ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಇಂದಿನ ಸ್ಥಿತಿಗತಿ ಕುರಿತ ಅಭಿಪ್ರಾಯ ಸಂಗ್ರಹವನ್ನು ಆಧರಿಸಿದ ಚಿಂತನೆಯು ‘ವಿಶ್ವವಿದ್ಯಾಲಯಕ್ಕೆ ಪ್ರವೇಶವಿಲ್ಲ’ ಎಂಬ ಶೀರ್ಷಿಕೆಯಡಿ ಪ್ರಕಟವಾಗಿದೆ (ಪ್ರ.ವಾ., ಆ. 26). ಹೊಸ ಶಿಕ್ಷಣ ನೀತಿಯನ್ನು ರೂಪಿಸುವ ಪ್ರಯತ್ನದಲ್ಲಿರುವ ಕರ್ನಾಟಕಕ್ಕೆ ತನ್ನ ವಿಶ್ವವಿದ್ಯಾಲಯಗಳ ಬೌದ್ಧಿಕ ವಾತಾವರಣವನ್ನು ಕಟ್ಟುವ ದೃಷ್ಟಿಯಿಂದ ಇದು ಮಹತ್ವದ ಕಣ್ಣೋಟ ಒದಗಿಸಿದೆ.
ಅದು 2005. ನಾನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ. ಓದುತ್ತಿದ್ದ ಕಾಲಘಟ್ಟ. ನಾವು ಬಿಸಿಎಂ ಹಾಸ್ಟೆಲಿನಲ್ಲಿ ಇದ್ದೆವು. ರಾತ್ರಿ ಊಟ ಮುಗಿದ ಮೇಲೆ ವಿಶ್ವವಿದ್ಯಾಲಯದ ಮೈದಾನದಲ್ಲಿ ಕುಳಿತು ಮೀಸಲಾತಿ, ಖಾಸಗೀಕರಣ, ಜಾತಿ ಅಸಮಾನತೆಯಂತಹ ವಿಷಯಗಳ ಕುರಿತು ತಾಸುಗಟ್ಟಲೆ ಚರ್ಚಿಸುತ್ತಿದ್ದೆವು. ಎಷ್ಟೋ ಬಾರಿ ಚರ್ಚೆ ಜಗಳಕ್ಕೆ ತಿರುಗಿ ಮೂರ್ನಾಲ್ಕು ದಿನ ಮಾತು ಬಿಟ್ಟ ಪ್ರಸಂಗಗಳೂ ಇವೆ.
ವಿಶ್ವವಿದ್ಯಾಲಯ ಅಂದರೆ ಅಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ತರಗತಿ ಕೊಠಡಿಗಳು, ಗ್ರಂಥಾಲಯ ಮತ್ತು ಪಾಠ ಪ್ರವಚನಗಳು ಮಾತ್ರ ಇರುವುದಲ್ಲ. ಜೊತೆ ಜೊತೆಗೆ ಈ ಎಲ್ಲಾ ಸೌಲಭ್ಯಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಪೂರಕವಾದ ‘ಬೌದ್ಧಿಕ ವಾತಾವರಣ’ ಬಹಳ ಮುಖ್ಯವಾಗುತ್ತದೆ. ಇದು ರೂಪುಗೊಳ್ಳುವುದು ತರಗತಿಗಳ ಆಚೆ ಘಟಿಸುವ ಅನೌಪಚಾರಿಕ ಚರ್ಚೆಗಳ ಮೂಲಕ.
ವಿದ್ಯಾರ್ಥಿಗೆ ತಾನು ಗ್ರಹಿಸಲು ಪ್ರಯತ್ನಿಸುತ್ತಿರುವ ಸಂಗತಿಯ ಕುರಿತು ವೈಜ್ಞಾನಿಕ ಅರ್ಥವನ್ನು ಕಟ್ಟಿಕೊಳ್ಳಲು ನೆರವಾಗುವ ಪ್ರಕ್ರಿಯೆಯನ್ನು ನಾವು ಕಲಿಕೆ ಎನ್ನುತ್ತೇವೆ. ಹಾಗಾಗಿಯೇ ವಿಮರ್ಶಾತ್ಮಕ ಚಿಂತನೆಯು ಕಲಿಕೆಯ ಅವಿಭಾಜ್ಯ ಗುಣವಾಗಿದೆ. ಈ ಕಾರಣಕ್ಕಾಗಿಯೇ ಎಲ್ಲಾ ಜ್ಞಾನಶಾಖೆಗಳ ಅರಿವನ್ನು ಚಿಂತನ–ಮಂಥನದ ಮೂಲಕ ಪಡೆಯುವ ಮತ್ತು ವರ್ತಮಾನದ ಸೌಹಾರ್ದ ಸಮಾಜಕ್ಕೆ ಅಗತ್ಯವಾದ ತತ್ವ ಯಾವುದಿರಬೇಕು ಎಂಬ ಅರಿವನ್ನು ಕಂಡುಕೊಳ್ಳುವ ವಿವೇಚನೆಯನ್ನು ಯುವಜನರ ಪ್ರಜ್ಞೆಗೆ ತರುವುದೇ ಉನ್ನತ ಶಿಕ್ಷಣದ ಪ್ರಮುಖ ಗುರಿ ಎಂದು ಹಲವಾರು ಚಿಂತಕರು ಪ್ರತಿಪಾದಿಸಿದ್ದಾರೆ.
ಇದು ಸಾಧ್ಯವಾಗುವುದು ವಿದ್ಯಾರ್ಥಿಗಳಿಗೆ ಎಲ್ಲಾ ಮಾದರಿಯ ಚಿಂತನೆಗಳೊಂದಿಗೆ ಮುಕ್ತವಾಗಿ ಚರ್ಚಿಸಲು ಅವಕಾಶ ಮಾಡಿಕೊಟ್ಟಾಗ. ಆದರೆ ನಮ್ಮ ಬಹುತೇಕ ವಿಶ್ವವಿದ್ಯಾಲಯಗಳು ಇದಕ್ಕೆ ವಿರುದ್ಧವಾದ ಮಾದರಿಯನ್ನು ಅನುಸರಿಸುತ್ತಿವೆ ಅನ್ನಿಸುತ್ತಿದೆ. ಇಲ್ಲಿ ಕ್ಯಾಂಪಸ್ಸಿನಲ್ಲಿ ಯಾವ ವಿಷಯಗಳ ಕುರಿತು ಚರ್ಚೆಯಾಗಬೇಕು, ಯಾರನ್ನು ಆಹ್ವಾನಿಸಬೇಕು, ಯಾರನ್ನು ಆಹ್ವಾನಿಸಬಾರದು ಎಂಬುದನ್ನು ಪಠ್ಯಕ್ರಮದ ಭಾಗವಾದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ನಿರ್ಧರಿಸುತ್ತಿಲ್ಲ. ಬದಲಾಗಿ, ಕ್ಯಾಂಪಸ್ಸಿನ ಹೊರಗಿನ ಶಕ್ತಿಗಳು, ಪಕ್ಷ, ಸಂಘಟನೆಗಳು ನಿರ್ಧರಿಸುವ ಸ್ಥಿತಿಯೊಂದು ನಿರ್ಮಾಣವಾಗಿದೆ. ಇದು ಬಹಳ ಅಪಾಯಕಾರಿಯಾದ ಬೆಳವಣಿಗೆ.
ಆಧುನಿಕ ಕಾಲದಲ್ಲಿ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಾವು ಒಪ್ಪಿಕೊಂಡಿರುವ ಸಾಮಾಜಿಕತೆ, ರಾಜಕಾರಣ ಮತ್ತು ಆಡಳಿತ ವೈಖರಿಗಳಲ್ಲಿಯೇ ನೂರಾರು ಮಿತಿಗಳಿವೆ. ಅವುಗಳನ್ನೆಲ್ಲಾ ಮುಕ್ತವಾಗಿ ಚರ್ಚಿಸಿ ವಿಮರ್ಶಿಸಲು, ಪ್ರಶ್ನಿಸಲು ಸಾಧ್ಯವಿರುವ ಜಾಗವೆಂದರೆ ಅದು ವಿಶ್ವವಿದ್ಯಾಲಯ ಮಾತ್ರ. ಇಲ್ಲಿ ಎಲ್ಲವೂ ಚರ್ಚೆಯಾಗಬೇಕು, ಎಲ್ಲಾ ನಂಬಿಕೆಗಳು ವಿಮರ್ಶೆಗೆ ಒಳಗಾಗಬೇಕು, ಎಲ್ಲಾ ಐಡಿಯಾಲಜಿಗಳ ಚಿಂತಕರನ್ನು ವಿಶ್ವವಿದ್ಯಾಲಯವು ಒಳಗೊಳ್ಳುವ ಮೂಲಕ ಬೌದ್ಧಿಕ ವೈವಿಧ್ಯ ಮತ್ತು ತೀವ್ರವಾದ ಭಿನ್ನಾಭಿಪ್ರಾಯಗಳ ಜೊತೆಯೂ ಸಂವಾದಿಸುವ ಕೌಶಲವನ್ನು ವಿದ್ಯಾರ್ಥಿ ಸಮುದಾಯಕ್ಕೆ ಕಲಿಸುವ ಕಡೆ ಚಲಿಸಬೇಕು.
ಇದಕ್ಕೆ ವಿರುದ್ಧವಾಗಿ ತನ್ನವರನ್ನು (?) ಮಾತ್ರ ಒಳಗೊಳ್ಳುವ ಮೂಲಕ ವಿಶ್ವವಿದ್ಯಾಲಯಗಳೂ ಪಕ್ಷ, ಸಂಘಟನೆಗಳ ಕಟ್ಟುನಿಟ್ಟಾದ ಸೈದ್ಧಾಂತಿಕ ಅನುಕರಣೆಗೆ ಮುಂದಾದರೆ, ಇದರ ಅಪಾಯ ತಲೆಮಾರುಗಳ ಸೃಜನಶೀಲ ಚಿಂತನೆಯನ್ನೇ ಮೊಟಕುಗೊಳಿಸುತ್ತದೆ. ಅಧ್ಯಯನವನ್ನು ಆಧರಿಸಿ ಮುಕ್ತವಾಗಿ ಚರ್ಚಿಸಬೇಕಾದ, ಧೈರ್ಯವಾಗಿ ತಮ್ಮ ಭಿನ್ನಾಭಿಪ್ರಾಯಗಳನ್ನು ಮಂಡಿಸಬೇಕಾದ ಯುವಜನರನ್ನು ವಿಶ್ವವಿದ್ಯಾಲಯಗಳು ‘ಅಯ್ಯೋ ನಮಗ್ಯಾಕೆ ಬೇಕು ಬಿಡು’ ಎಂಬ ‘ಪಿಸುಮಾತಿನ’ ಗುಂಪುಗಳನ್ನಾಗಿ ಮಾರ್ಪಡಿಸಬಾರದು.
ಈ ಬೆಳವಣಿಗೆಯನ್ನು ತಡೆಯಲು ವಿಭಿನ್ನ ಸೈದ್ಧಾಂತಿಕ ಹಿನ್ನೆಲೆಯ ಚಿಂತನೆಗಳನ್ನು ಬೌದ್ಧಿಕವಾಗಿ ಪ್ರತಿಪಾದಿಸುವ ಚಿಂತಕರನ್ನು, ತಜ್ಞರನ್ನು ಒಳಗೊಳ್ಳುವ ವೈಶಾಲ್ಯವನ್ನು ವಿಶ್ವವಿದ್ಯಾಲಯಗಳು ಬೆಳೆಸಿಕೊಳ್ಳಬೇಕು. ನಮ್ಮ ಕಾಲಕ್ಕೆ ಸಲ್ಲದ ವಿಚಾರಗಳನ್ನು ತಿರಸ್ಕರಿಸಲು ಇರುವ ಹಾದಿ ಅವುಗಳನ್ನು ಮುಕ್ತವಾಗಿ ಚರ್ಚಿಸಿ ಅವುಗಳಲ್ಲಿನ ಮಿತಿಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ತಿಳಿಸುವುದೇ ಆಗಿದೆ. ವಾಸ್ತವವಾಗಿ, ತನ್ನ ನಂಬಿಕೆಗೆ ವಿರುದ್ಧವಾದ ಅಭಿಪ್ರಾಯಗಳನ್ನು ಕೇಳಿಸಿಕೊಂಡು ಚರ್ಚಿಸುವ ಕೌಶಲವನ್ನು ಕಲಿಸುವುದೇ ವಿಶ್ವವಿದ್ಯಾಲಯಗಳ ಮುಖ್ಯ ಕೆಲಸ ಎಂಬ ಸಾಮಾನ್ಯ ಸಂಗತಿಯನ್ನು ನಾವು ಮರೆಯಬಾರದು.
ವರ್ತಮಾನದಲ್ಲಿ ಮೂಲಭೂತವಾದಿ ಚಿಂತನೆಗಳು ಬೆಳೆಯಲು ಮುಖ್ಯವಾದ ಕಾರಣಗಳಲ್ಲಿ, ಅವು ವಿಶ್ವವಿದ್ಯಾಲಯಗಳಲ್ಲಿ ತೀಕ್ಷ್ಣವಾದ ಬೌದ್ಧಿಕ ವಿಮರ್ಶೆಗೆ, ಚರ್ಚೆಗೆ ಒಳಗಾಗದಿರುವುದು ಒಂದಾಗಿದ್ದು, ಅದಕ್ಕಾಗಿ ಅವು ಸಾಮಾಜಿಕ ಜಾಲತಾಣ, ಅಬ್ಬರಿಸುವ ಭಾಷಣಗಳಂತಹ ಏಕಮುಖ ಸಂವಹನ ಮಾದರಿಗಳನ್ನು ಬಳಸಿಕೊಂಡು ಯುವಜನರನ್ನು ತಲುಪಲು ಪ್ರಯತ್ನಿಸುತ್ತಿವೆ. ಇದು ಇನ್ನೂ ಅಪಾಯಕಾರಿ ಬೆಳವಣಿಗೆ. ಇದನ್ನು ನಿಯಂತ್ರಿಸುವ ಭಾಗವಾಗಿ ನಾವು ಆ ಚಿಂತನೆಗಳ ಮಿತಿಗಳನ್ನು ಮುಕ್ತವಾಗಿ ಚರ್ಚಿಸುವ ಅವಕಾಶವನ್ನು ಶಿಕ್ಷಣದ ಭಾಗವಾಗಿಸಿಕೊಳ್ಳಬೇಕಿದೆ. ಏಕೆಂದರೆ ‘ಒಳ್ಳೆಯ ಕ್ರಿಯೆ ಮಾತ್ರವೇ ಒಳ್ಳೆಯ ರಾಜಕಾರಣ ಸೃಷ್ಟಿಸಲು ಸಾಧ್ಯ’ ಎಂದು ಗಾಂಧೀಜಿ ಹಿಂದೆಯೇ ಹೇಳಿದ್ದಾರೆ. ಅಂದಹಾಗೆ ‘ನಾವಿರುವ ಕಾಲ ಆ ಒಳ್ಳೆಯ ಕ್ರಿಯೆಗಳನ್ನು ವಿಶ್ವವಿದ್ಯಾಲಯಗಳ ಆವರಣಗಳಲ್ಲಿ ಆಚರಿಸುವ ಕಾಲವೇ ಆಗಿದೆ’ ಅನ್ನಿಸುತ್ತಿದೆ.
ರಾಜ್ಯ ಸರ್ಕಾರ ರೂಪಿಸಲು ಯೋಜಿಸುತ್ತಿರುವ ಶಿಕ್ಷಣ ನೀತಿಯು ವಿಶ್ವವಿದ್ಯಾಲಯಗಳಲ್ಲಿ ವಿಮರ್ಶಾತ್ಮಕ ಬೌದ್ಧಿಕ ವಾತಾವರಣ ನಿರ್ಮಿಸುವ ಹೊಣೆಯನ್ನು ನಿರ್ವಹಿಸಬೇಕಿದೆ. ಏಕೆಂದರೆ ಈ ಕಾಲಕ್ಕೆ ‘ಬದುಕು ಎಂದರೆ ನಮ್ಮನ್ನು ನಾವು ಕಂಡುಕೊಳ್ಳುವುದಲ್ಲ, ನಮ್ಮನ್ನು ನಾವು ರೂಪಿಸಿಕೊಳ್ಳುವುದು’. ಆ ಹಾದಿಯಲ್ಲಿ ಶಿಕ್ಷಣ ನೀಡುವ ವಿಮರ್ಶಾತ್ಮಕ ಕಣ್ಣೋಟಗಳು ಮಹತ್ವದ ಪಾತ್ರವನ್ನು ನಿರ್ವಹಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.