ಎಷ್ಟು ಎತ್ತರೆತ್ತರ ಶಿಕ್ಷಣ ಪಡೆಯುವೆವೊ ಅಷ್ಟಷ್ಟು ಅವಿದ್ಯಾವಂತ, ಅಮಾನವೀಯ ವರ್ತನೆ ನಮ್ಮದಾಗುತ್ತದೆ ಎಂಬುದಕ್ಕೆ ತುಮಕೂರಿನ ಪ್ರಕರಣವೇ ಸಾಕ್ಷಿ
ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ತುಮಕೂರು ಜಿಲ್ಲಾ ಆಸ್ಪತ್ರೆ ಸಿಬ್ಬಂದಿಯು ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ, ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟು, ಸಕಾಲಕ್ಕೆ ಚಿಕಿತ್ಸೆ ಸಿಗದೆ ಆಕೆಯ ಅವಳಿ ಶಿಶುಗಳು ಕೂಡ ಮೃತಪಟ್ಟು, ಆ ಮಹಿಳೆಯ ಆರು ವರ್ಷದ ಮಗಳು ಅನಾಥೆಯಾದ ಸುದ್ದಿಯನ್ನು (ಪ್ರ.ವಾ., ನ. 4) ಓದಿ ಎದೆಯೊಡೆ
ದಂತಾಯಿತು.
ಈ ಹೊತ್ತಿನ ಪರಿಸ್ಥಿತಿ ಹೇಗಿದೆಯೆಂದರೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಐ.ಡಿ. ಕಾರ್ಡ್ ಇಲ್ಲದಿದ್ದರೆ ಹುಟ್ಟುವ ಹಾಗೂ ಇಲ್ಲ, ಸಾಯುವ ಹಾಗೂ ಇಲ್ಲ. ಮಸಣದಲ್ಲಿ ಮೊದಲು ಕೇಳುವುದೆಂದರೆ ‘ಆಧಾರ್ ಕೊಡಿ!’ ಮನುಷ್ಯರಾಗಿ ಹುಟ್ಟುವುದಕ್ಕಿಂತ ಗಿಡ ಮರ ಹುಲ್ಲು ಕಲ್ಲು ಆಗಿ ಹುಟ್ಟುವುದೇ ಲೇಸು- ಮತ್ತೆ ಜನುಮ ಇದ್ದರೆ ನಾನಂತೂ ಅದೇ ಆಗಿ ಹುಟ್ಟಬಯಸುವೆ! ಎಷ್ಟು ಎತ್ತರೆತ್ತರ ಶಿಕ್ಷಣ ಪಡೆಯುವೆವೊ ಅಷ್ಟಷ್ಟು ಅವಿದ್ಯಾವಂತ, ಅಮಾನವೀಯ ವರ್ತನೆ ನಮ್ಮದಾಗು ತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಅಲ್ಲಿನ ವೈದ್ಯರು, ಸಿಬ್ಬಂದಿ ಎಲ್ಲರೂ ಮಹಿಳೆಯರಾಗಿದ್ದರೂ ಕಷ್ಟದಲ್ಲಿದ್ದ ಮಹಿಳೆಗೆ ನೆರವಾಗದಿದ್ದನ್ನು ನೋಡಿದರೆ, ಇವರು ಯಾವ ಮಟ್ಟದ ವೈದ್ಯಕೀಯ ಶಿಕ್ಷಣ ಪಡೆದಿರಬಹುದು ಎಂದು ನಮ್ಮ ಶಿಕ್ಷಣದ ಮಟ್ಟದ ಬಗ್ಗೆ ಯೋಚಿಸುವ ಸಂದರ್ಭ ಇದಾಗಿದೆ.
ಈ ದಿನಗಳ ಪರಿಸ್ಥಿತಿ ಹೇಗಿದೆ ಎಂದರೆ, ನೂರೆಂಟು ಕಾರ್ಡುಗಳನ್ನು ಸದಾ ನೇತುಹಾಕಿಕೊಂಡು ಓಡಾಡಬೇಕು. ಐದಾರು ಫೋಟೊಗಳನ್ನು ಸದಾ ಪರ್ಸ್ ಅಥವಾ ಜೇಬಿನಲ್ಲಿ ಇಟ್ಟುಕೊಂಡಿರ ಬೇಕು. ಪ್ರತಿಯೊಬ್ಬ ಮನುಷ್ಯನೂ ಇವರ ಕಣ್ಣಿಗೆ ವಂಚಕನ ಹಾಗೇ ಕಾಣುವನೋ ಹೇಗೆ? ಎಟಿಎಂನಿಂದ ಹಣ ತೆಗೆದರೆ ಐನೂರರ ನೋಟುಗಳು. ಚಿಲ್ಲರೆ ಕೊಡಿ ಎಂದು ಬ್ಯಾಂಕ್ ಸಿಬ್ಬಂದಿಗೆ ಕೇಳಿದರೆ ‘ಇಲ್ಲ’ ಎನ್ನುವ ಉತ್ತರ. ಬ್ಯಾಂಕ್‌ನ ಸಿಬ್ಬಂದಿಯ ಆಲಸ್ಯ- ಉದ್ಧಟತನ ನೋಡಿ ಗಾಬರಿ ಆಗುತ್ತದೆ. ಪ್ರತಿಷ್ಠಿತ ಬ್ಯಾಂಕ್‌ಗಳು ಸಾವಿರ ರೂಪಾಯಿಗೆ ಚಿಲ್ಲರೆ ಕೊಡಲಾರದಷ್ಟು ಬಡವಾಗಿವೆಯೇ? ಅಂಚೆ ಕಚೇರಿಗೆ ಹೋದರೆ ಅರ್ಜಿ ಸಂಪೂರ್ಣ ಹಿಂದಿಯಲ್ಲಿರುತ್ತದೆ. ‘ನನಗೆ ಹಿಂದಿ ಬರುವುದಿಲ್ಲ’ ಎಂದರೆ ‘ನಾನು ನೆರವಾಗುವೆ... ಇಲ್ಲಿಲ್ಲಿ ಹೀಗೆ ಹೀಗೆ ಬರೆಯಿರಿ, ನಮಗೆ ಇದೇ ಫಾರಂ ಈಗೀಗ ಬರುವುದು’ ಎಂದು ಸಿಬ್ಬಂದಿ ಹೇಳುತ್ತಾರೆ. ಬ್ಯಾಂಕ್‌ಗೆ ಹೋದರಂತೂ ಅವರು ನಿರರ್ಗಳವಾಗಿ ಹಿಂದಿಯಲ್ಲಿ ಮಾತನಾಡಿ, ನಾವು ಹರಕು ಮುರುಕು ಹಿಂದಿಯಲ್ಲಿ ಮಾತನಾಡಿ ಕೆಲಸ ಪೂರೈಸಿಕೊಂಡು ಬರಬೇಕು– ಹಾಗೆ ಮಾಡುವರು! ರಾಜ್ಯ ಸರ್ಕಾರದ ಕಚೇರಿಗೆ ಹೋದರೆ ಒಂದೋ ಅವರು ಸೀಟಿನಲ್ಲಿ ಇರುವುದಿಲ್ಲ. ಪತ್ರ- ಇಮೇಲ್ ಕಳಿಸಿದರೆ ಒಂದು ಸಾಲಿನ ಉತ್ತರವೂ ಬರುವುದಿಲ್ಲ! ವ್ಯವಸ್ಥೆ ಅನ್ನುವುದು ಇದೆಯೇ? ಯಾವ ಮಟ್ಟಕ್ಕೆ ಹೋಗಿದೆ? ಅನುಮಾನವಾಗುತ್ತಿದೆ.
ಅಭಿವೃದ್ಧಿ ಅಂದರೆ ರಸ್ತೆ, ಸೇತುವೆಗಳು, ಮುಗಿಲು ಮುಟ್ಟುವ ಕಟ್ಟಡ, ಟವರ್‌ಗಳು ಮತ್ತು ಹೆಜ್ಜೆ ಹೆಜ್ಜೆಗೂ ದಲ್ಲಾಳಿಗಳು- ಕಮಿಷನ್- ಲಂಚ, ಕೊರಳ ಸುತ್ತ ಮಾಲೆ ಯಂತೆ ಹಾಕಿಕೊಂಡಿರುವ ಕಾರ್ಡುಗಳು. ಮಾತೆತ್ತಿದರೆ ಮೊಬೈಲು- ಒಟಿಪಿ- ಕೋಡು- ಸ್ಕ್ಯಾನು... ಇವುಗಳ ನಡುವೆ ಅನಾಥನಂತಿರುವ ಮನುಷ್ಯ! ಬದುಕು ಬಲು ದುಬಾರಿ-ದುಸ್ತರ!
-ಸವಿತಾ ನಾಗಭೂಷಣ, ಶಿವಮೊಗ್ಗ
ಪರವಾನಗಿ ಇದೆಯಲ್ಲ!
ನವೆಂಬರ್ 4ರ ಬೆಳಿಗ್ಗೆ ನನಗೆ ಅಪರಿಚಿತರೊಬ್ಬರ ಫೋನ್ ಕರೆ ಬರುತ್ತದೆ. ಆ ಕಡೆಯಿಂದ ‘ಗುಡ್ ಮಾರ್ನಿಂಗ್’ ಧ್ವನಿ ಕೇಳುತ್ತದೆ. ನನಗೆ ತಿರುಗಿ ‘ಗುಡ್ ಮಾರ್ನಿಂಗ್’ ಅನ್ನುವುದಕ್ಕೆ ನಾಲಗೆಯೇ ಹೊರಡು ವುದಿಲ್ಲ. ‘ಪ್ರಜಾವಾಣಿ’ ಮುಖಪುಟದ ತಾಯಿ, ಅವಳಿ ಶಿಶುಗಳ ಸಾವಿನ ಸುದ್ದಿ ನನ್ನನ್ನು ಅಷ್ಟೊಂದು
ಕಂಗೆಡಿಸಿಬಿಟ್ಟಿತ್ತು! ಇದನ್ನು ಓದಿದ ಮೇಲೆ ನಾನು ಬಹಳ ಹೊತ್ತು ತಲೆ ತಗ್ಗಿಸಿದೆ.
ಸರ್ಕಾರಿ ಕರ್ತವ್ಯನಿರತರು ಅದರಲ್ಲೂ ವೈದ್ಯರು ಹೀಗೆ ವರ್ತಿಸುತ್ತಾರೆ ಎಂದರೆ ಯೋಚಿಸುವಾಗ ಕಣ್ಣು ಕತ್ತಲೆ ಬಂದಂತಾಗುತ್ತದೆ. ಅವರಲ್ಲಿ ಹೋಗಿ ‘ಹೀಗೆ ಯಾಕೆ ಮಾಡಿದಿರಿ?’ ಎಂದು ಕೇಳಿದರೆ ‘ಅದು ದೇವರ ಇಚ್ಛೆ’ ಅನ್ನುವ ಸಾಧ್ಯತೆಯೂ ಇದೆ! ಅಂದಹಾಗೆ ಇವರ ಮೇಲೆ ‘ಶೀಘ್ರ’ ಕ್ರಮ ತೆಗೆದುಕೊಂಡಿದ್ದಾರೆ.
‘ಅಮಾನತು’ ಎಂಬುದಕ್ಕೆ ಅರ್ಥ ಇದ್ದರೆ ತಾನೇ? ಅಂತಹ ವೈದ್ಯರ ಕೈಯಲ್ಲಿ ತಮ್ಮ ವೃತ್ತಿ ಮುಂದುವರಿಸು ವುದಕ್ಕೆ ಅಗತ್ಯವಾದ ಪರವಾನಗಿ ಇನ್ನೂ ಇದೆಯಲ್ಲ.
- ಪ್ರಕಾಶ್ ಶೆಟ್ಟಿ, ಬೆಂಗಳೂರು
ಕಾರ್ಡುಗಳ ಉಪದ್ರವ
ಬಡವರು ಮತ್ತು ಕಡುಬಡವರಿಗೆ ಸರ್ಕಾರ ರೂಪಿಸಿರುವ ನೆರವಿನ ಯೊಜನೆಗಳು ವಾಸ್ತವದಲ್ಲಿ ಮಾನವೀಯ ಕಾಳಜಿಯುಳ್ಳವುಗಳಾಗಿಲ್ಲ ಎಂಬುದನ್ನು ತುಮಕೂರಿನ ಪ್ರಕರಣ ಎತ್ತಿ ತೋರಿಸುತ್ತಿದೆ. ಸರ್ಕಾರದ ವಿವಿಧ ನೆರವಿನ ಯೋಜನೆಗಳ ಲಾಭ ಪಡೆಯಲು ಇರುವ ‘ಕಾರ್ಡ್ ಪದ್ಧತಿ’ಯಿಂದಾಗಿ ಪ್ರತಿನಿತ್ಯ ಬಡಜನ ವಿವಿಧ ಇಲಾಖೆಗಳ ಕಚೇರಿಗಳ ಬಳಿ ದೀನರಂತೆ ಜಮಾಯಿಸುವುದು ನಡೆದೇ ಇದೆ. ಪಡಿತರ ಪಡೆಯಲು ಕಾರ್ಡು, ನರೇಗಾ ಕೆಲಸಕ್ಕಾಗಿ ಕಾರ್ಡು, ಶುಲ್ಕವಿಲ್ಲದೆ ಮಕ್ಕಳನ್ನು ಶಾಲೆಗೆ ಸೇರಿಸಲು ಕಾರ್ಡು, ಆಸ್ಪತ್ರೆಗಾಗಿ ಕಾರ್ಡು, ಕಾರ್ಮಿಕ ಸವಲತ್ತು ಪಡೆಯಲು ಕಾರ್ಡು, ಸಾಲ ಪಡೆಯುವ ಅರ್ಹತೆಯ ಕಾರ್ಡು, ಇವುಗಳ ಜೊತೆಗೆ ರೇಷನ್ ಕಾರ್ಡಿಗೆ ಆಧಾರ್ ಕಾರ್ಡಿನ ಲಿಂಕು... ಇವೆಲ್ಲವೂ ಬಡವರಿಗೆ ದೊಡ್ಡ ಉಪದ್ರವಗಳಾಗಿರುವ ಸತ್ಯ ಯಾರಿಗೂ ಕಾಣದಂತಹದ್ದೇ?
-ಅಯ್ಯಪ್ಪ ಹೂಗಾರ್, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.