‘ಈ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸೋದು ಬಹಳ ಕಷ್ಟ ಆಗಿದೆ. ಏನೋ ಹೊಸದಾಗಿ ವಾಟರ್ ಬೆಲ್ ಹೊಡೆದು ನೀರು ಕುಡೀಲೇಬೇಕು ಅಂತ ಕಂಪಲ್ಸರಿ ಮಾಡ್ತಾರಂತೆ. ಟೀಚರ್ ಎದುರೇ ಕುಡಿಯಬೇಕಂತೆ. ಈಗ ಬೇರೆ ಚಳಿ-ಮಳೆ! ಛೇ ಯಾಕಾಗಿ ಮಾಡ್ತಾರೋ ಇದನ್ನೆಲ್ಲಾ?’ ಎಂದು, ಬೆಂಗಳೂರಿನ ಮೆಜೆಸ್ಟಿಕ್ ಬಸ್‍ಸ್ಟ್ಯಾಂಡಿ
ನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಸಿಕ್ಕ ಮಹಿಳೆ ಬೇಸರ ವ್ಯಕ್ತಪಡಿಸಿದಳು. ನನಗೆ ಆಶ್ಚರ್ಯ
ವಾಯಿತು. ಶಾಲೆಯಲ್ಲಿ ದಿನಕ್ಕೆ ಮೂರು ಬಾರಿ ಗಂಟೆ ಬಾರಿಸಿ ಮಕ್ಕಳಿಗೆ ನೀರು ಕುಡಿಯಲು ನೆನಪು ಮಾಡಬೇಕು ಎಂಬ ಶಿಕ್ಷಣ ಇಲಾಖೆಯ ಆದೇಶ ಓದಿ ಖುಷಿ ಪಟ್ಟವರಲ್ಲಿ ನಾನೂ ಒಬ್ಬಳು. ಏಕೆಂದರೆ, ಬೆಳಿಗ್ಗೆ ಬೇಗನೆದ್ದು ಶಾಲೆಗೆ ಹೋಗುವ ಮಕ್ಕಳು ಸಂಜೆ ಮರಳಿ ಮನೆಗೆ ಬಂದಾಗ, ಕಳಿಸಿದ ನೀರು ಹಾಗೇ ಇರುವುದನ್ನು ಕಂಡು ತಾಯಿ- ವೈದ್ಯೆಯಾಗಿ ಸಹಜವಾಗಿಯೇ ನನಗೆ ಗಾಬರಿ.
ನೀರು ಬೇಸಿಗೆಯಲ್ಲಿ ಮಾತ್ರವಲ್ಲ, ಚಳಿಗಾಲದಲ್ಲೂ ದೇಹಕ್ಕೆ ಅವಶ್ಯವಾಗಿ ಬೇಕು. ಎಷ್ಟೋ ಬಾರಿ ನೀರಿನ ಕೊರತೆಯಾಗಿ ಮಕ್ಕಳಿಗೆ ತಲೆನೋವು, ಸುಸ್ತು, ಗೊಂದಲ, ಏಕಾಗ್ರತೆಯ ಕೊರತೆ ಸಾಮಾನ್ಯ. ಬಾಯಿ ಒಣಗುವುದು, ತುಟಿ ಬಿರಿಯುವಿಕೆ, ಜೊಲ್ಲುರಸದ ಉತ್ಪತ್ತಿ ಕಡಿಮೆಯಾಗಿ ಬಾಯಿಯಲ್ಲಿ ದುರ್ವಾಸನೆ, ದಂತಕ್ಷಯ ಹೆಚ್ಚುವುದು ದಂತವೈದ್ಯೆಯಾಗಿ ನನ್ನ ಗ್ರಹಿಕೆಗೆ ಬಂದ ವಿಷಯಗಳು. ಆದರೆ ಮಕ್ಕಳು ಮಾತ್ರ ಎಷ್ಟೇ ಹೇಳಿದರೂ ನೀರು ಕುಡಿಯುವುದರ ಬಗ್ಗೆ ಗಮನವನ್ನೇ ನೀಡುವುದಿಲ್ಲ. ಹೀಗಿರುವಾಗ ಶಿಕ್ಷಕರೇ ಶಾಲೆಯಲ್ಲಿ ಆಗಾಗ್ಗೆ ನೀರು ಕುಡಿಯುವ ಆರೋಗ್ಯಕರ ಅಭ್ಯಾಸ ಮಾಡಿಸುವುದು ಒಳ್ಳೆಯದಲ್ಲವೇ? ಆದರೆ ಈ ತಾಯಿಯ ಬೇಸರ ಅರ್ಥವಾಗಲಿಲ್ಲ.
‘ನೀರು ಕುಡಿಯುವುದು ಒಳ್ಳೆಯದೇ. ಆದರೆ ನೀರು ಕುಡಿದ ಮೇಲೆ ಅದನ್ನು ಬಿಡಬೇಕಲ್ಲಾ? ಅಂದ್ರೆ ಹೊಟ್ಟೆ ಒತ್ತಿ ಟಾಯ್ಲೆಟ್‍ಗೆ ಹೋಗಬೇಕಲ್ಲ, ಅದಕ್ಕೇನು ಮಾಡೋದು? ಶಾಲೆಗಳಲ್ಲಿ ಸರಿಯಾಗಿ ಟಾಯ್ಲೆಟ್ ಇಲ್ಲ. ಗಂಡು ಹುಡುಗರು ಏನೋ ಹೇಗೋ ಹೊರಗೆ ಹೋಗಿಬರ್ತಾರೆ. ಹೆಣ್ಣು ಮಕ್ಕಳು ಹಾಗೆ ಮಾಡಲಿಕ್ಕೆ ಆಗುತ್ತಾ?’ ಎಂದು ಆಕೆ ಪ್ರಶ್ನಿಸಿದಾಗ ಪರಿಸ್ಥಿತಿಯ ತೀವ್ರತೆಅರಿವಾಯಿತು.
ಮಕ್ಕಳಿಗೆ ಆರರಿಂದ ಎಂಟು ಲೋಟ ನೀರು ಕುಡಿಯಬೇಕು ಎಂದು ಎಲ್ಲರೂ, ಈಗ ಶಿಕ್ಷಣ ಇಲಾಖೆಯೂ ಹೇಳುತ್ತಿರುವುದು ಸರಿ. ಆದರೆ ಅದಕ್ಕೆ ತಕ್ಕಂತೆ ಮೂತ್ರ ವಿಸರ್ಜನೆಗೆ ಪೂರಕವಾಗಿ ಶೌಚಾಲಯಗಳು ಶಾಲೆಗಳಲ್ಲಿ ಇವೆಯೇ? ನೀರು ಕುಡಿಯಿರಿ, ಪೌಷ್ಟಿಕ ಆಹಾರ ಸೇವಿಸಿರಿ ಎಂದು ಪ್ರೋತ್ಸಾಹಿಸುವ ನಾವೆಲ್ಲರೂ ಮಕ್ಕಳು ಶೌಚಾಲಯಕ್ಕೆ ಹೋಗಬೇಕು ಎನ್ನುವುದನ್ನು ಗುಟ್ಟಿನ, ನಾಚಿಕೆಯ ವಿಷಯವೆಂಬಂತೆ ಪರಿಗಣಿಸುತ್ತೇವೆ. ಹಾಗಾಗಿಯೇ ಟಾಯ್ಲೆಟ್ ಎಂದು ಮಕ್ಕಳು ಧೈರ್ಯವಾಗಿ ಹೇಳಲೂ ಹಿಂಜರಿಯುವ ಸ್ಥಿತಿ ಮುಂದುವರಿದಿದೆ.
ಹುಡುಗಿಯರಂತೂ ಹೈಸ್ಕೂಲಿಗೆ ಬರುವಾಗ ಮೂರು ಕಾರಣಗಳಿಂದ ಶೌಚಾಲಯ ಬಳಕೆಯನ್ನು ನಿಲ್ಲಿಸುತ್ತಾರೆ. ಒಂದು, ಶೌಚಾಲಯವೇ ಇಲ್ಲದಿರುವುದು. ಎರಡು, ಕೊಳಕಾದ ಅಸುರಕ್ಷಿತ ಶೌಚಾಲಯ. ಮೂರು, ಅನುಮತಿ ಕೇಳಲು ಸಂಕೋಚ! ಪರಿಣಾಮವಾಗಿ, ಮನೆಯಲ್ಲಿ ಶೌಚ ಮುಗಿಸಿ ಬಂದರೆ ಸಂಜೆ ಮನೆಗೆ ಮರಳಿದ ನಂತರವೇ ಶೌಚಾಲಯದ ಭಾಗ್ಯ. ಹೀಗೆ ಗಂಟೆಗಟ್ಟಲೆ ಮೂತ್ರ ತಡೆ ಹಿಡಿಯಬೇಕೆಂದರೆ ನೀರು ಕಡಿಮೆ ಕುಡಿಯಬೇಕು. ಕೆಲವೊಮ್ಮೆ ಹೋಗಲೇಬೇಕಾಗಿ ಬಂದರೆ ಯಾರಿಗೂ ಗೊತ್ತಾಗದಂತೆ ಗುಟ್ಟಾಗಿ ಓಡುವುದು, ಅವಸರದಲ್ಲಿ ಮುಗಿಸುವುದು, ಸ್ವಚ್ಛತೆ ಬಗ್ಗೆ ಗಮನ ಕೊಡದಿರುವುದು ಇವೆಲ್ಲವೂ ಸಾಮಾನ್ಯ. ವಿಷಾದದ ಸಂಗತಿಯೆಂದರೆ, ಇವೆಲ್ಲಾ ಶೌಚಾಲಯ ಬಳಸುವ ನಾಚಿಕೆಯಿಂದ ಪಾರಾಗಲು ಬಳಸುವ ತಂತ್ರಗಳಾದರೂ ದಿನಚರಿಯಾಗುತ್ತವೆ. ಯೌವನ, ಪ್ರೌಢಾವಸ್ಥೆಯಲ್ಲಿಯೂ ಈ ಅಭ್ಯಾಸ ಮುಂದುವರಿಯುತ್ತದೆ. ಮಹಿಳೆಯರನ್ನು ಪದೇ ಪದೇ ಕಾಡುವ ಉರಿಮೂತ್ರ, ಮೂತ್ರನಾಳದ ಸೋಂಕಿಗೆ ಕುಡಿಯುವ ನೀರಿನ ಕೊರತೆಯ ಜತೆ ಹೀಗೆ ಮೂತ್ರ ತಡೆಹಿಡಿಯುವ ಅಭ್ಯಾಸವೂ ಕಾರಣ ಎಂಬುದು ಗಮನಾರ್ಹ.
ಹಾಗೆಂದು ಶಾಲೆಗಳಲ್ಲಿ ಹೆಸರಿಗೊಂದು ಶೌಚಾಲಯ ಇದ್ದರೆ ಸಾಕೇ? ಮೇಲೊಂದು ಚಾವಣಿ, ಚಿಲಕ ಕಿತ್ತು ಹೋದ ಲಡಕಾಸಿ ಬಾಗಿಲು, ಕೆಳಗೊಂದು ಗುಂಡಿ, ಸೋರುವ ನಲ್ಲಿ, ದುರ್ವಾಸನೆಯಿಂದ ಕೂಡಿದ ಕತ್ತಲ ಕೋಣೆ ಎಂದಾದರೆ ಉಪಯೋಗಿಸುವ ಮನಸ್ಸಿರಲಿ ಧೈರ್ಯವಾದರೂ ಹೇಗೆ ಬಂದೀತು? ಇದೇ ಕಾರಣದಿಂದ ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಊರ ಹೊರಗೆ, ಹಳ್ಳ -ಹೊಂಡಗಳ ಬಳಿ ಹುಡುಗಿಯರು ಶೌಚಕ್ಕೆ ಹೋಗಿ ಅಪಾಯಕ್ಕೆ ಸಿಲುಕಿದ ಅನೇಕ ನಿದರ್ಶನಗಳಿವೆ.
ಶೌಚಾಲಯಗಳು ಕನಿಷ್ಠ ಸೌಲಭ್ಯಗಳನ್ನು ಹೊಂದಿರಬೇಕು. ಶೌಚಾಲಯ ಬಳಸಬೇಕಾದ ರೀತಿ, ಸ್ವಚ್ಛತೆಯ ಬಗ್ಗೆ ಅರಿವು ಮೂಡಬೇಕು. ಶೌಚ- ಶೌಚಾಲಯಗಳ ಬಗ್ಗೆ ನಮ್ಮೆಲ್ಲರ ಯೋಚನಾ ಕ್ರಮ ಬದಲಾಗಬೇಕು. ಶಾಲಾ ಶಿಕ್ಷಕರು, ಸಿಬ್ಬಂದಿ ಮತ್ತು ಮಕ್ಕಳಲ್ಲಿ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನೀರನ್ನು ದೇಹದಿಂದ ಹೊರಹಾಕುವುದು ಎಂಬ ಜಾಗೃತಿ ಮೂಡಿದರೆ ಆ ಬಗ್ಗೆ ಅಸಡ್ಡೆ, ಹೆದರಿಕೆ, ವ್ಯಂಗ್ಯ ನಿಲ್ಲಬಹುದು. ಹಾಗಾಗಿ ಶಾಲೆಗಳಲ್ಲಿ ಸ್ವಚ್ಛ, ಸುರಕ್ಷಿತ ಶೌಚಾಲಯದ ವ್ಯವಸ್ಥೆ ಕಡ್ಡಾಯವಾಗಲಿ ಮತ್ತು ಸರಿಯಾಗಿ ಬಳಸುವ ಮನಃಸ್ಥಿತಿ ಮಕ್ಕಳಲ್ಲಿ ಮೂಡಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.