ADVERTISEMENT

ಸಂಗತ: ಸಾಮರಸ್ಯದ ಬಾಳ್ವೆ ಕಲಿಸೋಣ ಬನ್ನಿ

ಮಕ್ಕಳ ಮೇಲಿನ ಅತಿನಿರೀಕ್ಷೆಗಳ ಸಂಕೋಲೆಗಳನ್ನು ಸಡಿಲಿಸಿ, ಮುಕ್ತರಾಗಲು ಬಿಟ್ಟಾಗಷ್ಟೇ ಅವರಲ್ಲಿ ಅರಿವಿನ ದಾರಿ ತೆರೆದುಕೊಳ್ಳಲು ಸಾಧ್ಯ

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 18 ಜುಲೈ 2024, 22:22 IST
Last Updated 18 ಜುಲೈ 2024, 22:22 IST
1
1   

ನಿನ್ನೆಮೊನ್ನೆಯವರೆಗೂ ಶಾಲೆಯಿಂದ ಬಂದು ಬ್ಯಾಗು ಎಸೆಯುವಷ್ಟರಲ್ಲಿ ಮಕ್ಕಳನ್ನು ಸರಕ್ಕನೆ ಸೆಳೆಯುತ್ತಿದ್ದುದು ಟಿ.ವಿ., ಮೊಬೈಲು. ಮಾತು ಕೇಳದೆ, ರಚ್ಚೆ ಹಿಡಿದು ಕೂತವರಿಗೆ ಇಂಟರ್‌ನೆಟ್ಟು, ಮೊಬೈಲು-ರೀಲ್ಸು, ಟಿ.ವಿ-ಕಾರ್ಟೂನುಗಳದ್ದೇ ಐಲು. ಓದು, ಬರವಣಿಗೆಯಲ್ಲಿನ ಮಕ್ಕಳ ನಿರಾಸಕ್ತಿ ಮತ್ತು ಮನೆಮಂದಿಯೊಟ್ಟಿಗೆ ಮುಕ್ತವಾಗಿ ಒಡನಾಡುವಲ್ಲಿನ ನಿರುತ್ಸಾಹದ ಕುರಿತು ಹೆತ್ತವರಿಗೆ ನಿತ್ಯ ದಿಗಿಲು...

ಇಂದಿನ ವಿದ್ಯುನ್ಮಾನ ಯುಗದ, ಕೃತಕ ಬುದ್ಧಿಮತ್ತೆ ಕಾಲದ ಮಕ್ಕಳು ತಮ್ಮ ತರಗತಿ-ಪಠ್ಯದ ಕಲಿಕೆಯಲ್ಲಿ ಹೀಗೆಲ್ಲಾ ನಿರಾಸಕ್ತರಾಗಲು ಕಾರಣವೇನು? ಪೋಷಕರ ಅತಿಯಾದ ಒತ್ತಡವೇ, ಅಸಂಬದ್ಧವೆನಿಸುವ ಅಪರಿಚಿತ, ರುಚಿರಹಿತ ಪಠ್ಯವೇ, ಉತ್ಸಾಹಿ ಮನಸುಗಳನ್ನು ಮರಗಟ್ಟಿಸುವ ಏಕತಾನತೆಯೇ...? ಕಾರಣ ಹುಡುಕುವುದೇನೂ ಕಷ್ಟವಲ್ಲ.

ಅಂದು ಮನೆಗೊಬ್ಬ ಅತಿಥಿ ಪ್ರವೇಶಿಸುತ್ತಿದ್ದಂತೆ ಮಕ್ಕಳ ದಿನಚರಿಯೇ ಬದಲು. ಮುದ್ದಾದ ನಾಯಿ ಮರಿಯ ಸಲುಗೆ, ತುಂಟಾಟ, ಪ್ರೀತಿ, ಕಕ್ಕುಲಾತಿಯಲ್ಲಿ ಮಕ್ಕಳ ಹಳೆಯ ರಗಳೆಗಳು ಮಾಯವಾದವು. ಟಿ.ವಿ.ಗೆ ಅಂಟಿಯೋ ಮೊಬೈಲು ಹಿಡಿದೋ ಮನೆಯ ಮೂಲೆ ಸೇರುವ ಬದಲು ಸಾಕುಪ್ರಾಣಿಯೊಂದಿಗೆ ಹೊರಗಿನ ಗಾಳಿಯಲ್ಲಿ ನಲಿದಾಡುವ ಉಮೇದು ಮಕ್ಕಳಿಗೆ. ಶಾಲೆಯ ಆಯಾಸ, ಒತ್ತಡವನ್ನು ಮರೆತು ಮೈದಾನದಲ್ಲಿ ಆಟವಾಡಿ ಹಗುರಾಗಿ ಬಂದವರಿಗೆ ಓದು, ಹೋಂವರ್ಕೂ ಈಗ ಸಲೀಸು. ಬರಬರುತ್ತಾ ಮಕ್ಕಳ ಆಸಕ್ತಿ, ಅಭಿರುಚಿ, ವರ್ತನೆಗಳಲ್ಲಿಯೂ ಕೊಂಚ ಸುಧಾರಣೆ ಸಾಧ್ಯವಾಯಿತು. ಮನೆಯ ವಾತಾವರಣದಲ್ಲಿನ ಸಣ್ಣ ಬದಲಾವಣೆಯೂ ಮಕ್ಕಳ ಮನಃಪರಿವರ್ತನೆಯಲ್ಲಿ ದೊಡ್ಡ ಪರಿಣಾಮವನ್ನು ತರಬಲ್ಲದು ಎಂಬುದು ಅರ್ಥವಾಯಿತು. ಬರೀ ಶಿಕ್ಷೆಯಿಂದ ಶಿಕ್ಷಣವನ್ನು ನೀಡಲಾಗದು, ಪೂರಕ ಸನ್ನಿವೇಶವನ್ನು ಒದಗಿಸಿಯೂ ಶಿಕ್ಷಣದ ಮೂಲ ಆಶಯವಾದ ‘ವರ್ತನೆ
ಯಲ್ಲಿನ ಬದಲಾವಣೆ’ಯನ್ನು ತರಲು ಸಾಧ್ಯ.

ADVERTISEMENT

ಹೌದು, ಮಕ್ಕಳಿರುವುದೇ ಹಾಗೆ. ಅವರೆಂದಿಗೂ ಉತ್ಸಾಹದ ಬುಗ್ಗೆ. ಅವರ ಪಾಲಿಗೆ ಆಟದ ಬಯಲೇ ವಿಶ್ವವಿದ್ಯಾಲಯ. ಅವರ ಪ್ರತಿ ನಡೆಯಲ್ಲಿಯೂ ಕಲಿಕೆಯಿದೆ, ಅನುಕರಣೆ-ಸ್ವಂತಿಕೆ ಮೇಳೈಸಿದ ಸೃಜನಶೀಲ ಕಲೆಯಿದೆ. ಯಾವುದೂ ಅವರಿಗೆ ಅಸ್ಪೃಶ್ಯವಲ್ಲ, ಹಿಂಜರಿಕೆ ಎಂಬುದಿಲ್ಲ, ಭೇದಭಾವದ ಹಂಗಿಲ್ಲ, ಮೋಸ ಗೊತ್ತಿಲ್ಲ, ಅದಕ್ಕೇ ಅವರು ನಡೆದಾಡುವ ದೇವರು. ಪೂರಕ ವಾತಾ ವರಣದಲ್ಲಿ ಬೆಳೆದರೆ ಅವರೆಂದಿಗೂ ವರ, ಭವಿಷ್ಯದ ಸಂಪನ್ಮೂಲ. ಆದರೆ ಇತ್ತೀಚಿನ ಕೆಲವು ನಿದರ್ಶನಗಳು ಹೇಳುವ ಕತೆಯೇ ಬೇರೆ. ಸಾವಿರಾರು ಕೋಟಿ ವಹಿವಾಟಿನ ಉದ್ಯಮಿಯ ಶವಸಂಸ್ಕಾರಕ್ಕೆ ವಿದೇಶದಲ್ಲಿದ್ದ ಹೆತ್ತಮಕ್ಕಳೇ ಗೈರಾಗಿದ್ದು, ಒಂಟಿಯಾಗಿ ವಾಸಿಸುತ್ತಿದ್ದ ತಾಯಿಜೀವವೊಂದರ ಅಸ್ಥಿಪಂಜರವು ಎರಡು ವರ್ಷಗಳ ನಂತರ ಮನೆಯಲ್ಲಿ ಸಿಕ್ಕಿದ್ದು, ಅಸಂಖ್ಯ ಹೆತ್ತ ಜೀವಗಳುಬೆಳೆದುನಿಂತ ಮಕ್ಕಳ ಕಾಳಜಿಯಿಂದ ದೂರವಾಗಿರುವುದು... ಹೀಗೆ. ಬೆಳೆಯುತ್ತಿದ್ದಂತೆ ಮಕ್ಕಳೇಕೆ ಕಾಳಜಿ, ಜವಾಬ್ದಾರಿ ಮರೆತು ಸಂವೇದನಾ ಶೂನ್ಯರಾಗುತ್ತಿದ್ದಾರೆ, ಭಾವಹೀನರಾಗುತ್ತಿದ್ದಾರೆ... ಯೋಚಿಸಬೇಕಿದೆ.

ಕುಟುಂಬ ಕಿರಿದಾದಷ್ಟೂ ಬೆಳೆಯುವ ಮಗುವಿನ ಒತ್ತಡಗಳು ಹೆಚ್ಚುತ್ತವೆ. ತುಂಬು ಕುಟುಂಬದಲ್ಲಿ ಮಗು ಸಹಸದಸ್ಯರೊಂದಿಗೆ ಕಲೆತು, ಬೆರೆತು ಕಲಿಯುವುದು ಬಹಳಷ್ಟು. ಅವರಲ್ಲೊಂದು ಭದ್ರತಾ ಭಾವ ಬೆಳೆಸುವ ಅವಕಾಶ ಅಲ್ಲಿರುತ್ತದೆ. ಮಕ್ಕಳಿಗೆ ಮನೆಯ ಹಿತ್ತಲಲ್ಲಿ ಹೂಗಿಡಗಳನ್ನು ಬೆಳೆಯುವ ಹವ್ಯಾಸ ರೂಢಿಯಾದರೆ ಗಿಡದ ಪಾಲನೆ, ಪೋಷಣೆಯೊಟ್ಟಿಗೆ ಪ್ರಕೃತಿಯ ಪಾಠವೂ
ದೊರಕುತ್ತದೆ. ಸಾಕುಪ್ರಾಣಿಗಳೂ ಬದುಕಿನ ಆರ್ದ್ರತೆಯನ್ನು ಆರದಂತೆ ಕಾಯ್ದಿಡಲು ಸಹಕಾರಿ. ಈಗೆಲ್ಲಾ ಪಟ್ಟಣದಲ್ಲಿ ಬಹುತೇಕರಿಗೆ ಮರಗಿಡಗಳ ಸಂಗವೂ ಕಷ್ಟ. ಅಂತಹ ಸಂದರ್ಭದಲ್ಲಿ ಮಕ್ಕಳನ್ನು ಸಮೀಪದ ಮೈದಾನ, ಉದ್ಯಾನ, ಗದ್ದೆ-ತೋಟ, ನದಿದಂಡೆಯ ನಡಿಗೆಗಾದರೂ ಕರೆದೊಯ್ಯುವುದು ಸೂಕ್ತ ಮತ್ತು ಅಗತ್ಯ. ಬಂಧುಮಿತ್ರರೊಂದಿಗೆ ಕುಟುಂಬದ ಸದಸ್ಯರು ಆಗಾಗ ಸೇರುವುದು ಮತ್ತು ಮನೆಗಳಿಗೆ ಅವರನ್ನು ಆಹ್ವಾನಿಸುವುದೂ ಇವತ್ತಿನ ಧಾವಂತದ ಬದುಕಿನ ಶುಷ್ಕ ವಾತಾವರಣವನ್ನು ನೀಗಲು ಅತ್ಯವಶ್ಯಕ.

ಮನೆಯಲ್ಲಿ ಹಿರಿಯರಿಲ್ಲ. ಬಿಡುವಿರದ ಅಮ್ಮನಿಗೆ ದಣಿದುಬಂದ ಮಗುವನ್ನು ಓದುವ ರೂಮಿಗಟ್ಟುವ ಅವಸರ. ಕಾರ್ಯದೊತ್ತಡ ಮತ್ತು ಸಮಯಾಭಾವದ ನೆಪವೊಡ್ಡಿ ಮಕ್ಕಳೊಂದಿಗೆ ಮುಕ್ತವಾಗಿ ಮಾತಾಡದೆ ತನ್ನಪಾಡಿಗೆ ತಾನು ಮುಗುಮ್ಮಾಗುವ ಅಪ್ಪನದ್ದು ಮಾನಸಿಕವಾಗಿ ದೂರವಿರುವ ಅಸ್ಪಷ್ಟ ಪಾತ್ರ. ಹಾಗಾಗಿ, ಮೊದಲು ಬದಲಾಗಬೇಕಿರುವುದು ಬದಲಾವಣೆ ಬಯಸುವ ಹಿರಿಯರೇ ವಿನಾ ಮಕ್ಕಳಲ್ಲ. ತಾವು ಕೈಯಲ್ಲಿ ಮೊಬೈಲು, ಟಿ.ವಿ. ರಿಮೋಟ್‍ಗಳನ್ನು ಹಿಡಿದು, ಮಕ್ಕಳು ಮಾತ್ರ ಪುಸ್ತಕ ಹಿಡಿದಿರಬೇಕೆಂದು ಹಲುಬುವುದು ಸರಿಯಲ್ಲ. ಪೋಷಕರೇ ಅವರಿಷ್ಟದ ದಾರಿಯ ಮೊದಲ ಪಯಣಿಗರಾಗಬೇಕು. ಕಾರ್ಯದೊತ್ತಡದ ನಡುವೆ ಬಾಂಧವ್ಯ ಬೆಳೆಸುವ, ಮನಸು ಅರಳಿಸುವ ಹವ್ಯಾಸಗಳನ್ನು ಜೊತೆಜೊತೆಯಾಗಿ ಕೈಗೊಳ್ಳಬೇಕು. ಮಕ್ಕಳು ಹಿಂಬಾಲಿಸುತ್ತಾರಷ್ಟೇ.

ಕವಿ ಟ್ಯಾಗೋರರು ಹೇಳುವಂತೆ, ‘ಬರೀ ಮಾಹಿತಿ ನೀಡುವುದೇ ಶಿಕ್ಷಣವಲ್ಲ, ನಮ್ಮ ಸುತ್ತಮುತ್ತಲಿನ ಎಲ್ಲದರ ಜತೆ ಸಾಮರಸ್ಯದಿಂದ ಬಾಳ್ವೆ ನಡೆಸುವುದನ್ನು ಕಲಿಸುವುದೇ ಮಹೋನ್ನತ ಶಿಕ್ಷಣ’. ತಾಜಾ ಹರಿಯುವ ನದಿಯಂತೆ ಮಗುವಿನ ಮನಸ್ಸೂ ಒತ್ತಡಮುಕ್ತ ನಿರಾಳ ಬದುಕಿಗೆ ಹಂಬಲಿಸುತ್ತದೆ. ಸುತ್ತಲಿನ ಗಾಳಿ-ಬೆಳಕನ್ನು ಹೀರಿ ತಿಳಿಯಾಗುತ್ತದೆ. ಅತಿನಿರೀಕ್ಷೆಗಳ ಸಂಕೋಲೆಗಳನ್ನು ಸಡಿಲಿಸಿ, ತಲೆಭಾರವನ್ನು ಇಳಿಸಿ ಮಗುವನ್ನು ಮುಕ್ತವಾಗಲು ಬಿಟ್ಟಾಗಷ್ಟೇ ಅದಕ್ಕೆ ಅರಿವಿನ ದಾರಿ ತೆರೆದುಕೊಳ್ಳುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.