಶಿಕ್ಷಕರೂ ಈ ವ್ಯವಸ್ಥೆಯ ಸೂತ್ರದ ಬೊಂಬೆಗಳು ಅಷ್ಟೆ.

ಈ ವಸ್ತುಸ್ಥಿತಿಯನ್ನು ಅರಿತುಕೊಂಡು, ಕೊನೆಯಪಕ್ಷ ಶಿಕ್ಷಕರಾದವರಾದರೂ ‘ಗುರುಬ್ರಹ್ಮ...’ ಎಂಬ ಭ್ರಮಾತ್ಮಕ ಪರಿಕಲ್ಪನೆಯಿಂದ ಹೊರಬರಬೇಕಾಗಿದೆ. ಎಲ್ಲ ವೃತ್ತಿಗಳ ಹಾಗೆ ಶಿಕ್ಷಕ ವೃತ್ತಿಯೂ ವೇತನ ಸಹಿತವಾದುದರಿಂದ ಗೌರವ ಹಾಗೂ ಪಾವಿತ್ರ್ಯದ ದೃಷ್ಟಿಯಿಂದ ಒಂದೇ. ಸಮಾಜಕ್ಕೆ ಅಗತ್ಯವಾದ ಎಲ್ಲ ವೃತ್ತಿಗಳೂ ಪವಿತ್ರವೆ! ಸಮಾಜಕ್ಕೆ ಅಹಿತಕಾರಿಯಾದ ಎಲ್ಲ ಕ್ರಿಯೆಗಳೂ ಅಪವಿತ್ರವಾದವುಗಳೇ. ಶಿಕ್ಷಕ ವೃತ್ತಿಗೆ ನಮ್ಮ ಭಾರತ ಪರಂಪರೆಯಲ್ಲಿ ಆರೋಪಿತವಾಗಿರುವ ದೈವತ್ವವನ್ನು ಈಗ ನಾವು ತಿರಸ್ಕರಿಸಬೇಕಾಗಿದೆ. ಶಿಕ್ಷಕನೊಬ್ಬ ಜೀವಂತ ವ್ಯಕ್ತಿಗಳೊಂದಿಗೆ ವ್ಯವಹರಿಸುತ್ತಾನಾದರೂ ಅದು ಒಂದು ಪರಿಮಿತ ಉದ್ದೇಶ ಹಾಗೂ ನಿರ್ದಿಷ್ಟ ಸಂಬಳ, ಭತ್ಯೆಗಳಿಂದ ಕೂಡಿರುತ್ತದಾದ್ದರಿಂದ ಎಲ್ಲ ಕಸುಬುಗಳ ಹಾಗೆಯೇ ಮುಖ್ಯವಾದುದು ಅಷ್ಟೆ.

ಮಹಾತ್ಮ ಗಾಂಧಿ ‘ನಾನು ಬೀದಿ ಗುಡಿಸುವ ಉದ್ಯೋಗಿ ಆಗಿದ್ದಿದ್ದರೆ, ನನ್ನ ಬೀದಿಯು ದೇಶದಲ್ಲಿಯೇ ಅತ್ಯಂತ ಸ್ವಚ್ಛವಾದ ಬೀದಿ ಆಗಿರುವಂತೆ ನೋಡಿಕೊಳ್ಳುತ್ತಿದ್ದೆ’ ಎನ್ನುತ್ತಾರೆ. ಇದನ್ನು ಮುಂದಿಟ್ಟು ಯೋಚಿಸಿದಾಗ, ಅವರು ಹೇಳಿದ ಹಾಗೆ, ‘ಶಿಕ್ಷಕನನ್ನು ತೀರಾ ದೊಡ್ಡ ವ್ಯಕ್ತಿ ಎಂಬಂತೆ ಕಾಣದಿದ್ದರೂ ತಮ್ಮ ಮಕ್ಕಳಿಗೆ ವಿದ್ಯೆ ಕಲಿಸಿ, ಜ್ಞಾನ ಕೊಟ್ಟು ಪೊರೆಯುವ ವ್ಯಕ್ತಿ ಅನ್ನುವ ಸೌಜನ್ಯದಿಂದ ನೋಡಿದರೂ ಸಾಕಾದೀತು!’

ವಾಸ್ತವದಲ್ಲಿ ಯಾವುದೇ ಮಾನವೀಯ ಸಹಜವಾದ ಗೌರವ ಭಾವಗಳಿಲ್ಲದಿದ್ದರೂ ‘ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ’, ‘ನಹಿ ಗುರೋಃ ಪರಂ ದೈವತಂ’ ಎಂಬಂಥ ಹುಸಿ ಪಟ್ಟಗಳನ್ನು ಕಟ್ಟುವ ಕೃತಕತೆ ಕಡಿಮೆಯಾದೀತು! ಆಗ ಶಿಕ್ಷಕರು ಸಹ ಸಹಜವಾದ ಬದುಕನ್ನು ಬದುಕಲು ಸಾಧ್ಯವಾದೀತು!

ಶಿಕ್ಷಕರ ದಿನಾಚರಣೆಯ ದಿನ ಪಲ್ಲಕ್ಕಿಯಲ್ಲಿ ಕೂಡಿಸಿ ಪೂಜೆ ಮಾಡುವುದು, ದಿನನಿತ್ಯದ ಜೀವನದಲ್ಲಿ ‘ಮೇಟ್ರಾ...!’ ಎಂಬ ನಿಕೃಷ್ಟ ಭಾವ. ಆ ಅನಗತ್ಯ ಆದರವೂ ಬೇಡ ಅಂತೆಯೇ ಅರ್ಥಹೀನ ಔದಾಸೀನ್ಯವೂ ಬೇಡ. ಉಪಾಧ್ಯಾಯನೂ ಎಲ್ಲರ ಹಾಗೆ ನರಮಾನವನೆ. ಅವನೂ ಉಪ್ಪು, ಹುಳಿ, ಖಾರಗಳಿಂದ ಉಸಿರಾಡುತ್ತಿರುವವನೆ. ಅವನ ವೃತ್ತಿಯನ್ನು ಅವನು ಯಾವ ವಂಚನೆಯಿಲ್ಲದೆ ಪ್ರಾಮಾಣಿಕವಾಗಿ ನಿರ್ವಹಿಸಿದರೆ ಸಾಕು. ಪಠ್ಯವನ್ನು ವಿದ್ಯಾರ್ಥಿಗಳ ಮನಸ್ಸಿಗೆ ಸ್ಪಷ್ಟವಾಗುವಂತೆ ಬಿಡಿಸಿ ಹೇಳುವುದೇ ಅವನ ಪರಮೋಚ್ಚ ಜವಾಬ್ದಾರಿ. ಚಾರಿತ್ರ್ಯ ನಿರ್ಮಾಣ, ಸತ್ಪ್ರಜೆಗಳ ಸೃಷ್ಟಿ, ದೇಶವನ್ನು ಕಟ್ಟುವುದು, ದೇಶಭಕ್ತಿಯನ್ನು ಪ್ರಚೋದಿಸುವುದು, ವ್ಯಕ್ತಿತ್ವ ಬೆಳವಣಿಗೆಯಂತಹ ನಾನಾ ರಚನಾತ್ಮಕ ಮೌಲ್ಯಗಳು ಬರೀ ಶಾಲಾ ಕಾಲೇಜುಗಳಿಂದ ಸಂಭವಿಸುವಂತಹವಲ್ಲ.

ಇಡೀ ಸಮಾಜ ಕೊಳೆತು ನಾರುತ್ತಿದ್ದು, ರಾಜಕೀಯ ನೇತಾರರು ಗೋಮುಖ ವ್ಯಾಘ್ರರಾಗಿದ್ದು, ಧರ್ಮಗುರುಗಳು ಜಾತ್ಯಂಧರಾಗಿದ್ದು, ಪೋಷಕರು ಸ್ವಾರ್ಥವೇ ಪರಾರ್ಥವೆಂದು ಭಾವಿಸಿದ್ದಾಗ ಶಾಲಾ ಕಾಲೇಜುಗಳಲ್ಲಿ ಮಾತ್ರ ಬದಲಾವಣೆ ಮರೀಚಿಕೆಯಾದೀತು! ಶಿಕ್ಷಕರೂ ಪ್ರತಿಯೊಬ್ಬರಂತೆ ತಮ್ಮ ಮಿತಿಯನ್ನು ಅರಿತು ನಡೆಯಬೇಕು. ಆದರೆ ತನ್ನ ದುಡಿಮೆಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.