ಆ ರೈತರ ಮನೆಯಲ್ಲಿನ ಕರುವನ್ನು ನೋಡುತ್ತಿದ್ದಂತೆ ‘ವ್ಹಾ...’ ಎಂಬ ಉದ್ಗಾರ ಅರಿವಿಲ್ಲದಂತೆ ಹೊರಬಿದ್ದಿತ್ತು! ‘ತುಂಬಾ ಚೆನ್ನಾಗಿ ಸಾಕಿದ್ದೀರಿ. ಇದಕ್ಕೆ ಇನ್ನೂ ಆರು ತಿಂಗಳು ಅಂದ್ರೆ ನಂಬಕ್ಕೇ ಆಗಲ್ಲ. ವರ್ಷದೊಳಗೆ ಬೆದೆಗೆ ಬರೋದು ಗ್ಯಾರಂಟಿ’ ಎಂದು ಅವರನ್ನು ಪ್ರಶಂಸಿಸಿದೆ. ‘ಸಲಹೆ ಪ್ರಕಾರನೇ ಕರೂನ ಸಾಕ್ತಿದ್ದೀನಿ ಸಾರ್. ಹಂಗಾಗಿ ಒಳ್ಳೆ ಬೆಳವಣಿಗೆ ಬಂತು’ ಎಂದರು ಆ ಕೃಷಿಕರು ಖುಷಿಯಿಂದ. ‘ಎಲ್ಲಿಂದ ಸಲಹೆಗಳನ್ನು ಕೇಳ್ತಿದ್ದೀರಿ?’ ಎಂದು ಕುತೂಹಲದಿಂದ ಕೇಳಿದೆ.
‘ಬೆಳಿಗ್ಗೆ ರೇಡಿಯೊದಲ್ಲಿ ಒಳ್ಳೆ ಮಾಹಿತಿ ಕೊಡ್ತಾರೆ. ಕರುವಿಗೆ ಎಷ್ಟು ಹಾಲು ಬಿಡ್ಬೇಕು, ಹೊಟ್ಟೆಹುಳಕ್ಕೆ ಯಾವಾಗ್ಯಾವಾಗ ಔಷಧ ಹಾಕ್ಬೇಕು, ಹಿಂಡಿ, ಹುಲ್ಲು ಯಾವ ಪ್ರಮಾಣದಲ್ಲಿ ನೀಡ್ಬೇಕು ಅಂತೆಲ್ಲಾ ನಾ ರೇಡಿಯೊದಿಂದ್ಲೇ ಕೇಳಿ ಕಲಿತಿದ್ದು. ಈಗಂತೂ ಮೊಬೈಲ್ ಫೋನಲ್ಲೇ ಆಕಾಶವಾಣಿ ಎಫ್.ಎಂ. ಬರುತ್ತೆ. ಇದರಿಂದಲೇ ಜಾನುವಾರು ಸಾಕಣೆ, ಕೃಷಿ, ನಮ್ಮ ಆರೋಗ್ಯದ ಬಗ್ಗೆ ಅಗತ್ಯ ವಿಷಯಗಳೆಲ್ಲಾ ಗೊತ್ತಾಗುತ್ತಿವೆ’ ಎಂದರು ಹೆಮ್ಮೆಯಿಂದ!
ಹೌದು, ರೇಡಿಯೊ ಪುನಃ ಪ್ರಾಮುಖ್ಯ ಪಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರೇಡಿಯೊ ತಂತ್ರಜ್ಞಾನ, ಪ್ರಸಾರದಲ್ಲಿ ಕ್ರಾಂತಿಕಾರಿ ಬದಲಾವಣೆ
ಗಳಾಗಿವೆ. ಹಿಂದೆ ಎ.ಎಂ. ಬ್ಯಾಂಡ್‌ನಲ್ಲಿ ಪ್ರಸಾರವಾಗುತ್ತಿದ್ದ ಧ್ವನಿಯ ಗುಣಮಟ್ಟ ತೃಪ್ತಿಕರವಾಗಿರಲಿಲ್ಲ, ಮಾತು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಪ್ರಸಾರದ ವ್ಯಾಪ್ತಿಯೂ ಸೀಮಿತವಾಗಿತ್ತು. ಜೊತೆಗೆ ಧ್ವನಿ ತರಂಗಗಳ ಹರಿವಿಗೆ ವಿದ್ಯುದಲೆಗಳ ಅಡಚಣೆ ಬೇರೆ. ಈ ಗೊರ ಗೊರ ಸದ್ದು, ಅಸ್ಪಷ್ಟತೆಯ ಕಾರಣ ಹಲವರು ರೇಡಿಯೊ ಆಲಿಸುವಿಕೆಯಿಂದ ದೂರ ಸರಿದಿದ್ದರು.
ಈ ಸ್ಥಿತಿ ಈಗ ಬದಲಾಗುತ್ತಿದೆ. ಎ.ಎಂ. ಜೊತೆಗೆ ಎಫ್.ಎಂ. ಬ್ಯಾಂಡ್ ಬಂದಿದೆ. ಎಫ್.ಎಂನಲ್ಲಿ ಧ್ವನಿ ಸ್ಪಷ್ಟವಾಗಿದ್ದು, ಆಲಿಸುವುದಕ್ಕೆ ಹಿತವಾಗಿರುತ್ತದೆ.
ಕೇಳುವುದಕ್ಕೆ ರೇಡಿಯೊ, ಟ್ರಾನ್ಸಿಸ್ಟರ್‌ನಂತಹ ಸಾಧನವೇ ಬೇಕೆಂದಿಲ್ಲ. ಸ್ಮಾರ್ಟ್‌ಫೋನ್‌ಗಳಲ್ಲೇ ಆ್ಯಪ್ ಬಳಸಿಕೊಂಡು ಬಾನುಲಿಗೆ ಕಿವಿಯಾಗಬಹುದು. ಅಂತರ್ಜಾಲದ ಸಂಪರ್ಕವಿದ್ದರೆ ಸಾಕು.
ಸರ್ಕಾರಿ ಸ್ವಾಮ್ಯದ ಆಕಾಶವಾಣಿಯ ಜೊತೆಗೆ ನೂರಾರು ಖಾಸಗಿ ಎಫ್.ಎಂ. ವಾಹಿನಿಗಳೂ ಶ್ರೋತೃಗಳನ್ನು ಸೆಳೆಯುವ ಪೈಪೋಟಿಯಲ್ಲಿವೆ. ಮನೆ ಮನೆಯಲ್ಲೂ ಬೇರೂರಿರುವ ಟಿ.ವಿ. ಪ್ರಭಾವಲಯದಲ್ಲಿ ಮಂಕಾಗಿದ್ದ ರೇಡಿಯೊ ನಿಧಾನವಾಗಿ ಹೊಳೆಯತೊಡಗಿದೆ. ಮೊಬೈಲ್ ನೆಟ್‌ವರ್ಕ್, ವೈಫೈ ಸಂಪರ್ಕ
ಜಾಲ ಹಳ್ಳಿ ಹಳ್ಳಿಗೂ ವಿಸ್ತರಿಸುತ್ತಿರುವುದರಿಂದ ಮೊಬೈಲ್ ಬಾನುಲಿ ಜನಪ್ರಿಯವಾಗುತ್ತಿದೆ!
ಎಫ್.ಎಂ. ವಾಹಿನಿಗಳ ಕಾರ್ಯಕ್ರಮಗಳು ವೈವಿಧ್ಯಮಯ. ಆರೋಗ್ಯ, ಕೃಷಿ, ಪಶುಸಂಗೋಪನೆ ಕುರಿತಾದ ಮಾಹಿತಿಗಳು, ತಾಜಾ ಸುದ್ದಿ, ಮನೆಮದ್ದು, ಹೊಸರುಚಿ, ಚಿಂತನ, ಸಂದರ್ಶನ, ಭಾಷಣ, ಯಶೋಗಾಥೆ, ಪದಬಂಧ, ರಸಪ್ರಶ್ನೆ, ಒಗಟು, ಪ್ರಚಲಿತ ವಿದ್ಯಮಾನ, ಶಿಕ್ಷಣ, ಸಂಗೀತ, ಕಥೆ, ನಾಟಕದಂತಹ ಮನರಂಜನಾ ಕಾರ್ಯಕ್ರಮಗಳು, ವಾರ್ತೆ, ಹವಾಮಾನ ವರದಿ... ಹೌದು, ಬಾನುಲಿಯ ಮೆನುಕಾರ್ಡ್ ತುಂಬಾ ಉದ್ದವಿದೆ.
ಕೇಳುಗರ ಅಭಿರುಚಿಗೆ ತಕ್ಕಂತೆ ಕಾಲಕಾಲಕ್ಕೆ ಅಪ್‌ಡೇಟ್ ಆಗುತ್ತಾ ಹೊಸ ನಮೂನೆಯಲ್ಲಿ ಕಾರ್ಯಕ್ರಮಗಳ ಪ್ರಸಾರ ಎಫ್.ಎಂ. ಚಾನೆಲ್‌ಗಳ ವಿಶೇಷ. ದೈನಂದಿನ ಕಾರ್ಯಗಳಿಗೆ ಒಂದಿನಿತೂ ವ್ಯತ್ಯಯವಾಗದಂತೆ ಇಷ್ಟದ ಕಾರ್ಯಕ್ರಮಗಳನ್ನು ಕೆಲಸ ಮಾಡುತ್ತಲೇ ಆಲಿಸುವ ಅನುಕೂಲ ಒದಗಿಸುವುದು ಈ ಮಾಧ್ಯಮದ ಹೆಗ್ಗಳಿಕೆ. ಅದರಲ್ಲೂ ಬೆಳಗಿನ ವೇಳೆಯ ರೇಡಿಯೊ ಮಾಹಿತಿಗಳು ತುಂಬಾ ಉಪಯುಕ್ತ. ಆದರೆ, ಈ ಹೊತ್ತಿನಲ್ಲಿ ಟಿ.ವಿ. ವಾಹಿನಿಗಳ ಜ್ಯೋತಿಷದಲ್ಲಿ ಕಳೆದುಹೋಗುವವರು ಹಲವರು. ಆರೋಗ್ಯದ ಸಮಸ್ಯೆಗಳು, ಕೌಟುಂಬಿಕ ತೊಂದರೆ, ತಾಪತ್ರಯಗಳಿಗೆ ಜ್ಯೋತಿಷಿಗಳಲ್ಲಿ ಪರಿಹಾರ ಹುಡುಕುವ ಚಾಳಿಯಿಂದಾಗಿ ಮನಸ್ಸು ಮತ್ತಷ್ಟು ಕೆಡುತ್ತಿದೆ. ಇಂತಹ ಮೌಢ್ಯದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾ ಮನಃಶಾಂತಿ ಕಳೆದುಕೊಳ್ಳುವುದಕ್ಕಿಂತ ಬಗೆ ಬಗೆಯ ವಿಚಾರಗಳನ್ನು ತಿಳಿಸುವ, ಮಾನಸಿಕ, ದೈಹಿಕ ಸ್ವಾಸ್ಥ್ಯಕ್ಕೆ ಅಗತ್ಯ ಸೂತ್ರಗಳನ್ನು ಬಿತ್ತರಿಸುವ, ಮೆದುಳನ್ನು ಚುರುಕಾಗಿಸುವ ರೇಡಿಯೊ ಕಾರ್ಯಕ್ರಮಗಳನ್ನು ಹೆಚ್ಚು ಆಲಿಸುವುದು ಸೂಕ್ತ.
‘ರೇಡಿಯೊ ನಿಜಕ್ಕೂ ಅತ್ಯುತ್ತಮ ಸಂಗಾತಿ. ಕೇಳುತ್ತಾ ಕೆಲಸ ಮಾಡುತ್ತಿದ್ದರೆ ಆಯಾಸವೇ ಆಗದು, ಒತ್ತಡವೂ ಇರದು. ಮನಸ್ಸು ಹಗುರಾಗುತ್ತದೆ’ ಎಂಬ ಗೃಹಿಣಿಯೊಬ್ಬರ ಮಾತು ರೇಡಿಯೊವನ್ನು ಒಪ್ಪುವ, ಅಪ್ಪುವ ಎಲ್ಲಾ ಶ್ರೋತೃಗಳ ಅಭಿಪ್ರಾಯವೂ ಹೌದು.
ಮಕ್ಕಳ ಮುಖ್ಯ ಪರೀಕ್ಷೆಗಳ ಸಂದರ್ಭದಲ್ಲಿ ಬಿತ್ತರವಾಗುವ ಪರಿಣತರ ಸಲಹೆಗಳು, ವಿಷಯವಾರು ಮಾಹಿತಿಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಧೈರ್ಯದಿಂದ ಪರೀಕ್ಷೆ ಎದುರಿಸಲು ಸಹಕಾರಿ. ಈಗಿನ ಬಹುತೇಕ ಮಕ್ಕಳು ವರ್ತಮಾನ ಪತ್ರಿಕೆ ಓದುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಎಳೆಯರ ಸಾಮಾನ್ಯ ಜ್ಞಾನದ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಬೌದ್ಧಿಕ ಬೆಳವಣಿಗೆಯೂ ಆಗುತ್ತಿಲ್ಲ. ಇಂತಹ ಪರಿಸ್ಥಿತಿ ಯಲ್ಲಿ, ವ್ಯಕ್ತಿತ್ವ ವಿಕಸನದ ದೃಷ್ಟಿಯಿಂದ ಮಕ್ಕಳಲ್ಲಿ ರೇಡಿಯೊ ಆಲಿಸುವ ಅಭಿರುಚಿ ಬೆಳೆಸುವುದು ಅಪೇಕ್ಷಣೀಯ. ಮನೆಯಲ್ಲಿ ಹಿರಿಯರಿಗೆ ಇಂತಹ ಹವ್ಯಾಸ ಇದ್ದಾಗ ಮಾತ್ರ ಕಿರಿಯರು ಅವರನ್ನು ಅನುಕರಿಸಿಯಾರು.
ಜಗತ್ತಿನಲ್ಲೇ ಬೃಹತ್ ಜಾಲ ಹೊಂದಿರುವ ಸರ್ಕಾರಿ ಸ್ವಾಮ್ಯದ ಆಕಾಶವಾಣಿ (ಎಐಆರ್) ಮಾಹಿತಿ, ಶಿಕ್ಷಣ, ಮನರಂಜನೆಯಲ್ಲಿ ಮುಂಚೂಣಿಯಲ್ಲಿರುವ ಮಾಧ್ಯಮ. ‘ಬಹುಜನ ಹಿತಾಯ ಬಹುಜನ ಸುಖಾಯ’ ಎಂಬ ಧ್ಯೇಯದೊಂದಿಗೆ ಕಾರ್ಯನಿರತ ವಾಗಿರುವ ಈ ಪ್ರಸಾರಾಂಗದ ಆಶಯ ಸಾಕಾರಗೊಳ್ಳ ಬೇಕಾದರೆ ನಾವೆಲ್ಲರೂ ಬಾನುಲಿಯ ಅಶರೀರವಾಣಿಗೆ ಕಿವಿಗೊಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.