ರಾಜಕುಮಾರ ಕುಲಕರ್ಣಿ
ಮಿತ್ರರೊಬ್ಬರು ಇತ್ತೀಚೆಗೆ ಬೆಳಗ್ಗಿನ ವಾಕಿಂಗ್ ಸಮಯದಲ್ಲಿ ಸಂಭಾಷಣೆಯ ನಡುವೆ ‘ದೇವರು ಹಿಂಸಾಪ್ರಿಯನೋ ಅಥವಾ ಶಾಂತಿಪ್ರಿಯನೋ’ ಎಂದು ಕೇಳಿದರು. ಅವರು ಹಾಗೆ ಕೇಳುವುದಕ್ಕೂ ಕಾರಣವಿತ್ತು. ಕೆಲಕ್ಷಣಗಳ ಹಿಂದಷ್ಟೆ ದೂರದ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಜನರ ಗುಂಪೊಂದು ನಮಗೆ ಎದುರಾಗಿತ್ತು. ಆ ಗುಂಪಿನಲ್ಲಿ ಕೆಲವರು ಸುಮಾರು ಮೂರರಿಂದ ನಾಲ್ಕು ಅಡಿಗಳಷ್ಟು ಉದ್ದದ ಕೋಲುಗಳನ್ನು ಪಾದದ ಕೆಳಗೆ ಕಟ್ಟಿಕೊಂಡು ನಡೆಯುತ್ತಿದ್ದರು. ನೂರಾರು ಕಿಲೊಮೀಟರ್‌ಗಳ ದೂರದ ದಾರಿಯನ್ನು ಹೀಗೆ ಯಾವ ಆಸರೆಯೂ ಇಲ್ಲದೆ ಕೋಲುಗಳ ಮೇಲೆ ಕ್ರಮಿಸುವ ಈ ವಿಧಾನವೇ ನಮ್ಮ ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು.
ವಿಚಾರಿಸಿದಾಗ ತಿಳಿಯಿತು, ಈ ರೀತಿ ಕೋಲುಗಳ ಮೇಲೆ ನಡೆದುಬಂದು ದೇವರ ದರ್ಶನ ಪಡೆಯುವ ಹರಕೆ ಅವರದಾಗಿತ್ತು. ಸಹಜವಾಗಿಯೇ ಈ ನಡೆ ನನ್ನ ಮಿತ್ರರಿಗೆ ಮತ್ತು ನನಗೆ ಹಿಂಸೆಯಾಗಿ ತೋರಿತು.
ದೇವರ ಹೆಸರಿನಲ್ಲಿ ದೇಹಕ್ಕೆ ಬಗೆಬಗೆಯ ಹಿಂಸೆಯನ್ನು ನೀಡುವ ಭಕ್ತರ ಸಂಖ್ಯೆ ಸಮಾಜದಲ್ಲಿ ಬಹಳಷ್ಟಿದೆ. ಕೆಂಡದ ಮೇಲೆ ನಡೆಯುವುದು, ಅಂಗೈಯಲ್ಲಿ ಕರ್ಪೂರದಾರತಿ ಬೆಳಗುವುದು, ಮುಳ್ಳಿನ ಪಾದುಕೆಗಳ ಮೇಲೆ ನಿಲ್ಲುವುದು, ರಕ್ತ ಜಿನುಗುವಂತೆ ಚಾಟಿಯಿಂದ ಮೈಮೇಲೆ ಹೊಡೆದುಕೊಳ್ಳುವುದು, ಬೆನ್ನಿಗೆ ಕಬ್ಬಿಣದ ಕೊಂಡಿ ಸಿಕ್ಕಿಸಿಕೊಂಡು ಗಾಳಿಯಲ್ಲಿ ತೇಲಾಡುವುದು, ನಾಲಗೆಗೆ ಕಬ್ಬಿಣದ ಸಲಾಕೆ ಚುಚ್ಚಿಕೊಳ್ಳುವುದು, ಅನ್ನಾಹಾರ ತ್ಯಜಿಸಿ ವೃಥಾ ಉಪವಾಸವಿರುವುದು ಹೀಗೆ ಆಯಾ ದೇವಸ್ಥಾನದ ನಿಯಮಗಳಿಗೆ ಅನುಗುಣವಾಗಿ ಭಕ್ತಗಣ ದೈಹಿಕ ಹಿಂಸೆಗೆ ಒಳಗಾಗುತ್ತದೆ. ಹಾಗೆಂದು ಇದೇನು ದೇವರು ಮಾಡಿದ ನಿಯಮವಲ್ಲ. ದೇವರ ಹೆಸರಿನಲ್ಲಿ ಮನುಷ್ಯರು ರೂಢಿಸಿಕೊಂಡ ಪದ್ಧತಿಗಳಿವು.
ಕೆಲವು ವರ್ಷಗಳ ಹಿಂದೆ ಭಕ್ತನೊಬ್ಬ ದೇವರಿಗೆ ತನ್ನ ನಾಲಗೆಯನ್ನೇ ಸಮರ್ಪಿಸಿದ್ದ. ಬಾಗಲಕೋಟೆ ಹತ್ತಿರದ ಊರಿನಲ್ಲಿ ಅನಕ್ಷರಸ್ಥನೊಬ್ಬ ದೇವರಿಗೆ ತನ್ನ ಕಣ್ಣುಗಳನ್ನು ನೀಡಿ ಭಕ್ತಿಯ ಪರಾಕಾಷ್ಠೆ ಮೆರೆದಿದ್ದ. ಗ್ರಹಣದ ದಿನ ಪಾರ್ಶ್ವವಾಯುಪೀಡಿತರನ್ನು ಗುಂಡಿಗಳಲ್ಲಿ ಕುತ್ತಿಗೆಯವರೆಗೆ ಹೂಳುವುದರಿಂದ ರೋಗ ಗುಣಪಡಿಸಬಹುದು ಎನ್ನುವ ನಂಬಿಕೆ ಗ್ರಾಮೀಣ ಭಾಗಗಳಲ್ಲಿ ಬಲವಾಗಿದೆ. ಇಂಥ ಅಸಂಗತ ಘಟನೆಗಳು ಅನೇಕ ಸಂದರ್ಭಗಳಲ್ಲಿ ಪತ್ರಿಕೆಗಳಲ್ಲಿ ಸುದ್ದಿಯಾಗಿ ಸಾರ್ವಜನಿಕರ ಗಮನ ಸೆಳೆದಿವೆ. ಬಿಗಿಯಾದ ಕಾನೂನು ರೂಪಿಸಬೇಕಾದ ಸರ್ಕಾರವೇ ಗುಡಿ ಗುಂಡಾರಗಳಿಗೆ ಕೋಟ್ಯಂತರ ರೂಪಾಯಿಗಳ ಅನುದಾನ ನೀಡಿ ದೇವಸ್ಥಾನಗಳಲ್ಲಿನ ಅಂಧಾನುಚರಣೆಗಳನ್ನು ಪೋಷಿಸುತ್ತಿದೆ.
ಪ್ರಾಣಿ ಬಲಿ ಬೇಡುವ ಹಿಂಸಾಪ್ರಿಯ ದೇವರನ್ನು ಸಹ ಮನುಷ್ಯ ಸೃಷ್ಟಿಸಿದ್ದಾನೆ. ಕುರಿ, ಕೋಳಿ, ಕೋಣಗಳನ್ನು ಬಲಿ ಕೊಡುವ ಸಂಪ್ರದಾಯ ಇನ್ನೂ ಅನೇಕ ಊರುಗಳಲ್ಲಿ ಚಾಲ್ತಿಯಲ್ಲಿದೆ. ಪ್ರಾಣಿ ಬಲಿ ಕೊಡುವ ದಿನ ದೇವಸ್ಥಾನದ ಬೀದಿಯಲ್ಲಿ ರಕ್ತದೋಕುಳಿ ಹರಿಯುತ್ತದೆ. ಭಕ್ತರು ತಮ್ಮ ಆರ್ಥಿಕ ಶಕ್ತ್ಯಾನುಸಾರ ಪ್ರಾಣಿಗಳನ್ನು ಖರೀದಿಸಿ ಬಲಿ ಕೊಡುತ್ತಾರೆ. ಹಣವಿಲ್ಲದವರು ದೇವರ ಇಷ್ಟಾರ್ಥವನ್ನು ಪೂರೈಸಲು ಸಾಲ ಮಾಡಿ ಪ್ರಾಣಿಗಳನ್ನು ಬಲಿ ಕೊಡುವುದುಂಟು. ಇಂಥ ಸಂಪ್ರದಾಯಕ್ಕೆ ಅನುಗುಣವಾಗಿ ಪ್ರಾಣಿಪ್ರಿಯ ದೇವರ ಹೆಸರುಗಳು ಕೂಡ ಬೀಭತ್ಸವಾಗಿರುತ್ತವೆ.
ಸಮಾಜದಲ್ಲಿ ಮನುಷ್ಯನು ನೀತಿ ಮತ್ತು ಪ್ರಾಮಾಣಿಕತೆಗೆ ಹೆದರುವುದಿಲ್ಲವಾದರೂ ದೇವರಿಗೆ ಹೆದರುತ್ತಾನೆ. ದೇವರನ್ನು ಸಂತೃಪ್ತಿಪಡಿಸಲು ನಾನಾರೀತಿಯ ಪ್ರಯತ್ನಗಳನ್ನು ಮಾಡುತ್ತಾನೆ. ದೇವರನ್ನು ಮೆಚ್ಚಿಸಲು ಮನುಷ್ಯ ಮಾಡುವ ಪ್ರಯತ್ನಗಳಲ್ಲಿ ಸ್ವಯಂ ಹಿಂಸೆಗೆ ಒಳಗಾಗುವುದು ಕೂಡ ಒಂದು. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯಸಮ್ಮತ ಎನ್ನುವ ಮಾತು ದೇವರ ಮೇಲಿನ ಭಕ್ತಿಗೂ ಅನ್ವಯಿಸುತ್ತಿದೆ. ಆದರೆ ಇಂಥ ಪದ್ಧತಿಗಳ ಮೊರೆ ಹೋಗುವವರು ದುರ್ಬಲ ಮನಸ್ಸಿನವರೆಂದು ಅನೇಕ ಅಧ್ಯಯನಗಳು ರುಜುವಾತುಪಡಿಸಿವೆ.
ಪ್ರಾಣಿವರ್ಗಗಳಲ್ಲೇ ಶ್ರೇಷ್ಠನೆಂದು ಪರಿಗಣಿತವಾದ ಮನುಷ್ಯ ಹೀಗೆ ದೇವರ ಹೆಸರಿನಲ್ಲಿ ಹಿಂಸೆಗೆ ಒಳಗಾಗುವುದು ಮಾನವ ಬದುಕಿನ ದುರಂತಗಳಲ್ಲೊಂದು. ಗೋಕಾಕರ ‘ಭಾರತ ಸಿಂಧುರಶ್ಮಿ’ ಕೃತಿಯಲ್ಲಿ ಮನುಷ್ಯವರ್ಗದ ಮಹತ್ವದ ಕುರಿತು ಹೀಗೆ ಹೇಳಲಾಗಿದೆ- ‘ಜಗತ್ತಿನಲ್ಲಿ ಮನುಷ್ಯನಿಗಿಂತ ಕೆಳಸ್ತರದ ಪ್ರಾಣಿಗಳು ಮಾತ್ರವಲ್ಲ ಮೇಲಿನ ವರ್ಗಗಳ ವಿದ್ಯಾಧರ, ಗಂಧರ್ವ, ಅಪ್ಸರರು ಸಹ ಸ್ವಪ್ರಯತ್ನದಿಂದ ಬೆಳೆಯಲಾರರು. ಭಾವ, ಬುದ್ಧಿ, ಕರ್ಮದ ಮಿಲನದಿಂದ ಬೆಳೆಯಬಲ್ಲವನು ಮನುಷ್ಯ ಮಾತ್ರ’.
ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದರು. ಇದರರ್ಥ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರೀತಿ ಇರುವವರಿಗೆ ತಾವು ಮಾಡುವ ಕಾಯಕದಲ್ಲೇ ದೇವರು ಕಾಣಿಸುತ್ತಾನೆ. ಅಂಗೈಯಲ್ಲಿ ಆರತಿ, ಕೋಲಿನ ಮೇಲೆ ನಡಿಗೆ, ಕಬ್ಬಿಣದ ಮೊಳೆಗಳ ಮೇಲೆ ನಿಲ್ಲುವುದು, ಚಾಟಿಯಿಂದ ಹೊಡೆದುಕೊಳ್ಳುವುದು ಇಂಥ ಪ್ರಯತ್ನಗಳಿಂದ ಸಮಯ ಮತ್ತು ಶ್ರಮ ವ್ಯರ್ಥವೇ ವಿನಾ ಯಾವ ಪ್ರಯೋಜನವೂ ಇಲ್ಲ. ಕಾಯವನ್ನು ಕಾಯಕದ ಮೂಲಕ ದಂಡಿಸಬೇಕೆ ವಿನಾ ಅನಗತ್ಯವಾದ ಮೂಢನಂಬಿಕೆಗಳನ್ನು ಆಚರಿಸುವುದರಲ್ಲಿ ಮನುಷ್ಯರ ಶ್ರಮ ವ್ಯರ್ಥವಾಗಬಾರದು. ಜನಪದರು ಹೇಳಿದಂತೆ, ಜಂಗಮನ ಜೋಳಿಗೆಯೆಂದು ಅದನ್ನು ಮೂಲೆಯಲ್ಲಿಟ್ಟರೆ ಅದು ತುಂಬುವುದಿಲ್ಲ. ಬದುಕಿನ ಪ್ರತಿಯೊಂದು ಆಗುಹೋಗಿಗೆ ಹಣೆಬರಹ, ಕೆಟ್ಟಕಾಲ ಎಂದು ದೈವದ ಮೇಲೆ ಭಾರ ಹಾಕಿ ಕೈಕಟ್ಟಿ ಕುಳಿತುಕೊಳ್ಳುವವರಿಗೆ ಯಾವ ದೇವರೂ ಸಹಾಯಹಸ್ತ ಚಾಚುವುದಿಲ್ಲ.
ದೇವರ ಅಸ್ತಿತ್ವದ ಕುರಿತು ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್ ತಮ್ಮ ‘ಐನ್‍ಸ್ಟೀನ್-ದಿ ಹ್ಯೂಮನ್ ಸೈಡ್’ ಪುಸ್ತಕದಲ್ಲಿ ಹೀಗೆ ವಿವರಿಸುತ್ತಾರೆ ‘ದೇವರು ಎಂಬ ವ್ಯಕ್ತಿಯೊಬ್ಬನಿದ್ದಾನೆ ಎಂದು ನಾನು ನಂಬುವುದಿಲ್ಲ. ದೇವರು ಎಂಬ ವ್ಯಕ್ತಿಯನ್ನು ಕಲ್ಪಿಸಿಕೊಳ್ಳುವುದೂ ನನಗೆ ಸಾಧ್ಯವಿಲ್ಲ. ಮನುಷ್ಯನ ಪ್ರಯತ್ನಗಳಲ್ಲಿ ಅತ್ಯಂತ ಮುಖ್ಯವಾದದ್ದೆಂದರೆ, ನಮ್ಮ ಕರ್ಮವೆಲ್ಲ ನೀತಿಯುತವಾಗಿರಬೇಕೆಂದು ಮಾಡುವ ಪ್ರಯತ್ನ. ನಮ್ಮ ಉಳಿವು, ಅಸ್ತಿತ್ವ ಕೂಡ ಅದನ್ನು ಅವಲಂಬಿಸಿದೆ. ನಾವು ಮಾಡುವ ಕೆಲಸ ನೀತಿಯುತವಾಗಿದ್ದರೆ ಮಾತ್ರ ಬದುಕಿಗೊಂದು ಸೌಂದರ್ಯ, ಗಾಂಭೀರ್ಯ ಇರುತ್ತದೆ’.
‘ದೇವರು’ ಪುಸ್ತಕ ಬರೆದು ದೇವರ ಅಸ್ತಿತ್ವವನ್ನೇ ಪ್ರಶ್ನಿಸಿದ ಎ.ಎನ್.ಮೂರ್ತಿ ರಾವ್ ಅವರು ‘ನಾವು ನಂಬಿಕೆ ಇಡಬಹುದಾದ ಏಕಮೇವ ದೇವರು ಮನುಷ್ಯರಲ್ಲಿ ವಾಸಿಸುವ ಒಳ್ಳೆಯತನ- ದುಷ್ಟತನದೊಂದಿಗೆ ವಾಸಿಸುವ ಒಳ್ಳೆಯತನ. ನಾವು ನಮ್ಮೊಳಗಿರುವ ಒಳ್ಳೆಯತನವೆನ್ನುವ ಆ ದೇವರನ್ನು ಚೈತನ್ಯಗೊಳಿಸಬೇಕು, ಅವನನ್ನು ದುಷ್ಟತನಕ್ಕೆ ಎದುರಾಗಿ ನಿಲ್ಲಿಸಬೇಕು’ ಎಂದಿರುವರು.
ಮನುಷ್ಯ ಹಿಂಸಾಪ್ರಿಯನೇ ವಿನಾ ದೇವರು ಹಿಂಸಾವಿನೋದಿಯಲ್ಲ. ದೇವರ ಹೆಸರಿನಲ್ಲಿ ಮನುಷ್ಯ ರೂಢಿಗೆ ತಂದಿರುವ ಪದ್ಧತಿಗಳಿವು. ಆದರೆ ನ್ಯಾಯ, ಸತ್ಯ ಮತ್ತು ಪ್ರಾಮಾಣಿಕವಾಗಿ ಬದುಕುವ ಮನುಷ್ಯ ಅಂಧಾನುಚರಣೆಗಳಿಗೆ ಹೆದರುವ ಅಗತ್ಯವಿಲ್ಲ. ನಾವು ಹೆದರಬೇಕಾಗಿರುವುದು ನಮ್ಮೊಳಗಿನ ದುಷ್ಟತನಕ್ಕೆ ಎನ್ನುವುದನ್ನು ಮನುಷ್ಯರು ಅರ್ಥಮಾಡಿಕೊಳ್ಳಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.