ADVERTISEMENT

ಸಂಗತ: ಕಾಯುವಿಕೆಯ ಕಾಯಿಲೆಗೆ ಮದ್ದಿದೆ

ಸದಾಶಿವ ಸೊರಟೂರು
Published 20 ಸೆಪ್ಟೆಂಬರ್ 2024, 1:36 IST
Last Updated 20 ಸೆಪ್ಟೆಂಬರ್ 2024, 1:36 IST
<div class="paragraphs"><p>ಸಂಗತ</p></div>

ಸಂಗತ

   

ತಾಲ್ಲೂಕು ಕೇಂದ್ರವೊಂದರ ಬಸ್ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ತಿಂಗಳ ಪಾಸ್ ಮಾಡಿಸಲು ನಿಂತಿದ್ದೆ. ಹೆಸರು, ವಯಸ್ಸು, ಎಲ್ಲಿಂದ ಎಲ್ಲಿಗೆ, ದಿನಾಂಕ ಎಲ್ಲವನ್ನೂ ನಮೂದಿಸಿ ಸಹಿ ಮಾಡಿಕೊಡಲು ಎಷ್ಟು ಸಮಯ ಬೇಕಾಗಬಹುದು? ಅವರು ಬರೋಬ್ಬರಿ 20 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಂಡರು. ಹಳೆಯ ಪಾಸ್ ನೋಡಿ ಒಂದೊಂದೇ ಅಕ್ಷರ ಬರೆಯುತ್ತಿದ್ದರು. ಮಧ್ಯೆ ಒಂದೆರಡು ಫೋನ್ ಕರೆ ಬೇರೆ. ನನ್ನ ಹಿಂದೆ ರೈಲಿನಂತೆ ಉದ್ದದ ಸರತಿ ಇತ್ತು. ಅವರಿಗೆಲ್ಲಾ ಯಾವಾಗ ಪಾಸ್ ಸಿಕ್ಕಿತೊ, ಅವರೆಲ್ಲಾ ಯಾವಾಗ ತಮ್ಮ ಕೆಲಸಕ್ಕೆ ಮರಳಿದರೊ!

ದೊಡ್ಡ ಖಾಸಗಿ ಆಸ್ಪತ್ರೆಯೊಂದರ ಕೌಂಟರಿನಲ್ಲಿ ಮೊನ್ನೆ ಇಂಥದ್ದೇ ಅನುಭವ ಆಯಿತು. ಕೊಂಡ ಔಷಧಿಗಳ ವಿವರವನ್ನು ರಸೀದಿಯಲ್ಲಿ ನಮೂದು ಮಾಡಲು ಅಲ್ಲಿ ಕೂತವರು ಕಂಪ್ಯೂಟರ್ ಕೀ ಬೋರ್ಡಿನ ಅಕ್ಷರದ ಗುಂಡಿಗಳನ್ನು ಒಂದೊಂದೇ ಹುಡುಕಿ ಒತ್ತುತ್ತಿದ್ದರು. ಅದರ ಮಧ್ಯೆ ಅಕ್ಕಪಕ್ಕದವರ ಜೊತೆ ಮಾತುಕತೆ. ಕೌಂಟರ್ ಮುಂದೆ ಉದ್ದದ ಸಾಲು. ಕಾಯದೆ ಬೇರೆ ದಾರಿಯಿರಲಿಲ್ಲ. ಅರ್ಧಗಂಟೆ ಮುಲಾಜಿಲ್ಲದೆ ಖರ್ಚಾಯಿತು.

ADVERTISEMENT

ಒಂದು ಅಂದಾಜಿನ ಪ್ರಕಾರ, ಭಾರತೀಯರ ಒಟ್ಟು ಜೀವಮಾನದ ‘ಎರಡು ವರ್ಷಗಳು’ ತಮ್ಮ ತಪ್ಪಿಲ್ಲದಿದ್ದರೂ ಬರೀ ಅಲ್ಲಲ್ಲಿ ಕಾಯುವಿಕೆಗಾಗಿಯೇ ಖರ್ಚಾಗುತ್ತವಂತೆ. ಅದೆಷ್ಟು ಕೋಟಿ ಜನರಿದ್ದೇವೆ. ವ್ಯರ್ಥವಾಗಿ ಹೋಗುತ್ತಿರುವ ಸಮಯವೆಷ್ಟು?! ಡಾಕ್ಟರ್ ಬಳಿ ಐದು ನಿಮಿಷ ಮಾತನಾಡಲು ಇಡೀ ದಿನ ಖರ್ಚಾಗುತ್ತದೆ.‌ ಹನ್ನೊಂದಕ್ಕೆ ಬರುವ ಬಸ್ ಹನ್ನೆರಡಕ್ಕೆ ಬರುತ್ತದೆ. ಬ್ಯಾಂಕಿನ ಕೆಲಸ ಒಂದು ದಿನದ ರಜೆ ಬೇಡುತ್ತದೆ. ಸಭೆಗಳು ಸರಿಯಾದ ಸಮಯಕ್ಕೆ ಶುರುವಾದ ಇತಿಹಾಸ ನಮ್ಮಲ್ಲಿಲ್ಲ. ಕಡತಗಳು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ಹೋಗುವಷ್ಟರಲ್ಲಿ ನಮ್ಮ ಎರಡ್ಮೂರು ತಲೆಗೂದಲು ಬೆಳ್ಳಗಾಗಿರುತ್ತವೆ.

ಸರಿಯಾದ ಜಾಗದಲ್ಲಿ ಸರಿಯಾದ ದಕ್ಷತೆ ಇಲ್ಲದವರಿಂದ ಹೀಗಾಗುತ್ತದೆಯೇ? ಕೆಲಸ ಸಿಕ್ಕ ಮೇಲೆ ತಮ್ಮ ವೃತ್ತಿದಕ್ಷತೆ ಹೆಚ್ಚಿಸಿಕೊಳ್ಳದ ಮತ್ತು ಕಾಲ ಬೇಡುವ ಹೊಸ ಬೆಳವಣಿಗೆ, ಕೌಶಲ ರೂಢಿಸಿಕೊಳ್ಳುವಲ್ಲಿನ ವೈಫಲ್ಯವೇ? ಆಯಕಟ್ಟಿನ ಜಾಗದಲ್ಲಿ ಇರುವವರದು ‘ಆದಾಗ ಆಯಿತು ಬಿಡು’ ಅನ್ನುವ ವಿಚಿತ್ರ ಧೋರಣೆಯೇ? ಬಹುಶಃ ಇವೆಲ್ಲವೂ ಸೇರಿ ಜನಸಾಮಾನ್ಯರ ಬಂಗಾರದಂತಹ ಸಮಯವನ್ನು ಕಬಳಿಸಿ ಹಾಕುತ್ತವೆ.

ಕೆಲವು ಕಳಪೆ ಮೂಲಸೌಕರ್ಯಗಳು, ನಿಧಾನಗತಿಯ ಆಡಳಿತ ವ್ಯವಸ್ಥೆ ಮತ್ತು ಜನ
ಬಾಹುಳ್ಯದಿಂದಾಗಿ ನಾವು ಇತರ ದೇಶಗಳ ಜನರ ಸರಾಸರಿಗಿಂತ ಹೆಚ್ಚು ಸಮಯವನ್ನು ಕಾಯುವಿಕೆಗೇ ಖರ್ಚು ಮಾಡುತ್ತಿದ್ದೇವೆ. ಟಿಕೆಟ್ ಕೌಂಟರ್ ಮುಂದೆ ಹತ್ತು ಜನರಿದ್ದರೆ ಟಿಕೆಟ್ ಕೊಡುವವನ ಅದಕ್ಷತೆಯಿಂದ ಹತ್ತೂ ಜನರ ಕೆಲಸ ಹಾಳಾಗುತ್ತದೆ. ಬಸ್ಸು ಒಂದು ಗಂಟೆ ತಡವಾಗಿ ಬಂದರೆ ಹತ್ತಾರು ಜನರ ಕೆಲಸಗಳು ಆಗದೇ ಹೋಗಬಹುದು. ವೈದ್ಯರ ವಿಳಂಬದಿಂದ ರೋಗಿ ಮತ್ತು ಆತನ ಕಡೆಯವರು ಅದೆಷ್ಟು ಆತಂಕಕ್ಕೆ ಈಡಾಗಬಹುದು. ಕಡತ ವಿಳಂಬದಿಂದ ಎಷ್ಟು ಹೊಟ್ಟೆಗಳು ಅನ್ನವಿಲ್ಲದೆ ಮಲಗಬಹುದು... ಯೋಚಿಸಬೇಕಿದೆ. 

ಸಮಯ ಎನ್ನುವುದು ಹಣಕ್ಕಿಂತಲೂ ದೊಡ್ಡ ಬಂಡವಾಳ. ನಮ್ಮ ಜನರ ಸಮರ್ಪಕವಲ್ಲದ ತಲಾ ಆದಾಯಕ್ಕೆ ಸಮಯದ ಈ ದುಂದುವೆಚ್ಚವೂ ಕಾರಣ. ಒಬ್ಬ ಕೂಲಿಗಾರ ಒಂದು ಸಣ್ಣ ಕೆಲಸಕ್ಕಾಗಿ ಬ್ಯಾಂಕಿನಲ್ಲಿ ದಿನಪೂರ್ತಿ‌ ಕಳೆಯುತ್ತಾನೆ. ಎಷ್ಟೋ ಬಾರಿ ಕೌಶಲ ಇಲ್ಲದವರಿಗೆ ಕೆಲಸ ಸಿಕ್ಕಿರುತ್ತದೆ. ಕೌಶ‌ಲ ಇರುವವರಿಗೆ ಕೆಲಸ ಸಿಕ್ಕಿರುವುದಿಲ್ಲ.‌ ಎರಡು ನಿಮಿಷಕ್ಕೆ ಒಂದು ಪಾಸ್ ಬರೆದುಕೊಡುವವನನ್ನು ಹೊರಗಿಟ್ಟು ಅದಕ್ಕೆ ಇಪ್ಪತ್ತು ನಿಮಿಷ ತೆಗೆದುಕೊಳ್ಳುವವನನ್ನು ನೆಚ್ಚಿಕೊಳ್ಳುತ್ತಿದ್ದೇವೆ.‌

ಸಮಯದ ವಿಷಯವಾಗಿ ನಾವೆಷ್ಟು ನಿಷ್ಠುರವಾಗಿ ಇರಬೇಕೆಂಬುದಕ್ಕೆ ಈ ಉದಾಹರಣೆಯನ್ನು ಕೊಡಬಹುದು. ಒಮ್ಮೆ ಲೇಖಕ ಖುಷ್‌ವಂತ್ ಸಿಂಗ್ ಅವರು ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರನ್ನು  ತಮ್ಮ ನಿವಾಸಕ್ಕೆ ಊಟಕ್ಕೆ ಆಹ್ವಾನಿಸಿದ್ದರಂತೆ. ಪ್ರಧಾನಿ ರಾತ್ರಿ 8 ಗಂಟೆಗೆ ಬರುವುದಾಗಿ ಒಪ್ಪಿಕೊಂಡಿದ್ದರು. ಆದರೆ ನಿಗದಿತ ಸಮಯಕ್ಕೆ ಬರಲಾಗದೆ, 9 ಗಂಟೆಗೆ ಬರುವುದಾಗಿ ಸಂದೇಶ ಕಳುಹಿಸಿದರು. ‘ಈಗಾಗಲೇ ಸಮಯ ಮೀರಿದೆ, ನಾನು ಮಲಗಿದ್ದೇನೆ’ ಎಂದು ಸಿಂಗ್ ಮರುಸಂದೇಶ ಕಳುಹಿಸಿದ್ದರಂತೆ.

ಸಾರ್ವಜನಿಕ ವಲಯದ ಕೆಲಸದಲ್ಲಿ ಇರುವವರು ಬಹಳಷ್ಟು ದಕ್ಷತೆ ಮತ್ತು ನೈಪುಣ್ಯ ಹೊಂದಿದವರಾಗಿರ ಬೇಕು. ಕಾಲ ಕಳೆದಂತೆ ಅವರ ಕೌಶಲದ ಪರೀಕ್ಷೆಗಳಾಗಬೇಕು. ಅದನ್ನು ಆಧರಿಸಿ ತರಬೇತಿಗಳಾಗಬೇಕು. ಸಿಬ್ಬಂದಿ ನೇಮಕಾತಿ ಬರೀ ಅಂಕ ಆಧರಿಸಿ ಆಗಬಾರದು. ಅಂಕ ಮತ್ತು ಕೌಶಲ ಎರಡೂ ಇರಬೇಕು.

ವೈದ್ಯರು ರೋಗಿಯ ಸಮಯವನ್ನು, ಕಾರ್ಯಕ್ರಮದ ಆಯೋಜಕರು ಪ್ರೇಕ್ಷಕರ ಸಮಯವನ್ನು, ಕೆಲಸ ಮಾಡುವ ಸಿಬ್ಬಂದಿ ಕೆಲಸಕ್ಕಾಗಿ ಬಂದವರ ಸಮಯವನ್ನು..‌. ಅದು ತಮ್ಮ ಸಮಯವೆಂದೇ ಭಾವಿಸಿ ಗೌರವಿಸಬೇಕು.

ನಮ್ಮಲ್ಲಿ ಎಷ್ಟೊಂದು ಮಾನವ ಸಂಪನ್ಮೂಲವಿದೆ. ಅದು ಬಹುತೇಕ ಕಾಯುವ ಬೆಂಚ್ ಮೇಲೆ ಕೂತು ಸೋರಿ ಹೋಗುತ್ತಿದೆ. ನಮ್ಮ ಮಾನವ ಸಂಪನ್ಮೂಲವನ್ನುಸರಿಯಾಗಿ ಬಳಸಿಕೊಂಡಿದ್ದೇ ಆದರೆ ನಾವು ಪ್ರಗತಿಪಥದಲ್ಲಿ ಇನ್ನೂ ಬಹಳ ಮುಂದೆ ಇರುತ್ತಿದ್ದೆವು.

ಮೂಲಸೌಕರ್ಯಗಳನ್ನು ಸುಧಾರಿಸುವುದರಿಂದ, ಆಡಳಿತ ವ್ಯವಸ್ಥೆಯನ್ನು ದಕ್ಷಗೊಳಿಸುವುದರಿಂದ, ತಂತ್ರಜ್ಞಾನವನ್ನು ಬಹಳಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಿಂದ, ಪರಿಣತ ಸಿಬ್ಬಂದಿಯನ್ನು ಹೊಂದುವುದರಿಂದ ನಾವು ಈ  ಕಾಯುವಿಕೆಯ ಕಾಯಿಲೆಗೆ ಮದ್ದು ಅರೆಯಬಹುದೇನೊ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.