ADVERTISEMENT

ಸಂಗತ: ಮೊಬೈಲ್ ಮೋಹ– ಯಾಕೀ ತಹತಹ?

ಅಮೊನಕೋವಿಡ್‌ ತಂದೊಡ್ಡಿರುವ ಅಡ್ಡಪರಿಣಾಮಗಳಲ್ಲಿ, ಮಕ್ಕಳಲ್ಲಿ ತಲೆದೋರಿರುವ ಮೊಬೈಲ್‌ ಗೀಳೂ ಒಂದು

ದೀಪಾ ಹಿರೇಗುತ್ತಿ
Published 7 ಡಿಸೆಂಬರ್ 2021, 19:33 IST
Last Updated 7 ಡಿಸೆಂಬರ್ 2021, 19:33 IST
ಸಂಗತ
ಸಂಗತ   

ಮಗ ಹೇಗೆ ಓದುತ್ತಾನೆ ಎಂದು ವಿಚಾರಿಸಲು ಮೊನ್ನೆ ನಮ್ಮ ಕಾಲೇಜಿಗೆ ಪ್ರಥಮ ಪಿಯು ಹುಡುಗನೊಬ್ಬನ ತಾಯಿ ಬಂದಿದ್ದರು. ಸ್ಟಾಫ್‌ರೂಮಿಗೆ ಅವನನ್ನು ಕರೆಸಿದೆವು. ನಮ್ಮ ಕನ್ನಡ ಉಪನ್ಯಾಸಕರು ‘ಕನ್ನಡದ ಮೊದಲನೇ ಪಾಠ ಯಾವುದು ಹೇಳು’ ಎಂದು ಕೇಳಿದರು. ಉಹ್ಞೂಂ, ಅವನಿಗೆ ನೆನಪಿಗೇ ಬರಲಿಲ್ಲ! ಆತ ಹತ್ತನೇ ತರಗತಿಯಲ್ಲಿ ಶೇಕಡ ಎಪ್ಪತ್ತಕ್ಕಿಂತ ಹೆಚ್ಚು ಅಂಕ ತೆಗೆದವನೇ, ಎರಡು ತಿಂಗಳಿಂದ ಪಾಠ ಕೇಳಿದವನೇ!

ನಮ್ಮ ಮನೆಯ ಬದಿಯಿಂದಲೇ ಹಾದು ಹೋಗುವ ಕಾಲುದಾರಿಯು ಹಳ್ಳಿಯೊಂದಕ್ಕೆ ತಲುಪುತ್ತದೆ. ಆ ಊರಿಂದ ದಿನವೂ ಬೆಳಿಗ್ಗೆ ಪಟ್ಟಣದ ಹೋಟೆಲೊಂದಕ್ಕೆ ಕೆಲಸ ಮಾಡಲು ಬರುವ ಮಹಿಳೆಯೊಬ್ಬರು ಸಿಕ್ಕಿದ್ದರು. ‘ನನ್ನ ಮೊಮ್ಮಗಳು ನಿಮ್ಮ ಕಾಲೇಜಿನಲ್ಲಿಯೇ ಓದುವುದು’ ಎಂದರು. ‘ಮನೆಯಲ್ಲಿ ಓದುತ್ತಾಳಾ?’ ಎಂದು ಕೇಳಿದೆ. ‘ಹೌದು, ರಾತ್ರಿ ಒಂದು ಗಂಟೆಯವರೆಗೂ ಓದುತ್ತಾಳೆ’ ಎಂದರು. ‘ಅವಳು ಓದುವಾಗ ಮೊಬೈಲ್ ಕೈಲಿದ್ದರೆ ದಯವಿಟ್ಟು ತೆಗೆದಿಡಿ’ ಎಂದಷ್ಟೇ ಹೇಳಿದೆ.

ದೀರ್ಘಕಾಲದಿಂದ ಗೈರುಹಾಜರಾಗಿದ್ದ ವಿದ್ಯಾರ್ಥಿ
ಯೊಬ್ಬನ ಮನೆಗೆ ಕರೆ ಮಾಡಿದರೆ ಅವನ ತಾಯಿ ನಂಬಲೇ ಇಲ್ಲ. ಮಾರನೇ ದಿನ ಕರೆಸಿ ಹಾಜರಿ ಪುಸ್ತಕ ತೋರಿಸಿದ ಮೇಲೆ ಆಘಾತಕ್ಕೊಳಗಾದರು. ದಿನವೂ ಕಾಲೇಜಿಗೆ ಹೋಗುತ್ತೇನೆಂದು ಬಸ್ಸು ಹತ್ತಿ ಪೇಟೆಗೆ ಬಂದು ಬಸ್‌ಸ್ಟ್ಯಾಂಡಿನಲ್ಲಿ ಮೊಬೈಲ್ ಆಡುತ್ತ ಕುಳಿತು, ಕಾಲೇಜು ಸಮಯ ಆದ ಮೇಲೆ ವಾಪಸ್‌ ಹೋಗುತ್ತಿದ್ದ ಆತ!

ADVERTISEMENT

ಕೋವಿಡ್– 19 ಮಾಡಿದ ಅನಾಹುತಗಳ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಸಾವು, ಅನಾರೋಗ್ಯ
ದಂತಹ ನೇರ ಪರಿಣಾಮಗಳೇ ಅರಗಿಸಿಕೊಳ್ಳಲಾರದಂಥವು. ಅದರ ಪರೋಕ್ಷ ಪರಿಣಾಮಗಳು ಈಗ ಕಣ್ಣೆದುರು ಬರುತ್ತಿವೆ. ಅದರಲ್ಲೂ ಹೈಸ್ಕೂಲು ಮತ್ತು ಕಾಲೇಜು ವಿದ್ಯಾರ್ಥಿಗಳ ವರ್ತನೆಯಲ್ಲಿ ಆಗಿರುವ ನೇತ್ಯಾತ್ಮಕ ಬದಲಾವಣೆಗಳಂತೂ ಕಣ್ಣುಕುಕ್ಕುವಂತಿವೆ.
ವರ್ಷಗಟ್ಟಲೆ ಮೊಬೈಲ್ ಕೈಲಿ ಹಿಡಿದ ಮಕ್ಕಳಿಗೆ, ಪರೀಕ್ಷೆಯನ್ನೇ ಬರೆಯದೆ ಅಥವಾ ಅತೀ ಸುಲಭ ಪರೀಕ್ಷೆ ಎದುರಿಸಿ ಮುಂದಿನ ತರಗತಿಗೆ ದಾಟಿಕೊಂಡ ಮಕ್ಕಳಿಗೆ ಓದು ಬೇಡವಾಗುತ್ತಿದೆ. ಗಂಟೆಗಟ್ಟಲೆ ಕೂತು ತರಗತಿಯಲ್ಲಿ ಪಾಠ ಕೇಳುವ ಮನಸ್ಸೂ ಇಲ್ಲವಾಗುತ್ತಿದೆ. ಮೊಬೈಲ್ ಕೈಲಿದ್ದಾಗ ಅಂಟಿಕೊಂಡ ಆನ್‍ಲೈನ್ ಆಟದ, ಯುಟ್ಯೂಬ್, ಇನ್‌ಸ್ಟಾಗ್ರಾಮ್ ಇತ್ಯಾದಿಗಳ ಹವ್ಯಾಸ ಗೀಳಾಗಿ ಪರಿವರ್ತನೆ ಹೊಂದಿ ಈಗ ಅವರ ಕೈಮೀರಿ ಹೋಗಿದೆ. ಮಕ್ಕಳಿಗೇ ಸ್ವಂತ ಮೊಬೈಲ್ ಕೊಡಿಸಿದ್ದರೆ ಕಥೆ ಮುಗಿದೇಹೋಯಿತು. ಉಳಿದವರು ಪಾಠ ಇದೆ, ನೋಟ್ಸ್ ಇದೆ ಎಂದು ಸುಳ್ಳು ಹೇಳುತ್ತ ಮೊಬೈಲ್ ಸದಾ ಕೈಲಿ ಇರುವ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಆನ್‍ಲೈನ್ ಆಟದ ಮೋಡಿಗೆ ಬಿದ್ದ ಹುಡುಗರಿಗಂತೂ ಆ ಆಟದಲ್ಲಿ ಒಳ್ಳೆಯ ಸಾಧನೆ ಮಾಡಿದವರೇ ಆರಾಧ್ಯದೈವಗಳು! ಇನ್ನು ಆಟದಲ್ಲಿ ಒಂದಿಷ್ಟು ಹಣ ಬಂದುಬಿಟ್ಟರಂತೂ ಅದನ್ನೇ ಕೆರಿಯರ್ ಮಾಡಿಕೊಳ್ಳುವ ಹುಚ್ಚು ಬಯಕೆ ಮಕ್ಕಳಲ್ಲಿ! ಇದರ ಪರಿಣಾಮ, ತರಗತಿಯಲ್ಲಿ ಪಟಪಟನೆ ಉತ್ತರ ಹೇಳುವ ಜಾಣ ಮಕ್ಕಳೂ ಮನೆಯಲ್ಲಿ ಅಭ್ಯಾಸ ಮಾಡದ ಕಾರಣಕ್ಕೆ ಕಡಿಮೆ ಅಂಕ ಗಳಿಸುತ್ತಿದ್ದಾರೆ.

ಕಾಲೇಜಿಗೆ ಮೊಬೈಲ್ ತರಬಾರದೆಂಬ ನಿಯಮ ಇರುವುದರಿಂದ ಗಂಟೆಗಟ್ಟಲೆ ಮೊದಲೇ ಕಾಲೇಜಿಗೆಂದು ಹೊರಟು, ಸಮಯ ಆಗುವವರೆಗೂ ಮೊಬೈಲ್‍ನಲ್ಲಿ ಮುಳುಗಿ ನಂತರ ಅದನ್ನು ಯಾವುದಾದರೂ ಅಂಗಡಿಯಲ್ಲಿ ಇಟ್ಟು ಮತ್ತೆ ಕಾಲೇಜು ಮುಗಿದ ನಂತರ ತೆಗೆದುಕೊಂಡು, ಗಂಟೆಗಟ್ಟಲೆ ಹಿಡಿದುಕೊಂಡು ನಂತರ ಮನೆಗೆ ಹೋಗುವುದು ತಾಲ್ಲೂಕು ಕೇಂದ್ರಗಳ ಬಹುತೇಕ ಮಕ್ಕಳ ಸ್ಥಿತಿ. ಅರ್ಧ ಗಂಟೆ ಊಟದ ಅವಧಿಯಲ್ಲಿ ಕೂಡ ಓಡೋಡಿ ಬಂದು ಮೊಬೈಲ್ ನೋಡಿ ಓಡುವಂತಹ ತುರ್ತು ಇರುತ್ತದೆ ಎಂದರೆ ಮೊಬೈಲ್ ಅವರನ್ನು ಆವಾಹಿಸಿರುವ ಪರಿಗೆ ದಿಗಿಲಾಗುತ್ತದೆ. ‘ಪಾಪ, ನನ್ನ ಮಗ ರಾತ್ರಿ ಎರಡು ಗಂಟೆಯವರೆಗೂ ಓದುತ್ತಾನೆ’ ಎಂದು ಯಾವುದಾದರೂ ಪಾಲಕರು ಹೇಳಿದರೆ ನನ್ನ ಮೊದಲ ಪ್ರಶ್ನೆ ‘ಮೊಬೈಲ್ ಕೈಲಿರುತ್ತಾ’ ಎಂಬುದು. ಅವರ ಉತ್ತರ ‘ಹೌದು’ ಎಂದೇ ಆಗಿರುತ್ತದೆ. ‘ಮೊದಲು ಮೊಬೈಲ್ ಕಿತ್ತಿಡಿ. ಮೊಬೈಲ್ ಇಲ್ಲದೇ ಓದಲು ಹೇಳಿ, ಹತ್ತು ಗಂಟೆಯೊಳಗೆ ಹಾಸಿಗೆ ಸೇರುತ್ತಾರೆ ನೋಡಿ’ ಎಂದು ಹೇಳಿ ಕಳಿಸುತ್ತೇನೆ.

ಮೊಬೈಲ್ ಹುಚ್ಚಿನಿಂದ ಕಲಿಕೆಯಲ್ಲಿ ಹಿಂದುಳಿದಿರುವಿಕೆ ಮಾತ್ರವಲ್ಲ. ಹದಿಹರೆಯದ ಮಕ್ಕಳು ಲೈಂಗಿಕ ಆಕರ್ಷಣೆಗೂ ಒಳಗಾಗಿ ತಪ್ಪು ಹೆಜ್ಜೆ ಇಡುವ ಸಾಧ್ಯತೆ ಇಲ್ಲದೇ ಇಲ್ಲ.

ಇವಕ್ಕೆಲ್ಲ ಪರಿಹಾರ ತಾಳ್ಮೆಯಿಂದಲೇ ಆಗಬೇಕು. ವಿದ್ಯಾಭ್ಯಾಸದ ಮಹತ್ವವನ್ನು ಅವರಿಗೆ ಮನದಟ್ಟಾಗುವ ಹಾಗೆ ತಿಳಿಸಿ ಹೇಳಬೇಕು. ಮಕ್ಕಳ ಶಾಲೆ, ಕಾಲೇಜಿಗೆ ಪಾಲಕರು ಆಗಾಗ್ಗೆ ಭೇಟಿ ನೀಡಬೇಕು. ಗಂಟೆಗಟ್ಟಲೆ ಮೊಬೈಲ್ ಹಿಡಿದುಕೊಳ್ಳಲು ಅವಕಾಶ ಕೊಡದಿದ್ದರೆ ಒಳ್ಳೆಯದು. ಅವಶ್ಯಕತೆ ಬಿದ್ದರೆ ವೈದ್ಯರ ಹತ್ತಿರ ಕೌನ್ಸೆಲಿಂಗ್ ಕೂಡ ಮಾಡಿಸಬಹುದು. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿರುವುದು ಇಂದಿನ ತುರ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.