ADVERTISEMENT

ಸಂಗತ: ಮಕ್ಕಳು ಪಾಸ್, ಪರೀಕ್ಷೆ ಫೇಲ್!

ಶಾಲಾ ಪುಸ್ತಕದೊಳಗೆ ಎಷ್ಟೊಂದು ಮೌಲ್ಯಗಳಿದ್ದರೂ ಸಮಾಜ ಇಷ್ಟೊಂದು ನೈತಿಕ ಅಧಃಪತನಕ್ಕೆ ತಳ್ಳಲ್ಪಡುತ್ತಿರುವುದಕ್ಕೆ ನಮ್ಮ ಶಿಕ್ಷಣ ಕ್ರಮದಲ್ಲಿಯೇ ಉತ್ತರ ಇದೆ

ಸದಾಶಿವ ಸೊರಟೂರು
Published 15 ಮಾರ್ಚ್ 2024, 0:27 IST
Last Updated 15 ಮಾರ್ಚ್ 2024, 0:27 IST
   

ಒಂದು ಮಗು ‘ಕಾಯಿಪಲ್ಲೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಅದರಿಂದ ದೇಹಕ್ಕೆ ಬಹಳಷ್ಟು ಪೋಷಕಾಂಶಗಳು ಲಭ್ಯವಾಗುತ್ತವೆ’ ಎಂದು ಪರೀಕ್ಷೆಯಲ್ಲಿ ಉತ್ತರ ಬರೆಯಿತು ಎಂದುಕೊಳ್ಳಿ. ಅದಕ್ಕೆ ಪೂರ್ಣ ಅಂಕಗಳು ಸಿಗುತ್ತವೆ. ಆಗ ಮಗು ತಾನು ಕಲಿಯಬೇಕಾದುದನ್ನು ಕಲಿಯಿತು ಎಂದು ತೀರ್ಮಾನಿಸ
ಲಾಗುತ್ತದೆ. ಆದರೆ ಆ ಮಗು ತಾನು ಊಟ ಮಾಡುವಾಗ ತಟ್ಟೆಯಲ್ಲಿರುವ ಕಾಯಿಪಲ್ಲೆಗಳನ್ನು ತೆಗೆದು ಪಕ್ಕಕ್ಕಿಟ್ಟು ಊಟ ಮಾಡಿದರೆ ಆ ಕಲಿಕೆಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಇಲ್ಲಿ ಪರೀಕ್ಷೆಯು ಆ ಮಗುವಿಗೆ ಕಲಿಕೆಯಾಗಿದೆ ಎಂದು ಹೇಳುತ್ತದೆ. ಆದರೆ ಮಗುವಿಗೆ ನಿಜಕ್ಕೂ ಕಲಿಕೆಯಾಗಿಲ್ಲ. ಕಲಿಕೆಯಾಗಿದ್ದರೆ ಮಗು ಕಾಯಿಪಲ್ಲೆಯನ್ನು ತಿನ್ನದೆ ಆಚೆ ಇಡುತ್ತಿರಲಿಲ್ಲ. ಇಲ್ಲಿ ಪರೀಕ್ಷೆಯು ಅಳೆದದ್ದು ಮಗುವಿನಲ್ಲಿರುವ ಮಾಹಿತಿಯನ್ನು ಮಾತ್ರ. ಉತ್ತೀರ್ಣವಾದದ್ದು ಮಗು, ಆದರೆ ಅನುತ್ತೀರ್ಣ
ಆದದ್ದು ನಮ್ಮ ಪರೀಕ್ಷಾ ಕ್ರಮ!

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳ 5, 8 ಹಾಗೂ 9ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ (ಬೋರ್ಡ್‌ ಪರೀಕ್ಷೆ) ನಡೆಸುವ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಶಿಕ್ಷಣ ಇಲಾಖೆಗೆ ಈ ಪರೀಕ್ಷೆ ಬೇಕು, ಖಾಸಗಿ ಶಾಲಾ ಆಡಳಿತ ಮಂಡಳಿಗಳನ್ನು ಪ್ರತಿನಿಧಿಸುವ ಕೆಲವು ಸಂಘಗಳಿಗೆ ಈ ಪರೀಕ್ಷೆ ಬೇಡ. ಈ ಹಗ್ಗಜಗ್ಗಾಟ ನಡೆಯುತ್ತಲೇ ಇದೆ.‌ ಈ ಎರಡರ ನಡುವೆ ನಲುಗಿ ಹೋಗುತ್ತಿರುವವರು ಮಾತ್ರ ಮಕ್ಕಳು. 

ADVERTISEMENT

ಮೌಲ್ಯಾಂಕನ ಪರೀಕ್ಷೆ ಎಂದರೆ ಮತ್ತೇನೂ ಅಲ್ಲ. ಪರೀಕ್ಷೆ ನಡೆಸುವ ಸಲುವಾಗಿಯೇ ಇರುವ ಬೋರ್ಡ್ ಈ ಪರೀಕ್ಷೆಯನ್ನು ನಡೆಸುತ್ತದೆ. ಪ್ರಶ್ನೆಪತ್ರಿಕೆಯನ್ನು ಅದೇ ಕೊಡುತ್ತದೆ. ಪರೀಕ್ಷೆ ನಡೆಸಲು ಬದಲಿ ಶಿಕ್ಷಕರನ್ನು ನಿಯೋಜಿಸುತ್ತದೆ. ಮೌಲ್ಯಮಾಪನ‌ ಕೂಡ ಬದಲಿ ಶಿಕ್ಷಕರಿಂದ ಆಗುತ್ತದೆ. ಶಿಕ್ಷಕರೇ ನಡೆಸುವ ಶಾಲಾ
ಪರೀಕ್ಷೆಗಳಲ್ಲಿ ಇದೆಲ್ಲಾ ಇರುವುದಿಲ್ಲ. ಸಂಬಂಧಿಸಿದ ಶಿಕ್ಷಕರೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಅವರೇ ಪರೀಕ್ಷೆ ನಡೆಸಿ, ಅವರೇ ಮೌಲ್ಯಮಾಪನ ಮಾಡುತ್ತಾರೆ.‌

ಪರೀಕ್ಷೆ ಯಾವುದೇ ಆದರೂ ಮೂರು ಗಂಟೆ ಕೂತು ಬರೆಯಬೇಕಾದುದು ಮಗು. ಇಲಾಖೆಯು ಮೌಲ್ಯಾಂಕನದ ಕುರಿತಾಗಿ ಹಟ ಹಿಡಿದಿರುವುದು ಮತ್ತು ಸಂಘಗಳು ಮೌಲ್ಯಾಂಕನ ಬೇಡವೇ ಬೇಡ ಎನ್ನುತ್ತಿರುವುದಕ್ಕೆ ಅವರಿಗೆ ಅವರದೇ ಆದ ಕಾರಣಗಳಿರಬಹುದು. ಆದರೆ ಈ ಎರಡೂ ಕಡೆಯವರಲ್ಲಿ ಯಾರೂ ತಾವು ಮಾಡುವ ಪರೀಕ್ಷೆಗಳು ತೀರಾ ವಿಶ್ವಾಸಾರ್ಹತೆಯಿಂದ ಕೂಡಿವೆಯೇ ಎಂದು ಯೋಚಿಸಲು ಹೋಗುತ್ತಿಲ್ಲ.‌

ಯಾರು ಕಲಿಸುತ್ತಾರೊ ಅವರೇ ಮಗುವಿನ ಕಲಿಕೆಯ ಮೌಲ್ಯಮಾಪನ ಮಾಡಬೇಕು ಅನ್ನುತ್ತಾರೆ ಶಿಕ್ಷಣ ತಜ್ಞರು.‌ ಅದು ಸರಿ ಕೂಡ. ಮಗುವಿನ ಪರಿಸರ ಯಾವುದು, ಅದರ ಹಿನ್ನೆಲೆ ಏನು ಎಂಬುದು ಅದರ ಶಿಕ್ಷಕರಿಗೆ ಮಾತ್ರ ಗೊತ್ತಿರುತ್ತದೆ. ಮೌಲ್ಯಮಾಪನವು ವರ್ಷದ ಕೊನೆಯಲ್ಲಿ ಮಾಡುವಂತಹದ್ದಲ್ಲ, ಅದು ನಿರಂತರ. ಅದು ಬರೀ ಪರೀಕ್ಷಾ ಕೊಠಡಿಯಲ್ಲಿ ಸಾಧ್ಯವಾಗುವಂಥದ್ದಲ್ಲ, ಅದು ವ್ಯಾಪಕ. ಬೋಧನೆ ಮತ್ತು ಮೌಲ್ಯಮಾಪನ ಒಟ್ಟೊಟ್ಟಿಗೇ ಸಾಗುವಂತಹವು. ಮಗುವಿಗೆ ಹೇಳಿಕೊಟ್ಟ ‘ನೀರನ್ನು ಪೋಲು ಮಾಡಬಾರದು’ ಎಂಬ ಜ್ಞಾನವನ್ನು ನಾವು ವರ್ಷದ ಕೊನೆಯವರೆಗೂ ಕಾದು ಅಳೆಯಬೇಕಿಲ್ಲ. ಪೆನ್ನು, ಪೇಪರ್ ಮೂಲಕವೇ ಸಾಧಿಸಬೇಕಿಲ್ಲ. ಶಾಲೆಯಲ್ಲಿ ಆ ಮಗು ನೀರು ಬಳಸುವಾಗಲೇ ಅದು ಗೊತ್ತಾಗಿಬಿಡುತ್ತದೆ.
ಅದನ್ನು ನೋಡಿ ಅಲ್ಲೇ ತಿದ್ದಿಬಿಡಬಹುದು.

ಯುದ್ಧ ಎಂಬ ಪಾಠವೊಂದು ಯುದ್ಧದಿಂದ ಸಂಕಷ್ಟಕ್ಕೆ ಒಳಗಾದವರ ಬವಣೆಯನ್ನು ಹೇಳುತ್ತದೆ ಎಂದಿಟ್ಟುಕೊಳ್ಳಿ. ಯುದ್ಧ ಒಳ್ಳೆಯದಲ್ಲ ಎಂಬ ಆಶಯ ಮಗುವಿನ ಮನಸ್ಸಿನಲ್ಲಿ ಮೂಡಬೇಕು. ಅದೇ ಪಾಠದ ಉದ್ದೇಶ. ಪರೀಕ್ಷೆಯಲ್ಲಿ ನಾವು ಯುದ್ಧ ಕುರಿತ ಪಾಠದಲ್ಲಿನ ಕಥಾನಾಯಕನ ಹೆಸರೇನು ಎಂದು ಪ್ರಶ್ನೆ ಕೇಳುತ್ತೇವೆ. ಮಗು ಅವನ ಹೆಸರು ಬರೆದು ಎದ್ದು ಬರುತ್ತದೆ. ಪಾಠದ ಆಶಯ ಏನಾಯಿತು? ಪರೀಕ್ಷೆಯ ಉದ್ದೇಶ ಏನಾಯಿತು? 

ಬೋಧನೆ ಹಾಗೂ ಕಲಿಕೆಯಲ್ಲಿ ‘ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ’ (ಸಿಸಿಇ) ಎಂಬ, ಮಗುವಿನ ಕಲಿಕೆಯನ್ನು ಅಳೆಯುವ ವಿಧಾನವೊಂದಿದೆ. ಅದನ್ನು ಈಗಾಗಲೇ ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಜಾರಿಗೊಳಿಸಲಾಗಿದೆ. ಆದರೆ ನಾವು ಕೊನೆಗೂ ನೆಚ್ಚಿಕೊಳ್ಳುವುದು ವರ್ಷದ ಕೊನೆಯಲ್ಲಿ ನಡೆಯುವ, ಮೂರು ಗಂಟೆಯಲ್ಲಿ ಪೆನ್ನು, ಪೇಪರ್ ಬಳಸಿ ಬರೆಯುವ ಪರೀಕ್ಷೆಯನ್ನು. ನಿರಂತರ ಮತ್ತು ವ್ಯಾಪಕ
ಮೌಲ್ಯಮಾಪನದಿಂದ ಅಳೆದ ಮಾನಕಗಳು ಅಷ್ಟೊಂದು ಮುಖ್ಯವಾಗುವುದೇ ಇಲ್ಲ.‌ 

ಪಾಠ ಕೇಳು, ಪರೀಕ್ಷೆ ಬರಿ, ಅಂಕ ತಗೊ ಅಂದರೆ ಅದನ್ನು ಶಿಕ್ಷಣ ಎಂದು ಕರೆಯಲಾದೀತೆ? ಶಾಲಾ ಪುಸ್ತಕದೊಳಗೆ ಎಷ್ಟೊಂದು ಮೌಲ್ಯಗಳಿದ್ದರೂ ಸಮಾಜ ಇಷ್ಟೊಂದು ನೈತಿಕ ಅಧಃಪತನಕ್ಕೆ ತಳ್ಳಲ್ಪಡುತ್ತಿರುವುದು ಏಕೆ ಎಂಬುದಕ್ಕೆ ತೀರಾ ತಲೆಕೆಡಿಸಿಕೊಂಡು ಕೂತು ಉತ್ತರ ಹುಡುಕಬೇಕಿಲ್ಲ. ನಮ್ಮ ಶಿಕ್ಷಣ ಕ್ರಮದಲ್ಲಿ ಎಲ್ಲವೂ ಹೊರಗೆ ಕಾಣುವಷ್ಟು ನಿಚ್ಚಳವಾಗಿವೆ.

ಪ್ರತಿವರ್ಷ ಮಕ್ಕಳು ಪರೀಕ್ಷೆಯ ಒತ್ತಡಕ್ಕೆ ಒಳಗಾಗಿ ಮುದುಡಿ ಹೋಗುತ್ತಿರುವುದನ್ನು ನೋಡಿದರೆ ಸಂಕಟ
ಆಗುತ್ತದೆ. ಮಗುವಿಗೆ ಗೊತ್ತಿಲ್ಲದೇ ಅದರೊಳಗಿನ ಕಲಿಕೆಯ ಮೌಲ್ಯಮಾಪನ ಮಾಡುವ ದಿನಗಳು ಎಂದು ಬರುತ್ತವೋ ಎಂದು ಯೋಚನೆಯಾಗುತ್ತದೆ. ವರ್ಷದ ಕೊನೆಯಲ್ಲಿ ಕೆಲವೇ ಗಂಟೆಗಳ ಅವಧಿಯಲ್ಲಿ ತನ್ನ ಕಲಿಕೆಯನ್ನು ತೋರಿಸುವ ಒತ್ತಡದಿಂದ ಮಕ್ಕಳಿಗೆ ಎಂದು ಮುಕ್ತಿ ಸಿಗುತ್ತದೋ, ಪರೀಕ್ಷಾ ವಿಧಾನ ಎಂದು ಬದಲಾಗುವುದೋ, ಮಗುವಿನ ಸಮಗ್ರ ಮೌಲ್ಯಮಾಪನ ಎಂದು ಸಾಧ್ಯವಾಗುವುದೋ? ನಾವೆಲ್ಲರೂ ಈ ದಿಸೆಯಲ್ಲಿ ಯೋಚಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.