ADVERTISEMENT

ಸಂಗತ | ತೆರಿಗೆ: ಸರಿಯಲಿ ಭ್ರಮೆ ಬದಿಗೆ

ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಗೌರವಾನ್ವಿತ ತೆರಿಗೆದಾರರೇ

ದೀಪಾ ಹಿರೇಗುತ್ತಿ
Published 15 ಜೂನ್ 2022, 20:49 IST
Last Updated 15 ಜೂನ್ 2022, 20:49 IST
   

ಸರ್ಕಾರಗಳು ಜನರಿಗೆ ಉಚಿತವಾಗಿ ವಸ್ತು,ಸೌಲಭ್ಯಗಳನ್ನು ನೀಡುವ ಕುರಿತು ಫೇಸ್‍ಬುಕ್‍ನಲ್ಲಿ ಚರ್ಚೆ ನಡೆಯುತ್ತಿತ್ತು. ಯಾರೋ ಬರೆದಿದ್ದರು, ‘ಉಚಿತವಾಗಿ ನೀಡುತ್ತಿರುವುದಲ್ಲ, ನಮ್ಮ ತೆರಿಗೆ ಹಣದಿಂದ ನೀಡುತ್ತಿರುವುದು’. ‘ನಾವು ಕಷ್ಟಪಟ್ಟು ದುಡಿಯುವುದು ಕಂಡಕಂಡವರಿಗೆ ಬಿಟ್ಟಿಯಾಗಿ ಹಂಚಲು ಅಲ್ಲ’. ಈ ಹೇಳಿಕೆಗಳನ್ನು ಸಮರ್ಥಿಸುವ ಇಂತಹುದೇ ಮತ್ತೊಂದಿಷ್ಟು ಕಮೆಂಟುಗಳು ಕಂಡವು.

ತಾವು ಆದಾಯ ತೆರಿಗೆ ಕಟ್ಟುವುದರ ಮೂಲಕ ದೇಶವನ್ನೇ ನಡೆಸುತ್ತಿದ್ದೇವೆ, ಇಲ್ಲದಿದ್ದರೆ ಈ ದೇಶದ ಬಡವರು ಉಪವಾಸದಿಂದ ಸತ್ತೇಹೋಗುತ್ತಾರೆ ಎನ್ನುವಷ್ಟರ ಮಟ್ಟಿಗಿನ ಅಹಂಕಾರ ಕೆಲವರ ಮಾತುಗಳಲ್ಲಿ! ಬುದ್ಧಿವಂತರು ಎನಿಸಿಕೊಂಡವರ, ಒಳ್ಳೊಳ್ಳೆಯ ಉದ್ಯೋಗದಲ್ಲಿರುವ ಜನರ ಈ ಮಾತುಗಳಲ್ಲಿರುವ ಮೇಲರಿಮೆ ಮತ್ತು ಅಹಂಕಾರ ವಿಷಾದ ವನ್ನು ಉಂಟುಮಾಡಿತು. ಒಂದೆರಡು ವರ್ಷಗಳ ಹಿಂದೆ ನಟಿ ಕಂಗನಾ ರನೌತ್, ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಧಕ್ಕೆಯಾಗ
ಬಾರದು ಎಂದು ಹೇಳುತ್ತಲೇ ಭಾರತದ ಮೂರು– ನಾಲ್ಕು ಶೇಕಡ ಜನರಷ್ಟೇ ತೆರಿಗೆ ಕಟ್ಟುವವರು, ಉಳಿದವರೆಲ್ಲ ಅವರ ಮೇಲೆಯೇ ಅವಲಂಬಿತರಾಗಿ ಇರುವವರು ಎಂದು ಹೇಳಿ ನಗೆಪಾಟಲಿಗೆ ಈಡಾಗಿದ್ದರು.

ಸಾರ್ವಜನಿಕ ಆಸ್ತಿಗೆ ಧಕ್ಕೆಯಾಗಬಾರದು ಎಂಬ ಮಾತನ್ನು ಒಪ್ಪುತ್ತಲೇ ಆ ಸಾರ್ವಜನಿಕ ಆಸ್ತಿಯ ಒಡೆಯರು ಆದಾಯ ಮತ್ತು ಕಾರ್ಪೊರೇಟ್ ತೆರಿಗೆ ಕಟ್ಟುವವರು ಮಾತ್ರ ಎಂದು ತಿಳಿದುಕೊಂಡ ಆಕೆಯ ಬಾಲಿಶತನ ನಗುಬರಿಸುವಂತಿತ್ತು. ಈ ಎರಡು ತೆರಿಗೆಗಳು ಮಾತ್ರ ತೆರಿಗೆ ಎಂದು ಕಂಗನಾ ತಿಳಿದುಕೊಂಡಿದ್ದರೋ ಏನೋ!

ADVERTISEMENT

ನೆನಪಿರಲಿ, ಕೊಳ್ಳುವ ಪ್ರತೀ ವಸ್ತುವಿಗೂ ನಾವು ತೆರಿಗೆ ಸೇರಿಸಿಯೇ ಹಣ ನೀಡುತ್ತೇವೆ. ಅದನ್ನು ಪರೋಕ್ಷ ತೆರಿಗೆ ಎನ್ನುತ್ತೇವೆ. ಈ ಪರೋಕ್ಷ ತೆರಿಗೆಯೂ ದೇಶದ ಆದಾಯಕ್ಕೆ ನೇರ ತೆರಿಗೆಯಷ್ಟೇ ಕೊಡುಗೆ ಸಲ್ಲಿಸುತ್ತಿದೆ. ಹಾಗಾಗಿ ಸಾಮಾಜಿಕ ವ್ಯವಸ್ಥೆಯ ಕಟ್ಟಕಡೆಯ ಮೆಟ್ಟಿಲ ಮೇಲೆ ಇರುವ ವ್ಯಕ್ತಿಯೂ ಈ ದೇಶದ ಗೌರವಾನ್ವಿತ ತೆರಿಗೆದಾರರೇ! ಒಂದು ಬೆಂಕಿಪೊಟ್ಟಣ ಕೊಂಡಾಗಲೂ ಆತ ದೇಶದ ಆಡಳಿತ ಯಂತ್ರದ ಯಾವುದೋ ಒಂದು ಪುಟ್ಟ ಭಾಗಕ್ಕೆ ಕೀಲೆಣ್ಣೆ ಸವರುತ್ತಿರುತ್ತಾನೆ!


ಆದರೆ ಬಹಳ ಜನರಿಗೆ ತಾವು ಕೂಡ ತೆರಿಗೆ ಕಟ್ಟುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ. ತಮ್ಮ ತೆರಿಗೆ ಹಣದಿಂದ ಬೇರೆಯವರಿಗೆ ಪುಕ್ಕಟೆ ಸೌಲಭ್ಯ ಕೊಟ್ಟರು ಎಂದು ಕೈ ಕೈ ಹಿಸುಕಿಕೊಳ್ಳುತ್ತ, ತಾವೇ ಬಡವರ ಅನ್ನದಾತರು ಎಂಬ ಭ್ರಮೆಯಲ್ಲಿರುವ ಮೂರ್ಖರಿಗೂ ಗೊತ್ತಿಲ್ಲದೇ ಇರುವುದು ಏನೆಂದರೆ, ಅವರು ಪಡೆಯುವ ಸಂಬಳ, ಸೌಲಭ್ಯಗಳೂ ದೇಶದ ಪ್ರತಿಯೊಬ್ಬ ವ್ಯಕ್ತಿಯ ಬೆವರ ಹನಿಯ ಫಲವೇ ಎಂಬುದು.

ಖಾಸಗಿ ಕಂಪನಿಗಳು ಕೂಡ ಸರ್ಕಾರ ಕೊಟ್ಟ ಭೂಮಿಯ, ವಿವಿಧ ರಿಯಾಯಿತಿಗಳ ಋಣದಲ್ಲಿಯೇ ಇರುತ್ತವೆ. ಒಂದು ಪುಟ್ಟ ಸೂಜಿಯಿಂದ ಹಿಡಿದು ವಿಮಾನದವರೆಗೂ ನಾವು ತೆರಿಗೆ ಕಟ್ಟದ ಯಾವು ದಾದರೂ ವಸ್ತು ಇದೆಯೇ ಎಂದು ಹುಡುಕಿ ನೋಡಿದರೂ ಸಿಗುವುದಿಲ್ಲ. ಇಂದು ಜನಸಾಮಾನ್ಯರ ಕಿಸೆಗೆ ಭಾರವಾಗಿರುವ ಪೆಟ್ರೋಲ್, ಡೀಸೆಲ್ ತೆರಿಗೆಯನ್ನಂತೂ ಬಡವನಿಂದ ಧನಿಕನವರೆಗೆ ಎಲ್ಲರೂ ಅನಿವಾರ್ಯವಾಗಿ ಕೊಡುತ್ತಲೇ ಇದ್ದಾರೆ. ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವವರು, ಕಾರ್ಪೊರೇಟ್ ಮಂದಿ ಕೊಡುವ ತೆರಿಗೆ ಮಾತ್ರವಲ್ಲ, ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಜನರು ಕೊಡುವ ಪರೋಕ್ಷ ತೆರಿಗೆ ಹಣವೂ ಸರ್ಕಾರ ನಡೆಯಲು ಬೇಕು.

ಇನ್ನು ಕೋಟಿ ಕೋಟಿ ಸಂಭಾವನೆ ಪಡೆದು ಜನಸಾಮಾನ್ಯರ ಬಗ್ಗೆ ಕ್ಷುಲ್ಲಕ ಭಾವನೆ ಇಟ್ಟುಕೊಂಡಿರುವವರಿಗೆ ಹಣ ಮೇಲಿಂದ ಉದುರುವುದಿಲ್ಲ. ಒಬ್ಬ ದಿನಗೂಲಿ ನೌಕರ ತಾನು ದುಡಿದ ಹಣದ ಒಂದು ಭಾಗವನ್ನು ತೆರಿಗೆಯೂ ಸೇರಿರುವ ಟಿಕೆಟ್ ಕೊಂಡು ಸಿನಿಮಾ ನೋಡುವ ಕಾರಣಕ್ಕೇ ತಾವು ಅನ್ನ ತಿನ್ನುತ್ತಿದ್ದೇವೆ ಎಂಬುದನ್ನು ಸಿನಿಮಾ ತಾರೆಯರು ಮರೆಯದಿದ್ದರೆ ಒಳ್ಳೆಯದು. ತಾವು ಮಾತ್ರ ತೆರಿಗೆ ಕಟ್ಟುತ್ತಿದ್ದೇವೆ ಎಂಬ ಕೆಲವರ ದಾರ್ಷ್ಟ್ಯ ಎಲ್ಲಿಯವರೆಗೆ ಎಂದರೆ, ತೆರಿಗೆ ಕಟ್ಟುವವರಿಗೆ ಮಾತ್ರ ಮತದಾನವೂ ಸೇರಿದಂತೆ ಕೆಲವು ಹಕ್ಕುಗಳು ಇರಬೇಕು ಎಂದು ಪ್ರತಿಪಾದಿಸುವಲ್ಲಿಯವರೆಗೆ! ಬ್ರಿಟಿಷ್ ಭಾರತದಲ್ಲಿ ಈ ರೀತಿಯ ವ್ಯವಸ್ಥೆ ಇತ್ತು ಕೂಡ!

ಇಂತಹ ಫ್ಯಾಸಿಸ್ಟ್ ಮನಃಸ್ಥಿತಿಯ ಜನರನ್ನು ಗಮನದಲ್ಲಿ ಇಟ್ಟುಕೊಂಡೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಾಮಾನ್ಯ ವ್ಯಕ್ತಿಗೂ ರಾಷ್ಟ್ರಪತಿಗೂ ಒಂದೇ ಮತ ಎನ್ನುವುದರ ಮೂಲಕ ಸಮಾನತೆ ತಂದಿದ್ದು. ಅದೇ ರೀತಿತೆರಿಗೆದಾರರಲ್ಲೂ ಅಷ್ಟೇ, ನೀವು ನೇರ ತೆರಿಗೆಯನ್ನಾದರೂ ಕಟ್ಟಿ, ಪರೋಕ್ಷ ತೆರಿಗೆಯನ್ನಾದರೂ ಕಟ್ಟಿ, ನಿಮ್ಮ ಆದಾಯದ ನಲವತ್ತು ಶೇಕಡ ಆದರೂ ಕಟ್ಟಿ, ಒಂದು ರೂಪಾಯಿಯಾದರೂ ಕಟ್ಟಿ ಎಲ್ಲರೂ ಸಮಾನರು.

ದೇಶ ನಡೆಯಲು ಇಲ್ಲಿ ವಾಸಿಸುವ ಪ್ರತಿಯೊಬ್ಬರ ಕೊಡುಗೆಯೂ ಬೇಕು. ಹಾಗಾಗಿ ಈ ದೇಶ ಎಲ್ಲರಿಗೂ ಸೇರಿದ್ದು. ಈ ಎಲ್ಲರೂ ಇರುವ ಸಮಾಜದಲ್ಲಿಯೇ ಪ್ರತಿಯೊಬ್ಬರೂ ಹಣ ಸಂಪಾದಿಸುವುದೇ ವಿನಾ ಮನುಷ್ಯರೇ ಇಲ್ಲದ ದ್ವೀಪದಲ್ಲಲ್ಲ. ಹಾಗಾಗಿ ಈಹಣದ, ದೊಡ್ಡಸ್ತಿಕೆಯ ಅಹಂಗೆ ಇಲ್ಲಿ ಯಾವ ಬೆಲೆಯೂ
ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.