‘ವಲಸೆಹೋದ ಕನ್ನಡಿಗನ ಕತೆ’– ಇದು, ಸಮಾಜ ವಿಜ್ಞಾನಿ ಹಿರೇಮಲ್ಲೂರ ಈಶ್ವರನ್ ಅವರ ಪ್ರಸಿದ್ಧ ಆತ್ಮಕಥೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಹಿರೇಮಲ್ಲೂರ ಗ್ರಾಮದವರಾದ ಅವರು, ಹಾಲೆಂಡ್‌ನ ವಿಶ್ವವಿದ್ಯಾಲಯವೊಂದರಲ್ಲಿ ಪಿಎಚ್.ಡಿ ಪಡೆದು, ಅಲ್ಲಿ ಮತ್ತು ಕೆನಡಾದ ವಿಶ್ವವಿದ್ಯಾಲಯವೊಂದರಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಹಾಲೆಂಡ್ ಯುವತಿ ಓಬೆನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮಡದಿ, ಮಕ್ಕಳೊಂದಿಗೆ ದೀರ್ಘಕಾಲ ವಿದೇಶದಲ್ಲಿಯೇ ವಾಸವಾಗಿದ್ದರು. ವೃದ್ಧಾಪ್ಯದಲ್ಲಿ ಅವರಿಗೆ ತಾಯ್ನಾಡಿನ ನೆನಪು ಕಾಡತೊಡಗಿತು. ಧಾರವಾಡಕ್ಕೆ ಮರಳಿ ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದರು. ಅವರ ಇಚ್ಛೆಯಂತೆ ಧಾರವಾಡದಲ್ಲಿಯೇ ಅವರ ಅಂತ್ಯಕ್ರಿಯೆ ನಡೆಯಿತು. ಭಾರತದಲ್ಲಿಯೇ ವಲಸೆ ಅತಿ ಹೆಚ್ಚು ಎಂಬ ‘ಆಳ– ಅಗಲ’ದ (ಪ್ರ.ವಾ., ಸೆ. 16) ವರದಿ ಓದಿದಾಗ, ಈಶ್ವರನ್ ಅವರ ಆತ್ಮಕಥೆ ನೆನಪಾಯಿತು.
ವಲಸೆಯು ಸಾಮಾಜಿಕ ಬದಲಾವಣೆಯ ಕುರುಹು. ಕೈಗಾರಿಕೆ, ವಾಣಿಜ್ಯ, ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಯು ವಲಸೆಯ ಬಲವನ್ನು ಅವಲಂಬಿಸಿರುತ್ತವೆ. ಆದರೆ ಹುಟ್ಟಿದ ಸ್ಥಳವನ್ನು ತೊರೆದು ದೂರ ಹೋಗುವುದು ಸುಲಭದ ಕೆಲಸವಲ್ಲ. ಹುಟ್ಟಿದ ಮನೆ, ಊರಿನೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದಿರುತ್ತದೆ. ಇದನ್ನು ದಾಟಿ ಶಿಕ್ಷಣ, ಉದ್ಯೋಗ, ಕೌಟುಂಬಿಕ ಕಾರಣಗಳಿಗಾಗಿ ಹಳ್ಳಿಯಿಂದ ನಗರಕ್ಕೆ, ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ವಲಸೆ ನಿರಂತರವಾಗಿ ನಡೆಯುತ್ತಿರುತ್ತದೆ.
ಅವಕಾಶ ಹುಡುಕಿಕೊಂಡು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುವವರು ಮತ್ತು ಅವರ ಕುಟುಂಬಗಳ ಮಾನವ ಹಕ್ಕುಗಳ ರಕ್ಷಣೆ ಅತ್ಯಂತ ಮುಖ್ಯವಾದುದು. ವಲಸೆ ಹೋದವರು ತಮ್ಮ ಆತಿಥೇಯ ದೇಶದಲ್ಲಿ ಸಾಮಾನ್ಯವಾಗಿ ಪ್ರತ್ಯೇಕತಾ ಭಾವನೆ ಅನುಭವಿಸುತ್ತಾರೆ ಮತ್ತು ಶೋಷಣೆಯನ್ನು ಎದುರಿಸುತ್ತಾರೆ. ತಾರತಮ್ಯ ಮಾಡದಿರುವುದು, ಸಂಚಾರ ಸ್ವಾತಂತ್ರ್ಯ, ಕೆಲಸದ ವಿಚಾರದಲ್ಲಿ ನ್ಯಾಯಯುತ ಕ್ರಮಗಳ ಜೊತೆಗೆ ಸಾಮಾಜಿಕ ಭದ್ರತೆಯನ್ನು ವಲಸಿಗರಿಗೆ ಒದಗಿಸಬೇಕು. ಅವರ ಮಕ್ಕಳಿಗೆ ಸೂಕ್ತ ಶಿಕ್ಷಣ ವ್ಯವಸ್ಥೆ ಕೂಡ ಅವಶ್ಯ.
ಪ್ರಸ್ತುತ 28 ಕೋಟಿ ಜನ ಸ್ವಂತದ್ದಲ್ಲದ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ವರದಿಗಳಿವೆ. ಉಕ್ರೇನ್‌ನಲ್ಲಿ ವೈದ್ಯಕೀಯ ಪದವಿ ಓದುತ್ತಿದ್ದ ಭಾರತದ ವಿದ್ಯಾರ್ಥಿಗಳು ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದಾಗಿ ಅನುಭವಿಸಿದ ಸಂಕಟ ಅಷ್ಟಿಷ್ಟಲ್ಲ.
ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಎರಡು ವರ್ಷಕ್ಕೆ ಒಮ್ಮೆ ಸಭೆ ನಡೆಸುತ್ತದೆ. ಈ ಸಭೆಯು ಪ್ರತಿ ವರ್ಷ ನಡೆಯುವಂತೆ ಆಗಬೇಕು. ಇದರಿಂದ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಅನುಕೂಲವಾಗುತ್ತದೆ.
ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಸಂದರ್ಭದಲ್ಲಿ ಬಂಡವಾಳ ಮಾತ್ರ ಬರುವುದಿಲ್ಲ, ಅದರೊಂದಿಗೆ ತಂತ್ರಜ್ಞರು, ಕುಶಲಕರ್ಮಿಗಳು, ಕೈಗಾರಿಕೆಗಳ ಆಡಳಿತ ಪರಿಣತರು ಸಹ ವಿದೇಶಗಳಿಂದ ಬರುತ್ತಾರೆ. ಇದು ಬಂಡವಾಳದೊಂದಿಗೆ ವಲಸಿಗರನ್ನೂ ಸ್ವಾಗತಿಸುವ ಕ್ರಿಯೆಯಾಗಿದೆ.
ಹುಟ್ಟೂರನ್ನು ತೊರೆದು ಬೇರೆಡೆ ಹೋಗಿ ನೆಲಸಿದ ಕಾರ್ಮಿಕರಲ್ಲಿ ಸಹಜವಾಗಿ ದುಡಿಯುವ ಮನೋಭಾವ ಹೆಚ್ಚಾಗಿರುತ್ತದೆ. ಈ ಕಾರಣಕ್ಕೆ ಕೈಗಾರಿಕೋದ್ಯಮಿಗಳು ವಲಸೆ ಕಾರ್ಮಿಕರಿಗೆ ಆದ್ಯತೆ ಕೊಡುತ್ತಾರೆ. ವಿದೇಶಾಂಗ ವ್ಯವಹಾರ ಸಚಿವಾಲಯವು ಸಾಗರೋತ್ತರ ಉದ್ಯೋಗಕ್ಕೆ ಪೂರಕವಾಗುವಂತೆ ‘ಭಾರತೀಯ ವಲಸೆ ಕೇಂದ್ರ’ವನ್ನು ಪ್ರಾರಂಭಿಸಿದೆ. ಅಂತರರಾಷ್ಟ್ರೀಯ ವಲಸೆ ಮತ್ತು ಚಲನಶೀಲ ಸಂಸ್ಕೃತಿಯ ಬಗ್ಗೆ ಸಂಶೋಧನೆ, ವಿಶ್ಲೇಷಣೆ, ಕಾರ್ಯಾಗಾರವನ್ನು ನಿರಂತರವಾಗಿ ನಡೆಸುತ್ತಿದೆ. ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ವಂಚಿಸುವುದನ್ನು ತಪ್ಪಿಸುವುದರಲ್ಲಿ ಈ ಕೇಂದ್ರ ಮಹತ್ವದ ಪಾತ್ರ ವಹಿಸುತ್ತಿದೆ.
ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ 1970- 80ರ ದಶಕದಲ್ಲಿ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದರು. 1975ರಲ್ಲಿ ಭಾರತದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ವಿದೇಶಗಳಲ್ಲಿ ನೆಲಸಿದ್ದ ಭಾರತೀಯರನ್ನು ಸಂಘಟಿಸಿ ಅವರು ಹೋರಾಟ ನಡೆಸಿದ್ದು ಒಂದು ಅಪೂರ್ವ ಪ್ರಕರಣ. ಅಲ್ಲಿ ಅವರು ‘ಇಂಡಿಯನ್ಸ್ ಫಾರ್ ಡೆಮಾಕ್ರಸಿ’ ಎಂಬ ವೇದಿಕೆಯನ್ನು ಹುಟ್ಟುಹಾಕಿದರು. 6,000ಕ್ಕೂ ಹೆಚ್ಚು ಭಾರತೀಯರು ಇದರ ಸದಸ್ಯರಾದರು. ಇವರೆಲ್ಲ ಪ್ರತಿಭಟನೆ, ಮೆರವಣಿಗೆ, ಪತ್ರಿಕಾ ಬರವಣಿಗೆ ಹಾಗೂ ಸಭೆಗಳ ಮೂಲಕ ತುರ್ತು ಪರಿಸ್ಥಿತಿಯ ಕರಾಳ ಸ್ಥಿತಿಯನ್ನು ಧೈರ್ಯವಾಗಿ ಜಗತ್ತಿಗೆ ಪರಿಚಯಿಸಿದರು. ಹೋರಾಟಕ್ಕೆ ಹೊರದೇಶಗಳಲ್ಲಿ ದೊಡ್ಡ ಮಟ್ಟದ ಬೆಂಬಲ ದೊರೆಯಿತು.
ಇತ್ತ ಭಾರತದಲ್ಲಿಯೂ ತುರ್ತು ಪರಿಸ್ಥಿತಿ ವಿರೋಧಿಸಿ ತೀವ್ರ ಹೋರಾಟ ನಡೆದಿತ್ತು. ಪ್ರಧಾನಿ ಇಂದಿರಾ ಗಾಂಧಿ ಅವರು ಕೊನೆಗೂ ಲೋಕಸಭಾ ಚುನಾವಣೆ ಘೋಷಣೆ ಮಾಡಿದರು. ಕಾಂಗ್ರೆಸ್ ಸೋಲನುಭವಿಸಿತು. ಜನತಾ ಪಕ್ಷದ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ತುರ್ತು ಪರಿಸ್ಥಿತಿಯನ್ನು ರದ್ದುಗೊಳಿಸಲಾಯಿತು.
ವಲಸೆ ತೆರಳಿದವರು ಸ್ವದೇಶದ ರಾಜಕೀಯ
ಚಟುವಟಿಕೆಗಳಿಗೂ ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ.
‘ಮನೆಯನೆಂದು ಕಟ್ಟದಿರು...’ ಎಂದು ಕುವೆಂಪು ಬರೆದಿದ್ದಾರೆ. ಚಲನಶೀಲರಾಗಿರಬೇಕು ಎಂಬುದು ಇದರ ತಾತ್ಪರ್ಯ. ವಲಸೆ ಹೋದವರಿಗೆ ತಾಯ್ನಾಡಿನ ಪ್ರೀತಿ ಸದಾ ಸೆಳೆಯುತ್ತಿರುತ್ತದೆ. ಜಗತ್ತಿನ ಯಾವುದೇ ಭಾಗದಲ್ಲಿ ಹೋಗಿ ನೆಲಸಲಿ, ಎಂಥ ಎತ್ತರಕ್ಕೇ ಬೆಳೆಯಲಿ ಹುಟ್ಟಿದೂರಿನ ಸೆಳೆತ ಕಾಡುತ್ತಲೇ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.