ADVERTISEMENT

ಸಂಗತ| ಮಕ್ಕಳ ಸಂದೇಶಕ್ಕೆ ಸ್ಪಂದಿಸಿ

ವಸತಿಶಾಲೆಯಲ್ಲಿ ಕಲಿಯಲು ಸುತರಾಂ ಇಚ್ಛಿಸದ ಮಕ್ಕಳನ್ನು ಅವರ ತೀವ್ರ ವಿರೋಧದ ನಡುವೆಯೂ ಅಲ್ಲಿಗೆ ದಾಖಲಿಸುವುದು ಸಮಂಜಸವಾಗದು

ಡಾ.ಎಚ್.ಬಿ.ಚಂದ್ರಶೇಖರ್‌
Published 20 ಜೂನ್ 2022, 19:45 IST
Last Updated 20 ಜೂನ್ 2022, 19:45 IST
sangata 210622
sangata 210622   

ವಸತಿಶಾಲೆಯೊಂದರಲ್ಲಿ ಕಲಿಯುತ್ತಿದ್ದ 14 ವರ್ಷದ ವಿದ್ಯಾರ್ಥಿ, ತಾಯಿಗೆ ಶುಭಾಶಯ ಕೋರಲು ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಎನ್ನಲಾದ ಸುದ್ದಿ (ಪ್ರ.ವಾ., ಜೂನ್ 13) ಪೋಷಕರು ಹಾಗೂ ಶಿಕ್ಷಣಾಸಕ್ತರನ್ನು ತಲ್ಲಣಗೊಳಿಸಿತು. ಅದರಲ್ಲೂ ಎಳೆಯ ವಯಸ್ಸಿನ ಮಕ್ಕಳನ್ನು ವಸತಿಶಾಲೆಗೆ ಸೇರಿಸಿರುವ ಮತ್ತು ಸೇರಿಸುವ ಯೋಚನೆಯಲ್ಲಿರುವ ಪೋಷಕರಲ್ಲಿ ಗಾಬರಿ, ಗೊಂದಲ, ಭಯವನ್ನು ಹುಟ್ಟುಹಾಕಿತು.

ಮಕ್ಕಳು ಚೆನ್ನಾಗಿ ಓದಿ, ಒಳ್ಳೆಯ ಅಂಕ ಪಡೆಯಬೇಕು, ಹೆಚ್ಚಿನ ಸಂಬಳ ದೊರೆಯುವ ನೌಕರಿ ಪಡೆಯಬೇಕೆಂಬ ಆಕಾಂಕ್ಷೆ ಇಂದಿನ ಪೋಷಕರಲ್ಲಿ ಹೆಚ್ಚು ತೀವ್ರವಾಗಿದೆ. ಇದು ತಪ್ಪೇನಲ್ಲ. ಆದರೆ ಈ ದಿಸೆಯಲ್ಲಿ ಮಕ್ಕಳನ್ನು ಶಿಸ್ತಿನಿಂದ ಬೆಳೆಸಿ, ಉತ್ತಮ ವಿದ್ಯೆ ಕೊಡಿಸಲು ಅವರನ್ನು ವಸತಿಶಾಲೆಗೆ ಸೇರಿಸುವ ಮುನ್ನ ಒಂದಷ್ಟು ಚಿಂತನ-ಮಂಥನ ನಡೆಸುವುದು ಒಳಿತು.

ಹೆಚ್ಚು ಅಶಿಸ್ತು ತೋರುವ ಮಕ್ಕಳನ್ನು ಸರಿದಾರಿಗೆ ತರಲು ಅಥವಾ ಮಕ್ಕಳ ಪಾಲನೆಗೆ ಅಗತ್ಯವಾದ ವೈಯಕ್ತಿಕ ಗಮನ ನೀಡಲು ತಮಗೆ ಸಮಯ ಇಲ್ಲವೆಂಬ ಕಾರಣಗಳಿಂದ ಅವರನ್ನು ವಸತಿಶಾಲೆಗೆ ದಾಖಲಿಸುವವರ ಸಂಖ್ಯೆಯೇ ಅಧಿಕ.

ADVERTISEMENT

ಮಕ್ಕಳ ಮನಃಸ್ಥಿತಿ, ವರ್ತನೆ ಹಾಗೂ ಅವುಗಳ ಹಿಂದಿನ ಕಾರಣಗಳ ಕುರಿತಾದ ಮನೋವೈಜ್ಞಾನಿಕ ಜ್ಞಾನ, ಅನುಭವಗಳನ್ನು ಹೊಂದಿದ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಹೊಂದಿದ ವಸತಿಶಾಲೆಗಳಲ್ಲಿ ಮಕ್ಕಳು ಸುರಕ್ಷಿತವಾಗಿ ಇರಬಲ್ಲರು. ಆದಾಗ್ಯೂ ವಸತಿಶಾಲೆಗೆ ಸೇರಿಸುವ ಮುನ್ನ ತಮ್ಮ ಮಕ್ಕಳು ಅಲ್ಲಿನ ಸ್ಥಿತಿಗತಿಗೆ ಹೊಂದಿಕೊಳ್ಳಬಲ್ಲರೇ ಎಂಬ ಕುರಿತು ಪೋಷಕರು ಪರಿಶೀಲಿಸಬೇಕು.

ವಸತಿಶಾಲೆಯಲ್ಲಿ ಕಲಿಯಲು ಸುತರಾಂ ಇಚ್ಛಿಸದ ಮಕ್ಕಳನ್ನು ಅವರ ತೀವ್ರ ವಿರೋಧದ ನಡುವೆಯೂ ಅಲ್ಲಿಗೆ ದಾಖಲಿಸುವುದು ಸಮಂಜಸವಾಗದು. ಒಂದೊಮ್ಮೆ ವಿರೋಧದ ನಡುವೆ ವಸತಿಶಾಲೆಗೆ ಸೇರಿಸಿದ್ದಲ್ಲಿ, ಅಲ್ಲಿ ಅವರು ಯಾವ ರೀತಿ ಹೊಂದಿಕೊಂಡಿದ್ದಾರೆ ಎಂಬ ಕುರಿತು ಕಾಲಕಾಲಕ್ಕೆ ಮಾಹಿತಿ ಪಡೆಯುತ್ತಿರಬೇಕು. ವಸತಿಶಾಲೆಗೆ ಸೇರಿದ ಬಳಿಕ ಮಕ್ಕಳು ಅಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದೇ ಹೋದ ಸಂದರ್ಭಗಳಿದ್ದಲ್ಲಿ, ಪೋಷಕರು ತಮ್ಮ ಮಕ್ಕಳ ಮಾತು, ವರ್ತನೆ, ಭಾವನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ವಸತಿಶಾಲೆಯಲ್ಲಿ ಅವರು ಮುಂದುವರಿಯಲು ಕಷ್ಟವಾಗುವಂತಿದ್ದರೆ ಅದಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಬೇಕು. ಅಲ್ಲೇ ಉಳಿಸಲು ಆಗುವುದಿಲ್ಲ ಎಂದು ಅನ್ನಿಸಿದರೆ, ಮರಳಿ ಮನೆಗೆ ಕರೆದುಕೊಂಡು ಬರುವುದರ ಬಗೆಗೂ ತೀರ್ಮಾನ ಕೈಗೊಳ್ಳಬೇಕು.

ಮಕ್ಕಳಿಗೆ ಇಷ್ಟವಿಲ್ಲದೇ ಹೋದಾಗ್ಯೂ ‘ವಸತಿಶಾಲೆಯಲ್ಲಿಯೇ ನಿನ್ನ ಓದು ಮುಂದುವರಿಯಬೇಕು. ಈಗಾಗಲೇ ದೊಡ್ಡ ಮೊತ್ತದ ಶುಲ್ಕ ಕಟ್ಟಿಯಾಗಿದೆ. ನಿನ್ನನ್ನು ಈಗ ಅಲ್ಲಿಂದ ಬಿಡಿಸಿದರೆ ಅದೆಲ್ಲವೂ
ವ್ಯರ್ಥವಾಗುತ್ತದೆ’ ಎಂಬ ಧೋರಣೆ ಹೊಂದುವುದು ಅಪಾಯಕಾರಿ ಆಗಬಹುದು. ತಮ್ಮ ಭಾವನೆಗಳಿಗೆ ಪೋಷಕರು ಮನ್ನಣೆ ನೀಡುತ್ತಿಲ್ಲ ಎಂಬ ಕಾರಣದಿಂದ ಮಕ್ಕಳು ಬೇಸರಗೊಳ್ಳುತ್ತಾರೆ. ಇದರಿಂದ ಅವರು ಹಂತ ಹಂತವಾಗಿ ಖಿನ್ನತೆಗೆ ಜಾರಬಹುದು. ದೀರ್ಘಕಾಲದ ಖಿನ್ನತೆಯು ಅವರು ಅಪಾಯಕಾರಿ ನಿರ್ಧಾರಗಳನ್ನು ಕೈಗೊಳ್ಳಲು ಪ್ರೇರೇಪಿಸಬಹುದು.

ವಸತಿಶಾಲೆಯ ಶಿಕ್ಷಕರು, ಸಿಬ್ಬಂದಿ ಸಹ ಮಕ್ಕಳ ಭಾವನೆಗಳಿಗೆ ಮಹತ್ವ ನೀಡಬೇಕು. ಅಗತ್ಯ
ವೆನಿಸಿದರೆ ಶಿಸ್ತಿಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಿಸಲು ಹಿಂದುಮುಂದು ನೋಡಬಾರದು. ಈ ವಿಚಾರದಲ್ಲಿ ಜಿಗುಟುತನ ಸಲ್ಲದು. ಪೋಷಕರಿಗಾಗಲೀ ಅಥವಾ ಶಿಕ್ಷಕರಿಗಾಗಲೀ ಮಕ್ಕಳ ಹಿತರಕ್ಷಣೆಯೇ ಮುಖ್ಯವಾಗಬೇಕು.

ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗ ಅವರ ಜೊತೆ ಒಡನಾಟ, ಆಟ, ಪಾಠ, ಸಂವಹನ ಪೋಷಕರಿಗೆ ಖುಷಿ, ಸಂತಸ ನೀಡುತ್ತವೆ. ಮಕ್ಕಳ ಜೊತೆಗಿನ ಇಂತಹ ಖುಷಿಯ ಕ್ಷಣಗಳು ಪೋಷಕರು ತಮ್ಮೊಳಗೆ ಸದಾ ಕಾಪಿಟ್ಟುಕೊಳ್ಳಬೇಕಾದಂತಹವು. ಮಕ್ಕಳಿಗೂ ತಮ್ಮ ತಂದೆ, ತಾಯಿ, ಸಹೋದರ, ಸಹೋದರಿಯರ ಜೊತೆಗಿನ ಬಾಲ್ಯದ ಒಡನಾಟದ ಕ್ಷಣಗಳು ಅವರ ಜೀವನದ ಅಮೂಲ್ಯ ಕ್ಷಣಗಳಾಗಿರುತ್ತವೆ. ಪೋಷಕರು ಮತ್ತು ಮಕ್ಕಳಿಗೆ ಇಂತಹ ಅವಿಸ್ಮರಣೀಯ ಕ್ಷಣಗಳಿಗೆ ಅವಕಾಶ ದೊರೆಯದಂತೆ ಮಕ್ಕಳನ್ನು ಎಳವೆಯಲ್ಲೇ ವಸತಿಶಾಲೆಗಳಿಗೆ ಸೇರಿಸುವುದು ಸೂಕ್ತವಾಗದೇನೊ.

ಹದಿಹರೆಯದ ವಯಸ್ಸು ತಲುಪಿದ ನಂತರ ಮಕ್ಕಳು ಹೆಚ್ಚು ಸ್ವತಂತ್ರ ಮನೋಭಾವ ಬೆಳೆಸಿ
ಕೊಳ್ಳುತ್ತಾ ಹೋಗುತ್ತಾರೆ. ಸ್ನೇಹಿತರು, ಸಹಪಾಠಿಗಳ ಸಂಖ್ಯೆ ಬೆಳೆದಂತೆ ಮಕ್ಕಳ ಸಾಮಾಜಿಕ ವಲಯ ದೊಡ್ಡದಾಗುತ್ತಾ ಹೋಗುತ್ತದೆ. ಒಂದೊಮ್ಮೆ ಈ ಹಂತದಲ್ಲಿ ಮಕ್ಕಳು ವಸತಿಶಾಲೆಗೆ ಸೇರಿದಲ್ಲಿ ಅವರಿಗೆ ಹೊಂದಿಕೊಳ್ಳಲು ಕಷ್ಟವಾಗದು. ಆದರೂ ಕೆಲವರಿಗೆ ಕುಟುಂಬದ ಆಹಾರ, ಮನೆಯವರ ಪ್ರೀತಿ ಬಿಟ್ಟು ವಸತಿಶಾಲೆಯಲ್ಲಿ ಉಳಿಯುವುದು ಕಷ್ಟವಾಗಿ ತೋರಬಹುದು.

ಮಕ್ಕಳನ್ನು ವಸತಿಶಾಲೆಗೆ ದಾಖಲಿಸಿರಲಿ ಅಥವಾ ಅವರು ತಮ್ಮೊಟ್ಟಿಗೆ ಮನೆಯಲ್ಲಿಯೇ ಇರಲಿ, ಮಕ್ಕಳ ಜೊತೆ ನಿಯಮಿತವಾಗಿ ಸಮಯ ಕಳೆಯುತ್ತಾ ಇದ್ದರೆ ಅವರ ಮನಃಸ್ಥಿತಿಯ ಅರಿವು ಪೋಷಕರಿಗೆ ಇರುತ್ತದೆ. ಮಕ್ಕಳ ಮಾತುಗಳಿಗೆ ಕಿವಿಯಾಗಿ, ಅವರ ಭಾವನೆಗಳಿಗೆ ಹೃದಯವನ್ನು ಮುಕ್ತವಾಗಿ ತೆರೆದಿಟ್ಟಲ್ಲಿ ಕಾಲಕಾಲಕ್ಕೆ ಅವರು ನೀಡುವ ಸೂಕ್ಷ್ಮ ಸಂದೇಶಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಮಕ್ಕಳು ನೀಡುವ ಇಂತಹ ಸಂದೇಶಗಳನ್ನು ಸಕಾಲದಲ್ಲಿ ಗ್ರಹಿಸಿ, ಸ್ಪಂದಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.