‘ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುವುದರ ಜತೆಗೆ ನಿರ್ಭೀತ ನಡೆ ರೂಢಿಸಿಕೊಂಡರೆ ನೀವು ಏನನ್ನಾದರೂ ಸಾಧಿಸಬಲ್ಲಿರಿ’ ಎಂದು ಭಾರತದ ಯುವಜನರನ್ನು ಹುರಿದುಂಬಿಸಿದವರು ಸ್ವಾಮಿ ವಿವೇಕಾನಂದ. ‘ಎದ್ದೇಳಿ, ಎಚ್ಚರಗೊಳ್ಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಅವರ ಕರೆ ದೇಶದಾದ್ಯಂತ ಅನವರತ ಮಾರ್ದನಿಸುತ್ತಿದೆ.
ಸಾಮಾನ್ಯವಾಗಿ ಒಂದು ದೇಶದ ವೃದ್ಧರನ್ನು ಸಮುದ್ರಕ್ಕೂ ಯುವಕರನ್ನು ನದಿಗೂ ಹೋಲಿಸುವುದುಂಟು. ವೃದ್ಧರಲ್ಲಿ ತುಂಬಿ ತುಳುಕುವ ಅನುಭವಗಳು, ಆದರೆ ಅವರಿಗೆ ವಯಸ್ಸು ಅಡ್ಡಬರುವ ಕಾರಣ ಕಾರ್ಯರೂಪಕ್ಕೆ ತರಲಾರರು. ಯುವಕರದೋ ಬಣ್ಣನೆಗೆ ಸಿಗದ ಉತ್ಸಾಹ, ಹುರುಪು. ಆದರೆ ಅವರ ಲವಲವಿಕೆಯೇ ಅತಿರೇಕವಾಗಿ ಹುಚ್ಚುಹೊಳೆಯಾದರೆ ಗತಿ? ವಿವೇಕಾನಂದರು ಈ ಸೂಕ್ಷ್ಮವನ್ನು ಗ್ರಹಿಸಿ, ಆಬಾಲವೃದ್ಧರನ್ನೆಲ್ಲ ದೇಶದ ಮುನ್ನಡೆಗೆ ಒಗ್ಗೂಡಿಸಿದರು. ವಿಶೇಷವಾಗಿ ಯುವಜನರಿಗೆ, ಪರಿಶುದ್ಧತೆ, ಸಹನೆ ಹಾಗೂ ನಿರಂತರ ಪರಿಶ್ರಮಕ್ಕೆ ಎಲ್ಲ ಅಡೆತಡೆಗಳೂ ಮಣಿಯುತ್ತವೆ ಎಂಬ ಅಭಯವಿತ್ತರು. ಯಶಸ್ಸಿಗೆ ಆತ್ಮವಿಶ್ವಾಸ, ದಿಟ್ಟ ಸಂಕಲ್ಪದ ಹೊರತಾಗಿ ಯಾವುದೇ ಅಡ್ಡಮಾರ್ಗವಿಲ್ಲ ಎಂದವರು ಎಚ್ಚರಿಸಿದರು.
ಒಂದು ರಾಷ್ಟ್ರದ ಭವಿಷ್ಯವು ಆ ದೇಶದ ಜನರನ್ನು ಅವಲಂಬಿಸಿದೆ, ಭಾರತದ ಪ್ರಜೆಗಳ ವ್ಯಕ್ತಿತ್ವ ನಿರ್ಮಾಣ ತಮ್ಮ ಗುರಿ ಎಂದು ಅವರು ಹೇಳಿದರು. ಮಾನವ ಕುಲವು ದಿವ್ಯತೆಯನ್ನು ರೂಢಿಸಿಕೊಂಡು ಅದನ್ನು ಬದುಕಿಗೆ ತಂದುಕೊಳ್ಳುವ ಇಚ್ಛಾಶಕ್ತಿ ಹೊಂದುವ ಜರೂರನ್ನು ಅವರು ಬಯಸಿದರು. ಪ್ರತಿಯೊಬ್ಬರ ವೈಯಕ್ತಿಕ ವಿಕಾಸಕ್ಕೆ ವಿವೇಕಾನಂದರು ಹಂಬಲಿಸಿದರು. ಜಗತ್ತಿನ ಇತಿಹಾಸ ಎಂದರೆ, ಆತ್ಮವಿಶ್ವಾಸವಿದ್ದ ಕೆಲವೇ ಮಂದಿಯ ಇತಿಹಾಸ. ಅದು ವಿಶ್ವಾಸವನ್ನು ತಮ್ಮೊಳಗೇ ತಂದುಕೊಂಡ ಪ್ರಕ್ರಿಯೆ. ವಿವೇಕಾನಂದರಿಗೆ ಧರ್ಮವು ಬರೀ ಸಿದ್ಧಾಂತವಾಗಿರಲಿಲ್ಲ, ದಾನವನನ್ನು ಮಾನವನನ್ನಾಗಿಸುವ ಹಾದಿಯಾಗಿತ್ತು. ಬೆಟ್ಟ, ಪರ್ವತವೇರಿ ಧ್ಯಾನಾಸಕ್ತರಾಗಬೇಕಿಲ್ಲ. ಜನಜೀವನದ ನಡುವೆಯೇ ಇದ್ದು ಸೇವೆ ಮಾಡುವ ಅವಕಾಶಗಳು ವಿಪುಲವಾಗಿವೆ ಎಂದು ಅವರು ನಂಬಿದ್ದರು.
ಸಮಾಜಸೇವೆ ಅವರ ಚಿಂತನೆಗಳ ಮುಖ್ಯ ರೂಪ ಮತ್ತು ನಾವೀನ್ಯವಾಗಿತ್ತು. ತಮ್ಮ ಗುರು ರಾಮಕೃಷ್ಣ ಪರಮಹಂಸರಿಂದ ಪಡೆದಿದ್ದ ಉಪದೇಶದ ಅನುಸಾರ, ವಿವೇಕಾನಂದರು ಪ್ರತಿಯೊಬ್ಬರಲ್ಲೂ ದೈವೀ ಸ್ವರೂಪವನ್ನೇ ಕಂಡರು. ಮೂಲತಃ ಮನುಷ್ಯ ದಿವ್ಯ. ಹಾಗಾಗಿ ಮಾನವನನ್ನು ಆರಾಧಿಸುವುದೆಂದರೆ ದೇವರನ್ನು ಆರಾಧಿಸಿದಂತೆಯೆ.
ಶಿಕ್ಷಣವೆಂದರೆ ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯ ಅಭಿವ್ಯಕ್ತಿ ಎಂದರು ಅವರು. ಮಕ್ಕಳ ತಲೆಯನ್ನು ಮಾಹಿತಿಗಳಿಂದ ತುಂಬಿಸಿದರೆ ಅವು ಜೀರ್ಣವಾಗದೆ ಕೊಳೆಯುತ್ತವೆ. ಮಕ್ಕಳಿಗಾಗಲೀ, ಸಮಾಜಕ್ಕಾಗಲೀ ಅದರಿಂದ ಏನೂ ಪ್ರಯೋಜನವಿಲ್ಲ. ವ್ಯಕ್ತಿತ್ವ ರೂಪಿಸುವ, ಬದುಕು ನೀಡುವ ಮತ್ತು ಚಾರಿತ್ರ್ಯ ನಿರ್ಮಿಸುವ ಶಿಕ್ಷಣವೇ ನಿಜವಾದ ಶಿಕ್ಷಣವೆಂದು ಅವರು ನಿರ್ವಚಿಸಿದರು. ಅವರ ದೃಷ್ಟಿಯಲ್ಲಿ ಸಂಪನ್ನ ಹಾಗೂ ಪ್ರಭಾವಯುತ ವಿಚಾರಗಳ ಸಮೀಕರಣವೇ ಶಿಕ್ಷಣವಾಗಿತ್ತು.
ಯಾವುದೇ ದೇಶದಲ್ಲಿ ಯುವಜನರು ಜನಸಂಖ್ಯೆಯ ಬಹು ಚಲನಶೀಲ ಮತ್ತು ವಿಶೇಷ ವರ್ಗ. ಯುವಜನರನ್ನು ಅನಗತ್ಯವಾಗಿ ಟೀಕಿಸದೆ ಉತ್ತೇಜಿಸಿದರೆ, ನಿಸ್ಸಂಶಯವಾಗಿ ಅವರು ಕಾಲಕ್ರಮೇಣ ಕಟಿಬದ್ಧ ಸಮಾಜಶಿಲ್ಪಿಗಳಾದಾರು. ವಿವೇಕಾನಂದರು ಯುವಜನರನ್ನು ಉದ್ದೇಶಿಸಿ ಬೋಧಿಸಿದ್ದಿಷ್ಟು: ‘ಜನರನ್ನು ಶಿಕ್ಷಿತರನ್ನಾಗಿಸಿ. ನೀವು ನಮ್ಮ ಒಡಹುಟ್ಟಿದವರೆಂದು ಹೇಳಿ. ನಿಮ್ಮನ್ನು ಪ್ರೀತಿಸುತ್ತೇವೆ, ಎಂದಿಗೂ ದ್ವೇಷಿಸೆವು ಎಂಬ ಭರವಸೆ ಕೊಡಿ’. ಅವರು ಯುವಜನರಿಂದ ನಿರೀಕ್ಷಿಸಿದ್ದು ‘ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು’. ನಿಸ್ವಾರ್ಥವೇ ಜಯದ ಗುಟ್ಟೆಂದರು ಅವರು. ಹಣ, ಹೆಸರು, ಖ್ಯಾತಿ, ಪದವಿಗಿಂತಲೂ ಸದ್ಗುಣಕ್ಕೆ ಗಡಸಾದ ವಜ್ರದ ಗೋಡೆಯನ್ನೂ ಸೀಳುವ ಶಕ್ತಿಯಿದೆ ಎಂದು ಯುವಜನರಿಗೆ ಕಿವಿಮಾತು ಹೇಳಿದರು.
ಉದಾತ್ತ ಚಿಂತನೆ ಮತ್ತು ಸರಳ ಬದುಕಿಗೆ ಅವರು ನಿದರ್ಶನವಾಗಿದ್ದರು. ಅವರನ್ನು ರಾಷ್ಟ್ರೀಯ ಸಂತನೆಂದೇ ಗುರುತಿಸಲಾಗುತ್ತದೆ. ವಿವೇಕಾನಂದರ ಸಾಹಿತ್ಯವನ್ನು ಓದಿ ತಮ್ಮ ದೇಶಪ್ರೇಮ ಸಾವಿರ ಪಟ್ಟು ವೃದ್ಧಿಸಿತೆಂದು ಗಾಂಧೀಜಿ ಹೇಳಿದ್ದರು. ಪಾಶ್ಚಿಮಾತ್ಯ ಜಗತ್ತಿಗೆ ಭಾರತೀಯ ದರ್ಶನ ಮತ್ತು ಯೋಗವನ್ನು ಪರಿಚಯಿಸಿದ ಧೀಮಂತ. ಅವರ ಹಿರಿಮೆಗೆ 1893ರ ಸೆಪ್ಟೆಂಬರ್ 11ರಂದು ಷಿಕಾಗೊದಲ್ಲಿ ನೆರವೇರಿದ ಧರ್ಮ ಸಂಸತ್‌ನಲ್ಲಿನ ಅವರ ಭಾಷಣಕ್ಕಿಂತ ಪುರಾವೆ ಅನಗತ್ಯ. ಈ ಸನ್ಯಾಸಿ ಏನು ಮಾತನಾಡಬಹುದು ಎಂದುಕೊಂಡಿದ್ದವರಲ್ಲಿ, ‘ಅಮೆರಿಕದ ನನ್ನ ಸಹೋದರಿಯರೇ ಮತ್ತು ಸಹೋದರರೇ...’ ಎಂಬ ಆರಂಭಿಕ ಉದ್ಗಾರ ಸೃಷ್ಟಿಸಿದ ತಲ್ಲಣ ಇಂದಿಗೂ ಅಲ್ಲಿ ಮಾಸಿಲ್ಲ.
ಪುರುಷರು, ಮಹಿಳೆಯರು ಎನ್ನುವ ತಾರತಮ್ಯ ಬಿಡಿ ಎಂದ ವಿವೇಕಾನಂದರು, ಎಲ್ಲರೂ ಮನುಷ್ಯರೇ ಎಂದು ತಿಳಿಯಲು ಆಗ್ರಹಿಸಿದರು. ಒಂದು ದೇಶದ ಮಹಿಳೆಯರ ಅಭಿವೃದ್ಧಿಯನ್ನು ಅಳೆಯಬಲ್ಲ ಮಾಪಕವೆಂದರೆ, ಆ ದೇಶ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದು. ಪುರುಷರು ಮತ್ತು ಮಹಿಳೆಯರು ಒಂದೇ ಹಕ್ಕಿಯ ಎರಡು ರೆಕ್ಕೆಗಳಂತೆ. ಹಕ್ಕಿಗೆ ಒಂದೇ ರೆಕ್ಕೆಯಿಂದ ಹಾರಲಾಗದು. ಮಹಿಳೆಯರ ಸ್ಥಿತಿಗತಿ ಸುಧಾರಿಸದೆ ಜಗತ್ತಿನ ಕಲ್ಯಾಣ ಅಸಾಧ್ಯ. ಅಸ್ಪೃಶ್ಯತೆಯೆಂಬ ಧರ್ಮಾಂಧತೆಯನ್ನು ಬುಡಸಹಿತ ಕೀಳಬೇಕೆಂದು ವಿವೇಕಾನಂದರು ದೇಶದ ಯುವಜನರಿಗೆ ಒತ್ತಿ ಹೇಳಿದರು.
ಒಮ್ಮೆ ವಿವೇಕಾನಂದರು ಹಿಮಾಲಯ ಪರ್ವತದ ಚಾರಣದಲ್ಲಿದ್ದರು. ವೃದ್ಧನೊಬ್ಬ ಅವರ ಬಳಿ ಬಂದು, ಪರ್ವತವನ್ನು ಏರಲಾಗದ ತನ್ನ ಅಸಹಾಯಕತೆಯನ್ನು ಹೇಳಿಕೊಂಡ. ಅದಕ್ಕೆ ಅವರು ‘ಕೆಳಗೆ ದಿಟ್ಟಿಸು. ಕಾಣುವ ರಸ್ತೆ ನೀನು ಏರಿಬಂದಿದ್ದು. ಇನ್ನು ಅದೇ ರಸ್ತೆಯಲ್ಲೇ ನೀನು ಏರುವುದು. ಅಂಜದೆ ಹೆಜ್ಜೆ ಹಾಕು’ ಎಂದರಂತೆ. ರಾಜಸ್ಥಾನದ ಯಾತ್ರೆಯಲ್ಲಿ ಮೂರು ದಿನಗಳ ಕಾಲ ಹಸಿವಿನಿಂದ ಬಳಲಿದರು. ತಮ್ಮ ಮನೆಯ ಊಟ ಸೇವಿಸುವರೋ ಇಲ್ಲವೋ ಎಂಬ ಅಳುಕಿನಿಂದಲೇ ವ್ಯಕ್ತಿಯೊಬ್ಬ ಊಟ ತಂದಿಟ್ಟ. ವಿವೇಕಾನಂದರು ಸಂತೋಷದಿಂದ ಅದನ್ನು ಸವಿದರು. ಅವರ ಬದುಕಿನಲ್ಲಿ ಇಂತಹ ಪ್ರಸಂಗಗಳು ಅದೆಷ್ಟೊ.
ಅಂದಹಾಗೆ, ಇಂದು (ಜ. 12) ವಿವೇಕಾನಂದರ ಜನ್ಮದಿನ. ಈ ಜಯಂತಿಯ ಸ್ಮರಣಾರ್ಥ ‘ರಾಷ್ಟ್ರೀಯ ಯುವದಿನ’ ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.