ಅದು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ. ನೆನಪಿಸಲು ಹಿಂದಿನ ದಿನ ಕರೆ ಮಾಡಿದ ಸಂಘಟಕರು, ‘ಬೆಳಿಗ್ಗೆ ಒಂಬತ್ತೂವರೆಗೇ ಬನ್ನಿ’ ಎಂದಾಗ ಆಶ್ಚರ್ಯ ಆಗಿತ್ತು. ಆಹ್ವಾನ ಪತ್ರಿಕೆಯಲ್ಲಿ ಹತ್ತು ಗಂಟೆ ಎಂದಿದೆ. ಅನುಮಾನ ಮುಂದಿಟ್ಟಾಗ ‘ಹೌದು ಸರ್, ಹತ್ತಕ್ಕೆ ಸರಿಯಾಗಿ ಆರಂಭಿಸುತ್ತೇವೆ. ನೇರವಾಗಿ ವೇದಿಕೆ ಹತ್ತುವುದಕ್ಕಿಂತ ಸ್ವಲ್ಪ ಮುಂಚೆ ಬಂದರೆ ಎಲ್ಲರ ಪರಿಚಯವಾಗುತ್ತೆ. ಕಾಫಿ ಮುಗಿಸಿ ಕಾರ್ಯಕ್ರಮ ಸಕಾಲಕ್ಕೆ ಆರಂಭಿಸಲು ಅನುಕೂಲ’ ಎಂದಾಗ ಆ ನೇರ ನುಡಿಗೆ ಮೆಚ್ಚುಗೆಯಾಗಿತ್ತು.
ಕಾರ್ಯಕ್ರಮಗಳಿಗೆ ಸಮಯಕ್ಕೆ ಸರಿಯಾಗಿ ಹೋಗಿ ಕಾಯುವ ಹಿಂಸೆಯಿಂದ ತಪ್ಪಿಸಿಕೊಳ್ಳಲು ‘ಎಷ್ಟೊತ್ತಿಗೆ ಬರಬೇಕು’ ಎಂದು ಅತಿಥಿಗಳು ಕೇಳುವುದು ಮಾಮೂಲು. ‘ಅರ್ಧ ಗಂಟೆನೋ ಒಂದು ಗಂಟೆನೋ ಲೇಟಾಗಿ ಬನ್ನಿ. ಜನ ಬಂದು ಕಾರ್ಯಕ್ರಮ ಶುರುವಾಗೋದು ಅಷ್ಟೊತ್ತಾಗುತ್ತೆ’ ಎನ್ನುವವರೇ ಅಧಿಕ. ಅತಿಥಿಗಳು ಸಕಾಲಕ್ಕೆ ಬಂದರೆ ತಮಗಾಗುವ ಮುಜುಗರದಿಂದ ತಪ್ಪಿಸಿಕೊಳ್ಳಲು, ಘೋಷಿತ ಸಮಯವನ್ನು ಬಿಟ್ಟು ಮತ್ತೊಂದು ಸಮಯ ಕೊಡುವುದು ಎಲ್ಲೆಡೆ ಸಾಮಾನ್ಯ. ಅಂತಹುದರಲ್ಲಿ ‘ಮೊದಲೇ ಬನ್ನಿ’ ಎಂದು ಕರೆಯುವವರೂ ಇದ್ದಾರಲ್ಲ ಎಂಬುದು ವಿಶೇಷವೆನಿಸಿತ್ತು!
‘ಸುಮ್ಮನೆ ಹೇಳ್ತಾರೆ, ಸಕಾಲಕ್ಕೆ ಶುರುಮಾಡುವ ಶಿಸ್ತಾದರೂ ಎಲ್ಲಿದೆ?’ ಎಂಬ ಅಭಿಪ್ರಾಯವನ್ನು ಬದಲಾಯಿಸುವಂತೆ, ನಿಗದಿತ ವೇಳೆಗೆ ಕಾರ್ಯಕ್ರಮ ಆರಂಭವಾಗಿತ್ತು. ಸಭಿಕರ ಸಂಖ್ಯೆಯೂ ಉತ್ತಮವಾಗಿತ್ತು. ಉದ್ದನೆಯ ಕಾರ್ಯಸೂಚಿ ಗಮನಿಸಿದಾಗ, ಸಂಜೆಯೊಳಗೆ ಮುಗಿಸುವುದಂತೂ ಅಸಾಧ್ಯ ಎಂದು ಬಲವಾಗಿ ಅನಿಸಿತ್ತು. ಉದ್ಘಾಟನೆ, ಉಪನ್ಯಾಸ, ಪುಸ್ತಕ ಬಿಡುಗಡೆ, ಕೃತಿ ವಿಮರ್ಶೆ, ಗೀತ ಗಾಯನ, ಕವಿಗೋಷ್ಠಿ, ರಸಪ್ರಶ್ನೆ, ಆಟೋಟ, ಸಮಾರೋಪ ಎಂದೆಲ್ಲಾ ಹತ್ತಾರು ಬಗೆಗಳು. ಪ್ರತಿಯೊಂದಕ್ಕೂ ಕಾಲ ನಿಗದಿ. ನಿರ್ದಿಷ್ಟಪಡಿಸಿದ ಸಮಯವನ್ನು ಪ್ರಸ್ತುತಪಡಿಸುವವರ ಗಮನಕ್ಕೆ ತಂದು ಸಹಕರಿಸಲು ಮನವಿ. ಪರಿಣಾಮ ಅದ್ಭುತವಾಗಿತ್ತು. ಸೂರ್ಯಾಸ್ತದೊಳಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು! ಕಾರ್ಯದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಸಂಘಟಕರ ಕೌಶಲ, ಬದ್ಧತೆ ಪ್ರಶಂಸೆಗೆ ಪಾತ್ರವಾಗಿದ್ದವು.
ಹೌದು, ಇಂತಹ ಶಿಸ್ತುಬದ್ಧ ಕಾರ್ಯಕ್ರಮಗಳು ಕಾಣಸಿಗುವುದೇ ಅಪರೂಪವಾಗಿದೆ. ಸಭಿಕರಿಗಾಗಿ ಕಾಯುತ್ತಾ ತಡವಾಗಿ ಆರಂಭಿಸುವುದು ಈಗಂತೂ ಸಾಮಾನ್ಯ ವಿದ್ಯಮಾನ. ಜನ ಬರುವುದಿಲ್ಲ ಎಂಬ ಸಾರಾಸಗಟು ಆಪಾದನೆ. ಇಲ್ಲಿ ಸಂಘಟಕರ ಲೋಪವೇ ಪ್ರಧಾನವಾದದ್ದು. ವಾಸ್ತವದಲ್ಲಿ ನಿಗದಿತ ಸಮಯಕ್ಕೆ ಬಂದು ಕಾದು ಕಾದು ಹೈರಾಣಾಗುವ ಸಭಿಕರು ಮತ್ತೊಮ್ಮೆ ಅಂತಹ ಕಾರ್ಯಕ್ರಮಗಳಿಗೆ ಹೋಗುವಾಗ ಯೋಚಿಸುತ್ತಾರೆ. ಕಾರ್ಯಕ್ರಮವೊಂದರ ಯಶಸ್ಸನ್ನು ನಿರ್ಧರಿಸುವ ಮೊದಲ ಹೆಜ್ಜೆಯೇ ಸಮಯಪಾಲನೆ.
ಆಗಮಾತ್ರ ಕಾರ್ಯಸೂಚಿಯಲ್ಲಿನ ವಿಷಯಗಳನ್ನು ಒತ್ತಡವಿಲ್ಲದೆ ಮುಗಿಸಲು ಸಾಧ್ಯ. ಜನರಿಗೆ ಕಾಯುತ್ತಾ ಕಾರ್ಯಕ್ರಮ ಆರಂಭಿಸುವುದನ್ನು ತಡ ಮಾಡುವುದು ಒಂದೆಡೆಯಾದರೆ, ಇನ್ನೂ ಬಾರದ ಮುಖ್ಯ ಅತಿಥಿಗಳಿಗಾಗಿ ಎದುರು ನೋಡುತ್ತಾ ಸಭಿಕರ ಸಹನೆ ಪರೀಕ್ಷಿಸುವುದೂ ಸಾಮಾನ್ಯವಾಗಿದೆ. ಬಹುತೇಕ ಜನಪ್ರತಿನಿಧಿಗಳು ತಮ್ಮ ಕಾರ್ಯಬಾಹುಳ್ಯದ ಕಾರಣ ನಿಗದಿತ ವೇಳೆಗೆ ಹಾಜರಾಗುವುದು ಅಪರೂಪ. ಅವರಿಗಾಗಿ ಕಾಯುತ್ತಾ ಸಭೆಯನ್ನು ಒಂದೆರಡು ಗಂಟೆ ತಡವಾಗಿ ಶುರುಮಾಡುವುದೂ ಉಂಟು. ಹಾಗಾದಾಗ ಕಾರ್ಯಸೂಚಿಯಂತೆ ಸಭೆ ನಡೆಯುವುದಾದರೂ ಹೇಗೆ?
ಇಂಥದ್ದೇ ಹತ್ತಾರು ಕೆಟ್ಟ ಅನುಭವಗಳ ಕಾರಣದಿಂದ ಸಹೃದಯರು ಭಾಗವಹಿಸುವಿಕೆಯಿಂದ ದೂರ ಉಳಿಯುತ್ತಾರೆ. ಗುಣಮಟ್ಟದ ಸಭಿಕರ ಕೊರತೆಯಿಂದ ಕಾರ್ಯಕ್ರಮಗಳು, ವಿಚಾರಗೋಷ್ಠಿ
ಗಳು ತಮ್ಮ ಮಹತ್ವ, ಗಾಂಭೀರ್ಯವನ್ನು ಕಳೆದುಕೊಳ್ಳುತ್ತಿವೆ. ಎಲ್ಲೋ ಸೆಲೆಬ್ರಿಟಿಗಳ, ಭಾರಿ ಮನರಂಜನೆಯ, ಅತಿ ವಿಶೇಷ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ ಬಹುತೇಕ ಸಭೆ, ಸಮಾರಂಭಗಳು ನಿರೀಕ್ಷಿಸಿದಷ್ಟು ಪ್ರೇಕ್ಷಕರಿಲ್ಲದೆ ಭಣಗುಟ್ಟುವ ವಿದ್ಯಮಾನವಂತೂ ಈಗ ಸಾರ್ವತ್ರಿಕ.
ನಿಗದಿತ ಸಮಯಕ್ಕೆ ಸಭೆ ಆರಂಭಿಸಲು ಪೂರ್ವ ಸಿದ್ಧತೆ ಅತಿ ಮುಖ್ಯ. ಆಮಂತ್ರಣ ಕಳುಹಿಸುವಾಗಲೇ ಸಮಯಕ್ಕೆ ಸರಿಯಾಗಿ ಶುರು ಮಾಡುತ್ತೇವೆ ಎಂಬುದನ್ನು ಮನದಟ್ಟು ಮಾಡಿಸಿ ಪ್ರೀತಿಯಿಂದ ಆಹ್ವಾನಿಸಬೇಕು. ಕಾರ್ಯಕ್ರಮ ಶುರು ಮಾಡಲು ಸಭಿಕರ ಸಂಖ್ಯೆ ಎಷ್ಟಿರಬೇಕು ಎಂಬುದನ್ನು ಅಂದಾಜಿಸಿ, ಕನಿಷ್ಠ ಆ ಸಂಖ್ಯೆಯಷ್ಟು ಜನರು ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ನೋಡಿಕೊಂಡರೆ ವಿಳಂಬ
ವಾಗುವುದನ್ನು ತಪ್ಪಿಸಬಹುದು.
ಮುಂಚಿತವಾಗಿಯೇ ವೇದಿಕೆಯನ್ನು ಸಿದ್ಧಗೊಳಿಸುವ ಜೊತೆಗೆ ಸಭಾಂಗಣವನ್ನು ಪೂರ್ಣವಾಗಿ ಅಣಿಗೊಳಿಸಬೇಕು. ಅತಿಥಿಗಳನ್ನೂ ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಆಗಮಿಸುವಂತೆ ವಿನಂತಿಸಬೇಕು. ಒಂದು ವೇಳೆ ಉದ್ಘಾಟಕರೋ ಮುಖ್ಯ ಅತಿಥಿಗಳೋ ಬರುವುದು ತಡವಾಗುವುದಾದರೆ, ಅವರಿಗೆ ವಿಷಯ ತಿಳಿಸಿ ಆರಂಭಿಸಬೇಕು. ಅವರು ಮುಂದೆ ಸೇರಿಕೊಳ್ಳುವುದರಿಂದ ಸಭಾ ಮರ್ಯಾದೆಗೂ ಭಂಗವಾಗದು.
ಸಭೆಯೊಂದರಲ್ಲಿ ನೂರು ಜನರಿದ್ದು ಒಂದು ಗಂಟೆ ವಿಳಂಬವಾಗಿ ಆರಂಭವಾಗುವುದೆಂದರೆ, ಅಲ್ಲಿ ವ್ಯರ್ಥವಾಗುವ ವೇಳೆ ಬರೀ ಒಂದು ಗಂಟೆಯಲ್ಲ, ನೂರು ಮಾನವ ಗಂಟೆಗಳು! ಅಷ್ಟು ಅವಧಿಯ ಉತ್ಪಾದಕತೆ ನಷ್ಟವಾಗುತ್ತದೆ ಎಂಬುದನ್ನು ಆಯೋಜಕರು ಅರಿತಿದ್ದಾಗ ಮಾತ್ರ ಸಮಯದ ವೃಥಾ ಪೋಲು ತಪ್ಪಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.