ಹವಾಮಾನ ಬದಲಾವಣೆ, ಜೀವನಶೈಲಿ, ಆಹಾರ ಪದ್ಧತಿಯಿಂದಾಗಿ ನಾವೀಗ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕಾದ ಸ್ಥಿತಿ ಉಂಟಾಗಿದೆ. ಹವಾಮಾನ ಬದಲಾವಣೆಯಿಂದ ಭಾರತದ ಬಹುತೇಕರು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿಹೋಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿವೃತ್ತ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಅಭಿಪ್ರಾಯಪಟ್ಟಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ.
ಕೋವಿಡ್ ಬಳಿಕ ನಾವು ನಮ್ಮ ಆರೋಗ್ಯದತ್ತ ಹೆಚ್ಚು ನಿಗಾ ವಹಿಸುತ್ತಿದ್ದೇವೆ. ಆರೋಗ್ಯದ ಬಗೆಗಿನ ಕಾಳಜಿ ನಮ್ಮಲ್ಲಿ ದಿನೇದಿನೇ ಹೆಚ್ಚುತ್ತಲೇ ಇದೆ. ಇಂದಿನ ಕಲಬೆರಕೆ ಹಾಗೂ ರಾಸಾಯನಿಕಮಿಶ್ರಿತ ಆಹಾರವೂ ಹಲವರ ಆರೋಗ್ಯದಲ್ಲಿ ಏರುಪೇರು ಆಗಲು ಕಾರಣ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ.
ಇದರಿಂದ ಕಂಗೆಟ್ಟಿರುವ ನಾವು, ಮೀನಿನಂತಹ ಸಮುದ್ರ ಆಹಾರಗಳತ್ತ ದೃಷ್ಟಿ ಹೊರಳಿಸಿದ್ದೇವೆ. ಇದರ ಪರಿಣಾಮವಾಗಿ, ಸಮುದ್ರ ಆಹಾರಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನಮ್ಮಲ್ಲಿ ಅಕ್ವಾಕಲ್ಚರ್ ವೇಗವಾಗಿ ಬೆಳೆಯುತ್ತಿದೆ. ಮೀನಿನಲ್ಲಿ ಹೇರಳವಾಗಿರುವ
ಒಮೆಗಾ– 3 ಅಂಶದ ಬಗ್ಗೆ ನಾವು ಹೆಚ್ಚು ಆಸಕ್ತರಾಗಿ
ದ್ದೇವೆ. ಒಮೆಗಾ– 3 ರಕ್ತದೊತ್ತಡ ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ. ಸಂಧಿವಾತ ಕಾಯಿಲೆಯಲ್ಲಿ ಕೀಲುಗಳ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆದುಳು ಮತ್ತು ಕಣ್ಣುಗಳ ಕಾರ್ಯವನ್ನು ಪೋಷಿಸಲು ನೆರವಾಗುತ್ತದೆ. ಬುದ್ಧಿಮಾಂದ್ಯತೆ, ಖಿನ್ನತೆ, ಆಸ್ತಮಾ, ಮೈಗ್ರೇನ್ ಮತ್ತು ಮಧುಮೇಹ ತಡೆಯಲು, ನಿವಾರಿಸಲು ಹಾಗೂ ಇದರ ಅಪಾಯವನ್ನು ಕಡಿಮೆ ಮಾಡಲು ಕಾರಣವಾಗುತ್ತದೆ.
ಮೀನುಗಾರಿಕೆಯು ಇಂದು ಭಾರತದ ಆರ್ಥಿಕತೆಯ ಒಂದು ಪ್ರಮುಖ ಕ್ಷೇತ್ರವಾಗಿ ಹೊರಹೊಮ್ಮಿದೆ. ದೇಶದ ಒಟ್ಟು ಜಿಡಿಪಿಯ ಶೇ 1.24ರಷ್ಟು ಕೊಡುಗೆ ಮೀನುಗಾರಿಕೆಯಿಂದಲೇ ಸಿಗುತ್ತಿದೆ. ಅಷ್ಟೇ ಅಲ್ಲ, ಮೀನುಗಾರಿಕೆ ಕ್ಷೇತ್ರವು ದೇಶದಲ್ಲಿ 2.8 ಕೋಟಿಗೂ ಹೆಚ್ಚು ಜನರ ಜೀವನೋಪಾಯಕ್ಕೆ ಬುನಾದಿಯಾಗಿದೆ. ಜಾಗತಿಕ ಉತ್ಪಾದನೆಯಲ್ಲಿ ಶೇ 6.96ರಷ್ಟು ಪಾಲನ್ನು ಹೊಂದಿರುವ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಮೀನು ಉತ್ಪಾದಕ ದೇಶವಾಗಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಪ್ರಕಾರ, ಮೀನು ಉತ್ಪಾದನೆಯು 1950– 51ರಲ್ಲಿ 7.52 ಲಕ್ಷ ಟನ್‌ಗಳಿದ್ದರೆ, 2018– 19ರಲ್ಲಿ 125.90 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಅಂದರೆ ಉತ್ಪಾದನೆ 17 ಪಟ್ಟು ಹೆಚ್ಚಾಗಿದೆ.
ಕೌಟಿಲ್ಯನ ‘ಅರ್ಥಶಾಸ್ತ್ರ’ ಮತ್ತು ರಾಜ ಸೋಮೇಶ್ವರನ ‘ಮಾನಸೋಲ್ಲಾಸ’ ಗ್ರಂಥಗಳು ಮೀನು ಸಂಸ್ಕೃತಿ
ಯನ್ನು ಉಲ್ಲೇಖಿಸುತ್ತವೆ. ಶತಮಾನಗಳಿಂದಲೂ
ಭಾರತವು ಸಣ್ಣ ಕೊಳಗಳಲ್ಲಿ ಸಾಂಪ್ರದಾಯಿಕವಾಗಿ ಮೀನು ಕೃಷಿ ನಡೆಸುತ್ತಾ ಬಂದಿದೆ. 19ನೇ ಶತಮಾನದ ಆರಂಭದಲ್ಲಿ ಟ್ಯಾಂಕ್‌ಗಳಲ್ಲಿ ನಿಯಂತ್ರಿತ ಸಂತಾನೋತ್ಪತ್ತಿ
ಯೊಂದಿಗೆ ಉತ್ಪಾದಕತೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಯಿತು. ಉಪ್ಪುನೀರಿನ ಕೃಷಿಯನ್ನು ಹಳೆಯ ಪದ್ಧತಿಯಲ್ಲಿ ಮಾಡಲಾಗುತ್ತಿತ್ತು. ಸಾಂಪ್ರದಾಯಿಕ ಮೀನುಗಾರಿಕೆ ವಿಧಾನಗಳು ಮಧ್ಯ ಮತ್ತು ದಕ್ಷಿಣ ಭಾರತದಲ್ಲಿ 2000 ವರ್ಷಗಳಿಂದ ಆಚರಣೆಯಲ್ಲಿವೆ.
ಇಂತಹದ್ದೊಂದು ಸುದೀರ್ಘ ಇತಿಹಾಸ ಹೊಂದಿರುವ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರ ಸಂಕಷ್ಟಗಳತ್ತಲೂ ನಾವು ಗಮನಹರಿಸಬೇಕಾಗಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ನೌಕಾಪಡೆಗಳು ಆಗಾಗ ಭಾರತೀಯ ಮೀನುಗಾರರನ್ನು ಗಡಿ ಉಲ್ಲಂಘನೆ ಆರೋಪದ ಮೇಲೆ ಹಲವು ದಿನಗಳ ಕಾಲ ವಶದಲ್ಲಿ ಇಟ್ಟುಕೊಳ್ಳುತ್ತಿವೆ. ಶ್ರೀಲಂಕಾ ನೌಕಾಪಡೆಯೊಂದಿಗೆ ನಡೆಯುವ ಚಕಮಕಿಗಳು ಸಾವು ನೋವಿಗೆ
ಕಾರಣವಾಗುತ್ತಿವೆ. ದೋಣಿಗಳು ಜಖಂಗೊಳ್ಳುತ್ತವೆ. ಇದರಿಂದ ಮೀನುಗಾರರ ಕುಟುಂಬಗಳು ಆರ್ಥಿಕ
ಸಂಕಷ್ಟಕ್ಕೀಡಾಗುತ್ತಿವೆ.
ಎಲ್ಲ ಕ್ಷೇತ್ರಗಳಂತೆ ಮೀನುಗಾರಿಕೆ ಕ್ಷೇತ್ರದಲ್ಲೂ ಅಭಿವೃದ್ಧಿಯ ಮಾತು ಮೀನುಗಾರರ ನಿದ್ದೆಗೆಡಿಸಿದೆ. ಒಳನಾಡು ಮೀನುಗಾರಿಕೆಗೆ ಆದ್ಯತೆ ಸಿಗದೆ ಮೀನುಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಹೊನ್ನಾವರದ ಬಂದರು ಯೋಜನೆಯಿಂದ ರಿಟ್ಲೆ ಕಡಲಾಮೆ ಮತ್ತು ಇಲ್ಲಿನ ಮೀನುಗಾರರ ಬದುಕು ಅವಸಾನದ ಅಂಚಿನಲ್ಲಿದೆ.
ಮೀನುಗಾರರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಕರ್ನಾಟಕದಲ್ಲಿ ಸಮರ್ಪಕವಾಗಿ ಜಾರಿಯಾಗಬೇಕಿದೆ. ಒಳನಾಡು ಮೀನುಗಾರಿಕೆ ಹಾಗೂ ಸಮುದ್ರ ಮೀನುಗಾರಿಕೆಗೆ ಆದ್ಯತೆ ಸಿಗಬೇಕಿದೆ. ಆರೋಗ್ಯ ವಿಮೆ ಪರಿಣಾಮಕಾರಿಯಾಗಿ ಸಿಗಬೇಕಿದೆ. ಮಂಗಳೂರಿ
ನಲ್ಲಿರುವ ಮೀನುಗಾರರ ಶಾಲೆಯಲ್ಲಿ ಮೀನುಗಾರರ ಮಕ್ಕಳಿಗೇ ಪ್ರವೇಶಾವಕಾಶ ಸಿಗುತ್ತಿಲ್ಲ. ಈ ಅವ್ಯವಸ್ಥೆ ಬದಲಾಗಿ, ಆದ್ಯತೆಯ ಮೇರೆಗೆ ಅವಕಾಶ ಸಿಗುವಂತೆ ಆಗಬೇಕು. ಮೀನುಗಾರಿಕೆಯ ಮೂಲಸೌಲಭ್ಯ
ವಾಗಿರುವ ಶೀತಲೀಕರಣ ವ್ಯವಸ್ಥೆ ಕಲ್ಪಿಸುವ ಭರವಸೆ ಇನ್ನೂ ಕೃತಿಗೆ ಇಳಿದಿಲ್ಲ. ಈ ಎಲ್ಲ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಿಕೊಡಬೇಕಾಗಿದೆ.
ಈ ನಡುವೆ, ಮೀನುಗಾರರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ರಾಷ್ಟ್ರೀಯ ಮೀನುಗಾರರ ಸಂಘ ಕಾರ್ಯೋನ್ಮುಖವಾಗಿದೆ. ಮೊದಲ ಹಂತದಲ್ಲಿ, ಕರ್ನಾಟಕದಲ್ಲಿ ಸರಣಿ ಔಟ್‌ಲೆಟ್‌ಗಳನ್ನು ಸ್ಥಾಪಿಸಿ, ಮೀನು ಸೇರಿದಂತೆ ಸಮುದ್ರ ಆಹಾರಗಳನ್ನು ತಾಜಾ ಆಗಿ ಮಾರಾಟ ಮಾಡಲು ಅದು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ. ಅಂದಹಾಗೆ, ಇಂದು
(ನ. 21) ವಿಶ್ವ ಮೀನುಗಾರಿಕೆ ದಿನ.
ಲೇಖಕ: ಮಕ್ಕಳ ತಜ್ಞರು, ಉಪಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.